ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಇಂಧನ ಇಲಾಖೆ, ಕಳೆದ ಬೇಸಿಗೆ (ಎಪ್ರಿಲ್ 1) ನಂತರ ರಾಜ್ಯದಲ್ಲಿ 1,403 ಕೋಟಿ ರೂ. ಮೌಲ್ಯದ ವಿದ್ಯುತ್ ಮಾರಾಟ ಮಾಡಿದೆ.
ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, “2024ರ ಏಪ್ರಿಲ್ 1ರಿಂದ ಜುಲೈ ಅಂತ್ಯದವರೆಗೆ 1,403 ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗಿದೆ. ಮೇ 18ರವರೆಗೆ ವಿದ್ಯುತ್ ಖರೀದಿ ಹೆಚ್ಚಾಗಿದ್ದರೆ, ನಂತರದಲ್ಲಿ ಮಾರಾಟ ಹೆಚ್ಚಾಗಿದೆ. ಪ್ರತಿನಿತ್ಯ 30ರಿಂದ 40 ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ,” ಎಂದು ಮಾಹಿತಿ ನೀಡಿದರು.
“ಪ್ರಸ್ತುತ ರಾಜ್ಯದಲ್ಲಿ ನಿತ್ಯ ಸರಾಸರಿ 250 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಪೈಕಿ 20 ಮಿಲಿಯನ್ ಯೂನಿಟ್ಅನ್ನು ಬೇಸಿಗೆಯಲ್ಲಿ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದುಕೊಂಡಿರುವ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. 40ರಿಂದ 50 ಮಿಲಿಯನ್ ಯೂನಿಟ್ ಮಾರಾಟ ಮಾಡಲಾಗುತ್ತಿದೆ. 180 ಮಿಲಿಯಿನ್ ಯೂನಿಟ್ ವಿದ್ಯುತ್ ರಾಜ್ಯದಲ್ಲಿ ಬಳಕೆಯಾಗುತ್ತಿದೆ,” ಎಂದು ಹೇಳಿದರು.
“ಪ್ರಸ್ತುತ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ 1,006, ಬಳ್ಳಾರಿ ಉಷ್ಣ ವಿದ್ಯುತ ಸ್ಥಾವರದಲ್ಲಿ 1,049, ಯರಮರಸ್ ಉಷ್ಣ ವಿದ್ಯುತ ಸ್ಥಾವರದಲ್ಲಿ 898 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮಳೆ ಹೆಚ್ಚಾಗಿದ್ದರಿಂದ ಜಲ ವಿದ್ಯುತ್ ಉತ್ಪಾದನಾ ಪ್ರಮಾಣ 34.96 ಮಿಲಿಯನ್ ಯೂನಿಟ್ ವರೆಗೆ ಹೆಚ್ಚಾಗಿದೆ. ಸೌರ ಶಕ್ತಿಯಿಂದ 34.64 ಹಾಗೂ ಪವನದಿಂದ 60.05 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ,” ಎಂದು ವಿವರಿಸಿದರು.
ವಿದ್ಯುತ್ ಉತ್ಪಾದನೆ, ಆದಾಯದಲ್ಲಿ ದಾಖಲೆ
“ಕಳೆದ ಸಾಲಿನಲ್ಲಿ ಕೆಪಿಸಿಎಲ್ ನಿಂದ ನಿರ್ವಹಣೆ ಮಾಡುತ್ತಿರುವ ರಾಜ್ಯದ ಮೂರು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ದಾಖಲೆಯ ವಿದ್ಯುತ್ ಉತ್ಪಾದನೆ ಜತೆಗೆ ದಾಖಲೆಯ ಆದಾಯವನ್ನೂ ಗಳಿಸಲಾಗಿದೆ. 2022-23ನೇ ಸಾಲಿನಲ್ಲಿ 18,419 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಿ 9,326 ಕೋಟಿ ರು. ಆದಾಯ ಬಂದಿದ್ದರೆ, 2023-24ನೇ ಸಾಲಿನಲ್ಲಿ 22,313 ಮಿಲಿಯನ್ ಯೂನಿಟ್ ಉತ್ಪಾದನೆ ಮಾಡಿ 10,916 ಕೋಟಿ ರು. ಆದಾಯ ಗಳಿಸಲಾಗಿದೆ. ಇದು ಈವರೆಗಿನ ದಾಖಲೆ ಎಂದು ಹೇಳಿದ ಸಚಿವರು, RTPS ನ ಉತ್ಪಾದನಾ ಘಟಕಗಳು ಬೇಸಿಗೆಯಲ್ಲಿ ಸತತ 103 ದಿನ ವಿದ್ಯುತ್ ಉತ್ಪಾದಿಸಿ ದಾಖಲೆ ನಿರ್ಮಿಸಿವೆ”ಎಂದು ಸಚಿವರು ವಿವರಿಸಿದರು.
ಯಲಹಂಕ, ಬಿಡಿದಿ ಘಟಕ ಮುಂದಿನ ತಿಂಗಳು ಉದ್ಘಾಟನೆ
“ಯಲಹಂಕ ಸಮೀಪ ಸ್ಥಾಪನೆಯಾಗಿರುವ ರಾಜ್ಯದಲ್ಲಿಯೇ ಪ್ರಪ್ರಥಮ ಅನಿಲ ಆಧಾರಿತ 370 ಮೆಗಾ ವಾಟ್ ಸಾಮರ್ಥ್ಯದ ‘ಯಲಹಂಕ ಸಂಯೋಜಿತ ಆವರ್ತ ವಿದ್ಯುತ್ ಸ್ಥಾವರ’ (CCPP) ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವತಿಯಿಂದ 260 ಕೋಟಿ ರೂ. ವೆಚ್ಚದಲ್ಲಿ ಬಿಡದಿಯಲ್ಲಿ ಸ್ಥಾಪಿಸಲಾಗುತ್ತಿರುವ ತ್ಯಾಜ್ಯದಿಂದ ತ್ಯಾಜ್ಯದಿಂದ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕವು ಮುಂದಿನ ತಿಂಗಳು ಉದ್ಘಾಟನೆಗೊಳ್ಳಲ್ಲಿದೆ,” ಎಂದು ಸಚಿವರು ತಿಳಿಸಿದರು.
ಇಂಧನ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶತಕ ಕೆ.ಪಿ.ರುದ್ರಪ್ಪಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.