ಮೇ 06 ರಂದು ಕೋವಿಡ್ ಪಾಸಿಟಿವ್ ಆಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಯವರು ಸಂಪೂರ್ಣ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವೈದ್ಯರು, ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಬಹಳ ಕಾಳಜಿಯಿಂದ ದೊರೆಸ್ವಾಮಿ ಅವರ ಶುಶ್ರೂಷೆ ಮಾಡಿಕೊಂಡರು ಎಂದು ದೊರೆಸ್ವಾಮಿಯವರ ಆಪ್ತರು ತಿಳಿಸಿದ್ದಾರೆ.
ಇಂದು ದೊರೆಸ್ವಾಮಿ ಸಂಪೂರ್ಣ ಗುಣಮುಖರಾಗಿದ್ದು, ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಕಾರಣ ಅವರನ್ನು ಡಿಸ್ಚಾರ್ಜ್ ಮಾಡಿಸಿ ಜಯನಗರದ ಅವರ ಮನೆಗೆ ಕರೆದೊಯ್ಯಲಾಗಿದೆ. 104 ವರ್ಷದ ಪ್ರಾಯದ ದೊರೆಸ್ವಾಮಿಯವರು ಕರೊನಾದ ವಿರುದ್ಧದ ಹೋರಾಟದಲ್ಲಿ ಗೆದ್ದು ಬಂದಿರುವುದು ಇತರರಿಗೂ ಮಾದರಿ.