ದೀರ್ಘ ಹೋರಾಟ ನಂತರ ಚಿಕ್ಕಬಳ್ಳಾಪುರ ರಚನೆಯಾಗಿ 15 ವರ್ಷ ಪೂರೈಸಿದರೂ ಇದುವರೆಗೂ ಯಾವುದೇ ಅಭಿವೃದ್ಧಿ ಆಗಿಲ್ಲ. ಅದರಲ್ಲೂ ಬರಡು ಭೂಮಿ ಚಿಕ್ಕಬಳ್ಳಾಪುರದಲ್ಲಿ ನೀರು ಹರಿಸುವ ಮಹತ್ವಾಕಾಂಕ್ಷಿ ಏತ ನೀರಾವರಿ ಯೋಜನೆಗೆ ಹಾಕಿದ 13 ಸಾವಿರ ಕೋಟಿ ರೂ. ನೀರು ಪಾಲಾಗಿದ್ದು, ಜನರಿಗೆ ಕುಡಿಯುವ ನೀರಿನ ಒಂದು ಹನಿಯೂ ಬಂದಿಲ್ಲ!
ಹೌದು, ಚಿಕ್ಕಬಳ್ಳಾಪುರ ಬರಡು ಭೂಮಿ., ಇಲ್ಲಿ ನೀರು ಇಲ್ಲ ಅನ್ನುವುದು ಬಿಟ್ಟರೆ ಅದ್ಭುತವಾಗಿ ಕೃಷಿ ಭೂಮಿ ಇರುವ ಪ್ರದೇಶ. ವಾಣಿಜ್ಯ ಬೆಳೆಗಳಿಗೆ ಹೆಸರುವಾಸಿ. ಇಂತಹ ಚಿಕ್ಕಬಳ್ಳಾಪುರ ಜಿಲ್ಲೆಯಾದಾಗ ಜನರು ಸಂಭ್ರಮಿಸಿದರು. ಅಲ್ಲದೇ ಏತ ನೀರಾವರಿ ಯೋಜನೆ ಮೂಲಕ ಜಿಲ್ಲೆಗೆ ನೀರು ಹರಿದು ಬರುತ್ತದೆ ಎಂದಾಗ ನಾಗರಿಕರು ಕುಣಿದು ಕುಪ್ಪಳಿಸುವಷ್ಟು ಖುಷಿಪಟ್ಟಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ 15 ವರ್ಷ ಕಳೆಯಿತು. ಆದರೆ ನಾಗರಿಕರಲ್ಲಿ ಆ ಸಂಭ್ರಮವೇ ಇಲ್ಲ. ಏಕೆಂದರೆ ಈ ಜಿಲ್ಲೆಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ಸರಿಯಾಗಿ ಸಿಗಲೇ ಇಲ್ಲ. ಅದರಲ್ಲೂ ಬಹುನಿರೀಕ್ಷೆ ಇದ್ದ ನೀರಾವರಿ ಯೋಜನೆ ಒಂದೂ ಕೈಗೂಡಲೇ ಇಲ್ಲ. 15 ವರ್ಷ ಕಳೆದರೂ ನೀರು ಬಂದಿಲ್ಲ ಎಂಬುದೇ ಜನರಿಗೆ ಭ್ರಮ ನಿರಸನ ಉಂಟು ಮಾಡಿದೆ.
ಕೈ ಕೊಟ್ಟ ನೀರಾವರಿ ಯೋಜನೆಗಳು!
ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿ, ಹತ್ತಿ ಹೂ, ಹಣ್ಣುಗಳ ಸೇರಿದಂತೆ ಹಲವಾರು ವಾಣಿಜ್ಯ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಕೃಷಿಯಲ್ಲಿ ವಿಶೇಷ ತಜ್ಞರಾಗಿರುವ ಇಲ್ಲಿಯ ರೈತರು ಇಲ್ಲಿಗೆ ನೀರು ಹರಿದು ಬಂದರೆ ಎಂತಹ ಬೆಳೆಗಳನ್ನು ಬೆಳೆಯಬಹುದು ಎಂದು ನಿರೀಕ್ಷಿಸಬಹುದು. ಆದರೆ ಏತ ನೀರಾವರಿ ಸೇರಿದಂತೆ ಹಲವು ನೀರಾವರಿ ಯೋಜನೆ ನೀರು ಬಾರದೇ ಇರುವುದು ಜನರಿಗೆ ನಿರಾಸೆ ಮೂಡಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಕೆರೆಗಳಿದ್ದು, ಕೇವಲ ಬೆರಳೆಣಿಕೆಯ ಕೆರೆಗಳು ಮಾತ್ರ ತುಂಬಿಕೊಳ್ಳುತ್ತಿವೆ. ಆದರೆ ನೀರಾವರಿ ಯೋಜನೆಗಳು ಜಾರಿಗೆ ಬಂದರೆ ಬಹುತೇಕ ಕೆರೆಗಳು ತುಂಬಿ ಕೃಷಿಗೆ ಬಲ ನೀಡಿದಂತಾಗುತ್ತದೆ.
ಫಲವತ್ತಾದ ಭೂಮಿ, ಯೋಗ್ಯವಾದ ಹವಾಗುಣ, ವೈವಿಧ್ಯಮಯವಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ರೈತರಿಗೆ ನೀರಾವರಿಯ ಭದ್ರತೆಯಿಲ್ಲದೆ, ದುಡಿದ ಹಣವನ್ನೆಲ್ಲಾ ಕೊಳವೆಬಾವಿಗಳಿಗೆ ಸುರಿಯುವುದು ತಪ್ಪಲಿಲ್ಲ. ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಸಾವಿರಾರು ಕೆರೆಗಳಿದ್ದರೂ ಬಹುತೇಕ ಕೆರೆಗಳು ಬತ್ತಿವೆ. ಅಪಾರವಾದ ಮಳೆನೀರು ಹರಿದು ಬಂದರೂ ಕೆರೆಗಳಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಕೊಳವೆಬಾವಿಗಳು ವಿಫಲಗೊಳ್ಳುತ್ತಿವೆ. ಕೃಷಿ ಚಟುವಟಿಕೆ ಸಂಕಷ್ಟದಲ್ಲಿದೆ. ಆದರೆ ರೈತರು ದೃತಿಗೆಟ್ಟಿಲ್ಲ. ಇರುವ ಅಲ್ಪಸ್ವಲ್ಪ ನೀರನ್ನೇ ಬಳಸಿಕೊಂಡು ಪುಷ್ಪೋದ್ಯಮ, ಹೈನೋದ್ಯಮ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ವಿಷದ ನೀರು ಕುಡಿಯುತ್ತಿರುವ ಜನರು!
ಚಿಕ್ಕಬಳ್ಳಾಪುರ ಜನರು ಈಗ ಕುಡಿಯುತ್ತಿರುವ ನೀರು ಫ್ಲೋರೈಡ್ ನಂತಹ ಅಂಶಗಳಿಂದ ಜನರ ಆರೋಗ್ಯ ಹದಗೆಡಿಸುತ್ತಿದೆ. ಅದರಲ್ಲೂ ಯುರೇನಿಯಂ ಮತ್ತು ನೈಟ್ರೈಟ್ ಮತ್ತು ಆರ್ಸೆನಿಕ್ ಮುಂತಾದ ವಿಷಕಾರಿ ರಾಸಯನಿಕಗಳು ನೀರಿನಲ್ಲಿ ಸೇರಿವೆ ಎಂದು ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ಭಾರತೀಯ ವಿಜ್ಞಾನ ಸಂಸ್ಥೆ ಪ್ರಕಟಿಸಿದ ಈ ವರದಿ ಬಗ್ಗೆ ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಕಳವಳ ವ್ಯಕ್ತಪಡಿಸಿದೆ. ಆದರೂ ಇಲ್ಲಿಯ ಜನರಿಗೆ ಕುಡಿಯುವ ನೀರು ಸಿಗದೇ ಇರುವುದು ರಾಜಕೀಯ ಇಚ್ಛಾಶಕ್ತಿಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ.
ವಿಷಕಾರಿ ರಾಸಯನಿಕ ನೀರಿನಿಂದಾಗಿ ಅಂತರ್ಜಲ ಮಟ್ಟ ಕೂಡ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಇರುವ ಅಲ್ಪಸ್ವಲ್ಪ ನೀರಿಗೂ ಕಂಟಕ ಎದುರಾಗಿದೆ. ಆದ್ದರಿಂದ ರಾಜ್ಯ ಸರಕಾರ ಕೂಡ ಚಿಕ್ಕಬಳ್ಳಾಪುರ ರಚನೆಯಾಗಿ 15 ವರ್ಷ ಕಳೆದಿರುವ ಈ ಸಂದರ್ಭದಲ್ಲಿ ಏತ ನೀರಾವರಿ ಯೋಜನೆ ಮೂಲಕ ನೀರು ಪೂರೈಸುವ ಅಗತ್ಯವಿದೆ. ಹೀಗೆ ಮುಂದುವರಿದರೆ ಇನ್ನೂ 15 ವರ್ಷ ಕಳೆದರೂ ಜನರ ಆಸೆ ಈಡೇರದಿದ್ದರೆ ಜಿಲ್ಲೆ ರಚನೆಯಾಗಿ ವ್ಯರ್ಥ ಎಂದಾಗುತ್ತದೆ.