“ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದಿನ ಒಂದು ವರ್ಷದಲ್ಲಿ ಕನಕಪುರದ 10 ಸಾವಿರ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಲಾಗುವುದು. ಕೇವಲ ಕನಕಪುರದಲ್ಲಿ ಮಾತ್ರವಲ್ಲದೇ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿಯೂ ನಿವೇಶನ ಹಂಚಿಕೆ ಮಾಡಲಾಗುವುದು” ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಅವರು ಹೇಳಿದರು.

ಕನಕಪುರದ ಕೋಡಿಹಳ್ಳಿ ಹೋಬಳಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಡಿ.ಕೆ. ಸುರೇಶ್(DK Suresh) ಅವರು ಮಾತನಾಡಿದರು.
“ನಾನು ಬಗರ್ ಹುಕುಂ ಸಮಿತಿ ಅಧ್ಯಕ್ಷನಾಗಿದ್ದು ನಿಮಗೆ ಮುಂದಿನ ದಿನಗಳಲ್ಲಿ ಈ ಭೂಮಿಯನ್ನು ವಿತರಣೆ ಮಾಡುವ ಕೆಲಸ ಮಾಡಲಾಗುವುದು. ಪೋಡಿಮುಕ್ತ ಗ್ರಾಮಗಳನ್ನಾಗಿ ಮಾಡುವುದು ನಮ್ಮ ಧ್ಯೇಯ. ಇದಕ್ಕಾಗಿ ಹೊಸ ʼಪಿʼ ನಂಬರ್ ಗಳನ್ನು ಮರುಸರ್ವೆ ನಡೆಸಿ ನೀಡಲಾಗುತ್ತಿದೆ. ಉಯ್ಯಂಬಳ್ಳಿ ಹೋಬಳಿಯಲ್ಲಿ ಹೊಸದಾಗಿ ಸರ್ವೆ ನಡೆಸಿ ದಾಖಲೆಗಳನ್ನು ಮರು ವಿತರಣೆ ಮಾಡಲಾಗುತ್ತಿದೆ. ಇಡೀ ಕ್ಷೇತ್ರದಾದ್ಯಂತ ಜನರಿಗೆ ಉಚಿತವಾಗಿ ಕಂದಾಯ ದಾಖಲೆಗಳನ್ನು ನೀಡಲು ನಾವು ವ್ಯವಸ್ಥೆ ಮಾಡಿದ್ದೇವೆ. ಪಹಣಿ ಖಾತೆಯನ್ನು ಒಟ್ಟಿಗೆ ನೀಡಲಾಗುವುದು” ಎಂದು ತಿಳಿಸಿದರು.

“ನಿಮ್ಮ ಆಸ್ತಿ ಸಂಖ್ಯೆಗಳಿಗೆ ನೀಡುವ ನೂತನ ʼಪಿʼ ನಂಬರ್ ನಿಂದ ಆಸ್ತಿ ಮೌಲ್ಯ ಹೆಚ್ಚಾಗಲಿದೆ. 25 ರಿಂದ 50 ಲಕ್ಷ ಮೌಲ್ಯ ಹೆಚ್ಚಾಲಿದೆ. ನೂತನ ನಂಬರ್ ಬಂದ ತಕ್ಷಣ ದಲ್ಲಾಳಿಗಳು ಭೂಮಿ ನೀಡಿ ಎಂದು ನಿಮ್ಮ ಬಳಿ ಬರುತ್ತಾರೆ. ಯಾವುದೇ ಕಾರಣಕ್ಕೂ ಜನ ತಮ್ಮ ಭೂಮಿ ಕಳೆದುಕೊಳ್ಳಬಾರದು. ಇದಕ್ಕೆ ಡಿ.ಕೆ.ಶಿವಕುಮಾರ್ ಭೂಮಿ ಮಾರಾಟ ಮಾಡಬೇಡಿ ಎಂದು ಕಳೆದ 25 ವರ್ಷಗಳಿಂದ ಹೇಳುತ್ತಾ ಬಂದಿದ್ದಾರೆ” ಎಂದು ತಿಳಿಸಿದರು.
“ಸಿಎಸ್ ಆರ್ ಮುಖಾಂತರ ಸುಮಾರು 20 ಶಾಲೆಗಳ ನಿರ್ಮಾಣ ಕಾರ್ಯನಡೆಯುತ್ತಿದೆ. ಇದರಿಂದ ಬಡವರ, ಕೃಷಿಕರ ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲಿದ್ದಾರೆ. ಕೋಡಿಹಳ್ಳಿ ಹೋಬಳಿಯ ಜನರು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದಲ್ಲಿ ನಿರಂತರವಾಗಿ ಶಕ್ತಿ ತುಂಬಿದ್ದಾರೆ. ಈ ಹೋಬಳಿಯ ರೈತರು, ಮಹಿಳೆಯರು, ಸಾರ್ವಜನಿಕರ ಕಷ್ಟ, ಅಹವಾಲು ಆಲಿಸಲು ನಾವಿಂದು ಬಂದಿದ್ದೇವೆ” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಜೊತೆಗೆ ಅಭಿವೃದ್ಧಿ

“ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆ ಘೋಷಿಸಿದರು. ದೇಶದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊಟ್ಟ ಮಾತಿನಂತೆ ಯಾವುದಾದರೂ ಸರ್ಕಾರ ನಡೆದುಕೊಂಡಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ. ವಿರೋಧ ಪಕ್ಷಗಳು ಈ ಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿದ್ದಾರೆ. ಜೊತೆಗೆ ಅಭಿವೃದ್ಧಿ ಆಗುತ್ತಿಲ್ಲ ಎಂದು ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ವಿವಿಧ ಇಲಾಖೆಗಳಿಂದ ಈ ತಾಲೂಕಿನ 60 ಯುವಕರಿಗೆ ಟ್ಯಾಕ್ಸಿ ವಿತರಣೆ ಮಾಡಲಾಗಿದೆ” ಎಂದರು.
“ಕೃಷ್ಣ ಅವರ ಸರ್ಕಾರದಲ್ಲಿ ಸ್ವಚ್ಛ ಗ್ರಾಮ ಪರಿಕಲ್ಪನೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಸಾತನೂರಿನಲ್ಲಿ ಮೊದಲ ಬಾರಿಗೆ ಗ್ರಾಮಗಳಿಗೆ ಕಾಂಕ್ರೀಟ್ ರಸ್ತೆ ಹಾಕಿದ್ದರು. ಕನಕಪುರದ ಗ್ರಾಮಗಳಿಗೆ ಉತ್ತಮವಾದ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿರುವ ಅತ್ಯುತ್ತಮ ಮೂಲಭೂತ ಸೌಕರ್ಯ ಬೇರೆ ಯಾವುದೇ ಕ್ಷೇತ್ರಗಳಲ್ಲಿ ಇಲ್ಲ” ಎಂದು ತಿಳಿಸಿದರು.
1500 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ

“ನೀವು ನಮ್ಮನ್ನು ಪ್ರೀತಿಯಿಂದ ಸಾಕಿ, ಬೆಳೆಸಿದ್ದೀರಿ. ನಿಮ್ಮ ಋಣ ತೀರಿಸಲು ಕನಕಪುರ ಕ್ಷೇತ್ರದಲ್ಲಿ 1500 ಕೋಟಿ ಮೊತ್ತದ ಕಾಮಗಾರಿಗಳು ನಡೆಯುತ್ತಿವೆ. ನಾವು ನಿಮಗೆ ಸದಾ ಸಿಗದಿದ್ದರೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಶಿವಕುಮಾರ್ ಅವರು ಇಂಧನ ಸಚಿವರಾದಾಗ ರೈತರಿಗೆ ಉಚಿತ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿದೆ. ಪರಿಣಾಮ ಕ್ಷೇತ್ರದ ಯಾವುದೇ ರೈತರು ಟಿಸಿ ಇಲ್ಲ, ಕೊಳವೆ ಬಾವಿ ಬತ್ತುಹೋಗಿದೆ ಎಂಬ ದೂರು ಹೇಳುತ್ತಿಲ್ಲ. ಕಾರಣ ಈ ಭಾಗದ ರೈತರಿಗೆ ಉತ್ತಮ ಗುಣಮಟ್ಟದ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದರು.
“ನಾವು ಮಾಡಿದ ಕೆಲಸದ ಪರಿಣಾಮದಿಂದ ಈ ಕ್ಷೇತ್ರದ ಜನರು ಯಾವುದೇ ತೊಂದರೆ ಇಲ್ಲದೇ ವಿದ್ಯುತ್ ಪಡೆಯುತ್ತಿದ್ದಾರೆ. ಇಡೀ ರಾಜ್ಯಕ್ಕೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪರಿಚಯ ಮಾಡಿದ್ದೇ ಕನಕಪುರ ಕ್ಷೇತ್ರ. ನಿಮಗೆ ಯಾವುದೇ ಮೂಲಸೌಕರ್ಯಗಳ ಕೊರತೆ ಇಲ್ಲದೇ ತಲುಪಿಸುವ ಕೆಲಸ ಮಾಡುತ್ತಿದ್ದೇವೆ” ಎಂದರು.

“ನಿಮ್ಮ ಆಸ್ತಿಗಳು ಡಿಜೀಟಲೀಕರಣವಾಗಬೇಕು ಎಂದು ಡಿಸಿಎಂ ಅವರು ಸೂಕ್ತ ಆದೇಶ ನೀಡಿದ್ದಾರೆ. ನಿಮ್ಮ ಆಸ್ತಿಗಳ ವಿವರಗಳು, ದಾಖಲೆಗಳು ಬೆರಳ ತುದಿಯಲ್ಲಿ ಸಿಗಲಿದೆ. ನಮಗೆ ಅರಿವಿಲ್ಲದೇ ನಾವು ಒಂದಷ್ಟು ತಪ್ಪುಗಳನ್ನು ಮಾಡುತ್ತೇವೆ. ಆ ತಪ್ಪುಗಳನ್ನು ತಿದ್ದಿಕೊಂಡು ನಾವು ನಿಮ್ಮ ಮನೆಮಕ್ಕಳಂತೆ ಕೆಲಸ ಮಾಡುತ್ತೇವೆ” ಎಂದರು.
ಮಕ್ಕಳ ಭವಿಷ್ಯಕ್ಕಾಗಿ ಜಿಲ್ಲೆ ಮರುನಾಮಕರಣ:
“ರಾಮನಗರ ಜಿಲ್ಲಾ ಕೇಂದ್ರದ ಹೆಸರನ್ನು ಬದಲಾವಣೆ ಮಾಡಿಲ್ಲ. ನಾವೆಲ್ಲರೂ ಬೆಂಗಳೂರಿಗೆ ಸೇರಿದವರು ಎನ್ನುವ ಉದ್ದೇಶಕ್ಕೆ ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದ್ದೇವೆ. ನಾವು ಮೊದಲಿನಿಂದಲೂ ಬೆಂಗಳೂರು ಜನ. ಇದಕ್ಕೆ ಯಾರೇ ವಿರೋಧ ಮಾಡಿದರು ಡಿ.ಕೆ.ಶಿವಕುಮಾರ್ ಅವರು ಸಾಧಿಸಿದರು. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಈ ಬದಲಾವಣೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯವರು ಎಂದರೆ ನಿಮ್ಮನ್ನು ನೋಡುವ ದೃಷ್ಟಿಕೋನವೇ ಬದಲಾಗಲಿದೆ” ಎಂದು ತಿಳಿಸಿದರು.

“ನಿಮ್ಮ ಭೂದಾಖಲೆಗಳನ್ನು ಈ ಮೊದಲು ಸರ್ಕಾರಿ ಕಚೇರಿಯಲ್ಲಿ ನೀಡಲು ಸತಾಯಿಸುತ್ತಿದ್ದರು. ಈಗ 250 ಗ್ರಾಮಗಳಲ್ಲಿ 175 ಗ್ರಾಮಗಳ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ 25 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗಲಿದೆ. ಇ- ಸ್ವತ್ತು ನಿಮಗೆ ನೀಡಲಾಗುತ್ತಿದೆ. ಪಕ್ಕದಲ್ಲಿನ ಮಾರಸಂದ್ರ ಗ್ರಾಮವನ್ನು ಉಪಗ್ರಾಮ ಎಂದು ಘೋಷಣೆ ಮಾಡಿ ಅಲ್ಲಿನ ಜನರಿಗೂ ದಾಖಲೆಗಳನ್ನು ನೀಡಲಾಗುತ್ತಿದೆ. ಇದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿರುವ ಕ್ರಾಂತಿ” ಎಂದು ಹೇಳಿದರು.