ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿನ ಅಬ್ಬರ ಜೋರಾಗುತ್ತಲೇ ಇದೆ. ಭಾನುವಾರ ಲಾಕ್ಡೌನ್ ನಡುವೆ ಸೋಂಕಿತರ ಸಂಖ್ಯೆ 5 ಸಾವಿರ ಗಡಿ ದಾಟಿ ನಿಂತಿದೆ. ಭಾನುವಾರ ಒಂದೇ ದಿನ 5,199 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಬೆಂಗಳೂರು ಒಂದರಲ್ಲೇ 1,950 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ರಾಜ್ಯಾದ್ಯಂತ 82 ಜನರು ಸಾವನ್ನಪ್ಪಿದ್ದಾರೆ. ಈ ನಡುವೆ ಬಿಜೆಪಿ ಸರ್ಕಾರ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿಯ ಭ್ರಷ್ಟಾಚಾರ ಬಡಿದಾಟ ಜೋರಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡೂ ಪಕ್ಷಗಳಿಗೂ ಸವಾಲೊಂದನ್ನು ಹಾಕಿದ್ದಾರೆ.
ಕರೋನಾ ಅವ್ಯವಹಾರ ವಿಷಯದಲ್ಲಿ ಹಗ್ಗಾ-ಜಗ್ಗಾಟ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನೆಗಳನ್ನು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 5 ಪ್ರಶ್ನೆ ಹಾಗೂ ಬಿಜೆಪಿ ಪಕ್ಷಕ್ಕೆ 5 ಪ್ರಶ್ನೆಗಳನ್ನು ಕುಮಾರಸ್ವಾಮಿ ಕೇಳಿದ್ದಾರೆ. ಕರೋನಾ ಸಂದರ್ಭದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಿರುವುದು ದುರ್ದೈವ ಸಂಗತಿ. ಸರ್ಕಾರದ ಮೇಲೆ ಕಾಂಗ್ರೆಸ್ ಭ್ರಷ್ಟಾಚಾರ ಆರೋಪ ಹೊರಿಸಿದೆ. ಆದರೆ ಈ ಹಗರಣದ ಬಗ್ಗೆ ಕಾಂಗ್ರೆಸ್ ಯಾವ ತನಿಖಾ ಸಂಸ್ಥೆಗೂ ದೂರು ನೀಡಿಲ್ಲ. ಬರೀ ಪ್ರಚಾರಕ್ಕಷ್ಟೇ ಸೀಮಿತವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇತ್ತ ಬಿಜೆಪಿ ಸರ್ಕಾರ ಕೂಡ ದೊಡ್ಡ ಮಟ್ಟದ ಆರೋಪ ಹೊತ್ತಿದೆ. ಆದರೆ ಇದರಿಂದ ಮುಕ್ತಿ ಪಡೆಯಲು ಯಾವ ಕ್ರಮಕ್ಕೂ ಮುಂದಾಗಿಲ್ಲ ಎಂದು ಎರಡೂ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಸರ್ಕಾರ ಯಾವುದೇ ತನಿಖೆ ನಡೆಸಲು ಮುಂದಾಗದೆ ಇರುವುದು ನೋಡಿದರೆ ಪರೋಕ್ಷವಾಗಿ ಹಗರಣ ನಡೆದಿರುವುದನ್ನು ಒಪ್ಪಿಕೊಳ್ತಿದೆ ಎನಿಸುತ್ತದೆ. ಜನರನ್ನು ರಕ್ಷಿಸಬೇಕಾದ ಎರಡು ಪಕ್ಷಗಳ ನಡೆ ಕ್ರೂರ ನಡವಳಿಕೆ ಆಗಿದೆ. ಇದಕ್ಕೆಲ್ಲಾ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಉತ್ತರ ಇದೆಯಾ..? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಪಕ್ಷಕ್ಕೆ ಕುಮಾರಸ್ವಾಮಿ ಪ್ರಶ್ನೆಗಳು..!
ಕೋವಿಡ್ 19 ಹಗರಣದ ಬಗ್ಗೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರ ಬಳಿ ಎಲ್ಲಾ ದಾಖಲೆ ಪತ್ರಗಳಿದ್ದರೂ ಈ ತನಕ ಯಾರ ವಿರುದ್ಧವೂ ಯಾಕೆ ಒಂದೇ ಒಂದು ದೂರು ದಾಖಲಿಸಿಲ್ಲ..?
ಹಗರಣದ ವಿರುದ್ಧ ಕಾನೂನು ರೀತಿಯ ದೂರು ದಾಖಲು ಮಾಡದೇ ನಿತ್ಯ ಪತ್ರಿಕಾಗೋಷ್ಠಿಯಲ್ಲಿ ಬಂದು ಏರು ಧ್ವನಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರ ನಡೆಯ ಹಿಂದೆ ಪ್ರಚಾರ ಪ್ರಿಯತೆ ಅಡಗಿದೆಯೋ..? ಅಥವಾ ಸಾರ್ವಜನಿಕ ಹಣ ಅಪವ್ಯವಾಗುತ್ತಿದೆ ಎಂಬ ಪ್ರಾಮಾಣಿಕ ಕಾಳಜಿ ಇದೆಯೋ..?
‘ಲೆಕ್ಕ ಕೊಡಿ’ ಎಂದು ಕಾಂಗ್ರೆಸ್ನ ಸಿಎಲ್ಪಿ ನಾಯಕರು ಕೇಳುತ್ತಾರೆ. ‘ಉತ್ತರ ಕೊಡಿ ಬಿಜೆಪಿ’ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಕೇಳುತ್ತಾರೆ. ನಿಮಗೆ ಉತ್ತರ, ಲೆಕ್ಕ ಕೊಟ್ಟರೆ ಸಾಕೆ..? ಹಗರಣವನ್ನು ಕಾನೂನಾತ್ಮಕ ಹೋರಾಟದ ದಿಕ್ಕಿನಲ್ಲಿ ಕೊಂಡೊಯ್ಯುವ ಯಾವುದಾದರೂ ನಿಶ್ಚಿತ, ನಿಖರ ಯೋಜನೆ ಇದೆಯೇ..?
ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಲೋಕಾಯುಕ್ತ ಸಂಸ್ಥೆಯ ರಕ್ತ, ಮಾಂಸವನ್ನು ಹೀರಿ, ತಿಂದ ಬಳಿಕ ಇದೇ ಕಾಂಗ್ರೆಸ್ ಸರ್ಕಾರ ಎಸಿಬಿ ರಚನೆ ಮಾಡಿತ್ತು. ಹಗರಣದ ಸಂಬಂಧ ಇದೇ ಸಂಸ್ಥೆಗೆ ಕಾಂಗ್ರೆಸ್ ದೂರು ನೀಡಬಹುದಿತ್ತಲ್ಲವೇ..? ಯಾಕೆ ಎಸಿಬಿ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲವೇ..?
ಕೋವಿಡ್ 19 ಅಕ್ರಮದ ಬಗ್ಗೆ ಆರೋಪ ಮಾಡಿದ ಸಮಯದಿಂದ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆ, ಟ್ವೀಟ್, ಟ್ವಿಟರ್ ಟ್ರೆಂಡ್, ಪತ್ರ ಚಳವಳಿಗೆ ಮಾತ್ರ ಸೀಮಿವಾಗಿರುವುದನ್ನು ನೋಡುತ್ತಿದ್ದರೆ ಇದು ಕೇವಲ ಪ್ರಚಾರಕ್ಕಾಗಿ, ಸುದ್ದಿಯಲ್ಲಿ ಇರಲ್ಲಿಕ್ಕಾಗಿ ಮಾಡುತ್ತಿರುವ ಪ್ರಹಸನ ಎನಿಸುತ್ತಿದೆ. ಇದಕ್ಕೆ ನಿಮ್ಮ ಉತ್ತರವೇನು..? ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಇನ್ನೂ ಜವಾಬ್ದಾರಿಯುತ ಪ್ರತಿಪಕ್ಷ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ಸಾರ್ವಜನಿಕರ ಹಣದ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ಮೊದಲು ಯಾವುದಾದರೂ ತನಿಖಾ ಸಂಸ್ಥೆಗೆ ಅಧಿಕೃತವಾಗಿ ದೂರು ದಾಖಲಿಸಲಿ. ಇದು ನನ್ನ ಸವಾಲು ಎಂದಿದ್ದಾರೆ. ಇನ್ನೂ ಆಡಳಿತ ಚುಕ್ಕಾಣಿ ಹಿಡಿದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಸಂಭ್ರಮದಲ್ಲಿ ಮುಳುಗಿರುವ ಬಿಜೆಪಿ ಪಕ್ಷಕ್ಕೂ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಮೊತ್ತದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದರೂ ಬಿಜೆಪಿ ಯಾಕೆ ತನಿಖೆಯ ಆಗ್ರಹಗಳಿಗೆ ಕಿವಿಗೊಡುತ್ತಿಲ್ಲ..? ತನಿಖೆಯ ಕಡೆಗೆ ಗಮನವನ್ನೇ ನೀಡಿದೇ ನಿಂದನೆಯನ್ನು ಯಾಕೆ ಹೊತ್ತು ತಿರುಗುತ್ತಿದೆ..?
ನಿರ್ದಿಷ್ಟ ಸಚಿವರ ಮೇಲೆ ಗಂಭೀರ ಆರೋಪಗಳು ಬಂದರೂ ಅವರಿಂದ ರಾಜೀನಾಮೆ ಪಡೆದಿಲ್ಲ ಏಕೆ..? ಇದೇನಾ ಜನರಿಗೆ ಬಿ.ಎಸ್ ಯಡಿಯೂರಪ್ಪನವರ ಉತ್ತರದಾಯಿತ್ವ..?
ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೆ ರಾಜಕೀಯದ ಶಕ್ತಿಗಳ ಒತ್ತಡ ಇರಬಹುದು. ಆದರೆ, ಅಧಿಕಾರಿಗಳ ವಿರುದ್ಧವಾದರೂ ಕ್ರಮ ಕೈಗೊಳ್ಳಬಹುದಿತ್ತು. ಆದರೆ, ಈವರೆಗೆ ಒಬ್ಬೇ ಒಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡ ವರದಿ ಇಲ್ಲ. ಅಧಿಕಾರಿಗಳನ್ನು ಅಲ್ಲಲ್ಲಿಯೇ ಬಿಟ್ಟು ಸಾಕ್ಷ್ಯ ನಾಶಕ್ಕೇನಾದರೂ ಪ್ರಯತ್ನಿಸುತ್ತಿದ್ದೀರಾ..?
ಕಾಂಗ್ರೆಸ್ ಮಾಡುತ್ತಿರುವ ಪತ್ರಿಕಾಗೋಷ್ಠಿಗಳಿಗೆ ಪ್ರತಿಯಾಗಿ ಸಚಿವರಿಂದ ಪತ್ರಿಕಾಗೋಷ್ಠಿಗಳನ್ನು ಮಾಡಿಸುತ್ತಿರುವ ಸರ್ಕಾರ, ಇಲ್ಲಿ ಪ್ರಚಾರ ಪಡೆಯಲೇನಾದರೂ ಪ್ರಯತ್ನಿಸುತ್ತಿದೆಯೇ..? ಅದೂ ಐವರು ಸಚಿವರು ಒಟ್ಟೊಟ್ಟಿಗೆ ಬಂದು ಮಾಧ್ಯಮಗಳ ಮುಂದೆ ನಿಲ್ಲುವುದನ್ನು ನೋಡಿದರೆ ಮಂತ್ರಿಮಂಡಳದ ಸಹೋದ್ಯೋಗಿಗಳಲ್ಲಿ ಪ್ರಚಾರದ ದಾಹ ತೀವ್ರವಾಗಿರುವಂತೆ ಕಾಣುತ್ತಿದೆ..?
ಹಗರಣದ ಬಗ್ಗೆ ಈವರೆಗೆ ಪ್ರತಿ ಹೇಳಿಕೆಗಳನ್ನೇ ನೀಡುತ್ತಿರುವ ರಾಜ್ಯ ಸರ್ಕಾರ ತನಿಖೆಗೆ ಹಿಂದೇಟು ಹಾಕುತ್ತಿರುವುದು ನೋಡಿದರೆ, ಹಣ ಕದಿಯಲಾಗಿದೆ ಎಂದು ಅನಿಸದೇ..? ಆಪರೇಷನ್ ಕಮಲಕ್ಕೆ ಮಾಡಿದ್ದ ಸಾಲ ತೀರಿಸಲು ಈ ಹಗರಣ ಮಾಡಿದ್ದೀರಾ..? ಎಂದು ಕಮಲ ಪಾಳಯಕ್ಕೆ ಸವಾಲು ಹಾಕಿದ್ದಾರೆ.
ದೇಶದಲ್ಲಿ ಅತಿ ಸ್ವಚ್ಛ ಮತ್ತು ಭ್ರಷ್ಟಾಚಾರ ರಹಿತ, ದೇಶವನ್ನು ವಿಶ್ವಗುರು ಪಟ್ಟಕ್ಕೇರಿಸಲು ಹೊರಟಿರುವ ಬಿಜೆಪಿ ಆರೋಪದಿಂದ ಮುಕ್ತಿ ಪಡೆಯಲು ಸೂಕ್ತ ನಡೆ ಅನುಸರಿಸಬೇಕು ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್,ಡಿ ಕುಮಾರಸ್ವಾಮಿ ಎರಡು ಪಕ್ಷದ ನಾಯಕರಿಗೆ ಸವಾಲು ಹಾಕಿದ್ದಾರೆ. ಇಷ್ಟು ದಿನಗಳ ಕಾಲ ಕೇವಲ ಕಾಂಗ್ರೆಸ್ ಬಿಜೆಪಿ ಮಾತ್ರವೇ ಮಾತಿನ ಚಕಮಕಿ ನಡೆಸುತ್ತಿದ್ದವು. ಇದೀಗ ಭ್ರಷ್ಟಾಚಾರ ಆರೋಪದ ಅಖಾಡಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಪದಾರ್ಪಣೆ ಮಾಡಿದ್ದು ಮತ್ತಷ್ಟು ರೋಚಕವಾಗುವ ಸಾಧ್ಯತೆ ಇದೆ.
ಕಾಂಗ್ರೆಸ್-ಬಿಜೆಪಿ ನಡುವೆ ಜೆಡಿಎಸ್
ಕರೋನಾ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತಿರುವ ಬಿಜೆಪಿ ಕೋಟಿ ಕೋಟಿ ಲೂಟಿ ಮಾಡಿದೆ ಎಂದು ಇಡೀ ರಾಜ್ಯದ ಎದುರು ಕಾಂಗ್ರೆಸ್ ಬಹಿರಂಗವಾಗಿ ಆರೋಪ ಮಾಡಿದೆ. ಈ ಆರೋಪದಿಂದ ಮುಕ್ತವಾಗಿ ಹೊರ ಬರಬೇಕಿರುವ ಜವಾಬ್ದಾರಿ ಆಡಳಿತ ಪಕ್ಷದ ಮೇಲೆ ಇದೆ. ಆದರೆ ಕಾಂಗ್ರೆಸ್ ಕೇವಲ ಬಹಿರಂಗವಾಗಿ ಆರೋಪ ಮಾಡುತ್ತಿದೆಯೇ ಹೊರತು ದೂರು ದಾಖಲು ಮಾಡಲು ಮುಂದಾಗಿಲ್ಲ. ಇದನ್ನು ನಿಮ್ಮ ಪ್ರತಿಧ್ವನಿ ಕೂಡ ಪ್ರಶ್ನೆ ಮಾಡಿತ್ತು. ಅದನ್ನೇ ಕುಮಾರಸ್ವಾಮಿ ಇದೀಗ ಕೇಳಿದ್ದಾರೆ. ಇನ್ನೂ ಜವಾವ್ದಾರಿಯುತ ಸರ್ಕಾರ ತನ್ನ ಮೇಲೆ ಬಂದಿರುವ ಕಳಂಕವನ್ನು ತೊಲಗಿಸಲು ಇರುವ ಏಕೈಕ ಮಾರ್ಗ ತನಿಖೆ. ತನಿಖೆ ಮಾಡುವುದಿಲ್ಲ ಎಂದು ರಚ್ಚೆ ಹಿಡಿದು ರಾಡಿಯಾದ ಬಳಿಕ ತನಿಖೆ ಮಾಡಿಸುವ ಬದಲು ಮೊದಲೇ ತನಿಖೆ ಮಾಡಿಸಿ, ಸಂಬಂಧಪಟ್ಟವರ ತಲೆದಂಡ ಕೊಟ್ಟು ನಾನು ಕ್ಲೀನ್ ಎಂದು ಯಡಿಯೂರಪ್ಪ ಸಾಬೀತು ಮಾಡಿಕೊಳ್ಳುವ ಅವಶ್ಯಕತೆ, ಅನಿವಾರ್ಯತೆ ಎರಡೂ ಇದೆ. ಇದೀಗ ಕುಮಾರಸ್ವಾಮಿ ಪ್ರಶ್ನೆಗಳಿಗೆ ಉತ್ತರ ಯಾರು ಕೊಡ್ತಾರೆ..? ಏನೆಂದು ಕೊಡ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ.