ಈ ಸಲದ ಬೆಳಗಾವಿ ಪಾಲಿಕೆಯ ಚುನಾವಣಾ ವೈಶಿಷ್ಟ್ಯವೇನೆಂದರೆ ಭಾಷಿಕ ರಾಜಕಾರಣ ಹಿನ್ನೆಲೆಗೆ ಸರಿದಿದೆ. ಎಂಇಎಸ್ ಎಂಬ ಪುಂಡರ ಅಜೆಂಡಾಕ್ಕೆ ಮಹಾ ಹಿನ್ನಡೆಯಾಗಿದೆ. ಬೆಳಗಾವಿ ಪಾಲಿಕೆ ಹುಟ್ಟಿದಾಗಿನಿಂದ ಭಾಷಿಕ ನೆಲೆಯಲ್ಲಿ ಚುನಾವಣೆ ನಡೆಯುತ್ತ ಬಂದಿದ್ದೇ ಎಂಇಎಸ್‍ಗೆ ವರದಾನವಾಗಿತ್ತು. ಆದರೆ ಈ ಸಲ ಪಕ್ಷಗಳ ಸಿಂಬಲ್ ಅಡಿ ಚುನಾವಣೆ ನಡೆದ ಕಾರಣಕ್ಕೆ ಎಂಇಎಸ್‍ಗೆ ಹಿನ್ನಡೆಯಾಗಿದೆ.
ಹಿಂದೆಲ್ಲ ಗೆದ್ದ ಮರಾಠಿಗರೆಲ್ಲರನ್ನೂ ತನ್ನವರು ಎಂದು ಪ್ರತಿಪಾದಿಸುತ್ತ ಅಧಿಕಾರ ಹಿಡಿಯುತ್ತ ಬಂದಿದ್ದ ರಾಜಕೀಯ ಪಕ್ಷವೇ ಅಲ್ಲದ ಎಂಇಎಸ್‍ಗೆ ಈ ಸಲ ಆ ಅವಕಾಶವಿಲ್ಲ.
ಆದರೆ ಬಿಜೆಪಿ ತನ್ನ ಬಿ ಟೀಮ್‍ನಂತಿರುವ ಎಂಇಎಸ್ ಅನ್ನು ಪರೋಕ್ಷವಾಗಿ ಪೋಷಿಸಿದೆ ಎಂಬ ಭಾವನೆ ಈಗ ಕನ್ನಡ ಹೋರಾಟಗಾರರಲ್ಲಿ ಮೂಡಿದೆ. 58 ವಾರ್ಡ್‌ಗಳಲ್ಲಿ 55ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಅರ್ಧಕ್ಕೂ ಹೆಚ್ಚು ಟಿಕೆಟುಗಳನ್ನು ಎಂಇಎಸ್ ಬೆಂಬಲಿತರಿಗೆ ನೀಡಿತ್ತು. ಈಗ ಬಿಜೆಪಿ 35 ಸ್ಥಾನ ಗೆದ್ದಿದ್ದು ಅದರಲ್ಲಿ 15 ವಿಜೇತರು ಎಂಇಎಸ್ ಬೆಂಬಲಿತರು..ಕಾಂಗ್ರೆಸ್ ಕೇವಲ 10ಕ್ಕೆ ಸಿಮೀತಗೊಂಡಿದೆ. ನಾಲ್ವರು ಪಕ್ಷೇತರರು ಕಾಂಗ್ರೆಸ್ ಬೆಂಬಲಿತ ಎನ್ನಲಾಗುತ್ತಿದ್ದರೂ, ಅವರು ಕೂಡ ಬಿಜೆಪಿ ಬಾವುಟ ಹಿಡಿಯಬಹುದು.
ಬಿಜೆಪಿ ಪಕ್ಷದ ಆಧಾರದಲ್ಲಿ ಗೆದ್ದಿರವ ಎಂಇಎಸ್ ಬೆಂಬಲಿತರು ತಮ್ಮ ಆಟಾಟೋಪ ಮುಂದುವರೆಸುವ ಲಕ್ಷಣಳಿವೆ. ರಾಜ್ಯ ಬಿಜೆಪಿ ಮನಸ್ಸು ಮಾಡಿದರೆ ಅವರನ್ನು ನಿಯಂತ್ರಿಸಬಹುದು. ಕನ್ನಡ ವಿರೋಧಿ ನಿಲುವು ತಳೆಯದಂತೆ ಕಟ್ಟುಪಾಡು ವಿಧಿಸಬಹುದು.
ಆದರೆ ಅದು ಸದ್ಯಕ್ಕೆ ಅಸಾಧ್ಯ ಅನಿಸುತ್ತಿದೆ. ಏಕೆಂದರೆ ಬೆಳಗಾವಿಯ ಬಹುಪಾಲು ಮರಾಠಿಗರು ಬಿಜೆಪಿ ಬೆಂಲಿಗರು. ಎಂಇಎಸ್ ಮತ್ತು ಬಿಜೆಪಿ ಹಿಂದೂತ್ವದ ನೆಲೆಯಲ್ಲಿ ಭಾಯಿ ಭಾಯಿ. ಇವೆರಡೂ ಧರ್ಮ ಮತ್ತು ಭಾಷೆಯ ಆಯಾಮದಲ್ಲಿ ರಾಜಕೀಯ ಮಾಡುವುದರಲ್ಲಿ ಸಿದ್ಧಹಸ್ತರು. ಈ ಕಾರಣಕ್ಕೆ ಬಿಜೆಪಿ ಎಂಇಎಸ್ ಬೆಂಬಲಿತರಿಗೆ ಹೆಚ್ಚು ಟಿಕೆಟ್ ನೀಡಿತ್ತು. ಇವೆರಡರ ನಡುವಿನ ಈ ಅನೈತಿಕ ಒಪ್ಪಂದವೇ ಬಿಜೆಪಿಗೆ 35 ಸ್ಥಾನ ಸಿಗಲು ಕಾರಣವಾಗಿತು.
ಚುನಾವಣೆಗೂ ಮೊದಲು ‘ಎಂಇಎಸ್ ಆಟ ಖತಂ’ ಎಂದು ಪ್ರತಿಧ್ವನಿ ಬರೆದಿತ್ತು. ಅದು ಈಗ ಒಂದು ಅರ್ಥದಲ್ಲಿ ನಿಜವಾಗಿದೆ. ಆದರೆ ಬಿಜೆಪಿ ಎಂಇಎಸ್ ಅನ್ನು ಪೋಷಿಸುತ್ತಿರುವ ಲಕ್ಷಣಗಳು ದಟ್ಟವಾಗಿ ಕಂಡು ಬರುತ್ತಿವೆ.
ಹಿಂದೆ ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಎಂಇಎಸ್ ಬೆಂಬಲಿತರನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನಾಗಿ ಘೋಷಿಸಿ ಯಶಸ್ಸುಕಂಡಿದ್ದರು. ಎಂಇಎಸ್ ಬೆಂಬಲಿತ ಸಂಭಾಜಿರಾವ್ ಪಾಟೀಲ್ ಮೇಯರ್ ಆದರು. ಅವರು ಸಿಎಂ ಬಂಗಾರಪ್ಪರನ್ನು ಬೆಳಗಾವಿಗೆ ಕರೆಸಿ, ಪಾಲಿಕೆಯಿಂದ ಸಾರ್ವಜನಿಕ ಸನ್ಮಾನ ಏರ್ಪಡಿಸಿದ್ದರು. ಅಲ್ಲಿವರೆಗೂ ರಾಜ್ಯದ ಸಿಎಂಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದ ಎಂಇಎಸ್‍ಗೆ ಹಿನ್ನಡೆ ಆರಂಭವಾಗಿತು. 80ರ ದಶಕದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 4-5 ಸೀಟು ಗೆಲ್ಲುತ್ತಿದ್ದ ಎಂಇಎಸ್ 1999ರ ಹೊತ್ತಿಗೆ ಝೀರೋ ತಲುಪಿತು. 2013ರಲ್ಲಿ ಸಂಭಾಜಿರಾವ್ ಗೆದ್ದಿದ್ದು ಅಷ್ಟೇ. ಈಗ ಎಂಇಎಸ್ ಬೆಂಬಲಿತ ಒಬ್ಬ ಶಾಸಕರೂ ಇಲ್ಲ, ಬೀದರನಲ್ಲಂತೂ ಎಂಇಎಸ್ ಪಾತಾಳ ತಲುಪಿದೆ.
1992ರಲ್ಲಿ ಎಂಇಎಸ್‍ನ ಸಂಭಾಜಿರಾವ್ ತಮ್ಮ ಗುಂಪಿನ 6 ಮತಗಳನ್ನು ಕನ್ನಡಿಗ ಸಿದ್ದನಗೌಡ ಪಾಟೀಲರ ಪರ ಹಾಕಿಸುವ ಮೂಲಕ ಮೊದಲ ಕನ್ನಡಿಗ ಮೇಯರ್ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು. ಆದರೆ ಈ ಸಲ ಪಕ್ಷಗಳ ಆಧಾರದಲ್ಲಿ ಚುನಾವಣೆ ನಡೆದ ಪರಿಣಾಮ ಎಂಇಎಸ್‍ಗೆ ಹಿನ್ನಡೆಯಾಗಿದೆ ನಿಜ.. ಆದರೆ ಬಿಜೆಪಿಯಲ್ಲಿರುವ ಎಂಇಎಸ್ ಬೆಂಬಲಿತರು ಮತ್ತು ಇತರ ಬಿಜೆಪಿ ಸದಸ್ಯರು ಸಿದ್ದಾಂತದಲ್ಲಿ ಒಂದೇ ಆಗಿದ್ದಾರೆ.
ರಾಜ್ಯ ಬಿಜೆಪಿ ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಂಡು ಎಂಇಎಸ್ ಅನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಅದು ಕನ್ನಡದ್ರೋಹವೇ ಆಗುತ್ತದೆ. ಅಂದಂತೆ ಇಲ್ಲಿರುವ ಮರಾಠಿಗರು ಕೂಡ ಕನ್ನಡಿಗರೇ ಎಂಬುದನ್ನು ನಾವು ಮರೆಯದಿರೋಣ. ಎಂಇಎಸ್ ಆಟಗಳಿಗೆ ಕಡಿವಾಣ ಹಾಕುವುದು ಬಿಜೆಪಿಯ ನೈತಿಕ ಹೊಣೆಯೂ ಹೌದು. ಇದು ಕನ್ನಡ-ಮರಾಠಿ-ಉರ್ದು ಭಾಷಿಕರ ಸೌಹಾರ್ದತೆ ದೃಷ್ಟಿಯಿಂದ ಅತ್ಯಗತ್ಯ.