ಭವಿಷ್ಯದ ದೃಷ್ಟಿಯಿಂದ 2023ರ ಗೆಲುವು ನಾಗರಿಕ ಸಮಾಜದ ಜವಾಬ್ದಾರಿಗಳನ್ನು ಹೆಚ್ಚಿಸಿದೆ
2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ದೇಶದ ರಾಜಕಾರಣದಲ್ಲೇ ಸಂಚಲನ ಉಂಟುಮಾಡಿದೆ. ಭಾರತವನ್ನು ವಿರೋಧಪಕ್ಷ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಬಿಜೆಪಿಯ ಮಹತ್ವಾಕಾಂಕ್ಷೆಯ ಯೋಜನೆ (ಇದನ್ನು ಕಾಂಗ್ರೆಸ್ ಮುಕ್ತ ಎಂದು ಬಣ್ಣಿಸುವುದೂ ಉಂಟು) ಬಿಜೆಪಿ-ಸಂಘಪರಿವಾರದ ಕನಸು ದಕ್ಷಿಣ ಭಾರತದ ರಾಜಕೀಯ ಹೆಬ್ಬಾಗಿಲು ಎನ್ನಬಹುದಾದ ಕರ್ನಾಟಕದಲ್ಲೇ ಎಡವಿರುವುದನ್ನು ಈ ಫಲಿತಾಂಶಗಳು ಬಿಂಬಿಸುತ್ತವೆ. ಪ್ರಜಾಪ್ರಭುತ್ವದ ಉಳಿವಿಗೆ ಪ್ರಬಲವಾದ ವಿರೋಧ ಪಕ್ಷಗಳಷ್ಟೇ ಅಲ್ಲದೆ ಪ್ರಖರವಾದ ಪ್ರತಿರೋಧ-ವಿರೋಧದ ಧ್ವನಿಯೂ ಅಷ್ಟೇ ಮುಖ್ಯ ಎಂಬ ಸಾಮಾನ್ಯ ತಿಳುವಳಿಕೆಯನ್ನೂ ಕಳೆದುಕೊಳ್ಳುತ್ತಿರುವ ಭಾರತದ ಬಹುಸಂಖ್ಯಾವಾದ ರಾಜಕಾರಣಕ್ಕೆ ಕರ್ನಾಟಕದ ಮತದಾರರು ಮತಪೆಟ್ಟಿಗೆಯ ಮೂಲಕ ಪೆಟ್ಟುನೀಡಿದ್ದಾರೆ. ಭಾರತದಲ್ಲಿ ಬಹುಸಂಖ್ಯಾವಾದ ಎಂದರೆ ಅದು ಅವಕಾಶವಂಚಿತ-ಶೋಷಿತ ಬಡಜನತೆಯನ್ನು ಒಳಗೊಂಡಿರಬೇಕೇ ಹೊರತು, ಯಾವುದೋ ನಿರ್ದಿಷ್ಟ ಮತಧರ್ಮ ಅಥವಾ ಜಾತಿ-ವರ್ಗಗಳನ್ನು ಒಳಗೊಂಡಿರಲು ಸಾಧ್ಯವಿಲ್ಲ. ಕರ್ನಾಟಕದ ಮತದಾರರು ಇದನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಕಾಂಗ್ರೆಸ್ ಗೆಲುವಿನ ಕಾರಣಗಳು

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವನ್ನು ಹಲವು ಆಯಾಮಗಳಲ್ಲಿ ಚರ್ಚಿಸಲು ಸಾಧ್ಯವಿದೆ. ರಾಜಕೀಯ ವಿಶ್ಲೇಷಕರಲ್ಲೇ ಇದು ಅನಿರೀಕ್ಷಿತವಾದ ಫಲಿತಾಂಶ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಆದರೆ ರಾಜ್ಯ ರಾಜಕಾರಣವನ್ನು ಸಮಗ್ರ ನೆಲೆಯಲ್ಲಿ ಗಮನಿಸುತ್ತಿದ್ದ ಸಮಾಜಶಾಸ್ತ್ರಜ್ಞರಿಗೆ ಹಾಗೇನೂ ಕಾಣುವುದಿಲ್ಲ. ಗೆಲುವಿನ ಕಾರಣಗಳನ್ನು ಗುರುತಿಸುವಾಗ ನಾವು ತಳೆಯುವ ಅಭಿಪ್ರಾಯಗಳೇ ಅಂತಿಮ ಫಲಿತಾಂಶದ ವಿಶ್ಲೇಷಣೆಯನ್ನೂ ಅವಲಂಬಿಸುತ್ತದೆ. ಬಿಜೆಪಿಯ ಪರಾಭವಕ್ಕೆ ಅಥವಾ ಕಾಂಗ್ರೆಸ್ ಪಕ್ಷದ ಗೆಲುವಿಗೆ ನಾಗರಿಕ ಸಮಾಜದ ಹಲವು ಸಂಘಟನೆಗಳ ಸತತ ಪ್ರಯತ್ನ ಹಾಗೂ ತಳಮಟ್ಟದ ಪ್ರಚಾರಗಳೇ ಕಾರಣ ಎನ್ನುವುದು ಒಂದಂಶವಾದರೂ, ಇದೊಂದೇ ಕಾರಣವಲ್ಲ ಎನ್ನುವುದನ್ನೂ ನಾವು ಗಮನಿಸಬೇಕಿದೆ. ಈ ಪ್ರಯತ್ನಗಳನ್ನು ಮೀರಿದ ಜನಾಭಿಪ್ರಾಯವನ್ನು ನಾವು ತಳಸಮುದಾಯಗಳ ಶೋಷಿತ-ಬಡಜನತೆಯ ಆಕ್ರೋಶ ಮತ್ತು ಹತಾಶೆಗಳಲ್ಲಿ ಕಾಣಬೇಕಿದೆ. 2018-23ರ ನಡುವಿನ ಎರಡು ಸರ್ಕಾರಗಳು, ಮೂವರು ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲಿ ಜಾರಿಗೊಳಿಸಲಾದ ಜನವಿರೋಧಿ ಕಾಯ್ದೆಗಳು ಹಾಗೂ ಅನುಸರಿಸಲಾದ ಸಮಾಜವಿರೋಧಿ ಆಡಳಿತ ನೀತಿಗಳನ್ನು ಕರ್ನಾಟಕದ ಮತದಾರರು ಸ್ಪಷ್ಟವಾಗಿ ತಿರಸ್ಕರಿಸಿರುವುದನ್ನು ಈ ಫಲಿತಾಂಶಗಳಲ್ಲಿ ಕಾಣಬೇಕಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಉಚಿತ ಕೊಡುಗೆಗಳೇ ಪಕ್ಷದ ಗೆಲುವಿಗೆ ಕಾರಣ ಎನ್ನುವುದು ಅರ್ಧಸತ್ಯವಷ್ಟೇ ಅಲ್ಲ ಅದು ಮತದಾರರನ್ನು, ಅದರಲ್ಲೂ ಬಡಜನತೆಯನ್ನು, ಅವಮಾನಿಸಿದಂತಾಗುತ್ತದೆ. ತಮ್ಮ ನಿತ್ಯ ಜೀವನದ ಸಂಕಷ್ಟಗಳನ್ನು ನಿವಾರಿಸಲು ಈ ಘೋಷಣೆಗಳು ಪೂರಕವಾಗಬಹುದು ಎಂಬ ವಿಶ್ವಾಸ ಜನತೆಯಲ್ಲಿ ಮೂಡಿರಲಿಕ್ಕೂ ಸಾಕು. ಆದರೆ ಒಂದು ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಲು ಮತದಾರರಿಗೆ ಅನ್ಯ ಕಾರಣಗಳೂ ಇರುತ್ತವೆ. ಈ ಕಾರಣಗಳನ್ನು ನಾವು ಬಿಜೆಪಿ ಸರ್ಕಾರದ ಕೋಮುವಾದಿ ಆಡಳಿತ ನೀತಿಗಳಲ್ಲಿ ಕಾಣಬಹುದಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಬಹುಮುಖ್ಯ ಆಕರಗಳಾದ ಶಿಕ್ಷಣ, ಸಂಸ್ಕೃತಿ ಹಾಗೂ ಆಹಾರ ಪದ್ಧತಿಗಳ ಮೇಲೆ ಬಿಜೆಪಿ ಸರ್ಕಾರ ಹಾಗೂ ಸರ್ಕಾರೇತರ ಹಿಂದುತ್ವ ಪಡೆಗಳು ನಡೆಸಿದ ಪ್ರಹಾರ, ಈಗಾಗಲೇ ನಿತ್ಯ ಜೀವನವೆಚ್ಚ ನಿಭಾಯಿಸಲಾಗದೆ ಪರದಾಡುತ್ತಿದ್ದ ತಳಮಟ್ಟದ ಸಮಾಜಕ್ಕೆ ಅಸಹನೀಯವಾಗಿದ್ದು ಸಹಜವೇ ಅಲ್ಲವೇ ?
ಮತದ್ವೇಷದ ಚಟುವಟಿಕೆಗಳು

ಹಿಜಾಬ್ ವಿವಾದ ಕೇವಲ ಮುಸ್ಲಿಂ ಹೆಣ್ಣುಮಕ್ಕಳನ್ನಷ್ಟೇ ಬಾಧಿಸಲಿಲ್ಲ, ಒಂದು ಉಡುಪು ಬಾಲೆಯರ ಶೈಕ್ಷಣಿಕ ಮುನ್ನಡೆಗೆ ಮಾನದಂಡವಾಗಬಹುದಾದ ಅಪಾಯವನ್ನು ಅದು ಸೂಚಿಸಿತ್ತು. ಮತೀಯ ಮೂಲಭೂತವಾದ ಬೇರೂರಿದಂತೆಲ್ಲಾ ಆಧುನಿಕ ಜೀವನ ಶೈಲಿಯಲ್ಲಿ ಬಾಲೆಯರು ತೊಡುವ ಅತ್ಯಾಧುನಿಕ ಉಡುಗೆಗಳೂ ( ಜೀನ್ಸ್, ಹರಿದ ಜೀನ್ಸ್, ಟೀ ಷರ್ಟ್ ಇತ್ಯಾದಿ) ಸಹ “ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ” ವಸ್ತುಗಳಾಗಿ ಪರಿಣಮಿಸಬಹುದು. ಶಾಲಾ ಶಿಕ್ಷಣದಲ್ಲಿ ಅಕ್ಷರಕ್ಕಿಂತಲೂ ಉಡುಗೆಯೇ ಪ್ರಧಾನವಾದರೆ ಅಲ್ಲಿ ಶಿಕ್ಷಣ ಎನ್ನುವುದು ಜ್ಞಾನಾರ್ಜನೆಗಿಂತಲೂ ಹೆಚ್ಚಾಗಿ ನಿರ್ದಿಷ್ಟ ಮತಧಾರ್ಮಿಕ ಆಚರಣೆಗಳ ಅಸ್ತ್ರವಾಗಿಬಿಡುವ ಸಾಧ್ಯತೆಗಳಿರುತ್ತವೆ. ಅನೇಕ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇದನ್ನು ಕಂಡಿದ್ದೇವೆ. ಹಿಜಾಬ್ ವಿವಾದವೂ ಇಂತಹುದೇ ಒಂದು ಪ್ರಕ್ರಿಯೆಯಾಗಿದ್ದು, ಹೆಣ್ಣುಮಕ್ಕಳ ಮೂಲ ಶಿಕ್ಷಣಕ್ಕೆ ಅಥವಾ ಶೈಕ್ಷಣಿಕ ಮುನ್ನಡೆಗೆ ಉಡುಗೆಗಳೇ ತೊಡಕಾಗುವ ಸಾಧ್ಯತೆಗಳನ್ನು ತೆರೆದಿಟ್ಟಿತ್ತು. ತಳಮಟ್ಟದಲ್ಲಿ ಶಿಕ್ಷಣ ಎನ್ನುವುದೇ ಕೈಗೆಟುಕದ ದ್ರಾಕ್ಷಿಯಂತೆ ಮರೀಚಿಕೆಯಾಗಿರುವ ಜನಸಮುದಾಯಗಳಿಗೆ ಈ ಅಪಾಯದ ಅರಿವು ಉಂಟಾಗಿದ್ದರೂ ಅಚ್ಚರಿಯೇನಿಲ್ಲ.
ಹಿಂದುತ್ವ ರಾಜಕಾರಣದ ಈ ಕೆಲವು ಪ್ರಯತ್ನಗಳು ಅಸಂಖ್ಯಾತ ಹಿಂದೂ ಯುವಕರಿಗೆ ಆಕರ್ಷಣೀಯವಾಗಿ ಕಂಡಿದ್ದರೂ, ನಿರುದ್ಯೋಗ, ಬೆಲೆ ಏರಿಕೆ ಹಾಗೂ ಅನಿಶ್ಚಿತ ಭವಿಷ್ಯದ ಅಪಾಯಗಳು ಬಹುಪಾಲು ಯುವಕರಲ್ಲಿ ಆತಂಕ ಮೂಡಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮತದ್ವೇಷ-ಕೋಮುವಾದ ಮತ್ತು ಹಿಂದುತ್ವದ ಭಾವನಾತ್ಮಕ ಆಕರ್ಷಣೆಗಳು ಎಷ್ಟೇ ಪ್ರಭಾವಶಾಲಿಯಾಗಿದ್ದರೂ, ತಮ್ಮ ನಿತ್ಯ ಬದುಕಿಗಾಗಿ ದುಡಿಯಲೇಬೇಕಾದ ತಳಮಟ್ಟದ ಸಮುದಾಯಗಳಿಗೆ ಈ ವಿಚಾರಗಳು ಸುಸ್ಥಿರ ಬದುಕಿಗೆ ಪೂರಕವಾಗಿ ಪರಿಣಮಿಸುವುದಿಲ್ಲ. ಹಿಂದೂ ಬಹುಸಂಖ್ಯಾವಾದ ಅಥವಾ ಹಿಂದುತ್ವದ ಪಾರಮ್ಯವನ್ನು ಸಾಧಿಸಲು ಇಷ್ಟಾದರೂ ತ್ಯಾಗಮಾಡಬೇಕು ಎನ್ನುವ ರಾಜಕೀಯ ಧೋರಣೆ ನೆಲಮಟ್ಟದಲ್ಲಿ ಜನಸಾಮಾನ್ಯರ ನಡುವೆ ಸ್ವೀಕಾರಾರ್ಹವಾಗುವುದೂ ಇಲ್ಲ. ಏಕೆಂದರೆ ಕೋಟ್ಯಂತರ ಸಂಖ್ಯೆಯಲ್ಲಿರುವ ಈ ಜನಸಮೂಹಗಳ ಪಾಲಿಗೆ ತ್ಯಾಗ ಎನ್ನುವುದು ತಮ್ಮನ್ನು ವಂಚಿಸುವ ಭಿನ್ನ ಮಾರ್ಗಗಳ ಸಂವಾದಿ ಪದವಾಗಿ ಕಾಣುತ್ತದೆ.
ಆಡಳಿತ ವೈಫಲ್ಯಗಳು

ಮೇಲ್ನೋಟಕ್ಕೆ ರಾಜ್ಯ ರಾಜಕಾರಣ ಹಾಗೂ 2023ರ ಫಲಿತಾಂಶಗಳು ಜಾತಿ ರಾಜಕಾರಣದ ಚೌಕಟ್ಟುಗಳನ್ನು ಮೀರಿಲ್ಲ ಎನ್ನುವುದು ವಾಸ್ತವವಾದರೂ, ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಸಹ, ಅನುಸರಿಸಿದ ಜಾತಿ ಸಮೀಕರಣಗಳ ಹಿನ್ನೆಲೆಯಲ್ಲೂ ಸಾಮಾಜಿಕ-ಆರ್ಥಿಕ ಕಾರಣಗಳು ತಮ್ಮದೇ ಆದ ಪ್ರಭಾವ ಬೀರಿರುವುದನ್ನು ಗಮನಿಸಬಹುದು. ಆಡಳಿತಾವಧಿಯ ಕೊನೆಯ ದಿನಗಳಲ್ಲಿ ಪಂಚಮಸಾಲಿ ಸಮುದಾಯವನ್ನು ಓಲೈಸಲು, ಪರಿಶಿಷ್ಟ ಪಂಗಡಗಳನ್ನು ಆಕರ್ಷಿಸಲು ಮೀಸಲಾತಿ ನೀತಿಯನ್ನೇ ಬದಲಿಸುವ ದುಸ್ಸಾಹಸ ಮಾಡಿದ ಬೊಮ್ಮಾಯಿ ಸರ್ಕಾರ ಈ ಸಮುದಾಯಗಳಿಗೆ ಮೀಸಲಾತಿಗಿಂತಲೂ ಮಿಗಿಲಾಗಿ ಅವಶ್ಯಕತೆ ಇದ್ದುದು ಸುಸ್ಥಿರ ಬದುಕು ಹಾಗೂ ಸುಲಭ ಜೀವನೋಪಾಯ ಮಾರ್ಗಗಳು ಎನ್ನುವ ವಾಸ್ತವವನ್ನು ಗ್ರಹಿಸಲು ವಿಫಲವಾಗಿತ್ತು. ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ, ಅನಿಶ್ಚಿತ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಜನಸಮುದಾಯಗಳ ನಡುವೆ ಜಾತಿ-ಮತ-ಧರ್ಮಗಳ ಭಾವೋನ್ಮಾದದ ವಿಚಾರಗಳು ಒಂದು ಹಂತದವರೆಗೆ ಮಾತ್ರವೇ ಫಲ ನೀಡುತ್ತವೆ. ಹಸಿದ ಹೊಟ್ಟೆಗೆ ಅಧ್ಯಾತ್ಮವೂ ಶಮನಕಾರಿಯಾಗುವುದಿಲ್ಲ. ಈ ವೈಶಿಷ್ಟ್ಯವನ್ನು 2023ರ ಫಲಿತಾಂಶಗಳಲ್ಲಿ ಗುರುತಿಸಬಹುದು.
ಯಡಿಯೂರಪ್ಪ ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಅದೇ ಪರಂಪರೆಯನ್ನು ಮುಂದುವರೆಸಿದ್ದರೂ ಸಹ ಕೊಂಚ ಉಪಯುಕ್ತವಾಗಬಹುದಿತ್ತೇನೋ. ಆದರೆ ಹಿಂದುತ್ವ ಕಾರ್ಯಪಡೆಗಳು ರೂಪಿಸಿದ ಕಾರ್ಯಸೂಚಿಗಳಿಗೆ ತಮ್ಮ ಮೌನ ಸಮ್ಮತಿಯ ಮೂಲಕ ತಾತ್ವಿಕ ಅನುಮೋದನೆ ನೀಡಿದ ಬೊಮ್ಮಾಯಿ ಸರ್ಕಾರ ಕರಾವಳಿಯಲ್ಲಿ ಉಲ್ಬಣಿಸಿದ್ದ ಮತದ್ವೇಷ, ರಾಜ್ಯದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆಯ ಪ್ರಸಂಗಗಳು, ಮರ್ಯಾದೆಗೇಡು ಹತ್ಯೆ ಹಾಗೂ ಸಾಮಾಜಿಕ ಬಹಿಷ್ಕಾರಗಳು, ಆಧ್ಯಾತ್ಮಿಕ ಕೇಂದ್ರಗಳನ್ನೂ ಒಳಗೊಂಡಂತೆ ಮಹಿಳೆಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರ-ದೌರ್ಜನ್ಯ ಮತ್ತು ಈ ಬೆಳವಣಿಗೆಗಳಿಂದ ಸೃಷ್ಟಿಯಾದ ಸಾಮಾಜಿಕ ಕ್ಷೋಭೆಯ ಬಗ್ಗೆ ಗಮನಹರಿಸಲು ವಿಫಲವಾಗಿತ್ತು. ಹಾಗಾಗಿಯೇ ಪ್ರಧಾನಿ ಮೋದಿಯವರ ಪ್ರಭಾವಳಿಯೂ ಸಹ ರಾಜ್ಯದಲ್ಲಿ ಯಶಸ್ವಿಯಾಗಲಿಲ್ಲ. ರಾಜ್ಯ ರಾಜಕಾರಣದಲ್ಲಿ ಸ್ಥಳೀಯ ನಾಯಕತ್ವ ಇಲ್ಲದೆ ಹೋದರೆ ಯಾವ ಪಕ್ಷವೂ ಪೂರ್ಣ ಯಶಸ್ಸು ಸಾಧ್ಯವಾಗುವುದಿಲ್ಲ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಯಶಸ್ಸಿಗೆ ಸ್ಥಳೀಯ ನಾಯಕರು ಮುಂಚೂಣಿಯಲ್ಲಿದ್ದುದೇ ಕಾರಣ.
ಆರ್ಥಿಕ ಕಾರಣಗಳು

ಈ ಚುನಾವಣಾ ರಣತಂತ್ರದ ಹೊರತಾಗಿಯೂ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳು ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದರೆ, ಅದರ ಹಿಂದೆ ರಾಜಕೀಯ ಔದಾರ್ಯಕ್ಕಿಂತಲೂ ತಳಮಟ್ಟದ ಸಮಾಜದಲ್ಲಿ ಈ ಉಚಿತ ಕೊಡುಗೆಗಳ ಅವಶ್ಯಕತೆ ಇರುವುದನ್ನು ಗಮನಿಸಬೇಕಿದೆ. ಅನಿಯಂತ್ರಿತ ಬೆಲೆ ಏರಿಕೆಯ ಪರಿಣಾಮ ಮಧ್ಯಮವರ್ಗಗಳಲ್ಲೂ ಉಂಟಾಗಿದ್ದ ಅಸಮಾಧಾನದ ಅಲೆ ಒಂದು ಹಂತದಲ್ಲಿ ಆಡಳಿತವಿರೋಧಿ ಅಲೆಗೆ ಪೂರಕವಾಗಿರುತ್ತದೆ. 2018-23ರ ಅವಧಿಯ ಎರಡು ಸರ್ಕಾರ-ಮೂವರು ಮುಖ್ಯಮಂತ್ರಿಗಳು ಕಾರ್ಪೋರೇಟ್ ಮಾರುಕಟ್ಟೆ ಹಾಗೂ ಸಮಾಜದ ಮೇಲ್ಬದರದ ಸಮೂಹಗಳಿಗೆ ಪೂರಕವಾದ ಆರ್ಥಿಕ ನೀತಿಗಳನ್ನೇ ಅನುಸರಿಸುವ ಮೂಲಕ ಬಂಡವಾಳವನ್ನು ಆಕರ್ಷಿಸುವುದರಲ್ಲಿ ಯಶಸ್ವಿಯಾದರೂ, ಬಂಡವಾಳದ ಒಳಹರಿವು ತಳಮಟ್ಟದ ಸಾಮಾನ್ಯ ಜನತೆಯ ಜೀವನ ಮಟ್ಟವನ್ನು ಸುಧಾರಿಸುವುದರಲ್ಲಾಗಲೀ, ಜೀವನೋಪಾಯ ಮಾರ್ಗಗಳನ್ನು ಸುಗಮಗೊಳಿಸುವುದರಲ್ಲಾಗಲೀ ಫಲಕಾರಿಯಾಗಲಿಲ್ಲ ಎನ್ನುವುದು ಅಂಕಿಅಂಶಗಳಿಂದಲೇ ಸ್ಪಷ್ಟವಾಗುತ್ತದೆ. ಸರ್ಕಾರದ ಉಚಿತ ಕೊಡುಗೆಗಳನ್ನು ವಿರೋಧಿಸುವ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ (ಇನ್ನು ಮುಂದೆಯಾದರೂ) ತಳಮಟ್ಟದ ಜನತೆ ಈ ಉಚಿತಗಳನ್ನು ಸ್ವಾಭಿಮಾನದಿಂದ ತಿರಸ್ಕರಿಸುವ ರೀತಿಯಲ್ಲಿ ಅವರ ಜೀವನಮಟ್ಟವನ್ನು ಸುಧಾರಿಸುವ ಕಾರ್ಯಯೋಜನೆಗಳನ್ನು ಘೋಷಿಸಲು ಸಾಧ್ಯವೇ ? ಬಂಡವಾಳಶಾಹಿ-ಕಾರ್ಪೋರೇಟ್ ಮಾರುಕಟ್ಟೆ ಹಿಡಿತದಲ್ಲಿರುವ ಭಾರತದ ರಾಜಕಾರಣದಲ್ಲಿ ಇದು ಅಸಂಭವ.
ಈ ಹಿನ್ನೋಟದೊಂದಿಗೇ ಕರ್ನಾಟಕದ 2023ರ ಫಲಿತಾಂಶಗಳು 2024ರ ಲೋಕಸಭಾ ಚುನಾವಣೆಗಳ ಮೇಲೆ ಬೀರಬಹುದಾದ ಪರಿಣಾಮಗಳನ್ನು ನಿಷ್ಕರ್ಷೆ ಮಾಡಬಹುದು. ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಆಪ್ತ ಬಂಡವಾಳಶಾಹಿ ( Croney Capitalism) ಈಗಾಗಲೇ ಹಲವು ರೀತಿಯ ಅನಾಹುತಗಳನ್ನು ಉಂಟುಮಾಡಿದ್ದು ದೇಶವ್ಯಾಪಿಯಾಗಿ ನಿರುದ್ಯೋಗ, ಅಪೌಷ್ಟಿಕತೆ, ಬಡತನ, ಹಸಿವೆ ಮತ್ತು ಅನಿಶ್ಚಿತತೆಯನ್ನು ಎದುರಿಸುವಂತೆ ಮಾಡಿದೆ. ಅನಿಯಂತ್ರಿತ ಖಾಸಗೀಕರಣ ಮತ್ತು ವಾಣಿಜ್ಯೀಕರಣ ನೀತಿಗಳ ಪರಿಣಾಮ, ಭಾರತ ದುಡಿಯುವ ಜನತೆ 70 ವರ್ಷಗಳಲ್ಲಿ ಸೃಷ್ಟಿಸಿದ ಸಾರ್ವಜನಿಕ ಸಂಪತ್ತು ಕರಗಿ ನೀರಾಗುತ್ತಿದ್ದು, ನಗದೀಕರಣ (Monetisation)ದ ಹೆಸರಿನಲ್ಲಿ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತಿದೆ. ಇದರ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ದುಡಿಯುವ ವರ್ಗಗಳು ಒಂದೆಡೆ ಕರಾಳ ಕಾರ್ಮಿಕ ಸಂಹಿತೆಗಳಿಂದ ತಮ್ಮ ಶತಮಾನದ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವಂತೆಯೇ ಮತ್ತೊಂದೆಡೆ ಮತದ್ವೇಷ-ಜಾತಿದ್ವೇಷದ ರಾಜಕಾರಣದಿಂದ ನಿತ್ಯಬದುಕಿನ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಿದ್ದಾರೆ.
ಪರ್ಯಾಯ ಸಾಧ್ಯತೆಗಳು
ಈ ವ್ಯತ್ಯಯಗಳನ್ನು ಮೀರಿ ಜನಸಾಮಾನ್ಯರಿಗೆ ಒಂದು ಆಶಾದಾಯಕ ಸುಸ್ಥಿರ ಬದುಕಿನ ಭರವಸೆ ನೀಡುವಂತಹ ಯಾವುದೇ ರಾಜಕೀಯ ನಾಯಕತ್ವ ಇಂದು ಭಾರತದ ಮತದಾರರಿಗೆ ಅಪ್ಯಾಯಮಾನವಾಗಿ ಕಾಣಲಿದೆ. ಹಿಮಾಚಲಪ್ರದೇಶ ಮತ್ತು ಕರ್ನಾಟಕದ ಚುನಾವಣೆಗಳು ಇದನ್ನೇ ನಿರೂಪಿಸಿವೆ. ಈ ನಾಯಕತ್ವದಲ್ಲಿ ಜನತೆ ಸಂವಿಧಾನಬದ್ಧತೆ, ಸಾಮಾಜಿಕ ಕಾಳಜಿ ಮತ್ತು ಪಾರದರ್ಶಕವಾದ ಪ್ರಾಮಾಣಿಕ ಆಡಳಿತ ದಕ್ಷತೆಯನ್ನು ಅಪೇಕ್ಷಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಒಂದು ಕಾರಣ ವ್ಯಕ್ತಿಗತವಾಗಿ ಅವರಲ್ಲಿ ಭ್ರಷ್ಟಾಚಾರವನ್ನು ಗುರುತಿಸಲಾಗುವುದಿಲ್ಲ. ಉಳಿದೆಲ್ಲಾ ಭಾವನಾತ್ಮಕ ಅಂಶಗಳಿಗಿಂತಲೂ ಜನಸಾಮಾನ್ಯರಲ್ಲಿ ಈ ಗುಣಲಕ್ಷಣವೇ ಪ್ರಭಾವಿಯಾಗಿ ಪರಿಣಮಿಸುತ್ತದೆ. ಕರ್ನಾಟಕದ ಫಲಿತಾಂಶಗಳ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ರಾಷ್ಟ್ರಮಟ್ಟದಲ್ಲೂ ಪುನಶ್ಚೇತನಗೊಂಡಿದ್ದು ಈ ವರ್ಷ ನಡೆಯಲಿರುವ ಐದು ರಾಜ್ಯಗಳ ಚುನಾವಣೆಗಳಲ್ಲಿ ಇದೇ “ಕರ್ನಾಟಕ ಮಾದರಿ”ಯನ್ನು ಅನುಸರಿಸಲು ಯೋಚಿಸುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಘಡ ರಾಜ್ಯಗಳಲ್ಲಿ ಕರ್ನಾಟಕದಂತೆ ಕಾಂಗ್ರೆಸ್ ಹೊಂದಾಣಿಕೆಯಿಲ್ಲದೆ ಮುನ್ನಡೆಯಲಾಗುವುದಿಲ್ಲ. ಹಾಗಾಗಿ ಇತರ ಪ್ರಾದೇಶಿಕ ಪಕ್ಷಗಳೊಡನೆ ಹೊಂದಾಣಿಕೆಗೆ ಮುಂದಾಗುವ ಸಾಧ್ಯತೆಗಳೂ ಇವೆ.
ಕಾಂಗ್ರೆಸ್ಸೇತರ ವಿರೋಧ ಪಕ್ಷಗಳು ಈಗಾಗಲೇ 2024ರ ತಯಾರಿಯಲ್ಲಿ ತೊಡಗಿದ್ದು ನೀತಿಶ್ ಕುಮಾರ್ ನೇತೃತ್ವದಲ್ಲಿ ರಾಷ್ಟ್ರೀಯ ಪರ್ಯಾಯ ವೇದಿಕೆಯೊಂದನ್ನು ರೂಪಿಸಲು ಹರಸಾಹಸ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಲದಲ್ಲಿ , ತೃಣಮೂಲ-ಎಡಪಕ್ಷಗಳು, ಕೇರಳದಲ್ಲಿ ಕಾಂಗ್ರೆಸ್-ಎಡರಂಗ, ಒಡಿಷಾದಲ್ಲಿ ಬಿಜೆಡಿ-ಕಾಂಗ್ರೆಸ್, ಪಂಜಾಬ್—ದೆಹಲಿ-ಗುಜರಾತ್‌ನಲ್ಲಿ ಆಮ್ ಆದ್ಮಿ-ಕಾಂಗ್ರೆಸ್, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್-ಕಾಂಗ್ರೆಸ್, ಉತ್ತರಪ್ರದೇಶದಲ್ಲಿ ಬಿಎಸ್‌ಪಿ-ಕಾಂಗ್ರೆಸ್ ಹೀಗೆ ಹಲವು ವೈರುಧ್ಯಗಳು ಬಿಜೆಪಿಯೇತರ ಪರ್ಯಾಯ ವೇದಿಕೆಗೆ ಅಡ್ಡಿಯಾಗಲಿವೆ. ಕರ್ನಾಟಕದ ಚುನಾವಣೆಗಳಲ್ಲಿ ಹಿಂದಿನ ಸರ್ಕಾರದ ದುರಾಡಳಿತದ ಕಾರಣ ಈ ಅನಿವಾರ್ಯತೆಗಳು ಎದುರಾಗಲಿಲ್ಲ. ಅಷ್ಟೇ ಅಲ್ಲದೆ ಇಲ್ಲಿ ಕಾಂಗ್ರೆಸ್ ಪಕ್ಷವು ಮೇಕೆದಾಟು ಹೋರಾಟದಿಂದ ಭಾರತ್ ಜೋಡೋವರೆಗೆ ತನ್ನ ಪ್ರತಿರೋಧದ ರಾಜಕಾರಣದ ನೆಲೆಗಳನ್ನು ವಿಸ್ತರಿಸಿಕೊಂಡೇ ಬಂದಿದ್ದು, ಜನಸಾಮಾನ್ಯರ ನಡುವೆ ಒಂದು ಸ್ಪಷ್ಟ ಪ್ರಭಾವವನ್ನು ಕಂಡುಕೊಂಡಿತ್ತು. ಅನ್ಯ ರಾಜ್ಯಗಳಲ್ಲಿ ಇದೇ ಸೂತ್ರ ಅನ್ವಯವಾಗುತ್ತದೆ ಎಂದು ಹೇಳಲಾಗುವುದಿಲ್ಲ.

ಈ ಪ್ರಯತ್ನಗಳನ್ನೂ ಮೀರಿ ಕರ್ನಾಟಕದ ಚುನಾವಣೆಗಳಲ್ಲಿ ನಾಗರಿಕ ಸಮಾಜದ ಗುಂಪುಗಳು ನಿರ್ವಹಿಸಿದಂತೆ ಅನ್ಯ ರಾಜ್ಯಗಳಲ್ಲಿ ಸಾಧ್ಯವಾಗುವುದೇ ಎಂಬ ಜಟಿಲ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ. 2023ರ ಫಲಿತಾಂಶಗಳಿಗೆ ತಾವೇ ಕಾರಣ ಎಂಬ ಅರ್ಧಸತ್ಯವನ್ನೇ ವೈಭವೀಕರಿಸುತ್ತಿರುವ ಕೆಲವು ಸಂಘಟನೆಗಳನ್ನು ಗಮನಿಸಿದಾಗ, ಈ ಆತ್ಮರತಿಯೇ 2024ರ ದೌರ್ಬಲ್ಯವಾಗುವ ಸಾಧ್ಯತೆಗಳೂ ನಿಚ್ಚಳವಾಗಿ ಕಾಣುತ್ತವೆ. ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳು ಮತ್ತು ಆಪ್ತ ಬಂಡವಾಳಶಾಹಿಯ ವಿಶಾಲ ವ್ಯಾಪ್ತಿಯೊಂದಿಗೇ ಅರ್ಥವ್ಯವಸ್ಥೆಯ ಸಗಟು ಖಾಸಗೀಕರಣ/ವಾಣಿಜ್ಯೀಕರಣದಿಂದ ತಳಮಟ್ಟದಲ್ಲಿಸಾಮಾನ್ಯ ಜನಜೀವನ ದುಸ್ತರವಾಗುತ್ತಿರುವುದನ್ನು ತಳಮಟ್ಟದವರೆಗೂ ತಲುಪಿಸುವ ನಿಟ್ಟಿನಲ್ಲಿ ಎಡಪಂಥೀಯ-ಪ್ರಜಾಸತ್ತಾತ್ಮಕ-ಪ್ರಗತಿಪರ ಸಂಘಟನೆಗಳು, ಅಲ್ಪಸಂಖ್ಯಾತ-ದಲಿತ ಸಮುದಾಯಗಳು ಕಾರ್ಯೋನ್ಮುಖರಾಗಬೇಕಿದೆ. ಇಲ್ಲಿ ಅಗತ್ಯವಾಗಿ ಬೇಕಾಗುವ ಸೈದ್ಧಾಂತಿಕ ಬದ್ಧತೆಯೊಂದೇ ಐಕ್ಯತೆಯನ್ನು ಸಾಧಿಸಲು ನೆರವಾಗುತ್ತದೆ. ಈ ಸಂಘಟನೆಗಳು ತಮ್ಮೊಳಗಿನ ಮಡಿವಂತಿಕೆ ಮತ್ತು ಸ್ವಪ್ರತಿಷ್ಠೆಗಳನ್ನು ಬದಿಗೊತ್ತಿ ಐಕಮತ್ಯವನ್ನು ಸಾಧಿಸುವುದಾದರೆ ಹಿಂದುತ್ವ-ಕಾರ್ಪೋರೇಟ್ ರಾಜಕಾರಣದ ಮೈತ್ರಿಕೂಟವನ್ನು ಸುಲಭವಾಗಿ ಹಿಮ್ಮೆಟ್ಟಿಸುವುದು ಸಾಧ್ಯವಾಗಬಹುದು.
ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಯೋಚಿಸುವುದಕ್ಕಿಂತಲೂ ಭಿನ್ನವಾಗಿ ನಾಗರಿಕ ಸಮಾಜದ ವಿವಿಧ ಗುಂಪುಗಳು ತಮ್ಮ ಕಾರ್ಯಶೈಲಿಯನ್ನು ರೂಪಿಸಬೇಕಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ಶಕ್ತಿಯ ಮುಂದೆ ಎಂತಹುದೇ ಪ್ರಬಲ ಪಕ್ಷವಾದರೂ ತಲೆಬಾಗಲೇ ಬೇಕು ಎಂಬ ವಾಸ್ತವವನ್ನು ಹಾಗೆಯೇ ತಳಮಟ್ಟದ ಜನಸಾಮಾನ್ಯರ ಬದುಕಿನ ವಾಸ್ತವಗಳು ಎಂತಹುದೇ ಭಾವನಾತ್ಮಕ ವಿಚಾರಗಳನ್ನೂ ಮೀರಿ ಪ್ರಭಾವಿಸುತ್ತವೆ ಎನ್ನುವುದನ್ನೂ ಭಾರತದ ಪ್ರಬುದ್ಧ ಮತದಾರರು ಹಲವು ಬಾರಿ ನಿರೂಪಿಸಿದ್ದಾರೆ. 2024 ಈ ನಿಟ್ಟಿನಲ್ಲಿ ಒಂದು ಚಾರಿತ್ರಿಕ ತಿರುವು ನೀಡಬಹುದು ಎಂದೇ ಆಶಿಸೋಣ.
ಕೃಪೆ : ಸಮಾಜಮುಖಿ – ಜುಲೈ 2023
 
			
 
                                 
                                 
                                