2022 ನೇ ವರ್ಷದ ಕೊನೆಯ ದಿನದಲ್ಲಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ತೀವ್ರಗೊಂಡ ಧ್ವೇಷದ ರಾಜಕೀಯ ಕರ್ನಾಟಕದಲ್ಲಂತೂ ವಿಪರೀತ ಅನ್ನಿಸುವಷ್ಟರ ಮಟ್ಟಿಗೆ ತಲುಪಿದವು. ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕುಗಳ ನಿರಾಕರಣೆ, ಮುಸ್ಲಿಂ ವ್ಯಾಪಾರಿಗಳ ಮೇಲಿನ ದಾಳಿಗಳು, ಪಠ್ಯ ಪುಸ್ತಕದಲ್ಲಿ ನುಸುಳಿದ ಕೋಮು ಧ್ರುವೀಕರಣ, ಹಲಾಲ್-ಜಟ್ಕಾ ವಿವಾದಗಳು, ಈದ್ಗಾ ಮೈದಾನದ ವಿವಾದ, ಕೋಮು ರಾಜಕಾರಣಕ್ಕೆ ಸರಣಿ ಹತ್ಯೆಗಳು, ಮಳಲಿ ಮಸೀದಿ, ಮೈಸೂರು ಬಸ್ ನಿಲ್ದಾಣದ ಗುಂಬಜ್ ವಿವಾದ, ಶ್ರೀರಂಗಪಟ್ಟಣ ಮಸೀದಿ ವಿರುದ್ಧದ ನಡೆವಳಿಗಳು ಹೀಗೆ ಹತ್ತು ಹಲವು ವಿವಾದಗಳು ಕರ್ನಾಟಕವನ್ನು ದೇಶಮಟ್ಟದಲ್ಲಿ ಚರ್ಚೆಗೆ ಕಾರಣವಾಗುವಂತೆ ಮಾಡಿತು.
ಇನ್ನು ಇತರೆ ಹಗರಣಗಳೂ ಭಾರೀ ಸದ್ದನ್ನೇ ಮಾಡಿದವು. ಬಿಜೆಪಿ ಸಚಿವ ಈಶ್ವರಪ್ಪ ವಿರುದ್ಧ ಲಂಚದ ಆರೋಪ ಮಾಡಿ ಆತ್ಮಹತ್ಯೆ ಮಾಡಿದ ಗುತ್ತಿಗೆದಾರ, 40% ಕಮಿಷನ್, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಅನರ್ಹರ ನೇಮಕ, ಮತದಾರರ ಮಾಹಿತಿ ಕಳ್ಳತನ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸೇರಿದಂತೆ ಸಮವಸ್ತ್ರಗಳ ಕೊರತೆ, ಸರ್ಕಾರಿ ಶಾಲೆಗೆ ಪೋಷಕರಿಂದ ದೇಣಿಗೆ ಸಂಗ್ರಹ, ಪಿಎಸ್‌ಐ ನೇಮಕಾತಿ ಹಗರಣ ಹೀಗೆ ಸಾಲು ಸಾಲು ಹಗರಣಗಳು ಕರ್ನಾಟಕ ಸರ್ಕಾರನ್ನು ತೀವ್ರ ಮುಜುಗರಕ್ಕೆ ಈಡಾಗಿಸಿದವು.
ಮುಂದಿನ ವರ್ಷ ವಿಧಾನಸಭೆ ಚುನಾವಣೆಯೂ ಇರಲಿರುವುದರಿಂದ 2022 ರಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳೂ ನಡೆದವು. ಕರ್ನಾಟಕದಲ್ಲಿ ಸಾಕಷ್ಟು ಸದ್ದು ಮಾಡಿದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ, ಜೆಡಿಎಸ್‌ನ ಪಂಚರತ್ನ ರಥಯಾತ್ರೆ, ಜನತಾ ಜಲಧಾರೆ, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ, ಮೇಕೆದಾಟು ಯಾತ್ರೆ, ಬಿಜೆಪಿಯ ಜನಸಂಕಲ್ಪ ರಥಯಾತ್ರೆ, ಎಎಪಿ, ಕೆಆರ್‌ಎಸ್ ಮೊದಲಾದ ಪಕ್ಷಗಳ ರಾಜಕೀಯ ಚಟುವಟಿಕೆಗಳು ರಾಜ್ಯ ರಾಜಕಾರಣವನ್ನು ರಂಗು ರಂಗಾಗಿಸಿದವು. ಸಿದ್ಧರಾಮೋತ್ಸವ, ನೇಪಥ್ಯಕ್ಕೆ ಸರಿದ ಬಿಎಸ್‌ವೈ, ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆ, ಮುಸ್ಲಿಂ ಓಲೈಕೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡ ಜೆಡಿಎಸ್, ಪೇಸಿಎಂ ಅಭಿಯಾನ ಹೀಗೆ ಹಲವು ಕುತೂಹಲಕಾರಿ ಘಟನೆಗಳು ಜರುಗಿದವು.
ಅದಲ್ಲದೆ, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ರೇಣುಕಾಚಾರ್ಯರ ಅಣ್ಣನ ಪುತ್ರನ ಅಸಹಜ ಸಾವು, ರಾಮನಗರದಲ್ಲಿ ಸಚಿವ ಅಶ್ವತ್ಥ ನಾರಾಯಣ, ಡಿ.ಕೆ ಸುರೇಶ್ ನಡುವಿನ ಜಟಾಪಟಿ, ಸಚಿವ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡರ ನಡುವಿನ ಜಟಾಪಟಿ, ಈಶ್ವರಪ್ಪ ರಾಜಿನಾಮೆ, ರೇಣುಕಾಚಾರ್ಯ ಪುತ್ರಿಯ ನಕಲಿ ಜಾತಿ ಪ್ರಮಾಣ ಪತ್ರ, ಅಂಬೇಡ್ಕರ್ ಅವರಿಗೆ ಅವಮಾನ, ದಲಿತರ ಮಹಾ ಪ್ರತಿಭಟನೆ, ಒಳಮೀಸಲಾತಿಗಾಗಿ ಹೆಚ್ಚಾದ ಬೇಡಿಕೆ, ಪ್ರಬಲ ಜಾತಿಗಳ ಮೀಸಲಾತಿ ಪ್ರತಿಭಟನೆ ಹೀಗೆ ಹಲವು ಬೆಳವಣಿಗೆಗಳು ಸದಾ ಚರ್ಚೆಗಳನ್ನು ಜೀವಂತವಾಗಿರಿಸಿದವು.
ಬೆಂಗಳೂರು ಸೇರಿದಂತೆ ಹಲವೆಡೆ ನೆರೆ ಪರಿಸ್ಥಿತಿ, ಮಾನವ vs ಕಾಡುಪ್ರಾಣಿಗಳ ನಡುವಿನ ಸಂಘರ್ಷಗಳು, ಚಿರತೆ, ಆನೆ, ಕರಡಿ ಸೇರಿದಂತೆ ಕಾಡುಪ್ರಾಣಿಗಳಿಂದ ಬೇಸತ್ತ ಜನತೆ, ಮೊದಲಾದ ಸಮಸ್ಯೆಗಳನ್ನೂ ಕರ್ನಾಟಕದ ಜನತೆ ಅನುಭವಿಸಿದರು.
ಕುಕ್ಕರ್ ಬ್ಲಾಸ್ಟ್ ಪ್ರಕರಣ, ದರ್ಶನ್ ಮೇಲಿನ ಚಪ್ಪಲಿ ಎಸೆತ ಪ್ರಕರಣ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರ್ ಮೇಲೆ ಮುತ್ತಿಗೆ ಸೇರಿದಂತೆ ಹಲವು ಘಟನೆಗಳು ಚರ್ಚೆಗಳನ್ನು ಎಬ್ಬಿಸಿದವು.
ಕಾಂತಾರ ಚಿತ್ರ ವಿಶ್ವದ ಗಮನ ಸೆಳೆದರೆ, ಕೆಜಿಎಫ್-2, ಚಾರ್ಲಿ777 ವಿಕ್ರಾಂತ್ ರೋಣ, ಜೇಮ್ಸ್ ಮೊದಲಾದ ಚಿತ್ರಗಳು ಕನ್ನಡ ಚಿತ್ರರಂಗದ ದಿಕ್ಕನ್ನು ಇನ್ನಷ್ಟು ವಿಶಾಲವಾಗಿಸಿದವು. ರಿಷಬ್ ಶೆಟ್ಟಿಯಂತೂ ದೇಶಾದ್ಯಂತ ಮನೆ ಮಾತಾದರು.