ನರೇಂದ್ರ ಮೋದಿ ಪ್ರಧಾನಿ ಹುದ್ದೆ ಅಲಂಕರಿಸಿ ಬರೋಬ್ಬರಿ ಆರು ವರ್ಷಗಳಾಗಿವೆ. ಈ ಅವಧಿಯಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅವರ ದಾಖಲೆಗಳು ಸಾಕಷ್ಟಿವೆ. ಅತಿ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದು, ಅತಿ ಹೆಚ್ಚು ದೇಶಗಳ, ಅದರಲ್ಲೂ ಅಮೆರಿಕ, ಚೀನಾ, ರಷ್ಯ ದೇಶಗಳ ಮುಖ್ಯಸ್ಥರನ್ನು ಕರೆದು ಅದ್ದೂರಿ ಸ್ವಾಗತ ನೀಡಿದ್ದು ದಾಖಲೆಯೇ. ಅತಿ ಹೆಚ್ಚು ಬಾರಿ ‘ಪ್ರೈಮ್ ಟೈಮ್’ ನಲ್ಲಿ ಕಾಣಿಸಿಕೊಂಡ ಪ್ರಧಾನಿಯೆಂಬ ವಿಶಿಷ್ಟ ಹೆಗ್ಗಳಿಕೆಯನ್ನೂ ನರೇಂದ್ರ ಮೋದಿ ಪಡೆದಿದ್ದಾರೆ.
ಈ ಆರು ವರ್ಷಗಳ ಎಲ್ಲಾ ದಾಖಲೆಗಳನ್ನು ಇಲ್ಲಿ ನಮೂದಿಸಲು ಸಾಧ್ಯವಿಲ್ಲ. ಅಷ್ಟೊಂದು ಅಗಾಧ ದಾಖಲೆಗಳನ್ನು ಮೋದಿ ಮಾಡಿದ್ದಾರೆ. ತಮ್ಮದೇ ದಾಖಲೆಗಳನ್ನು ಮುರಿದ ಹೆಗ್ಗಳಿಕೆಯೂ ಮೋದಿ ಅವರ ದಾಖಲೆಗಳ ಖಾತೆಯಲ್ಲಿದೆ.
2020ನೇ ಸಾಲಿನ ಮೊದಲ ಅರ್ಧ ವರ್ಷವು ಇನ್ನೊಂದು ವಾರದಲ್ಲಿ ಮುಗಿಯುತ್ತಿದೆ. ಪ್ರಧಾನಿ ನರೇಂದ್ರಮೋದಿ ಅವರು (ಅಂದರೆ ಅವರ ನೇತೃತ್ವದ ಸರ್ಕಾರ) ಈ ಆರು ತಿಂಗಳಲ್ಲಿ ಮಾಡಿದ ದಾಖಲೆಗಳನ್ನು ದಾಖಲಿಸುವ ಪ್ರಯತ್ನವನ್ನು ‘ಪ್ರತಿದ್ವನಿ’ ಇಲ್ಲಿ ಮಾಡಿದೆ.
ಮೌಲ್ಯ ಕಳೆದುಕೊಂಡ ರುಪಾಯಿ:
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ 15 ರುಪಾಯಿಗೆ 1 ಡಾಲರ್ ಬರಲಿದೆ ಎಂದು 2014ರ ಚುನಾವಣಾ ಪೂರ್ವದಲ್ಲಿ ಮತ್ತು ಚುನಾವಣಾ ಪ್ರಚಾರದ ವೇಳೆ ಪ್ರಧಾನವಾಗಿ ಪ್ರಸ್ತಾಪಿಸಲಾಗಿತ್ತು. ಆದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರುಪಾಯಿ ಮೌಲ್ಯ ದಿನೇ ದಿನೇ ಕುಸಿಯುತ್ತಾ ಬಂದಿದೆ. ಇದುವರೆಗೆ ಪ್ರತಿದಿನ ಸರಾಸರಿ 0.08 ಪೈಸೆಯಂತೆ ರುಪಾಯಿ ಮೌಲ್ಯವು ಡಾಲರ್ ವಿರುದ್ಧ ಕುಸಿದಿದೆ. ಡಾಲರ್ ವಿರುದ್ಧ ರುಪಾಯಿ 70ರ ಗಡಿ ದಾಟುವುದು ಸಾಧ್ಯವೇ ಇಲ್ಲ ಎಂಬ ಎಲ್ಲಾ ಆರ್ಥಿಕತಜ್ಞರ ಲೆಕ್ಕಾಚಾರವನ್ನು ನರೇಂದ್ರ ಮೋದಿ ಬುಡಮೇಲು ಮಾಡಿದ್ದಾರೆ. ಮೋದಿ ಅಧಿಕಾರದ ಮೊದಲ ಅವಧಿಯಲ್ಲೇ ರುಪಾಯಿಯು ಡಾಲರ್ ವಿರುದ್ಧ 70ರ ಗಡಿಯನ್ನು ದಾಟಿಬಿಟ್ಟಿತ್ತು. ಮೋದಿಯ ಎರಡನೇ ಅವಧಿಯಲ್ಲಿ 75ರ ಗಡಿಯನ್ನು ದಾಟಿತು. ಮೋದಿ ಆಡಳಿತದಲ್ಲಿ ರುಪಾಯಿ ಮೌಲ್ಯ ಕುಸಿತದ ಲೆಕ್ಕದಲ್ಲಿ ಏಪ್ರಿಲ್ 1 ರಂದು ಅತಿ ದೊಡ್ಡ ದಾಖಲೆಯಾಗಿದೆ. ಅಂದು ರುಪಾಯಿ ಮೌಲ್ಯವು ಡಾಲರ್ ವಿರುದ್ಧ 77.60ಕ್ಕೆ ಕುಸಿದಿತ್ತು. ಪ್ರಸ್ತುತ 76 ರುಪಾಯಿ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ.
ಆರ್ಥಿಕ ಅಭಿವೃದ್ಧಿ ಕುಸಿತ:
ಅಧಿಕಾರಕ್ಕೆ ಬಂದರೆ ದೇಶದ ಅಭಿವೃದ್ಧಿಯನ್ನು ಎರಡಂಕಿಗೆ ದಾಟಿಸುವುದಾಗಿ ನರೇಂದ್ರ ಮೋದಿ 2014ರ ಚುನಾವಣಾ ಪ್ರಚಾರದಲ್ಲೆಲ್ಲಾ ಹೇಳಿಕೊಂಡು ಬಂದಿದ್ದರು. ಆದರೆ, ಅವರು ಅಧಿಕಾರಕ್ಕೆ ಬಂದು ಆರು ವರ್ಷ ಪೂರ್ಣಗೊಂಡಿದ್ದರೂ ಯಾವ ವರ್ಷದಲ್ಲೂ ಆರ್ಥಿಕಾಭಿವೃದ್ಧಿ ಎರಡಂಕಿ ದಾಟುವುದಿರಲಿ (ಅಂದರೆ ಶೇ.10ಕ್ಕಿಂತ ಹೆಚ್ಚು) ಎರಡಂಕಿ ಸಮೀಪವೂ ಹೋಗಿಲ್ಲ. ಯುಪಿಎ-1 ಮತ್ತು ಯುಪಿಎ-2 ರ ಹತ್ತು ವರ್ಷಗಳ ಅವಧಿಯಲ್ಲಿದ್ದ ಜಿಡಿಪಿ ಸರಾಸರಿ ಶೇ.7.5- 8ಕ್ಕೆ ಹೋಲಿಸಿದರೆ, ಮೋದಿ ಸರ್ಕಾರದ ಜಿಡಿಪಿ ಸರಾಸರಿ ಶೇ.6ರ ಆಜುಬಾಜಿನಲ್ಲಿದೆ. 2019-20ನೇ ಸಾಲಿನ ಕೊನೆ ತ್ರೈಮಾಸಿಕದಲ್ಲಿ ಅಂದರೆ 2020 ಜನವರಿ- ಮಾರ್ಚ್ ಅವಧಿಯಲ್ಲಿ ಶೇ.3.1ಕ್ಕೆ ಕುಸಿದಿದೆ. ಇದು ಕಳೆದೆರಡು ದಶಕಗಳಲ್ಲೇ ಅತಿ ಕನಿಷ್ಠ ಮಟ್ಟದ ಆರ್ಥಿಕ ಬೆಳವಣಿಗೆಯಾಗಿದೆ. 2008ರ ಜಾಗತಿಕ ಆರ್ಥಿಕ ಕುಸಿದ ವೇಳೆಯೂ ಜಿಡಿಪಿ ಶೇ.4ರ ಆಜುಬಾಜಿನಲ್ಲಿತ್ತು. 2020ರಲ್ಲಿ ಜಿಡಿಪಿ ಕುಸಿತದಲ್ಲಿ ಪ್ರಧಾನಿ ಮೋದಿಯವರದ್ದು ಗಣನೀಯ ದಾಖಲೆಯಾಗಿದೆ.
ನಾಲ್ಕು ದಶಕಗಳಲ್ಲೇ ಗರಿಷ್ಠ ನಿರುದ್ಯೋಗ:
ನರೇಂದ್ರ ಮೋದಿ ಪ್ರಧಾನಿಯಾದರೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡುವ ಮೂಲಕ 10 ಕೋಟಿ ಉದ್ಯೋಗ ನಷ್ಟಕ್ಕೆ ಕಾರಣವಾಗಿದ್ದರು. ಜಿಎಸ್ಟಿ ಜಾರಿ ಮಾಡಿದ ನಂತರ ಮತ್ತಷ್ಟು ನಿರುದ್ಯೋಗ ಹೆಚ್ಚಿತ್ತು. 2019ನೇ ಸಾಲಿನ ಅಂತ್ಯದಲ್ಲಿ ನಿರುದ್ಯೋಗ ಪ್ರಮಾಣವು 8.5ಕ್ಕಿಂತ ಹೆಚ್ಚಿತ್ತು. ಇದು ಕಳೆದ ನಲ್ವತ್ತು ವರ್ಷಗಳಲ್ಲೇ ಅತಿ ಗರಿಷ್ಠಮಟ್ಟದ ನಿರುದ್ಯೋಗ ಪ್ರಮಾಣವಾಗಿತ್ತು. ಈ ಪ್ರಮಾಣವೇ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲೂ ಮುಂದುವರೆದಿತ್ತು. ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ಪ್ರೈಮ್ ಟೈಮ್ ನಲ್ಲಿ ಲಾಕ್ಡೌನ್ ಘೋಷಣೆ ಮಾಡಿದ ನಂತರದಲ್ಲಿ ಅಂದರೆ ಏಪ್ರಿಲ್- ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಶೇ.23.5ಕ್ಕೆರಿತ್ತು. ಇದು ನಾಲ್ಕು ದಶಗಳಷ್ಟೇ ಅಲ್ಲ ಸರ್ವಕಾಲಿಕ ಗರಿಷ್ಠ ನಿರುದ್ಯೋಗ ಪ್ರಮಾಣವಾಗಿದೆ. ಈ ದಾಖಲೆಯನ್ನು ಖುದ್ದು ಮೋದಿ ಅವರೇ ಮುರಿಯಲು ಸಾಧ್ಯವಾಗಬಹುದಷ್ಟೇ! ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ನಿರುದ್ಯೋಗ ಪ್ರಮಾಣವು ಈಗ ಶೇ.8.5ರ ಮಟ್ಟಕ್ಕೆ ಇಳಿದಿದೆ. ಅಂದರೆ, ನಾಲ್ಕುದಶಕಗಳ ಗರಿಷ್ಠಮಟ್ಟದಲ್ಲೇ ಇದೆ.
ದೇಶಿಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಗಣನೀಯವಾಗಿ ಕುಸಿದಿದೆ. ಅದರಲ್ಲೂ ಕರೊನಾ ಸೋಂಕು ವಿಶ್ವವ್ಯಾಪಿ ಪ್ರಸರಿಸಿದ ನಂತರ ಪ್ರತಿ ಬ್ಯಾರೆಲ್ ಗೆ 10 ಡಾಲರ್ ಆಜುಬಾಜಿಗೆ ಇಳಿದಿದೆ. ಒಂದು ಹಂತದಲ್ಲಿ ಋಣಾತ್ಮಕ ದರದ ಮಟ್ಟಕ್ಕೂ ಕುಸಿದಿದೆ. ಈಗ ಸುಮಾರು 35 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ದರವು ವಿಶ್ವದಲ್ಲೇ ಅತ್ಯಂತ ಗರಿಷ್ಠ ಮಟ್ಟದಲ್ಲಿದೆ. ಅಂದರೆ, ಕಚ್ಚಾ ತೈಲ ದರ ಇಳಿದಾಗ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಯಬೇಕಿತ್ತು. ಆದರೆ, ಮೋದಿ ಸರ್ಕಾರ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಇಳಿಸದೇ ದಾಖಲೆ ಮಾಡಿದೆ. ಪೆಟ್ರೋಲ್ ಮತ್ತು ಡಿಸೇಲ್ ಲೆಕ್ಕದಲ್ಲಿ ಮೋದಿ ಸರ್ಕಾರದ ಎರಡನೇ ದಾಖಲೆ ಎಂದರೆ- ಸತತ 18 ದಿನಗಳ ಕಾಲ ಪೆಟ್ರೋಲ್ ಡಿಸೇಲ್ ದರ ಏರಿಸಿರುವುದು! ಮೂರನೇ ದಾಖಲೆ ಎಂದರೆ 18 ದಿನಗಳ ಅವಧಿಯಲ್ಲಿ ಶೇ.11ರಷ್ಟು ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿದೆ. ಮೋದಿ ಸರ್ಕಾರದ ಮೋದಲ ಅವಧಿಯಲ್ಲೇ ಅಂದರೆ, 2018ರಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತ್ತು. ಆ ಮಟ್ಟ ಮುಟ್ಟಲು ಇನ್ನು ಎರಡು ದಿನಗಳಷ್ಟೇ ಬಾಕಿ ಇದೆ. ಅಂದರೆ, ಮೋದಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಲ್ಲಿ ತಮ್ಮ ದಾಖಲೆಯನ್ನು ತಾವೆ ಮುರಿಯುತ್ತಿದ್ದಾರೆ!
ಅತ್ಯುತ್ಪ್ರೇಕ್ಷಿತ ಕರೋನಾ ಪ್ಯಾಕೇಜ್:
ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ದೇಶವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳ ಸ್ಥಗಿತಗೊಂಡವು. ಆಗ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಪ್ರಧಾನಿ ನರೇಂದ್ರಮೋದಿ ಅವರು ‘ಪ್ರೈಮ್ ಟೈಮ್’ ನಲ್ಲಿ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿದರು. ಈ ಪ್ಯಾಕೇಜ್ ಎಷ್ಟು ಸಂಕೀರ್ಣವಾಗಿತ್ತೆಂದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅದನ್ನು ‘20 ಲಕ್ಷ ರುಪಾಯಿ’ ಪ್ಯಾಕೇಜು ಎಂದು ಟ್ವೀಟಿಸಿ, ನಂತರ ಅಕ್ಷರದೋಷವೆಂದು ತಿದ್ದಿಕೊಂಡರು. ಈ 20 ಲಕ್ಷ ಕೋಟಿ ಪ್ಯಾಕೇಜು ಏನು ಎತ್ತು ಎಂಬುದನ್ನು ವಿವರಿಸಲು ಸತತ ಅರ್ಧ ಡಜನ್ ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಕೊನೆಗೆ ಗೊತ್ತಾಗಿದ್ದು ಏನೆಂದರೆ- ಮೋದಿ ಸರ್ಕಾರ ವಾಸ್ತವವಾಗಿ ತನ್ನ ಬೊಕ್ಕಸದಿಂದ ನೀಡುತ್ತಿರುವುದು ಕೇವಲ 1.20 ಲಕ್ಷ ಕೋಟಿ ರುಪಾಯಿ ಮಾತ್ರ. ಉಳಿದೆದ್ದಲ್ಲವೂ ಆರ್ಬಿಐ ಉತ್ತೇಜನ, ಸಾಲ, ಸಾಲ ಮರುಪಾವತಿ ಮುಂದೂಡಿಕೆ, ತೆರಿಗೆ ಪಾವಾಸಾತಿ, ಪಿಎಫ್ ಮುಂಗಡ ಇತ್ಯಾದಿಗಳು ಸೇರಿದ್ದವು. ಆ ಲೆಕ್ಕದಲ್ಲಿ ಇಡೀ ಒಂದು ವಾರ 20 ಲಕ್ಷ ಕೋಟಿಯ ಕನಸು ಬಿತ್ತಿದ ಮೋದಿಯವರ ದಾಖಲೆಯನ್ನು ಯಾರೂ ಮುರಿಯಲಾರರು. ಸುಮಾರು 1 ಲಕ್ಷ ಕೋಟಿ ಪ್ಯಾಕೇಜನ್ನು 20 ಲಕ್ಷ ಕೋಟಿ ಪ್ಯಾಕೇಜೆಂದು ‘ಅತ್ಯುತ್ಪ್ರೇಷಿತ’ಗೊಳಿಸಿದ ಮೋದಿಯವರ ದಾಖಲೆಯನ್ನು ಮುರಿಯಲು ಖುದ್ಧು ಮೋದಿ ಅವರಿಗೂ ಸಾಧ್ಯವಾಗಲಿಕ್ಕಿಲ್ಲ!
ಮೋದಿ ಆಪ್ತ ಕಾರ್ಪೊರೆಟ್ ಕುಳಗಳ ಶ್ರೀಮಂತಿಕೆ ಹೆಚ್ಚಳ:
ದೇಶದಲ್ಲಿ ನಿರುದ್ಯೋಗ ಗರಿಷ್ಠಮಟ್ಟ ಮುಟ್ಟಿದ್ದರೂ, ಆರ್ಥಿಕಾಭಿವೃದ್ಧಿ ಕುಸಿಯುತ್ತಿದ್ದರೂ, ಜನರ ಖರೀದಿಸುವ ಶಕ್ತಿ ಕುಗ್ಗಿದ್ದರೂ ಅದೆಲ್ಲವನ್ನೂ ಲೆಕ್ಕಿಸದ ಪ್ರಧಾನಿ ನರೇಂದ್ರ ಮೋದಿ ಕಾರ್ಪೊರೆಟ್ ವಲಯಕ್ಕೆ 1.40 ಲಕ್ಷ ಕೋಟಿ ರುಪಾಯಿಗಳ ಕಾರ್ಪೊರೆಟ್ ತೆರಿಗೆ ವಿನಾಯ್ತಿ ಉಡುಗೊರೆಯನ್ನು ‘ಹೌಡಿ ಮೋದಿ’ ಕಾರ್ಯಕ್ರಮದ ಎರಡು ದಿನ ಮುಂಚಿತವಾಗಿ ಘೋಷಿಸಿದ್ದರು. ಆದರೆ, 2020ರಲ್ಲಿ ದಾಖಲೆಯಾಗಿರುವುದು ಏನೆಂದರೆ ಮೋದಿ ಆಪ್ತರಾದ ಅಂಬಾನಿ ಮತ್ತು ಅದಾನಿ ಕಂಪನಿಗಳು ಹೆಚ್ಚೆಚ್ಚು ಶ್ರೀಮಂತವಾಗಿವೆ. ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರೂ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಷೇರು ಸರ್ವಕಾಲಿಕ ಗರಿಷ್ಠಮಟ್ಟಕ್ಕೆ ಏರಿದೆ. ಈ ಸಂಕಷ್ಟದ ಸಮಯದಲ್ಲೇ ಮುಖೇಶ್ ಅಂಬಾನಿ ತಮ್ಮ ಕಂಪನಿಷೇರು ಮಾರಾಟ ಮಾಡಿ 15.6 ಬಿಲಿಯನ್ ಡಾಲರ್ ಸಂಗ್ರಹಿಸಿದ್ದಾರೆ. ಇದೇ ವೇಳೆ ಮೋದಿಯವರ ಮತ್ತೊಬ್ಬ ಆಪ್ತರಾದ ಗೌತಮ್ ಅದಾನಿ ಅವರ ಅದಾನಿ ಸಮೂಹದ ಬಹುತೇಕ ಎಲ್ಲಾ ಕಂಪನಿಗಳ ಷೇರುಗಳು ಬಹುತೇಕ ಗರಿಷ್ಠಮಟ್ಟದಲ್ಲಿ ವಹಿವಾಟಾಗುತ್ತಿವೆ. ಅದಾನಿ ಗ್ರೀನ್ ಷೇರುದರವು 40 ರುಪಾಯಿಂದ 400 ರುಪಾಯಿಗೆ ಜಿಗಿದಿದೆ. ಕಂಪನಿಯ ಷೇರು ಏರಿದಷ್ಟೂ ಪ್ರವರ್ತಕರ ಸಂಪತ್ತು ವೃದ್ದಿಸುತ್ತದೆ. ಹೀಗಾಗಿ ಸಂಕಷ್ಟ ಕಾಲದಲ್ಲೂ ಅಂಬಾನಿ, ಅದಾನಿ ಶ್ರೀಮಂತಿಕೆ ವೃದ್ಧಿಸಿದೆ. ಇದೇ ವೇಳೆ ಸಾರ್ವಜನಿಕ ವಲಯದ ಉದ್ಯಮಗಳ ಅರ್ಥಾತ್ ಕೇಂದ್ರ ಸರ್ಕಾರದ ಉದ್ಯಮಗಳ ಷೇರುಗಳು ಮಾತ್ರ ಕನಿಷ್ಠ ಮಟ್ಟಕ್ಕೆ ಕುಸಿಯುತ್ತಿವೆ.
Also Read: ಅಂಬಾನಿಯ 150 ಬಿಲಿಯನ್ ಡಾಲರ್ ಕಂಪನಿ ಮತ್ತು ಪ್ರಧಾನಿ ಮೋದಿಯ ಕಾರ್ಪೊರೆಟ್ ಸಖ್ಯ!
Also Read: ಏನಿಲ್ಲ, ಮೋದಿ-ಟ್ರಂಪ್-ಅಂಬಾನಿ ನಡುವೆ ಏನೇನಿಲ್ಲ?