ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸಿಪಾಜ್ಪುರ್ ಎಂಬಲ್ಲಿ ಪೊಲೀಸರಿಂದ ನಡೆದ ಗುಂಡಿನ ದಾಳಿಗೆ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ತೆರವು ಕಾರ್ಯಾಚರಣೆಯ ವೇಳೆ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಜಗಳ ಏರ್ಪಿಟ್ಟಿತ್ತು. ಈ ವೇಳೆ ಪೊಲೀಸರು ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯ ಕುರಿತಾದ ವೀಡಿಯೋವೊಂದು ಬಹಿರಂಗವಾಗಿದ್ದು, ಇದರಲ್ಲಿ ವಲಸಿಗರ ತೆರವು ಕಾರ್ಯಾಚರಣೆ ವೇಳೆ ಪೊಲೀಸರು ವ್ಯಕ್ತಿಗೆ ಗುಂಡಿಕ್ಕಿದ ನಂತರ ಅವನ ಮೇಲೆ ಕ್ರೂರವಾಗಿ ಲಾಠಿ ಬೀಸಿದ್ದಾರೆ. ಇದೇ ವೀಡಿಯೋದಲ್ಲಿ ಫೊಟೋಗ್ರಾಫರ್ ಒಬ್ಬರು ಗಾಯಾಳುವಿನ ಎದೆ ಹಾಗೂ ಕುತ್ತಿಗೆಯ ಭಾಗಕ್ಕೆ ತುಳಿದು ದಾಳಿ ನಡೆಸಿರುವುದೂ ದಾಖಲಾಗಿದೆ. ಈ ಫೋಟೋಗ್ರಾಫರ್ ಪಿಟಿಐ ನ್ಯೂಸ್ ಏಜೆನ್ಸಿಯ ಬಿಜಯ್ ಶಂಕರ್ ಬನಿಯಾ ಎಂದು ಗುರುತಿಸಲಾಗಿದ್ದು, ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿಂಸಾಚಾರದಿಂದಾಗಿ ಪೊಲೀಸರು ಸೇರಿದಂತೆ ಒಟ್ಟು 20 ಜನರಿಗೆ ಗಾಯಗಳಾಗಿವೆ.
NDTVಯ ವರದಿಯಂತೆ, ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದಾಗ ಬಲ ಪ್ರಯೋಗಿಸಬೇಕಾಯಿತು. ಒಂಬತ್ತು ಜನ ಪೊಲೀಸರು ಗಾಯಗೊಂಡಿದ್ದರು. ಇಬ್ಬರು ನಾಗರಿಕರು ಕೂಡಾ ಗಾಯಗೊಂಡಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸರ್ಮಾ ಅವರ ತಮ್ಮ ಸುಶಾಂತ್ ಬಿಸ್ವಾ ಸರ್ಮಾ ಅವರು ಹೇಳಿದ್ದಾರೆ.
“ಘಟನಾ ಸ್ಥಳದಲ್ಲಿ ಸುಶಾಂತ್ ಅವರು ಹಾಜರಿದ್ದರೂ, ಪೊಲೀಸರು ಗುಂಡಿನ ದಾಳಿ ನಡೆಸಿರುವ ಕುರಿತು ಮಾಹಿತಿಯಿಲ್ಲ ಎಂದು ಹೇಳಿದ್ದಾರೆ. ತೆರವು ಕಾರ್ಯಾಚರಣೆ ನಡೆಸುವ ಸ್ಥಳ ತುಂಬಾ ದೊಡ್ಡದಿತ್ತು. ನಾನು ಇನ್ನೊಂದು ಬದಿಯಿದ್ದೆ. ಘಟನೆಯ ಕುರಿತು ಮಾಹಿತಿ ಪಡೆಯುತ್ತೇನೆ,” ಎಂದು ಹೇಳಿದ್ದಾರೆ.
ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಘಟನೆಯ ಕುರಿತು ಮಾತನಾಡಿ, ಪೊಲೀಸರ ಮೇಲೆ ಸ್ಥಳೀಯರು ಮಚ್ಚು ಮತ್ತು ಇತರ ಆಯುಧಗಳಿಂದ ದಾಳಿ ನಡೆಸಿದ್ದಾರೆ ಎಂಬ ಕುರಿತು ಮಾಹಿತಿ ಬಂದಿದೆ. ಹಿಂಸಾಚಾರದ ನಂತರವೂ ತೆರವು ಕಾರ್ಯಾಚರಣೆ ಮುಂದುವರೆದಿದೆ. ನಾಳೆಯೂ ಮುಮದುವರೆಯುತ್ತದೆ,” ಎಂದು ಹೇಲಿದ್ದಾರೆ.
ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ನಿವಾಸಿಗಳೇ ಹೆಚ್ಚಾಗಿದ್ದಾರೆ. ಅವರೆಲ್ಲರೂ ಪೂರ್ವ ಬಂಗಾಳದ ಮೂಲದವರು, ಇಲ್ಲಿ ಅನಧಿಕೃತವಾಗಿ ವಾಸವಿದ್ದಾರೆ ಎಂದು ಸರ್ಕಾರ ಹೇಳಿತ್ತು. ಸೋಮವಾರದಂದು ಬಹುದೊಡ್ಡ ತೆರವು ಕಾರ್ಯಾಚರಣೆ ನಡೆಸಿ ಸುಮಾರು 800 ಕುಟುಂಬಗಳ ವಾಸಕ್ಕೆ ಸ್ಥಳವಿಲ್ಲದಂತೆ ಮಾಡಲಾಗಿತ್ತು.
ಈ ತೆರವು ಕಾರ್ಯಾಚರಣೆಯ ಮೊದಲ ಹಂತ ಜೂನ್ ತಿಂಗಳಲ್ಲಿಯೇ ಆರಂಭಿಸಲಾಗಿತ್ತು. ಅಸ್ಸಾಂನ ಗೋರುಖುಟಿ ಹಾಗೂ ಸಿಫಾಜ್ಪುರ್’ನಲ್ಲಿ “ಅಕ್ರಮ ವಲಸಿಗರು” ಆಕ್ರಮಿಸಿಕೊಂಡಿರುವ 77,000 ಬಿಘಾ (ಸುಮಾರು 1,24,740 ಎಕರೆ) ಭೂಮಿಯನ್ನು ಕೃಷಿ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹಿಮಂತ್ ಹೇಳಿದ್ದರು.
ಈ ತೆರವು ಕಾರ್ಯಾಚರಣೆಯ ವಿರುದ್ದ ಸ್ಥಳೀಯರಿಂದ ಪ್ರತಿರೋಧ ವ್ಯಕ್ತವಾಗಿತ್ತು. ಈಗಾಗಲೇ ಸಾವಿರಾರು ಕುಟುಂಬಗಳು ಬೀದಿಪಾಲಾಗಿದ್ದು, ನಿರಾಶ್ರಿತರಿಗೆ ಪರ್ಯಾಯ ವಾಸದ ವ್ಯವಸ್ಥೆಯನ್ನೂ ನೀಡಲಾಗಿಲ್ಲ.
ಪ್ರತಿಭಟನಾಕಾರರ ಮೇಲೆ ನಡೆದ ಗುಂಡಿನ ದಾಳಿ ಹಾಗೂ ಇಬ್ಬರ ಸಾವಿನ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಬೆಂಬಲಿತ ಬೆಂಕಿಯಿಮದ ಅಸ್ಸಾಂ ನರಳುತ್ತಿದೆ. ಅಲ್ಲಿನ ಎಲ್ಲಾ ಸಹೋದರ – ಸಹೋದರಿಯರಿಗೆ ನನ್ನ ಬೆಂಬಲ ನೀಡುತ್ತಿದ್ದೇನೆ. ಈ ರೀತಿ ಭಾರತದಲ್ಲಿರುವ ಯಾರೊಂದಿಗೂ ಆಗದಿರಲಿ, ಎಂದು ಹೇಳಿದ್ದಾರೆ.
ಅಸ್ಸಾಂ ಸರ್ಕಾರದ ವಿರುದ್ದ ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಕುಮಾರ್ ಬೋರಾಹ್, 1970ರಿಂದ ಧೋಲ್ಪುರ್ ಪ್ರದೇಶದಲ್ಲಿ ವಾಸವಿದ್ದವರನ್ನೂ ಒಕ್ಕಲೆಬ್ಬಿಸಲಾಗುತ್ತಿದೆ. ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ಸರ್ಕಾರ ಪರ್ಯಾಯ ವಾಸದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಿತ್ತು. ಇಲ್ಲಿ ವಾಸವಿದ್ದವರ ಮೂಲ ಆದಾಯ ಕೃಷಿ. ಈಗ ಅವರ ಆಹಾರದ ಮೂಲವನ್ನೇ ಅವರಿಂದ ಕಿತ್ತುಕೊಳ್ಳಲಾಗಿದೆ. ಜನರ ಹಿತಕ್ಕಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯ. ಜನರನ್ನು ನಿರಾಶ್ರಿತರನ್ನಾಗಿಸುವುದಲ್ಲ. ಅಸ್ಸಾಂ ರಾಜ್ಯವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುವ ಕೆಲಸವನ್ನು ಸರ್ಕಾರ ಮಾಡದಿರಲಿ,” ಎಂದು ಹೇಳಿದ್ದಾರೆ.