ಬೆಂಗಳೂರು : ಏಳನೇ ವೇತನ ಆಯೋಗ ವರದಿ ಜಾರಿಗೆ ಮಾಡುವಂತೆ ಆಗ್ರಹಿಸಿ ಸರ್ಕಾರಿ ನೌಕರರು ಇಂದು ಮುಷ್ಕರಕ್ಕೆ ಚಾಲನೆ ನೀಡಿದ್ದಾರೆ. ಸರ್ಕಾರದ ಖಡಕ್ ಎಚ್ಚರಿಕೆಯ ನಡುವೆಯೂ ಕರ್ತವ್ಯಕ್ಕೆ ಗೈರಾಗುವ ಮೂಲಕ ವೇತನ ಏರಿಕೆಗೆ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ .ಶೇಕಡಾ 40ರಷ್ಟು ವೇತನ ಏರಿಕೆಗೆ ಆಗ್ರಹಿಸಿದ ಸರ್ಕಾರಿ ನೌಕರರ ಬೇಡಿಕೆಗೆ ಸಿಎಂ ಬೊಮ್ಮಾಯಿ ನೋ ಎಂದಿದ್ದಾರೆ. ಸಂಧಾನ ಸಭೆ ವಿಫಲವಾರ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರಿ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ಇನ್ನು ಸರ್ಕಾರಿ ನೌಕರರ ಮನವೊಲಿಸುವ ಪ್ರಯತ್ನ ಮುಂದುವರಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರಿಗೆ 17 ಪ್ರತಿಶತ ವೇತನ ಹೆಚ್ಚಳ ಮಾಡುವುದಾಗಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದೆ. ಸರ್ಕಾರಿ ನೌಕರರ ವೇತನವನ್ನು 17 ಪ್ರತಿಶತ ಏರಿಕೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಸದ್ಯಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ 17 ಪ್ರತಿಶತ ಏರಿಕೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಎನ್ಪಿಎಸ್ ಬಗ್ಗೆಯೂ ಸರ್ಕಾರ ಚಿಂತಿಸುತ್ತಿದ್ದು ಬೇರೆ ರಾಜ್ಯಗಳಿಂದ ವರದಿ ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಎಸಿಎಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡುತ್ತೇವೆ . ಎರಡು ತಿಂಗಳಲ್ಲಿ ವರದಿಗಳನ್ನು ತರಿಸಿಕೊಳ್ಳುತ್ತೇವೆ. ಅಲ್ಲಿಯವರೆಗೂ ರಾಜ್ಯ ಸರ್ಕಾರಿ ನೌಕರರು ತಾಳ್ಮೆ ಕಾಯ್ದುಕೊಳ್ಳಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ.
7ನೇ ವೇತನ ಆಯೋಗ ರಚನೆ, ವೇತನ ಹೆಚ್ಚಳ , ಹಳೆ ಪಿಂಚಣಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಇಂದಿನಿಂದ ರಾಜ್ಯಾದ್ಯಂತ ಮುಷ್ಕರ ಆರಂಭಿಸಿದ್ದಾರೆ. ಸರ್ಕಾರಿ ಆಸ್ಪತ್ರೆ, ಶಾಲೆಗಳು , ಸರ್ಕಾರಿ ಕಚೇರಿಗಳು ಸೇರಿದೆಂತೆ ಎಲ್ಲೆಡೆ ಸರ್ಕಾರಿ ನೌಕರರು ಇಂದು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಇಂದು ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ಭಾರೀ ಸಮಸ್ಯೆ ಕಂಡು ಬರುತ್ತಿದೆ.