ನವದೆಹಲಿ: ಹೊಸ ವರ್ಷ ಆರಂಭದ ಹೊಸ್ತಿಲಲ್ಲೇ ಜನಸಾಮಾನ್ಯರು ಹಾಗೂ ವ್ಯಾಪಾರಿಗಳಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕೇಂದ್ರ ಸರ್ಕಾರ ಕಮರ್ಷಿಯಲ್ ಎಲ್‌ಪಿಜಿ (LPG) ಸಿಲಿಂಡರ್‌ಗಳ ದರವನ್ನು ಹೆಚ್ಚಳ ಮಾಡಿದ್ದು, ಹೋಟೆಲ್, ರೆಸ್ಟೋರೆಂಟ್, ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರಿಗೆ ದೊಡ್ಡ ಆಘಾತ ನೀಡಿದೆ.

ಇಂದಿನಿಂದಲೇ ಜಾರಿಗೆ ಬರುವಂತೆ 19 ಕಿಲೋಗ್ರಾಂ ತೂಕದ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 111 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯಾಪಾರಿಗಳ ವೆಚ್ಚ ಮತ್ತಷ್ಟು ಹೆಚ್ಚಾಗಿದೆ. ಇನ್ನೂ ಹೆಚ್ಚಿನ ಬಳಕೆಯಲ್ಲಿರುವ 47.5 ಕಿಲೋಗ್ರಾಂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274 ರೂ. ಏರಿಕೆ ಮಾಡಲಾಗಿದ್ದು, ಇದರೊಂದಿಗೆ ಸಿಲಿಂಡರ್‌ನ ಹೊಸ ದರ 4,407 ರೂ.ಗೆ ತಲುಪಿದೆ.

ಕಮರ್ಷಿಯಲ್ ಗ್ಯಾಸ್ ದರ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್, ಕ್ಯಾಂಟೀನ್‌ಗಳು ಹಾಗೂ ಆಹಾರ ತಯಾರಿಕಾ ಘಟಕಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಸಿಲಿಂಡರ್ ಬೆಲೆ ಹೆಚ್ಚಾದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಊಟ, ತಿಂಡಿ ಹಾಗೂ ಪಾನೀಯಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಹೆಚ್ಚಿದೆ.











