ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಜಿವ ಬೆದರಿಕೆ ಆರೋಪದಡಿ ವೈಯಾಲಿಕಾವಲ್ ಠಾಣೆಯಲ್ಲಿ 2 FIR ದಾಖಲು ಮಾಡಲಾಗಿದೆ. ಬಿಬಿಎಂಪಿ ಗುತ್ತಿಗೆದಾರ ಚಲುವರಾಜುಗೆ ಜಾತಿ ನಿಂದನೆ ಮಾಡಿದ ಆರೋಪ ಹಾಗೂ ವೇಲು ನಾಯ್ಕರ್‌ಗೆ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ದೂರು ದಾಖಲಾದ ಬೆನ್ನಲ್ಲೇ ಕೋಲಾರದ ಬಳಿ ಅರೆಸ್ಟ್ ಮಾಡಲಾಗಿದೆ
ದಲಿತರು ಹಾಗು ಒಕ್ಕಲಿಗರನ್ನು ಜಾತಿಯ ಆಧಾರದಲ್ಲಿ ಶಾಸಕ ಮುನಿರತ್ನ ಕೆಟ್ಟದಾಗಿ ಬೈದಿದ್ದಾರೆ. ಮನೆಯ ಹೆಣ್ಣು ಮಕ್ಕಳ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಇನ್ನು 5 ವರ್ಷ ನಾನು ಶಾಸಕನಾಗಿ ಇರ್ತೀನಿ ಅಂತ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮುನಿರತ್ನ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ದಲಿತರ ವಿರುದ್ಧ ಅಸಭ್ಯ ಪದ ಬಳಕೆ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೂಡಲೇ ಬಂಧಿಸಬೇಕು ಅಂತ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಲಾಗಿದೆ. ಚಿತ್ರದುರ್ಗದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗಿದೆ. ಪ್ರತಿಭಟನಾ ಸಭೆಯಲ್ಲಿ ಛಲವಾದಿ ಮಠದ ಬಸವ ನಾಗೀದೇವ ಸ್ವಾಮೀಜಿ ಭಾಗಿಯಾಗಿ ಮುನಿರತ್ನ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಲ್ಲೂ ಬಿಜೆಪಿ ಶಾಸಕ ಮುನಿರತ್ನ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶಾಸಕ ಮುನಿರತ್ನ ಅವರನ್ನು ಕೂಡಲೇ ಬಂಧಿಸಬೇಕು, ಮಾತ್ರವಲ್ಲ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾ ಮಾಡಬೇಕು. ಒಂದು ವೇಳೆ ಮುನಿರತ್ನ ಅವರನ್ನ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆ ಹೆಚ್ಚಾಗುವ ಸಾಧ್ಯತೆಯಿರುವ ಕಾರಣ, ಶಾಸಕ ಮುನಿರತ್ನನನ್ನು ಅರೆಸ್ಟ್ ಮಾಡಲಾಗಿದೆ.
ಮಂಡ್ಯದಲ್ಲೂ ಶಾಸಕ ಮುನಿರತ್ನ ವಿರುದ್ಧ ಗೃಹ ಸಚಿವರಿಗೆ ದೂರು ನೀಡಲಾಗಿದೆ. ಕೆ.ಎಂ ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಮುನಿರತ್ನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.