ಶಿವಮೊಗ್ಗದಲ್ಲಿ ಸೋಮವಾರ ಭಜರಂಗದಳದ ಸದಸ್ಯನ ಶವಯಾತ್ರೆಯ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 14 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕರ್ನಾಟಕ ಪೊಲೀಸ್ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರತಾಪ್ ರೆಡ್ಡಿ ಮಂಗಳವಾರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂಸಾಚಾರದಲ್ಲಿ ವಾಹನಗಳನ್ನು ಕಳೆದುಕೊಂಡ ಮಾಲೀಕರ ವಿವರಗಳನ್ನು ಪಡೆಯುವುದು ಪೊಲೀಸರಿಗೆ ಕಷ್ಟಕರವಾಗಿದೆ. ಹೀಗಾಗಿ ವಿವರ ಸಂಗ್ರಹಿಸುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ನಗರದಲ್ಲಿ ಎರಡು ಬೈಕ್ಗಳಿಗೆ ಬೆಂಕಿ ಹಚ್ಚಲಾಗಿದೆ. ಇಬ್ಬರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಿಷೇಧಾಜ್ಞೆಯ ನಡುವೆಯೇ ಗೋಪಾಳದ ಕೊರಮ ಕೇರಿ ಮತ್ತು ಟಿಪ್ಪುನಗರದ 6ನೇ ತಿರುವಿನಲ್ಲಿ ಕಿಡಿಗೇಡಿಗಳು ಮೂರು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಮಂಗಳವಾರ ಬೆಳಗ್ಗಿನ ಜಾವ 5:30ರ ವೇಳೆಗೆ ಈ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಮೇಲಿನ ತುಂಗಾನಗರದಲ್ಲಿ ಆಟೋ ರಿಕ್ಷಾಗಳಿಗೂ ಬೆಂಕಿಹಚ್ಚಿದ್ದಾರೆ. ಇದರಿಂದ ಆಟೋ ಸುಟ್ಟು ಕರಕಲಾಗಿದೆ. ಇಲ್ಲಿವರೆಗು ಒಟ್ಟು 14 ಪ್ರಕರಣ ದಾಖಲಾಗಿದ್ದು 9 ಎಫ್ ಐ ಆರ್ ದಾಖಲಾಗಿದೆ.













