ರಾಜ್ಯದಲ್ಲಿ ಕಳೆದ ಕಳೆದ ನಾಲ್ಕು ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದ 127 ಮಂದಿ ಮೃತಪಟ್ಟಿದ್ದು, 45,465 ಮನೆಗಳಗೆ ಹಾನಿ ಆಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಸೋಮವಾರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಸುದೀರ್ಘ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಜೂನ್ 22ರಿಂದ ಇಲ್ಲಿಯವರೆಗೆ 127 ಮಂದಿ ಮೃತಪಟ್ಟಿದ್ದು, 1289 ಜಾನುವಾರುಹಾಗೂ 1.83 ಲಕ್ಷ ಕೋಳಿ ಮೃತಪಟ್ಟಿವೆ ಎಂದರು.

ರಾಜ್ಯದಲ್ಲಿ ಮಳೆಯಿಂದ 45,465 ಮನೆಗಳು ಹಾನಿಯಾಗಿದುದ, ಇವುಗಳ ಪೈಕಿ 2438 ಸಂಪೂರ್ಣ ಹಾನಿ ಆಗಿವೆ. 16,476 ಮನೆಗಳು ತೀವ್ರವಾಗಿ ಹಾನಿಯಾಗಿದ್ದು, 28,051 ಭಾಗಶಃ ಹಾನಿ ಆಗಿವೆ ಎಂದು ಅಶೋಕ್ ವಿವರಿಸಿದರು.
ರಾಜ್ಯದಲ್ಲಿ ಮಳೆಯಿಂದಾಗಿ ಕೃಷಿ ಭೂಮಿಯಲ್ಲಿ ನೀರು ನಿಲುಗಡೆ, ನೀರು ಹರಿವು ಮುಂತಾದ ಸಮಸ್ಯೆಗಳಿಂದ 8,91,187 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. 27,647 ರಸ್ತೆ ಹಾಳಾಗಿವೆ. 2325 ಸೇತುವೆ, ಕಾಲುವೆ ಹಾಳಾಗಿದೆ. 8627 ಶಾಲಾ ಕೊಠಡಿಗಳು ಹಾನಿಯಾಗಿದ್ದು, 269 ಪ್ರಾಥಮಿಕ ಆರೋಗ್ಯ ಕೇಂದ್ರ, 5194 ಅಂಗನವಾಡಿ, 33,475 ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು, 4136 ಕಿ.ಮೀ. ಉದ್ದದ ವಿದ್ಯುತ್ ಸಂಪರ್ಕ ಹಾನಿ ಆಗಿವೆ ಎಂದು ಅವರು ವಿವರಿಸಿದರು.