ಇತ್ತೀಚೆಗೆ ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಹೈಕಮಾಂಡ್ ಒತ್ತಾಯದ ಮೇರೆಗೆ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಸಿಎಂ ಸ್ಥಾನಕ್ಕೆ ದಲಿತ ನಾಯಕ ಚರಣ್ಜಿತ್ ಸಿಂಗ್ ಚನ್ನಿಯವರನ್ನು ಆಯ್ಕೆ ಮಾಡಲಾಯ್ತು. ಪಂಜಾಬ್ ಸಿಎಂ ಸ್ಥಾನಕ್ಕೆ ದಲಿತ ನಾಯಕನನ್ನು ಆಯ್ಕೆ ಮಾಡಿದ್ದು ಮಾತ್ರ ಭಾರೀ ಅಚ್ಚರಿಯಾಗಿತ್ತು.
ಹೈಕಮಾಂಡ್ ದಲಿತರಿಗೆ ಸಿಎಂ ಸ್ಥಾನ ನೀಡಿದ ಬೆನ್ನಲ್ಲೇ ಯಾರು ಅನೀರಿಕ್ಷಿತ ಬೆಳವಣಿಗೆಯೊಂದರಲ್ಲಿ ನವಜೋತ್ ಸಿಂಗ್ ಸಿಧು ಪಡೆ ಬೆಚ್ಚಿಬಿದ್ದಿದೆ. ಅಲ್ಲದೇ ಪಂಜಾಬ್ ರಾಜ್ಯ ಕಾಂಗ್ರೆಸ್ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಕರ್ನಾಟಕದ ಕಾಂಗ್ರೆಸ್ನಲ್ಲೂ ದಲಿತ ಸಿಎಂ ಕೂಗು ಮುನ್ನಲೆಗೆ ಬಂದಿದೆ.
ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ನಲ್ಲಿ ದಲಿತ ಸಿಎಂ ಟ್ರಂಪ್ ಕಾರ್ಡ್ ಪ್ಲೇ ಮಾಡಿದೆ. ಕಾಂಗ್ರೆಸ್ ಶಾಸಕರ ಒತ್ತಾಯದ ಮೇರೆಗೆ ಪ್ರಬಲ ನಾಯಕ ಕ್ಯಾಪ್ಟನ್ ಅಮರಿಂದರ್ ಕೆಳಗಿಳಿಸಿ ಚರಣಜಿತ್ ಸಿಂಗ್ಗೆ ಪಟ್ಟ ಕಟ್ಟಿದೆ. ಈ ಮೂಲಕ ಶೇ.30ರಷ್ಟು ದಲಿತ ಸಮುದಾಯದ ಇರುವ ಪಂಜಾಬ್ನಲ್ಲಿ ಚುನಾವಣೆಗೆ ದಾಳ ಉರುಳಿಸಿದೆ.
ಪಂಜಾಬ್ನಲ್ಲಿ ದಲಿತರನ್ನು ಸಿಎಂ ಮಾಡಿದ ಬೆನ್ನಲ್ಲೇ ರಾಜ್ಯದಲ್ಲೂ ಇದೇ ಕೂಗು ಎದ್ದಿದೆ. ಹೈಕಮಾಂಡ್ ನಡೆಯೂ ರಾಜ್ಯ ದಲಿತ ನಾಯಕರಲ್ಲೂ ಸಂಚಲನ ಮೂಡಿಸಿದೆ. ರಾಜ್ಯದಲ್ಲೂ ದಲಿತ ನಾಯಕರೊಬ್ಬರನ್ನ ಮುಖ್ಯಮಂತ್ರಿ ಮಾಡಬಹುದು ಎಂಬ ಹೊಸ ಕನಸು ಚಿಗುರೊಡೆದಿದೆ. 2023 ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬಂದ ಬೆನ್ನಲ್ಲೇ ದಲಿತರಿಗೆ ಸಿಎಂ ಸ್ಥಾನ ಒಲಿಯಬಹುದು ಎಂದು ಹೇಳಲಾಗುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಆಗ ಪಂಜಾಬ್ ಮಾದರಿಯಲ್ಲೇ ರಾಜ್ಯದಲ್ಲೂ ದಲಿತರಿಗೆ ಸಿಎಂ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಈ ಕುರಿತು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಈಗ ದಲಿತ ಸಿಎಂ ರೇಸ್ನಲ್ಲಿದ್ದಾರೆ. ದಲಿತರಿಗೆ ಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದ್ದಾರೆ.
2023 ವಿಧಾನಸಭಾ ಚುನಾವಣೆಗೆ ಇನ್ನೂ 18 ತಿಂಗಳು ಬಾಕಿ ಇರುವಾಗಲೇ ದಲಿತ ಸಿಎಂ ಕೂಗು ಬಲವಾಗಿ ಕೇಳಿ ಬರುತ್ತಿದೆ. ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಹಲವು ಬಾರಿ ದಲಿತರು ಸಿಎಂ ಆಗುವ ಅವಕಾಶಗಳಿದ್ದವು. ಆಗ ಬೇಕೆಂದಲೇ ಕೆಲವರು ದಲಿತರಿಗೆ ಸಿಎಂ ಸ್ಥಾನ ತಪ್ಪಿಸಿರುವುದು ಇತಿಹಾಸದ ಪುಟದಲ್ಲಿ ದಾಖಲಾಗಿವೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸರಗೊಂಡ ದಲಿತರ ವೋಟ್ ಬ್ಯಾಂಕ್ ಎಲ್ಲಾ ಪಕ್ಷಗಳಿಗೂ ಹೋಗುತ್ತಿದೆ.
ಇತ್ತೀಚೆಗೆ ಸುದ್ದಿಗಾರರೊಂದಿಗೆ ಈ ಸಂಬಂಧ ಮಾತಾಡಿದ ಮಾಜಿ ಡಿಸಿಎಂ ಪರಮೇಶ್ವರ್ ಅವರು, ಪಂಜಾಬಿನಲ್ಲಿ ದಲಿತ ಸಮುದಾಯದವರನ್ನು ಸಿಎಂ ಮಾಡಿದ್ದಾರೆ. ನಮ್ಮಲ್ಲೂ ದಲಿತರು ಸಿಎಂ ಸ್ಥಾನ ಕೇಳುವಂತದಾಗಬಹುದು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಇಲ್ಲೂ ದಲಿತ ಸಿಎಂ ಕೊಡಬೇಕು ಎಂದು ಕೇಳಬಹುದು. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ ಎಂದು ಹೇಳುವ ಮೂಲಕ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ.
2023ಕ್ಕೆ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣೆಗೂ ಮೊದಲೇ ಕಾಂಗ್ರೆಸ್ ನಾಯಕರಲ್ಲಿ ಸಿಎಂ ಸ್ಥಾನದ ಹಗ್ಗ-ಜಗ್ಗಾಟ ನಡೆದಿದೆ. ಕಾಂಗ್ರೆಸ್ ಸಂಪ್ರದಾಯದಂತೆ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಅವರೆ ಸಿಎಂ ಆಗಲಿದ್ದಾರೆ. ಇದೇ ಕಾರಣಕ್ಕಾಗಿ ಡಿಕೆ ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ ಜಿ ಪರಮೇಶ್ವರ್ ಮುಂದಿನ ಸಿಎಂ ಎಂದು ಹೇಳಲಾಗುತ್ತಿತ್ತು. ಆದರೆ, ಅಂದು ಚುನಾವಣೆಯಲ್ಲಿ ಪರಮೇಶ್ವರ್ ಸೋತ ಕಾರಣದಿಂದ ಸಿಎಂ ಪಟ್ಟ ತಪ್ಪಿತ್ತು. ಮತ್ತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಬಂದರು. ಬಳಿಕ ಸತತ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಮುಂದೆಯೂ ಸಿಎಂ ಆಗಿ ಹತ್ತಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಹೇಳುವ ಮೂಲಕ ಮತ್ತೊಮ್ಮೆ ಅಧಿಕಾರದ ಆಸೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕಾಂಗ್ರೆಸ್ನ ದಲಿತ ಸಿಎಂ ರೇಸ್ನಲ್ಲಿ ಹಿರಿಯ ನಾಯಕರಾದ ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ, ಕೆ. ಹೆಚ್ ಮುನಿಯಪ್ಪ, ಮಹದೇವಪ್ಪ ಇದ್ದಾರೆ. ಇವರು ಕೂಡ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
2004ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ಗೆ ಪಟ್ಟ ಒಲಿದ ಕಾರಣ, ಕೊನೆ ಘಳಿಗೆಯಲ್ಲಿ ಖರ್ಗೆಗೆ ಸಿಎಂ ಸ್ಥಾನ ಮಿಸ್ ಆಗಿತ್ತು. ಅದಾದ ನಂತರ 2008ರಲ್ಲಿ ಖರ್ಗೆ ನೇತೃತ್ವದಲ್ಲಿ ಚುನಾವಣೆ ನಡೆದಿತ್ತಾದರೂ ಕಾಂಗ್ರೆಸ್ ಸೋಲಬೇಕಾಯ್ತು. ಇನ್ನು, 2018ರಲ್ಲಿ ದೊಡ್ಡ ಮಟ್ಟದಲ್ಲಿ ದಲಿತ ಸಿಎಂ ಕೂಗು ಕೇಳಿ ಬಂದಿತ್ತಾದರೂ ಪೂರ್ಣ ಬಹುಮತ ಬಾರದ ಕಾರಣ ಜೆಡಿಎಸ್ ಜೊತೆ ಮೈತ್ರಿ ಆಗಿತ್ತು. ಆಗಲೂ ಮಲ್ಲಿಕಾರ್ಜುನ್ ಖರ್ಗೆ ಹೆಸರು ಮುಂಚೂಣಿಗೆ ಬಂದಿತ್ತು.