
ಸ್ವತಂತ್ರ ಭಾರತದ ಅತ್ಯಂತ ಉಪಯುಕ್ತ-ಜನೋಪಯೋಗಿ ಕಾಯ್ದೆ ಇನ್ನೂ ಉಸಿರಾಡುತ್ತಿದೆ
ನಾ ದಿವಾಕರ
2004 ರಿಂದ 2014ರವೆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಕೇಂದ್ರ ಸರ್ಕಾರ, ಸ್ವತಂತ್ರ ಭಾರತದ ಹಲವು ಮಹತ್ವದ ಕಾಯ್ದೆಗಳನ್ನು ಜಾರಿಗೊಳಿಸಿದ್ದನ್ನು ಸ್ಮರಿಸಬೇಕಿದೆ. ಯುಪಿಎ ಸರ್ಕಾರದ ಎರಡನೆ ಪಾಳಿಯಲ್ಲಿ ಭ್ರಷ್ಟಾಚಾರದ ಹಗರಣಗಳು ಹೆಚ್ಚಾಗಿದ್ದು ಮತ್ತು ಆಡಳಿತದಲ್ಲಿ ಕೆಲವು ಅನಪೇಕ್ಷಿತ ಬೆಳವಣಿಗೆಗಳು ಕಂಡುಬಂದಿದ್ದು, 2014ರ ಚುನಾವಣೆಗಳ ಪರಾಭವಕ್ಕೆ ಕಾರಣವಾಯಿತು. ಆದರೆ ಅರಣ್ಯ ಹಕ್ಕು, ಆಹಾರ ಹಕ್ಕು, ಶಿಕ್ಷಣದ ಹಕ್ಕು ಮತ್ತು ಮಾಹಿತಿ ಹಕ್ಕುಗಳನ್ನು ರಕ್ಷಿಸುವ ಕಾಯ್ದೆಗಳು, ಉದ್ಯೋಗ ಖಾತರಿಯ ಯೋಜನೆ (MNREGA̧) ಈ ಹತ್ತು ವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ ಜಾರಿಯಾಗಿದ್ದು, ಚಾರಿತ್ರಿಕವಾಗಿ ಮಹತ್ವ ಪಡೆಯುತ್ತವೆ. 2014ರ ನಂತರದಲ್ಲಿ ಈ ರೀತಿಯ ಯಾವುದೇ ಲೋಕೋಪಕಾರಿ ಕಾಯ್ದೆಗಳು ಜಾರಿಯಾಗಿರುವುದನ್ನು ಗುರುತಿಸಲಾಗುವುದಿಲ್ಲ.
ಸರ್ಕಾರಗಳ ಆಡಳಿತ ವೈಫಲ್ಯ, ಆರ್ಥಿಕ ನೀತಿಗಳಲ್ಲಿನ ಲೋಪಗಳು, ಕರಾಳ ಕಾಯ್ದೆಗಳ ಬಳಕೆ ಹಾಗು ವಿದೇಶಾಂಗ ನೀತಿಯ ವ್ಯತ್ಯಯಗಳು ಇವೆಲ್ಲವೂ ಪ್ರಧಾನವಾಗಿ ಕಾಣುವುದಾದರೂ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಬಹುಸಂಖ್ಯಾತ ಜನತೆಯ ಆತಂಕ , ತಲ್ಲಣ ಮತ್ತು ನೋ̧ವು ಸವಾಲುಗಳಿಗೆ ಸ್ಪಂದಿಸುವ ಮತ್ತು ಬಹು ಮುಖ್ಯವಾಗಿ ಈ ತಳಸಮಾಜದ ಜನರ ಜೀವನೋಪಾಯದ ಮಾರ್ಗಗಳಿಗೆ ಇರಬಹುದಾದ ಅಡ್ಡಿ ಆತಂಕಗಳನ್ನು ನಿವಾರಿಸುವ ನೀತಿಗಳು , ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು, ತಾರತಮ್ಯ ಮತ್ತು ದೌರ್ಜನ್ಯಗಳನ್ನು ತಡೆಗಟ್ಟುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಯುಪಿಎ ಆಳ್ವಿಕೆಯ ಈ ಕಾಯ್ದೆಗಳು ಕಾಂಗ್ರೆಸ್ ಅಥವಾ ಇತರ ಬಂಡವಾಳಿಗ ಪಕ್ಷಗಳ ಔದಾರ್ಯ ಅಥವಾ ಔದಾತ್ಯದ ಫಲ ಅಲ್ಲ ಎನ್ನುವುದನ್ನೂ ಗಮನದಲ್ಲಿಡಬೇಕು.
ಹಕ್ಕೊತ್ತಾಯದ ಜನಾಂದೋಲನಗಳು
1980ರ ನಂತರದಲ್ಲಿ ದೇಶದ ವಿವಿಧ ಭಾಗಗಳಲ್ಲಿ ರೂಪುಗೊಂಡ ಜನಾಂದೋಲನಗಳ ಒತ್ತಾಸೆ, ಆಗ್ರಹ ಮತ್ತು ಹಕ್ಕೊತ್ತಾಯದ ಚಳುವಳಿಗಳ ಫಲವಾಗಿ ಈ ಕಾಯ್ದೆಗಳು ಜಾರಿಯಾಗಿದ್ದನ್ನು ಅಲ್ಲಗಳೆಯಲಾಗದು. ಈ ಹಕ್ಕುಗಳನ್ನು ಶಾಸನಾತ್ಮಕವಾಗಿ ಜಾರಿಗೊಳಿಸುವ ಮೂಲಕ, ತಳಸಮಾಜಕ್ಕೆ ಭದ್ರತೆ ಮತ್ತು ವಿಶ್ವಾಸವನ್ನು ಮೂಡಿಸುವ ಪ್ರಯತ್ನಗಳಿಗೆ ಅನೇಕ ಜನಾಂದೋಲನಗಳು ಕಾರಣವಾಗಿವೆ. ಈ ಆಂದೋಲನಗಳು ವರ್ತಮಾನದ ಸಂದರ್ಭದಲ್ಲಿ ʼಆಂದೋಲನ ಜೀವಿಗಳ ʼ ಪ್ರಯತ್ನಗಳಾಗಿ ಕಾಣುತ್ತಿರುವುದು ವಿಪರ್ಯಾಸವಾದರೂ, ಈ ʼ ಜೀವಿಗಳ ʼ ತ್ಯಾಗ ಮತ್ತು ಅವಿರತ ಪರಿಶ್ರಮವೇ ಅವಕಾಶವಂಚಿತ ಜನಸಮುದಾಯಗಳ ಪಾಲಿಗೆ ವರದಾನವಾಗಿರುವುದು ಚಾರಿತ್ರಿಕ ಸತ್ಯ. 2014ರಲ್ಲಿ ರಾಜಕೀಯ ಅಪಹಾಸ್ಯಕ್ಕೀಡಾಗಿದ್ದ ನರೇಗಾ ಯೋಜನೆ ಕೋವಿದ್ ಸಂದರ್ಭದಲ್ಲಿ ಬಡಜನತೆಯ ಜೀವರಕ್ಷಕ ಸಂಜೀವಿನಿಯಾಗಿದ್ದನ್ನು ಸ್ಮರಿಸಬೇಕಿದೆ.
ಈ ಹಾದಿಯಲ್ಲಿ ಸ್ವತಂತ್ರ ಭಾರತದ ಅತ್ಯಂತ ಪರಿಣಾಮಕಾರಿ , ಲೋಕೋಪಕಾರಿ ಶಾಸನ, ಮಾಹಿತಿ ಹಕ್ಕು ಕಾಯ್ದೆ , 2005 ಇಪ್ಪತ್ತು ವರ್ಷಗಳನ್ನು ಪೂರೈಸಿರುವುದನ್ನು ಹೆಮ್ಮೆಯಿಂದ ಆಚರಿಸಬೇಕಿದೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಇಂದಿಗೂ ಎದ್ದು ಕಾಣುವ ಎರಡು ಕೊರತೆಗಳೆಂದರೆ, ನೀತಿ ನಿರೂಪಕರ-ಜನಪ್ರತಿನಿಧಿಗಳ ಉತ್ತರದಾಯಿತ್ವ ಮತ್ತು ಆಡಳಿತ ವ್ಯವಸ್ಥೆಯ ಪಾರದರ್ಶಕತೆ. ಯಾವ ವಲಯದಲ್ಲೂ, ಯಾವ ಸ್ತರದಲ್ಲೂ ಸಹ ನೀತಿ ನಿರೂಪಕರು, ನಿರ್ವಾಹಕರು ಹಾಗೂ ಶಾಸನಾತ್ಮಕ ನಿರ್ವಹಣೆಕಾರರು ಉತ್ತರದಾಯಿತ್ವದ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸದಿರುವುದನ್ನು ದೆಹಲಿಯಿಂದ ಕೋಲಾರದವರೆಗೂ ಕಾಣಬಹುದು. ಬಡತನ, ಹಸಿವೆ, ನೈಸರ್ಗಿಕ ವಿಕೋಪ, ಮನುಜ ನಿರ್ಮಿತ ಅವಘಡಗಳು, ಸಾಮಾಜಿಕ ದೌರ್ಜನ್ಯಗಳು, ಅಸಹಜ ಸಾವುಗಳು, ನಿತ್ಯ ಬದುಕಿನ ಸಂಕಟಗಳು ಈ ಯಾವುದೇ ಸಮಸ್ಯೆಗಳಿಗೂ ತಾವು ಉತ್ತರದಾಯಿಯಾಗಿರಬೇಕು ಎಂಬ ವಿವೇಚನೆಯನ್ನೇ ರಾಜಕೀಯ ಪಕ್ಷಗಳು, ಅಧಿಕಾರಶಾಹಿ ಕಳೆದುಕೊಂಡಿದೆ. ಹಾಗಾಗಿಯೇ ನ್ಯಾಯಾಂಗ ಅವಕಾಶವಂಚಿತ, ಅಸಹಾಯಕ ಜನತೆಯ ಕೊನೆಯ ಆಸರೆಯಾಗಿ ಪರಿಣಮಿಸಿದೆ.

ಮಾಹಿತಿ ಹಕ್ಕಿಗಾಗಿ ಜನದನಿ
ಜಗತ್ತಿನಲ್ಲೇ ಅತ್ಯುತ್ತಮ ಪಾರದರ್ಶಕ ಶಾಸನ ಎಂದೇ ಗುರುತಿಸಲ್ಪಡುವ ಮಾಹಿತಿ ಹಕ್ಕು ಕಾಯ್ದೆ ಜಾರಿಯಾಗಲು ಹಲವು ದಶಕಗಳ ನಿರಂತರ ಹೋರಾಟ, ಜನಾಂದೋಲನಗಳು ಕಾರಣವಾಗಿದ್ದು ವಾಸ್ತವ. ಕಳೆದ ಎರಡು ದಶಕಗಳಲ್ಲಿ ಲಕ್ಷಾಂತರ ಜನರು ಈ ಕಾಯ್ದೆಯ ಉಪಯೋಗ ಪಡೆದುಕೊಂಡಿದ್ದಾರೆ. ಯಾವುದೇ ಜನಪರ ಕಾಯ್ದೆಯ ಜಾರಿ ಮತ್ತು ಅನುಷ್ಟಾನದ ನಡುವೆ ಅಪಾರ ಅಂತರ ಇರುವುದು ಸ್ವತಂತ್ರ ಭಾರತದ ಲಕ್ಷಣವಾಗಿದ್ದು, ಮಾಹಿತಿ ಹಕ್ಕು ಕಾಯ್ದೆಗೂ ಇದನ್ನು ಅನ್ವಯಿಸಬಹುದು. ಆದಾಗ್ಯೂ ತಳಸಮಾಜದಲ್ಲಿ, ಮಧ್ಯಮ ವರ್ಗಗಳಲ್ಲಿ ಈ ಕಾಯ್ದೆಯು, ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವ ಸಾಧನವಾಗಿ ಕಾರ್ಯಗತವಾಗಿದೆ. ಇಂದಿಗೂ ಸಹ ಪ್ರತಿ ವರ್ಷ 60 ಲಕ್ಷಕ್ಕೂ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ ಶೇಕಡಾ 50 ರಷ್ಟು ಅರ್ಜಿದಾರರು ತಮಗೆ ಅಗತ್ಯವಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ.
ಕಳೆದ ಹತ್ತು ವರ್ಷಗಳಲ್ಲಿ, ಅದಕ್ಕೂ ಮುಂಚಿನಿಂದಲೂ, ಈ ಕಾಯ್ದೆಯ ಬಿಗಿ ಹಿಡಿತವನ್ನು ಸಡಿಲಗೊಳಿಸುವ ಪ್ರಯತ್ನಗಳು ನಡೆದಿದ್ದರೂ, ಶ್ರೀಸಾಮಾನ್ಯರಿಗೆ ಈ ಕಾಯ್ದೆ ಭರವಸೆ ನೀಡಿರುವುದು ವಾಸ್ತವ. ಪಡಿತರ, ನೈರ್ಮಲ್ಯ ಸಮಸ್ಯೆಗಳು, ಪಿಂಚಣಿ, ನೀರಿನ ಸಂಪರ್ಕ ಹೀಗೆ ಸಾರ್ವಜನಿಕ ಜೀವನದಲ್ಲಿ ಎದುರಾಗುವ ಹಲವು ಜಟಿಲ ಸಿಕ್ಕುಗಳನ್ನು ಬಿಡಿಸುವುದರಲ್ಲಿ ಮಾಹಿತಿ ಹಕ್ಕು ಕಾಯ್ದೆ ನೆರವಾಗಿದೆ. ಒಂದು ಮಾಹಿತಿಯ ಪ್ರಕಾರ ಈ ವರ್ಷ ಜೂನ್ 30ರ ಹೊತ್ತಿಗೆ, ದೇಶದ 29 ರಾಜ್ಯಾವಾರು ಮಾಹಿತಿ ಆಯೋಗಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳ ಪೈಕಿ 4 ಲಕ್ಷಕ್ಕೂ ಹೆಚ್ಚು ಮನವಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಆರು ಆಯೋಗಗಳು ನಿಷ್ಕ್ರಿಯವಾಗಿದ್ದು , ಎರಡು ಆಯೋಗಗಳು ಪೂರ್ತಿಯಾಗಿ ಬಂದ್ ಆಗಿವೆ. ಕೇಂದ್ರ ಮಾಹಿತಿ ಆಯೋಗ (CIC) ಸೇರಿದಂತೆ, ಮೂರು ಆಯೋಗಗಳು ಆಯುಕ್ತರಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ, ಅಕ್ಟೋಬರ್ 2025ರ ವೇಳೆಗೆ ಎರಡು ಆಯೋಗಗಳ ಎಲ್ಲ ಹುದ್ದೆಗಳೂ ಖಾಲಿ ಉಳಿದಿವೆ. ಇದು ಸರ್ಕಾರಗಳ ಆದ್ಯತೆ-ಆಯ್ಕೆಗಳ ಔಚಿತ್ಯವನ್ನು ಪ್ರಶ್ನಿಸುವಂತೆ ಮಾಡುತ್ತದೆ.

ತಳಮಟ್ಟದ ಕಾರ್ಯಕ್ಷೇತ್ರಗಳಲ್ಲಿ
ನಿವೃತ್ತ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರ ಅವರ ಅಭಿಪ್ರಾಯದಲ್ಲಿ ಈ ಕಾಯ್ದೆಯಡಿ ಪ್ರಧಾನ ಪಾತ್ರ ವಹಿಸುವುದು ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳು (Public Information Offcers-PIO). ಈ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ಅರ್ಜಿದಾರರಿಗೆ ಮಾಹಿತಿಯನ್ನು ಒದಗಿಸುವ ಮತ್ತು ಅದಕ್ಕೆ ಬೇಕಾದ ದಾಖಲೆಗಳನ್ನು ಒದಗಿಸುವ ಸಾಂವಿಧಾನಿಕ ಕರ್ತವ್ಯ ಇರುತ್ತದೆ. ಈ ಅಧಿಕಾರಿಗಳೇ ಅಂತಿಮವಾಗಿ ದೂರುದಾರರಿಗೆ ಮಾಹಿತಿಯನ್ನೂ ಒದಗಿಸಬೇಕಾಗುತ್ತದೆ. ಆದರೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ, ಎಷ್ಟು ತಿರಸ್ಕೃತವಾಗಿವೆ, ವಿಲೇವಾರಿಯಾಗಿವೆ, ಎಷ್ಟು ಸಮಾಧಾನಕರ ಉತ್ತರ ದೊರೆತಿದೆ ಇವೇ ಮುಂತಾದ ಅಧಿಕೃತ ದತ್ತಾಂಶಗಳು ಲಭ್ಯವಾಗದೆ, ಈ ಕಾಯ್ದೆಯ ವಾಸ್ತವಿಕ ಬಳಕೆಯನ್ನು ಅಳೆಯಲು ಸಾಧ್ಯವಿಲ್ಲ ಎಂದು ಮಿಶ್ರ ಹೇಳುತ್ತಾರೆ.
ಈ ನಿಟ್ಟಿನಲ್ಲಿ PIOಗಳು ಅರ್ಜಿದಾರರಿಗೆ ಮಾಹಿತಿ ಒದಗಿಸಲು ಹಿಂಜರಿಯುವುದಕ್ಕೂ ಕಾರಣಗಳಿವೆ. ಮೊದಲನೆಯದಾಗಿ, ಈ ಮಾಹಿತಿ ಒದಗಿಸುವ ಕೆಲಸ ಅವರ ಅಧಿಕೃತ ಕಾರ್ಯವ್ಯಾಪ್ತಿಯನ್ನು ಮೀರಿದ್ದು. ಮೇಲಾಗಿ ಮಾಹಿತಿ ಹಕ್ಕು ಅರ್ಜಿಗಳನ್ನು ನಿರ್ವಹಿಸುವುದಕ್ಕಾಗಿ ಈ ಅಧಿಕಾರಿಗಳಿಗೆ ಯಾವುದೇ ರೀತಿಯ ಉತ್ತೇಜಕ ಭತ್ಯೆ (Incentives) ಕೊಡಲಾಗುವುದಿಲ್ಲ. ಆದರೆ ತಪ್ಪು ಮಾಹಿತಿ ನೀಡಿದರೆ, ದಾರಿತಪ್ಪಿಸುವ ಮಾಹಿತಿಯನ್ನು ಒದಗಿಸಿದರೆ , ಅಥವಾ ನಿಗದಿತ ಅವಧಿಯ ಒಳಗಾಗಿ ಮಾಹಿತಿ ನೀಡದಿದ್ದರೆ,25 ಸಾವಿರ ರೂಗಳ ದಂಡ ವಿಧಿಸಲಾಗುತ್ತದೆ. ಇದು ಬಹುಪಾಲು ಅಧಿಕಾರಿಗಳನ್ನು ಸ್ವ-ರಕ್ಷಣೆಯ ತಂತ್ರಗಳಿಗೆ ಮೊರೆಹೋಗುವಂತೆ ಮಾಡುತ್ತದೆ. 2023ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ವೈಯುಕ್ತಿಕ ಡಿಜಿಟಲ್ ದತ್ತಾಂಶ ರಕ್ಷಣೆ ಕಾಯ್ದೆ (DPDP)̧ PIO ಗಳಿಗೆ ವೈಯುಕ್ತಿಕ ಮಾಹಿತಿಯನ್ನು ತಡೆಹಿಡಿಯುವ ಅಧಿಕಾರವನ್ನೂ ನೀಡುತ್ತದೆ. ಈ ಕಾಯ್ದೆ ತಿದ್ದುಪಡಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ.

2019ರಲ್ಲಿ ಮೋದಿ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ತಿದ್ದುಪಡಿಮಾಡಿ ಜಾರಿಗೊಳಿಸಿದ ಮತ್ತೊಂದು ನಿಯಮ ಎಂದರೆ, ಮಾಹಿತಿ ಅರ್ಜಿಗಳನ್ನು ನಿರ್ವಹಿಸುವ ಕೇಂದ್ರ ಹಾಗೂ ರಾಜ್ಯ ಮಟ್ಟದ ಮಾಹಿತಿ ಆಯುಕ್ತರ ವೇತನ ನಿಗದಿ ಮತ್ತು ಪರಿಷ್ಕರಣೆ ಹಾಗೂ ಸೇವಾ ನಿಯಮಗಳನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದ್ದು. ವಿಶ್ಲೇಷಕರ ಅನುಸಾರ ಈ ಹೊಸ ತಿದ್ದುಪಡಿಯುವ ಜಿಲ್ಲಾ ಮಟ್ಟದ ಅಥವಾ ರಾಜ್ಯ ಮಟ್ಟದ ಮಾಹಿತಿ ಆಯೋಗಗಳ ಸ್ವಾಯತ್ತತೆಗೆ ಭಂಗ ಉಂಟುಮಾಡುತ್ತದೆ. ಜಿಲ್ಲಾ ಮಟ್ಟದ ಮಾಹಿತಿ ಆಯೋಗದ ನಿರ್ವಹಣೆಯೂ ಸಹ ಕೇಂದ್ರ ಸರ್ಕಾರದ ಮರ್ಜಿಗೆ ಒಳಗಾಗುವುದರಿಂದ, ರಾಜಕೀಯ ಒತ್ತಡಗಳು ಇಲ್ಲಿ ಅರ್ಜಿದಾರರ ಹಕ್ಕುಗಳ ಚ್ಯುತಿಗೆ ಕಾರಣವಾಗುತ್ತದೆ.
ಮಾಹಿತಿ ಮಾಹಿತಿ ಹಕ್ಕು ಅರ್ಜಿಗಳು ಬಾಕಿ ಉಳಿಯಲು ಇದೂ ಒಂದು ಕಾರಣವಾಗುತ್ತದೆ. ರಾಜ್ಯಾವಾರು ದತ್ತಾಂಶಗಳನ್ನು ಗಮನಿಸಿದಾಗ, 2025ರ ಜೂನ್ 30ರ ವೇಳೆಗೆ ಅತ್ಯಂತ ಹೆಚ್ಚು ಅರ್ಜಿಗಳು, ದೂರುಗಳು ಬಾಕಿ ಉಳಿದಿರುವುದು ಮಹಾರಾಷ್ಟ್ರದಲ್ಲಿ 95,340 , ಕರ್ನಾಟಕದಲ್ಲಿ 47,825 , ತಮಿಳುನಾಡು 43,059, ಛತ್ತಿಸ್ ಘಡ 34,147 ಹಾಗೂ ಬಿಹಾರದಲ್ಲಿ 29,319. (ಸತರ್ಕ ನಾಗರಿಕ ಸಂಘಟನೆಯ ಮಾಹಿತಿ). ಈ ಕಾಯ್ದೆ ಜಾರಿಗೊಳಿಸಿದ ಮೇಲೆ ಕಂಡುಬರುವ ಮತ್ತೊಂದು ನೇತ್ಯಾತ್ಮಕ ಬೆಳವಣಿಗೆ ಎಂದರೆ, ಅರ್ಜಿದಾರರ ಮತ್ತು ಮಾಹಿತಿದಾರರ ಮೇಲೆ ನಡೆದಿರುವ ದಾಳಿ. ಮಾಹಿತಿ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ 300ಕ್ಕು ಹೆಚ್ಚು ಮಂದಿ ವಿವಿಧ ರೀತಿಯ ಚಿತ್ರಹಿಂಸೆ, ಕಿರುಕುಳಕ್ಕೆ ಒಳಗಾಗಿದ್ದಾರೆ, CHRI (Commonwealth Human Rights Initiative) ಸಂಸ್ಥೆಯ ಅನುಸಾರ ಈವರೆಗೆ 108 ಮಾಹಿತಿ ಹಕ್ಕು ಹೋರಾಟಗಾರರು, ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ.

ಸಂವಿಧಾನ ಮತ್ತು ಪ್ರಜಾತಂತ್ರದ ಉಸಿರು
ಈ ಎಲ್ಲ ವ್ಯತ್ಯಯಗಳ ಹೊರತಾಗಿಯೂ ಸಾಮಾನ್ಯ ಜನತೆಯಲ್ಲಿ ಈ ಕಾಯ್ದೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟಾಗಿಲ್ಲ ಎನ್ನುತ್ತಾರೆ, ಮಾಹಿತಿ ಹಕ್ಕು ಕಾಯ್ದೆಯ ನುರಿತ ಬಳಕೆದಾರ ಎಂದೇ ಪ್ರಸಿದ್ಧಿ ಪಡೆದಿರುವ ಸುಭಾಷ್ ಚಂದ್ರ ಅಗರ್ವಾಲ್. ಭಾರತದ ಸರ್ವೋಚ್ಛ ನ್ಯಾಯಾಲಯವನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡಿಸುವುದಕ್ಕೆ ಕಾರಣಕರ್ತರಾದವರು ಈ ಅಗರ್ವಾಲ್. (ಸುದ್ದಿ ಪತ್ರಿಕೆಗಳಿಗೆ ಸಂಪಾದಕರಿಗೆ ಪತ್ರ ಬರೆಯುವುದರಲ್ಲಿ ಗಿನ್ನೆಸ್ ದಾಖಲೆ ಅಗರ್ವಾಲ್ ಅವರದ್ದಾಗಿದೆ). ಈಗ ಅಗರ್ವಾಲ್ ಅವರು ಸಚಿವಾಲಯಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾಯ್ದೆಯ ದುರ್ಬಳಕೆಯೂ ಒಂದು ದೊಡ್ಡ ಸವಾಲು ಎಂದು ಹೇಳುವ ಅಗರ್ವಾಲ್, ಈ ಕಾಯ್ದೆಯ ಸಾಧನೆಯನ್ನು ಅಪ್ರತಿಮ ಎಂದೇ ಭಾವಿಸುತ್ತಾರೆ.
ಈ ಮಾತನ್ನು ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಮಾಹಿತಿ ಹಕ್ಕು ಕಾಯ್ದೆಯು ಜನಸಾಮಾನ್ಯರ ಪಾಲಿಗೆ ಸಹಾಯಕವಾಗಿದ್ದು, ಅಪಾರದರ್ಶಕ ಆಡಳಿತ ವ್ಯವಸ್ಥೆಯಿಂದ ತಮಗೆ ಬೇಕಾದ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯಗತವಾಗಿದೆ. ಸ್ವತಂತ್ರ ಭಾರತದಲ್ಲಿ ಪಕ್ಷಾತೀತವಾಗಿ, ಎಲ್ಲ ಸರ್ಕಾರಗಳಲ್ಲೂ ಕಾಣಬಹುದಾದ ಕಾಯ್ದೆ-ಯೋಜನೆಗಳ ಜಾರಿ ಮತ್ತು ಅನುಷ್ಠಾನದ ನಡುವಿನ ಅಂತರ ಇಂದಿಗೂ ಸಹ ಯಥಾಸ್ಥಿತಿಯಲ್ಲಿದ್ದು , ಯಾವುದೇ ಜನಪರ, ಲೋಕೋಪಯೋಗಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಜನಾಂದೋಲನಗಳು ಇಂದಿಗೂ ಅನಿವಾರ್ಯವಾಗಿವೆ. ಇದಕ್ಕೆ ಸಮಾನಾಂತರವಾಗಿ ನಿಸ್ವಾರ್ಥ ಸೇವೆಗಾಗಿ ಸಮಾಜದ ಸಮಸ್ಯೆಗಳಿಗೆ ತುಡಿಯುವ ಅಸಂಖ್ಯಾತ ಸಂಘ ಸಂಸ್ಥೆಗಳು ಇಂದು ಸಕ್ರಿಯವಾಗಿದ್ದು, ಹಗಲಿರುಳೂ ಮಾಹಿತಿ ಹಕ್ಕು ಕಾಪಾಡಲು ಶ್ರಮಿಸುತ್ತಿವೆ. ಈ ಪ್ರಜಾಸತ್ತಾತ್ಮಕ ಹೋರಾಟ ಮತ್ತು ಅವುಗಳ ಮೂಲಕವೇ ದಾಖಲಾಗುವ ತಳಸಮಾಜದ ಗಟ್ಟಿ ದನಿಗಳೇ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದರಲ್ಲಿ ಮಹತ್ತರ ಪಾತ್ರ





