ನವ ಉದಾರವಾದ ಮತ್ತು ಜಾಗತೀಕರಣ ಯುಗದಲ್ಲಿ ಬಂಡವಾಳ , ಸಮಾಜದ ಎಲ್ಲ ವಲಯಗಳಲ್ಲೂ ತನ್ನ ಕರಾಳ ತೋಳುಗಳನ್ನು ಚಾಚಿಕೊಂಡಿದೆ. ಬಂಡವಾಳಶಾಹಿಯ ಲಕ್ಷಣವೇ ಅದು. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ವಲಯಗಳಲ್ಲಿ ಸಹಜವಾಗಿಯೇ ತನ್ನ ಪ್ರಾಧಾನ್ಯತೆಯನ್ನು ಕಾಪಾಡಿಕೊಳ್ಳಬೇಕಾದ ಬಂಡವಾಳಶಾಹಿ ಮಾರುಕಟ್ಟೆ ವ್ಯವಸ್ಥೆ ಅಂತಿಮವಾಗಿ ಕ್ರೀಡೆ ಮತ್ತು ಕೌಶಲಗಳನ್ನೂ ಸಹ ತನ್ನ ಹರಾಜು ಜಗುಲಿಯಲ್ಲಿ ಒಂದು ಸರಕಿನಂತೆ ಮಾಡಿಬಿಡುತ್ತದೆ. ಮನುಷ್ಯನ ದೈಹಿಕ ಸ್ವಾಸ್ತ್ಯ ಮತ್ತು ಬೌದ್ಧಿಕ ಸಂಯಮ ಇವೆರಡನ್ನೂ ಕಾಪಾಡಲು ನೆರವಾಗಬೇಕಾದ ಕ್ರೀಡೆ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಖರೀದಿ-ಮಾರಾಟದ ಪರಿಭಾಷೆಯಲ್ಲಿ ಸಿಲುಕಿ, ಕ್ರೀಡಾ ಸ್ಫೂರ್ತಿಯ ಪರಿಕಲ್ಪನೆಯನ್ನೇ ವಿಕೃತಗೊಳಿಸಿಬಿಡುತ್ತದೆ.
ಇದು ಸಹಜ ಅಲ್ಲವೇ ? ಬಂಡವಾಳಶಾಹಿ ವ್ಯವಸ್ಥೆ ಬೆಳೆದಂತೆಲ್ಲಾ ಸಮಾಜದ ಎಲ್ಲ ಸ್ತರಗಳಲ್ಲೂ ಅದಕ್ಕೆ ಪೂರಕವಾದ ಬದಲಾವಣೆಗಳು ಆಗಬೇಕಲ್ಲವೇ ? ಅಂತಿಮವಾಗಿ ಕ್ರೀಡೆಯಲ್ಲಿ ತೊಡಗುವ ಮನುಷ್ಯರಿಗೂ ಅವಕಾಶಗಳು ವಿಸ್ತರಿಸಬೇಕಲ್ಲವೇ ?,,,,ಈ ರೀತಿಯಾದ ಪ್ರತಿಪಾದನೆಗಳು, ವಾದಗಳು ಸಹಜವಾಗಿ ಮುನ್ನೆಲೆಗೆ ಬರುತ್ತವೆ. ಬಂಡವಾಳ ವ್ಯವಸ್ಥೆ ಹಣಕಾಸಿನ ಮೂಲಕ ಮುಕ್ತ ಅವಕಾಶಗಳನ್ನು ಕಲ್ಪಿಸುತ್ತಲೇ ಉಳ್ಳವರು-ಇಲ್ಲದವರ ನಡುವಿನ ಅಂತರವನ್ನು ಹಿಗ್ಗಿಸುತ್ತಾ ಹೋಗುವುದನ್ನು ಕ್ರೀಡಾ ವಲಯದಲ್ಲೂ ಬಹಳ ಸುಲಭವಾಗಿ ಗ್ರಹಿಸಬಹುದು. ಆದರೆ ಈ ಶೋಷಕ ವ್ಯವಸ್ಥೆಗೆ ಒಗ್ಗಿಹೋಗುವ ಸಾಂಪ್ರದಾಯಿಕ ಮನಸುಗಳಿಗೆ, ಹಿತವಲಯದಲ್ಲಿ ತೇಲುವ ಮಧ್ಯಮ ವರ್ಗಗಳಿಗೆ ಈ ಕಂದರ ಗೋಚರಿಸುವುದಿಲ್ಲ. ಹಾಗಾಗಿ ಲಭ್ಯ ಅವಕಾಶಗಳ ಸಂಭ್ರಮದ ನಡುವೆಯೇ ಕಳೆದುಕೊಂಡವರ ನೋವು ಮರೆಯಾಗಿಬಿಡುತ್ತದೆ.
“ ಕ್ರಿಕೆಟ್ ಎಂದರೆ ೧೧ ಮೂರ್ಖರು ಆಡುವ ೧೧ ಸಾವಿರ ಮೂರ್ಖರು ವೀಕ್ಷಿಸುವ ಆಟ” ಎಂದು ಖ್ಯಾತ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ ಹೇಳಿದ್ದರು. ಆದರೆ ಇಂದು ಕ್ರಿಕೆಟ್ ವಿಶ್ವದಾದ್ಯಂತ ಕೋಟ್ಯಂತರ ಜನರ ಮನರಂಜನೆಯ ವಸ್ತುವಾಗಿದೆ. ಕಲೆ ಮತ್ತು ಕ್ರೀಡೆ ಮನರಂಜನೆಯ ವಸ್ತುವಾದರೆ ಅದರ ಮೂಲ-ಸಹಜ ಆಂತರಿಕ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಇದು ಸಿನಿಮಾ, ನಾಟಕಗಳಿಗೆ ಎಷ್ಟು ಅನ್ವಯಿಸುವುದೋ ಕ್ರೀಡೆಗೂ ಹಾಗೆಯೇ ಅನ್ವಯಿಸುತ್ತದೆ. ವಸಾಹತು ಕಾಲದಲ್ಲಿ ತಾನು ಕಾಲಿಟ್ಟ ದೇಶಗಳಲ್ಲೆಲ್ಲಾ ಬ್ರಿಟನ್ನಿನ ಸಾಮ್ರಾಜ್ಯ ಪರಿಚಯಿಸುತ್ತಾ ಹೋದ ಒಂದು ವಸಾಹತು ಕ್ರೀಡೆ ಕ್ರಿಕೆಟ್. ೧೬ನೆಯ ಶತಮಾನದಲ್ಲಿ ಜನ್ಮ ತಾಳಿದ ಈ ಕ್ರೀಡೆ ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯೊಂದಿಗೇ ವಿಸ್ತರಿಸಿದ್ದೂ ಹೌದು. ಹಾಗಾಗಿಯೇ ೧೯೮೦ರವರೆಗೂ ವಸಾಹತು ರಾಷ್ಟçಗಳಲ್ಲಿ ಮಾತ್ರವೇ ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆಯಾಗಿತ್ತು. ಮೇಲ್ ಮಧ್ಯಮ ವರ್ಗಗಳ ಒಂದು ಕ್ರೀಡೆಯಾಗಿ ಬೆಳೆದುಬಂದ ಕ್ರಿಕೆಟ್ ಜನಸಾಮಾನ್ಯರ ಕ್ರೀಡೆಯಾಗಿ ಪರಿವರ್ತನೆಯಾಗಿದ್ದರೆ, ಅದರ ಶ್ರೇಯಸ್ಸು ಜಾಗತೀಕರಣಕ್ಕೆ ಸಲ್ಲಬೇಕಾದ್ದು ನ್ಯಾಯ.
ಆದರೆ ೨೨ ಗಜಗಳ ಅಂತರದಲ್ಲಿ, ೭೦ ರಿಂದ ೯೦ ಗಜಗಳ ಅಂತರದ ಗಡಿ ರೇಖೆಗಳ ನಡುವೆ ಆಡುವ ಕ್ರಿಕೆಟ್ ಆಟವನ್ನು ಒಂದು ಕಾಲದಲ್ಲಿ ಸಂಭಾವಿತರ ಆಟ ಎಂದೇ ಕರೆಯಲಾಗುತ್ತಿತ್ತು. ಗಾಲ್ಫ್, ಕುದುರೆ ಜೂಜು ಇತ್ಯಾದಿ ಅತಿ ಶ್ರೀಮಂತರ ಆಟಗಳಿಂದ ಭಿನ್ನವಾಗಿ ಶ್ರೀಮಂತ, ಮಧ್ಯಮ ವರ್ಗಗಳ ಜನತೆಗೆ ಸೀಮಿತವಾಗಿದ್ದ ಈ ಕ್ರೀಡೆಯನ್ನು ಸಭ್ಯತೆಗಾಗಿಯೇ ಆರಾಧಿಸುತ್ತಿದ್ದ ಕಾಲವೂ ಒಂದಿತ್ತು. ಕಲಾತ್ಮಕತೆ, ಕೌಶಲ ಮತ್ತು ದೈಹಿಕ ಸಾಮರ್ಥ್ಯದೊಂದಿಗೇ ಮಾನಸಿಕ ಸಿದ್ಧತೆ ಮತ್ತು ಬುದ್ಧಿಮತ್ತೆಯೂ ಈ ಆಟಕ್ಕೆ ಅವಶ್ಯಕ ಅಂದಿಗೂ, ಇಂದಿಗೂ. ಹಾಗಾಗಿಯೇ ಈ ಕ್ರಿಕೆಟ್ಟಿನಲ್ಲಿ ಕಲಾತ್ಮಕತೆ ಎಂಬ ಒಂದು ಪರಿಕಲ್ಪನೆಯೂ ಮೂಡಿತ್ತು. ಬ್ರಾಡ್ಮನ್ ಯುಗದಿಂದ ಕೊಹ್ಲಿ ಯುಗದವರೆಗೆ ಈ ಕಲಾತ್ಮಕತೆ ಇನ್ನೂ ಜೀವಂತವಾಗಿರುವುದೇ ಕ್ರಿಕೆಟ್ ಕ್ರೀಡೆಯ ಹೆಗ್ಗಳಿಕೆ.
ಕಲಾತ್ಮಕ ಕ್ರಿಕೆಟ್ ಎಂದರೆ ನಮಗೆ ನೆನಪಾಗುವುದು ಸಾವಿರಾರು ರನ್ ಗಳಿಸಿದ, ನೂರಾರು ಸಿಕ್ಸರ್ ಬಾರಿಸಿದ ಆಟಗಾರರಲ್ಲ. ಬದಲಾಗಿ ಕ್ರಿಕೆಟ್ ಕ್ರೀಡೆಯಲ್ಲಿನ ಹೊಡೆತಗಳ ವೈಖರಿ, ಶೈಲಿ, ಬೌಲಿಂಗ್ ಶೈಲಿ ಮತ್ತು ವೇಗದ/ಸ್ಪಿನ್ ಬೌಲಿಂಗ್ನಲ್ಲಿರುವ ಕೌಶಲಗಳು ಈ ಕಲಾತ್ಮಕತೆಯನ್ನು ಬಿಂಬಿಸುತ್ತದೆ. ಹಾಗಾಗಿಯೇ ಇಂದಿಗೂ ಕಲಾತ್ಮಕ ಬ್ಯಾಟಿಂಗ್ ಎಂದರೆ ಬ್ರಾಡ್ಮನ್, ಗೆರಿಫೀಲ್ಡ್ ಸೋರ್ಸ್, ಗುಂಡಪ್ಪ ವಿಶ್ವನಾಥ್, ಸುನಿಲ್ ಗವಾಸ್ಕರ್, ವಿನೂ ಮಂಕಡ್, ಮನ್ಸೂರ್ ಅಲಿ ಖಾನ್ ಪಟೌಡಿ, ಗ್ರೆಗ್ ಚಾಪೆಲ್, ಜೆಫ್ರಿ ಬಾಯ್ಕಾಟ್, ಮಾರ್ಟಿನ್ ಕ್ರೋವ್, ಜಹೀರ್ ಅಬ್ಬಾಸ್, ಅರವಿಂದ ಡಿಸಿಲ್ವ ಮುಂತಾದವರು ಥಟ್ಟನೆ ನೆನಪಾಗುತ್ತಾರೆ. ಉಳಿದಂತೆ ನೂರಾರು ಮಹಾನ್ ಕ್ರಿಕೆಟ್ ಕಲಿಗಳು ಪ್ರಸಿದ್ಧರಾಗಿದ್ದರೂ, ಈ ಮೇಲಿನ ಆಟಗಾರರು ನಿಷ್ಕೃಷ್ಟವಾಗಿ, ಕರಾರುವಾಕ್ಕಾಗಿ ಆಡುವ ತಮ್ಮ ಅದ್ಭುತ ಶೈಲಿಗಾಗಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಭಾರತದ ಕ್ರಿಕೆಟ್ನಲ್ಲೇ ಕಲಾತ್ಮಕ ಬೌಲಿಂಗ್ ಎಂದ ಕೂಡಲೇ ಇ ಎ ಎಸ್ ಪ್ರಸನ್ನ ನೆನಪಾಗುತ್ತಾರೆ. ಇವರು ಕ್ರಿಕೆಟ್ ಕ್ರೀಡೆಯ ಆಂತರಿಕ ಸೌಂದರ್ಯವನ್ನು ಸಂರಕ್ಷಿಸಿದ ಆಟಗಾರರು.
೧೯೭೫ರ ವಿಶ್ವಕಪ್ ನಂತರವೂ ತನ್ನ ಆಂತರಿಕ ಸೌಂದರ್ಯವನ್ನು ಉಳಿಸಿಕೊಂಡೇ ಬಂದಿದ್ದ ಕ್ರಿಕೆಟ್ ಒಂದು ಸಾರ್ವಜನಿಕ ಕ್ರೀಡೆಯಾಗಿ ಮಾರ್ಪಾಡು ಹೊಂದಿದ್ದು ೧೯೭೭ರಲ್ಲಿ ಆಸ್ಟೆçÃಲಿಯಾದಲ್ಲಿ ಉಗಮಿಸಿದ ಪ್ಯಾಕರ್ ಸರಣಿಯಿಂದ. ಐದು ದಿನಗಳ ಕಾಲ, ವಿರಾಮಕ್ಕೆ ಬಿಡುವಿರುವ ಮಧ್ಯಮ ವರ್ಗಗಳಿಗೆ ಮನರಂಜನೆಯನ್ನೂ ನೀಡುತ್ತಾ ಕ್ರೀಡೆಯ ಸೌಂದರ್ಯವನ್ನೂ ಸವಿಯುವ ಅವಕಾಶ ನೀಡುತ್ತಿದ್ದ ಟೆಸ್ಟ್ ಕ್ರಿಕೆಟ್ ಪ್ಯಾಕರ್ ಸರಣಿಯ ನಂತರ ಒಂದೇ ದಿನದಲ್ಲಿ ಆಡಿ ಮುಗಿಸಬಹುದಾದ ಕ್ರೀಡೆಯಾಗಿ ಪರಿವರ್ತನೆಯಾಯಿತು. ಮೊದಲ ಎರಡು ವಿಶ್ವಕಪ್ಗಳಲ್ಲಿ ಸೀಮಿತ ೬೦ ಓವರ್ಗಳ ಒಂದೊಂದು ಪಾಳಿಯಲ್ಲಿ ಮುಗಿಯುತ್ತಿದ್ದ ಕ್ರಿಕೆಟ್ ಪ್ಯಾಕರ್ ಸರಣಿಯ ನಂತರ ೫೦ ಓವರ್ಗಳಿಗೆ ಸೀಮಿತವಾಯಿತು.
ಆರಂಭದಲ್ಲಿ ಸಾಂಪ್ರದಾಯಿಕ ಕ್ರಿಕೆಟಿಗರಿಂದ ತೀವ್ರ ವಿರೋಧಕ್ಕೊಳಗಾದ ಪ್ಯಾಕರ್ ಸರಣಿ ೧೯೭೯ರ ವಿಶ್ವಕಪ್ ವೇಳೆಗೆ ಬಹುಪಾಲು ಪ್ರಸಿದ್ಧ ಆಟಗಾರರನ್ನು ಸೆಳೆದಿತ್ತು. ರಂಗುರಂಗಿನ ಉಡುಪು, ಹಗಲು ರಾತ್ರಿಯ ಪಂದ್ಯ, ಪ್ರೇಕ್ಷಕರಿಗೆ ಕ್ಷಣಕ್ಷಣಕ್ಕೂ ನವಿರೇಳಿಸುವ ಸನ್ನಿವೇಶಗಳು, ಕಿಕ್ಕಿರಿದ ಕ್ರೀಡಾಂಗಣ ಹೀಗೆ ಒಂದು ಹೊಸ ಲೋಕವನ್ನೇ ಪ್ರವೇಶಿಸಿದ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳು “ ಇಂತಹ ಚೆಂಡನ್ನು ಹೀಗೆಯೇ ಆಡಬೇಕು ” ಎನ್ನುವ ಶಿಸ್ತುಬದ್ಧತೆಯನ್ನು ತೊರೆದು, ಚೆಂಡನ್ನು ಬೌಂಡರಿಗೆ ಅಥವಾ ಬೌಂಡರಿಯಿಂದಾಚೆಗೆ ಅಟ್ಟುವ ಕಲೆಯನ್ನೂ ರೂಢಿಸಿಕೊಂಡರು. ತಮ್ಮ ಕಲಾತ್ಮಕ ಬ್ಯಾಟಿಂಗ್ ಶೈಲಿಯನ್ನೂ ಉಳಿಸಿಕೊಂಡು ಈ ಮಾದರಿಯಲ್ಲಿ ಯಶಸ್ವಿಯಾದವರಲ್ಲಿ ಕಿಂಗ್ ಆಫ್ ಕ್ರಿಕೆಟ್ ಎಂದೇ ಹೆಸರಾದ ವಿವಿಯನ್ ರಿಚರ್ಡ್ಸ್ ಪ್ರಥಮರು. ಈ ಬ್ಯಾಟಿಂಗ್ ಶೈಲಿಯನ್ನು ಈವರೆಗೂ ಯಾರಿಂದಲೂ ಸರಿಗಟ್ಟಲಾಗಿಲ್ಲ ಎನ್ನುವುದೂ ವಾಸ್ತವ.
ಒಂದು ಸುಂದರ ಕಲಾತ್ಮಕ, ಸಭ್ಯ, ಸೌಹಾರ್ದಯುತ ಕ್ರೀಡೆಯಾಗಿದ್ದ ಕ್ರಿಕೆಟ್ ತನ್ನೊಳಗಿನ ಕಲೆಯನ್ನು ಕಳೆದುಕೊಂಡು, ಆಟಗಾರರ ಸಭ್ಯತೆಯನ್ನೂ ಕಳೆದುಹಾಕಿ, ವಿವಿಧ ದೇಶಗಳ ನಡುವೆ ಸೌಹಾರ್ದತೆಯನ್ನು ನಿರ್ಧರಿಸುವ ಮಾನದಂಡವಾಗಿ ಮಾರ್ಪಟ್ಟಿದ್ದು ಜಾಗತಿಕರಣ ಮತ್ತು ಬಂಡವಾಳಶಾಹಿಯ ಕೊಡುಗೆ. ಇದು ೧೯೯೦ರ ನಂತರ, ಜಾಗತೀಕರಣ ಪ್ರಕ್ರಿಯೆ ಚುರುಕುಗೊಂಡ ನಂತರ, ವಿಶೇಷವಾಗಿ ಭಾರತೀಯ ಉಪಖಂಡದಲ್ಲಿ ಕಂಡುಬರುವ ವಿದ್ಯಮಾನ. ಆಸ್ಟೆçÃಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಷಸ್ ಸರಣಿಗೆ ೧೪೦ ವರ್ಷಗಳ (ಮೊದಲ ಸರಣಿ ೧೮೮೨) ಇತಿಹಾಸವಿದೆ. ಇಂದಿಗೂ ಎರಡೂ ದೇಶಗಳಲ್ಲಿ ಈ ಸರಣಿಯ ಸಂದರ್ಭದಲ್ಲಿ ಉತ್ಸಾಹ, ಸಂಭ್ರಮ, ಆತಂಕ, ಹತಾಶೆ, ನಿರಾಶೆ ಎಲ್ಲವೂ ಸಹಜವಾಗಿಯೇ ವ್ಯಕ್ತವಾಗುತ್ತದೆ. ಬದ್ಧ ವೈರಿಗಳಂತೆಯೇ ಆಡುವ ಎರಡೂ ದೇಶಗಳ ಆಟಗಾರರು ಅತ್ಯಂತ ಗಂಭೀರ ಕ್ರೀಡಾಸ್ಫೂರ್ತಿಯೊಂದಿಗೆ, ದೇಶ-ದ್ರೋಹ-ಪ್ರೇಮ ಇವುಗಳ ಹಂಗಿಲ್ಲದೆ ಇಂದಿಗೂ ಆಡುತ್ತಿದ್ದಾರೆ.
ಈ ಕ್ರೀಡಾಸ್ಪೂರ್ತಿಯನ್ನು ಹೊಸ ಜಗತ್ತಿನ ಮನರಂಜನಾ ಕ್ರಿಕೆಟ್ನೊಡನೆ ಹೋಲಿಸಲೂ ಸಾಧ್ಯವಿಲ್ಲ. ೫೦-೫೦ ಕ್ರಿಕೆಟ್ ಆರಂಭವಾದ ಒಂದು ದಶಕದ ಅವಧಿಯಲ್ಲೇ ಜಗತ್ತಿನ ಮಾರುಕಟ್ಟೆಗಳಲ್ಲಿ ಬಂಡವಾಳಶಾಹಿಯ ಆಧಿಪತ್ಯ ಗಟ್ಟಿಯಾಗಿತ್ತು. ಕ್ರೀಡೆಯನ್ನು ಬಂಡವಾಳ ಹೂಡಿಕೆಯ ಒಂದು ಆಕರವನ್ನಾಗಿ ಮಾಡಿಕೊಳ್ಳುವ ಔದ್ಯಮಿಕ ಜಗತ್ತಿನ ಹಪಹಪಿಗೆ ಕ್ರಿಕೆಟ್ ಮೈದಾನದ ೨೨ ಗಜದ ಅಂತರ ಬಲಿಯಾಯಿತು. ಒಂದು ರಾಷ್ಟದ ಪರವಾಗಿ ಮತ್ತೊಂದು ರಾಷ್ಟದ ವಿರುದ್ಧ ಆಡುತ್ತಿದ್ದ ತಂಡಗಳು ಬಂಡವಾಳಶಾಹಿಯ ಔದ್ಯಮಿಕ ವಲಯದ ಪ್ರಾಯೋಜಕತ್ವಕ್ಕೆ ಒಳಗಾದವು. ಕ್ರಿಕೆಟ್ ತಂಡಗಳು ಆಯ್ಕೆಯ ಪ್ರಕ್ರಿಯೆಯಿಂದ ಹಿಡಿದು ಪ್ರಶಸ್ತಿಯ ಹಂತದವರೆಗೂ ಮಾರುಕಟ್ಟೆ ತಂತ್ರಗಾರಿಕೆಗೆ, ಜಾಹೀರಾತುಗಳ ನೆಲೆಗಳಾಗಿ ಪರಿಣಮಿಸಿದವು. ಕ್ರಿಕೆಟ್ ಕಲಿಗಳ ಬೂಟಿನಿಂದ ಟೊಪ್ಪಿಯವರೆಗೆ, ಉಡುಪಿನ ಒಳಗೆ ಧರಿಸುವ ರಕ್ಷಾಕವಚಗಳನ್ನೂ ಒಳಗೊಂಡಂತೆ, ಎಲ್ಲವೂ ಪ್ರಾಯೋಜಿತವಾಗಿ, ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುವ ಸರಕುಗಳಾದವು.
ಇದರ ಮುಂದಿನ ಹಂತವಾಗಿಯೇ ೫೦-೫೦ ಕ್ರಿಕೆಟ್ ಪಂದ್ಯಾವಳಿಗಳು ಪ್ರಾಯೋಜಿತ ಪಂದ್ಯಾವಳಿಗಳಾದವು. ಪ್ಯಾಕರ್ ಸರಣಿ ಎಂದೇ ಆರಂಭವಾದ ವಿಶ್ವಕಪ್ ಪಂದ್ಯಾವಳಿಗಳು ಕ್ರಮೇಣ ಕಂಪನಿ ಪ್ರಾಯೋಜಿತ ಪಂದ್ಯಾವಳಿಗಳಾದವು. ಮಾರುಕಟ್ಟೆ ಮತ್ತು ಬಂಡವಾಳ ವಿಸ್ತರಿಸಿದಂತೆಲ್ಲಾ ಕ್ರಿಕೆಟ್ ಸಹ ವಿಸ್ತರಿಸತೊಡಗಿತ್ತು. ಹಾಗಾಗಿಯೇ ಮಧ್ಯಪ್ರಾಚ್ಯದ ದೇಶಗಳು, ಆಫ್ಘಾನಿಸ್ತಾನ, ಸ್ಕಾಟ್ಲೆಂಡ್, ಐರ್ಲೆಂಡ್, ನಮೀಬಿಯಾ, ಓಮನ್, ನೆದರ್ಲೆಂಡ್ ಮುಂತಾದ ಕ್ರಿಕೆಟ್ ಗಾಳಿಯೇ ಇಲ್ಲದ ದೇಶಗಳಲ್ಲೂ ಸಹ ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗಿದೆ. ವಸಾಹತು ಕ್ರೀಡೆ ಕ್ರಮೇಣ ವಿಶ್ವ ಕ್ರೀಡೆಯಾಗುವುದರಲ್ಲಿ ಜಾಗತೀಕರಣದ ಕೊಡುಗೆ ಇದೆ. ಕ್ರಿಕೆಟ್ ಆಟಗಾರರನ್ನು, ತಂಡಗಳನ್ನು ತಮ್ಮ ಸರಕುಗಳ ಜಾಹೀರಾತು ಸಾಧನಗಳಂತೆ ಬಳಸಿಕೊಳ್ಳಲಾರಂಭಿಸಿದ ಬಂಡವಾಳ ವ್ಯವಸ್ಥೆ ಕ್ರಮೇಣ ಕ್ರಿಕೆಟ್ ಕೌಶಲವನ್ನೇ ಬಲಿತೆಗೆದುಕೊಳ್ಳುವ ರೀತಿಯಲ್ಲಿ ಪ್ರತಿಯೊಂದು ಬೌಂಡರಿ ಮತ್ತು ಸಿಕ್ಸರ್ಗಳಿಗೂ ಬೆಲೆ ಕಟ್ಟಲಾರಂಭಿಸಿತು. ಬ್ಯಾಟ್ಸ್ಮನ್ಗಳು ಗಳಿಸುವ ಅರ್ಧಶತಕ, ಶತಕ, ದ್ವಿಶತಕಗಳು ಹಣಗಳಿಕೆಯ ಮಾರ್ಗಗಳಾದವು. ಬೌಲರ್ಗಳು ಪಡೆಯುವ ಪ್ರತಿಯೊಂದು ವಿಕೆಟ್ಗೂ ಒಂದು ಮೌಲ್ಯ ಸಂದಾಯವಾಗುವುದು ಮಾರುಕಟ್ಟೆ ನಿಯಮವಾಗತೊಡಗಿತು.
ಬಹುಶಃ ಈ ವಾಣಿಜ್ಯೀಕರಣ ಮತ್ತು ಮಾರುಕಟ್ಟೆ ಮೌಲ್ಯಾಧಿಕರಣ ಇಲ್ಲದೆ ಇದ್ದರೆ ಲಸಿತ್ ಮಾಲಿಂಗಾ, ಅವರ ಎಸೆತದ ಶೈಲಿಗೆ, ಸಾಂಪ್ರದಾಯಿಕ ಕ್ರಿಕೆಟ್ನಲ್ಲಿ ಬೌಲರ್ ಎನಿಸಿಕೊಳ್ಳುತ್ತಿರಲಿಲ್ಲ. ಅವರ ಶೈಲಿಯನ್ನು ಥ್ರೋ ಬಾಲ್ ಎನ್ನಲಾಗುತ್ತಿತ್ತು. ಇಂತಹ ಹಲವಾರು ನಿಯಮಗಳನ್ನು ಸಡಿಲಗೊಳಿಸುತ್ತಲೇ ಕ್ರಿಕೆಟ್ ಪಂದ್ಯವನ್ನು ಕ್ರಮೇಣ ಶುದ್ಧ ಮನರಂಜನೆಯ ವಸ್ತುವನ್ನಾಗಿ ಮಾಡುವ ನಿಟ್ಟಿನಲ್ಲಿ ಬೆಳೆದುಬಂದಿರುವುದೇ ಈಗ ನಾವು ಕಾಣುತ್ತಿರುವ ೨೦-೨೦ ಕ್ರಿಕೆಟ್. ಡೆನಿಸ್ ಲಿಲಿ, ರಿಚರ್ಡ್ ಹ್ಯಾಡ್ಲಿ, ಮಾಲ್ಕಮ್ ಮಾರ್ಷಲ್, ಕೀತ್ ಮಿಲ್ಲರ್, ಅಂಡರ್ವುಡ್, ಇಲ್ಲಿಂಗ್ವರ್ತ್, ಇ ಎ ಎಸ್ ಪ್ರಸನ್ನ, ಬಿಷನ್ ಬೇಡಿ ಇಂತಹ ಬೌಲಿಂಗ್ ದಿಗ್ಗಜರ ಇತಿಹಾಸವನ್ನು ಗಮನಿಸಿದರೆ, ೨೦ ಓವರ್ಗಳು ಅವರು ಲಯ ಕಂಡುಕೊಳ್ಳಲೇ ಖರ್ಚಾಗುತ್ತಿದ್ದುದನ್ನು ಗಮನಿಸಬಹುದು.
೨೦-೨೦ ಶೈಲಿಯ ಕ್ರಿಕೆಟ್ನಲ್ಲಿ ಮನರಂಜನೆಯೇ ಮುಖ್ಯವಾಗಿದ್ದುದರಿಂದ ಬ್ಯಾಟ್ಸ್ಮನ್ಗಳ ಕ್ರಿಕೆಟ್ ಮೈದಾನಗಳು ಬ್ಯಾಟ್ಸ್ಮನ್ಗಳ ಸ್ವರ್ಗವಾಗಿ ಪರಿಣಮಿಸಿತು. ಅತಿಹೆಚ್ಚು ಬೌಂಡರಿ, ಅತಿ ಹೆಚ್ಚು ಸಿಕ್ಸರ್, ಅತಿ ಹೆಚ್ಚು ಅರ್ಧಶತಕ/ಶತಕ ಹೀಗೆ ಬಂಡವಾಳದ ಹೊಳೆ ಬ್ಯಾಟ್ಸ್ಮನ್ಗಳ ಭಂಡಾರವನ್ನು ತುಂಬಿಸತೊಡಗಿತ್ತು. ಈ ಶೈಲಿಯ ಕ್ರಿಕೆಟ್ನಲ್ಲಿ ವಿಶ್ವಪಟು ಆಗಿದ್ದು ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿAಗ್, ಜಯಸೂರ್ಯ ಇತ್ಯಾದಿ. ಈ ಆಟಗಾರರ ಪ್ರಸಿದ್ಧಿ ಎಷ್ಟೇ ಚಿರಸ್ಥಾಯಿಯಾದರೂ, ಕ್ರಿಕೆಟ್ ಪ್ರಿಯರಿಗೆ ಲೇಟ್ ಕಟ್/ ಸ್ವ್ಕಯರ್ ಕಟ್ ಎಂದರೆ ವಿಶ್ವನಾಥ್, ಕವರ್ ಡ್ರೈವ್ ಎಂದರೆ ಪಟೌಡಿ, ಸ್ಟ್ರೈಟ್ ಡ್ರೈವ್ ಎಂದರೆ ಗವಾಸ್ಕರ್, ಸಿಕ್ಸರ್ ಎಂದರೆ ರಿಚರ್ಡ್ಸ್, ರಕ್ಷಣಾತ್ಮಕ ಆಟ ಎಂದರೆ ಬಾಯ್ಕಾಟ್, ಕಲಾತ್ಮಕ ಬ್ಯಾಟಿಂಗ್ ಎಂದರೆ ಗ್ರೆಗ್ ಚಾಪೆಲ್ ನೆನಪಾಗುತ್ತಾರೆ. ಹಾಗೆಯೇ ಗೂಗ್ಲಿ ಎಂದರೆ ಲಾನ್ಸ್ ಗಿಬ್ಸ್, ಬಿ ಎಸ್ ಚಂದ್ರಶೇಖರ್, ಸ್ವಿಂಗ್ ಬೌಲಿಂಗ್ ಎಂದರೆ ಇಮ್ರಾನ್ ಖಾನ್, ರಿಚರ್ಡ್ ಹ್ಯಾಡ್ಲಿ, ಡೆನಿಸ್ ಲಿಲ್ಲಿ, ವೇಗದ ಬೌಲಿಂಗ್ ಎಂದರೆ ಮಾರ್ಷಲ್, ಅಂಬ್ರೋಸ್, ವಾಲ್ಷ್, ರಿವರ್ಸ್ ಸ್ವಿಂಗ್ ಎಂದರೆ ವಾಸಿಮ್ ಅಕ್ರಮ್ ನೆನಪಾಗುತ್ತಾರೆ. “ಕ್ರಿಕೆಟ್ ಪ್ರಿಯರ ದೃಷ್ಟಿಯಲ್ಲಿ ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ.”
ಬಂಡವಾಳದ ವ್ಯಾಪ್ತಿ ಮತ್ತು ಹರಿವು, ಮಾರುಕಟ್ಟೆ ತಂತ್ರಗಾರಿಕೆ ಮತ್ತು ಲಾಭ ಗಳಿಕೆಯ ಲಂಪಟತನ ಹೆಚ್ಚಾದಂತೆಲ್ಲಾ ಎಲ್ಲ ದೇಶಗಳಲ್ಲೂ ಕ್ರಿಕೆಟ್ ಒಂದು ವ್ಯಾಪಾರವಾಗಿ ಪರಿಣಮಿಸತೊಡಗಿರುವುದು ವಾಸ್ತವ. ಬೆಟ್ಟಿಂಗ್ ದಂಧೆ, ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮುಂತಾದ ಅಕ್ರಮಣಗಳ ತಾಣವಾಗಲು ಕಾರಣವಾಗಿದ್ದು ಈ ಪ್ರತಿಯೊಂದು ಹಂತದಲ್ಲೂ ನಿಗದಿಪಡಿಸಲಾದ ಮಾರುಕಟ್ಟೆ ಮೌಲ್ಯಗಳು. ಧೋನಿ ಸಾವಿರ ಸಿಕ್ಷರ್ ಬಾರಿಸಿ ಮಾರುಕಟ್ಟೆ ಮೌಲ್ಯದಲ್ಲಿ ಎಷ್ಟೇ ಧನಾರ್ಜನೆ ಮಾಡಿದ್ದರೂ, ಗುಂಡಪ್ಪ ವಿಶ್ವನಾಥ್ ಅವರ ಒಂದು ಸ್ವ್ಕಯರ್ ಕಟ್ನ ಮೌಲ್ಯಕ್ಕೆ ಸರಿಸಾಟಿಯಾಗಲಾರದು. ಆದರೂ ಬಂಡವಾಳ ಆಟಗಾರರನ್ನು ಸರಕುಗಳನ್ನಾಗಿ ಮಾಡಿದೆ. ಇದರ ಪರಿಣಾಮವೇ ಭಾರತ, ಪಾಕಿಸ್ತಾನ, ಶ್ರೀಲಂಕ, ಬಾಂಗ್ಲಾದೇಶದಲ್ಲಿ ಕ್ರಿಕೆಟ್ ರಾಜಕೀಯ ಕ್ರೀಡೆಯಾಗಿ ಪರಿಣಮಿಸಿದೆ.
ಹಾಗಾಗಿಯೇ ಭಾರತದಲ್ಲಿ ಕ್ರಿಕೆಟ್ ಗಂಧ ಗಾಳಿ ತಿಳಿಯದವರನ್ನೂ, ಕ್ರಿಕೆಟ್ ಕ್ರೀಡೆಗೆ ಯಾವುದೇ ಕೊಡುಗೆ ಸಲ್ಲಿಸದವರನ್ನೂ ಕ್ರಿಕೆಟ್ ನಿಯಂತ್ರಣ ಮಂಡಲಿ ಕಾರ್ಯದರ್ಶಿಯಾಗಿ ನೇಮಿಸುವ ಪರಂಪರೆ ೧೯೮೦ರ ದಶಕದಿಂದಲೇ ಬೆಳೆದುಬಂದಿದೆ. ಇಲ್ಲಿ ಔದ್ಯಮಿಕ ಹಿತಾಸಕ್ತಿಯ ರಕ್ಷಣೆ, ಬಂಡವಾಳದ ಹರಿವಿನ ನಿರ್ವಹಣೆ ಮತ್ತು ಲಾಭಗಳಿಕೆಯೇ ಪ್ರಧಾನವಾಗಿ, ಆಯ್ಕೆಯಾದ ಕ್ರಿಕೆಟ್ ತಂಡಗಳು ಈ ಮಾರುಕಟ್ಟೆಯ ಜಗುಲಿ ಕಟ್ಟೆಗಳಾಗುತ್ತವೆ, ಆಟಗಾರರು ಜಾಹೀರಾತು ಪಟ್ಟಿಗಳನ್ನು ಹೊತ್ತ ಸರಕುಗಳಾಗುತ್ತಾರೆ. ಐಪಿಎಲ್ ಈ ಮಾರುಕಟ್ಟೆ ಪ್ರಕ್ರಿಯೆಯ ಪರಾಕಾಷ್ಠೆ. ಮಾರುಕಟ್ಟೆ ಸರಕುಗಳ ಮಾರಾಟಕ್ಕೆ ರಾಯಭಾರಿಗಳಾಗಿದ್ದ ಕ್ರಿಕೆಟ್ ಆಟಗಾರರು ಕ್ರಮೇಣ ಖುದ್ದು ಸರಕುಗಳೇ ಆಗಿ ಪರಿಣಮಿಸಿದ್ದು ಐಪಿಎಲ್ ಹರಾಜು ಪ್ರಕ್ರಿಯೆಯ ಮೂಲಕ. ಹಾಗಾಗಿ ಇಂದು ಪ್ರತಿಯೊಬ್ಬ ಉದಯೋನ್ಮುಖ ಆಟಗಾರನಿಗೆ ತಾನು ಗುಂಡಪ್ಪ ವಿಶ್ವನಾಥ್ ಆಗುವ, ಸೋರ್ಸ್ , ಭಗವತ್ ಚಂದ್ರಶೇಖರ್ ಆಗುವ ಕನಸು ಇರುವುದಿಲ್ಲ. ಮುಂದಿನ ಹರಾಜಿನಲ್ಲಿ ತನಗೆ ಎಷ್ಟು ಬೆಲೆ ಗಿಟ್ಟಬಹುದು ಎಂಬ ಆಲೋಚನೆ ಇರುತ್ತದೆ.
ಆಟಗಾರರನ್ನು ಈ ಪ್ರಕ್ರಿಯೆಗೆ ಹೊಂದುವಂತೆ ತಯಾರಿಸಲೆಂದೇ ಕೋಚಿಂಗ್ ಶಿಬಿರಗಳನ್ನು ಸ್ವತಃ ಮಾಜಿ ಕ್ರಿಕೆಟಿಗರೇ ರೂಪಿಸುತ್ತಾರೆ. ಯಾವ ಬ್ರ್ಯಾಂಡಿನ ವಸ್ತುಗಳನ್ನು ಬಳಸಿದರೆ ತಮ್ಮ ಆಟದ ಮೂಲಕ ಹೆಚ್ಚಿನ ರಾಯಭಾರಿತ್ವ ಗಳಿಸಬಹುದು, ತನ್ಮೂಲಕ ಹೆಚ್ಚಿನ ಹಣ ಗಳಿಸಬಹುದು ಎನ್ನುವುದು ಕ್ರಿಕೆಟ್ ಪಟುಗಳ ಗುರಿಯಾಗಿಬಿಡುತ್ತದೆ. ಬೌಂಡರಿ, ಸಿಕ್ಸರ್, ಅರ್ಧಶತಕಗಳು ಕ್ರಿಕೆಟ್ ಕೌಶಲವನ್ನೂ ಮೀರಿ ಮಾರುಕಟ್ಟೆ ಮೌಲ್ಯ ಗಳಿಸಿಬಿಡುತ್ತವೆ. ತಾನು ಯಾವ ಕಂಪನಿಗೆ ಬಿಕರಿಯಾದರೆ ಹೆಚ್ಚಿನ ಲಾಭ ಎಂಬ ಆಲೋಚನೆಯಲ್ಲಿಯೇ ಐಪಿಎಲ್ ಹರಾಜು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವ ಭಾರತದ ಕ್ರಿಕೆಟ್ ಪಟುಗಳಿಗೆ ತಾವು ಹುಟ್ಟಿದ ನಾಡಿನ ನೆನಪಾಗುವುದು ರಣಜಿ ಪಂದ್ಯಾವಳಿಯಲ್ಲಿ ಮಾತ್ರ. ಇಲ್ಲಿ ತಾಯ್ನಾಡಿನ ಭಾವನಾತ್ಮಕ ಸಂಬಂಧಗಳು ಸಂಪೂರ್ಣವಾಗಿ ಮಾರುಕಟ್ಟೆಗೆ ಶರಣಾಗಿಬಿಡುತ್ತದೆ. ಬಂಡವಾಳಶಾಹಿ ಅಧೀನಕ್ಕೊಳಪಡುವ ಆಟಗಾರರು ಸೂತ್ರದ ಗೊಂಬೆಗಳಾಗಿಬಿಡುತ್ತಾರೆ. ಬೆಟ್ಟಿಂಗ್ ಮ್ಯಾಚ್ ಫಿಕ್ಸಿಂಗ್ ದಂಧೆಯಲ್ಲಿ ಇದರ ಒಂದು ಆಯಾಮವನ್ನು ಕಂಡಿದ್ದೇವೆ.
ಜಾಗತೀಕರಣದ ಈ ಕರಾಳ ತೋಳುಗಳು ಕ್ರಿಕೆಟ್ ಕ್ರೀಡೆಯನ್ನು ವಿಶ್ವಮಾನ್ಯಗೊಳಿಸುವ ಮೂಲಕ ಕ್ರಿಕೆಟ್ ಆಟಗಾರರಿಗೆ ಅವಕಾಶಗಳನ್ನೂ ಹೆಚ್ಚಿಸಿವೆ ಎನ್ನುವುದು ನಿಜವಾದರೂ, ಇಂದಿನ ಕ್ರಿಕೆಟ್ ಮತ್ತೊಮ್ಮೆ ಶ್ರೀಮಂತರ ಆಟವಾಗುತ್ತಿರುವುದನ್ನೂ ಗಮನಿಸಬೇಕಿದೆ. ಬಸವನಗುಡಿಯ ಗಲ್ಲಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದ ಗುಂಡಪ್ಪ ವಿಶ್ವನಾಥ್, ಪ್ರಸನ್ನ ಅವರಂತೆ ಇಂದು ಕ್ರಿಕೆಟ್ ಪಟುಗಳು ಬೆಳೆಯುವ ಸಾಧ್ಯತೆಗಳನ್ನೇ ಮಾರುಕಟ್ಟೆ ವ್ಯವಸ್ಥೆ ಮುಚ್ಚಿಹಾಕಿಬಿಟ್ಟಿದೆ. ಇದಕ್ಕೆ ಪೂರಕವಾಗಿಯೇ ಔದ್ಯಮಿಕ ಜಗತ್ತು ಕ್ರಿಕೆಟ್ ಸಲಕರಣೆಗಳನ್ನೂ ಸಹ ಉತ್ಪಾದಿಸುತ್ತಿದ್ದು, ಒಂದು ಬಡ ಕುಟುಂಬದಿAದ ಬಂದ ಹುಡುಗ ಅಥವಾ ಹುಡುಗಿ, ಕಿಬ್ಬೊಟ್ಟೆ ರಕ್ಷಕ ಸಾಧನವನ್ನೂ ಖರೀದಿಸಲಾಗುವುದಿಲ್ಲ. ಬಡತನದಿಂದ ಶ್ರೀಮಂತಿಕೆಗೆ ಏರಿದ ಹಲವು ಕ್ರಿಕೆಟ್ ಕಲಿಗಳು ನಮ್ಮ ನಡುವೆ ಇದ್ದಾರೆ. ಈಗ ಕ್ರಿಕೆಟ್ ಶ್ರೀಮಂತಿಕೆಯಿಂದ ಅತಿ ಶ್ರೀಮಂತಿಕೆಗೆ ಹೋಗುವ ಸಾಧನವಾಗಿರುವುದು ಮಾರುಕಟ್ಟೆ ವ್ಯವಸ್ಥೆಯ ಕೊಡುಗೆಯಿಂದ.
ಈ ಬಂಡವಾಳದ ಹಿತಾಸಕ್ತಿಯೇ ಭಾರತ ಪಾಕ್ ನಡುವಿನ ಪಂದ್ಯಗಳನ್ನು ವಿಶ್ವಯುದ್ಧವನ್ನಾಗಿ ಮಾಡುತ್ತದೆ. ಇದೇ ಮಾರುಕಟ್ಟೆ-ಬಂಡವಾಳದ ವಕ್ತಾರರಾದ ಮಾಧ್ಯಮಗಳು ಉಭಯ ದೇಶಗಳ ರಾಜಕೀಯ ವೈರುಧ್ಯಗಳನ್ನೇ ಕ್ರಿಕೆಟ್ ಮೈದಾನಕ್ಕೂ ಕರೆತಂದು ಆಟಗಾರರ ನಡುವೆ ಒಂದು ಗೋಡೆ ನಿರ್ಮಿಸಲು ಯತ್ನಿಸುತ್ತಾರೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ, ಈ ಮಾರುಕಟ್ಟೆ ವೈಭವ, ಸಂಭ್ರಮ, ಶೋಕಾಚರಣೆ, ದೋಷಾರೋಪಣೆ, ದೇಶಭಕ್ತಿ-ದ್ರೋಹದ ವ್ಯಾಖ್ಯಾನ ಇವೆಲ್ಲವೂ ಕ್ರಿಕೆಟ್ಗಷ್ಟೇ ಸೀಮಿತ. ಕಬ್ಬಡಿ, ಹಾಕಿ, ಫುಟ್ಬಾಲ್ ಇತರ ಕ್ರೀಡೆಗಳಿಗೆ ಇದು ಅನ್ವಯಿಸುವುದೇ ಇಲ್ಲ. ಏಕೆಂದರೆ ಅಲ್ಲಿ ಬಂಡವಾಳ ಪ್ರಧಾನವಾಗಿರುವುದಿಲ್ಲ. ಮೊಹಮದ್ ಶಮಿ ದೇಶದ್ರೋಹಿಯಾಗಿ ಕಾಣುವುದೂ ಈ ಕಾರಣಕ್ಕಾಗಿಯೇ. ಏಕೆಂದರೆ ಪ್ರತಿಯೊಂದು ಪಂದ್ಯದ ಸೋಲು ಗೆಲುವಿನ ಹಿಂದೆ ಕೋಟ್ಯಂತರ ರೂಗಳ ಬಂಡವಾಳದ ನದಿ ಹರಿಯುತ್ತಿರುತ್ತದೆ.
ಬಿಸಿಸಿಐ ಈ ಲಾಭಕೋರ ದಂಧೆಯ ಒಂದು ಮುಖ್ಯ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿಯೇ ಬಿಸಿಸಿಐ ಕಾರ್ಯದರ್ಶಿಗೆ ರಾಜಕೀಯ ತಂತ್ರಗಾರಿಕೆಯ ಅರಿವಿದ್ದರೆ ಸಾಕು, ಔಟ್ ಸ್ವಿಂಗ್ ಎಂದರೇನು ಎಂಬ ಅರಿವು ಬೇಕಾಗುವುದಿಲ್ಲ. ರಾಜಕೀಯವಾಗಿ ಮತೀಯ ಭಾವನೆಗಳು ಲಾಭದಾಯಕವಾದಷ್ಟೇ ಕ್ರಿಕೆಟ್ ಮೈದಾನದಲ್ಲೂ ಆಗಲು ಸಾಧ್ಯವಾಗುವುದೂ ಇಲ್ಲಿಯೇ. ೨೦-೨೦ ಎಂಬ ಮನರಂಜನೆಯನ್ನು ಮನರಂಜನೆಯನ್ನಾಗಿ ಮಾತ್ರವೇ ನೋಡುತ್ತಾ ಇಂದಿಗೂ ಕ್ರಿಕೆಟ್ನ ಮೂಲ ನಿಮಯಗಳಿಗನುಸಾರ ಕರಾರುವಾಕ್ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡುವ ಹಲವು ಆಟಗಾರರು ನಮ್ಮ ನಡುವೆ ಇರುವುದನ್ನು ಗುರುತಿಸುತ್ತಾ, ಪಂದ್ಯಗಳನ್ನು ವೀಕ್ಷಿಸಿದರೆ ನಮ್ಮ ಕಣ್ಣಿಗೆ ಪ್ರೇಕ್ಷಕರನ್ನು ರಂಚಿಸುವ ಸರಕು ರೂಪದ ೨೨ ಮನುಷ್ಯರು ಮಾತ್ರ ಕಾಣುತ್ತಾರೆ. ಇದನ್ನೂ ಮೀರಿ ನೋಡಿದರೆ ಮಾರುಕಟ್ಟೆ, ಬಂಡವಾಳ, ಮತಾಂಧತೆ, ಜಾಹೀರಾತು ಮತ್ತು ಲಾಭಕೋರತನ ಕಾಣುತ್ತದೆ.