ಕಾರ್ಪೊರೆಟ್ ತೆರಿಗೆಯನ್ನು ತಗ್ಗಿಸಿದರೆ ಹಿಂಜರಿತದತ್ತ ಸಾಗಿರುವ ಆರ್ಥಿಕತೆಗೆ ಚೇತರಿಕೆ ಬರುತ್ತದೆಯೇ? ಹೌದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಂಬಿದ್ದಾರೆ ಮತ್ತು ‘ಫಲಾನುಭವಿ’ ಕಾರ್ಪೊರೆಟ್ ದಿಗ್ಗಜಗಳು ಅದಕ್ಕೆ ಶ್ಲಾಘನೆಭರಿತ ಸಮ್ಮತಿಯ ಮುದ್ರೆಯನ್ನು ಒತ್ತಿದ್ದಾರೆ. ಅಲ್ಲಿಗೆ ಇನ್ನು ಮುಂದೆ ವಾರ್ಷಿಕ 1.45 ಲಕ್ಷ ಕೋಟಿ ರುಪಾಯಿ ಕೇಂದ್ರದ ಬೊಕ್ಕಸಕ್ಕೆ ಖೋತಾ ಆಗಲಿದೆ.
ತೆರಿಗೆ ರೂಪದಲ್ಲಿ ಬರುವ ಆದಾಯವನ್ನು ಕಾರ್ಪೊರೆಟ್ ಸಂಸ್ಥೆಗಳು ಏನು ಮಾಡುತ್ತವೆ? ಅದನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸುತ್ತವಾ? ಕಾರ್ಪೊರೆಟ್ ಸಂಸ್ಥೆಗಳು ತೆರಿಗೆ ಕಡಿತದಿಂದ ಬರುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕು ಎಂಬ ನಿರೀಕ್ಷೆ ಕೇಂದ್ರ ಸರ್ಕಾರದ್ದಾಗಿದೆ. ಆ ಬಗ್ಗೆ ವಿತ್ತ ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಕೂಡಾ. ಈ ಸೂಚನೆಯನ್ನು ಸಾರ್ವಜನಿಕ ವಲಯದ ಜಂಟಿ ಉದ್ಯಮಗಳು ಭಾಗಷಃ ಪಾಲಿಸಬಹುದು. ಆದರೆ, ಕಾರ್ಪೊರೆಟ್ ತೆರಿಗೆ ಕಡಿತದ ಅತಿ ಹೆಚ್ಚು ಲಾಭ ಪಡೆಯುತ್ತಿರುವ ಖಾಸಗಿ ವಲಯದ ಕಾರ್ಪೊರೆಟ್ ಸಂಸ್ಥೆಗಳು ವಿತ್ತ ಸಚಿವರ ಮೌಖಿಕ ಸೂಚನೆಯನ್ನು ಪಾಲಿಸುವ ಬಗ್ಗೆ ಚಕಾರ ಎತ್ತಿಲ್ಲ.
ಮಾರುಕಟ್ಟೆ ಆರ್ಥಿಕ ವಿಶ್ಲೇಷಕರ ಪ್ರಕಾರ, ತೆರಿಗೆ ಕಡಿತದಿಂದ ಕಾರ್ಪೊರೆಟ್ ಕಂಪನಿಗಳಿಗೆ ಭಾರಿ ಪ್ರಮಾಣದಲ್ಲಿ ಲಾಭವಾಗಲಿದೆ. ಆಯಾ ಕಂಪನಿಗಳ ಮಾಲೀಕರು ಮತ್ತು ಷೇರುದಾರರಿಗೆ ಈ ಲಾಭ ಪೂರ್ಣಪ್ರಮಾಣದಲ್ಲಿ ದಕ್ಕಲಿದೆ. ಕೆಲವು ಕಂಪನಿಗಳು ತಮ್ಮ ಕಾರ್ಯಾಚರಣೆ ವಿಸ್ತರಣೆಗೆ ತೆರಿಗೆ ಕಡಿತದಿಂದ ಕಂಪನಿಗೆ ಬರುವ ಆದಾಯವನ್ನು ಬಳಸುವುದಾಗಿ ಹೇಳಿಕೊಂಡಿವೆ. ಬಹುತೇಕ ಕಂಪನಿಗಳು ತಮ್ಮ ಸಾಲದ ಹೊರೆ ತಗ್ಗಿಸಲು ಬಳಸಲಿವೆ. ಯಾಕೆಂದರೆ ಶೇ.90ಕ್ಕಿಂತಲೂ ಹೆಚ್ಚು ಕಂಪನಿಗಳ ಮೇಲೆ ಬಹುದೊಡ್ಡ ಸಾಲದ ಹೊರೆಯೇ ಇದೆ. ದೇಶದ ಅತಿ ಗರಿಷ್ಠ ಮಾರುಕಟ್ಟೆ ಬಂಡವಾಳ ಮೌಲ್ಯಹೊಂದಿರುವ (ಸೆಪ್ಟಂಬರ್ 24ರಂದು ಇದ್ದಂತೆ 8,104,88.60 ಕೋಟಿ ರುಪಾಯಿಗಳು) ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಮೇಲಿರುವ ಸಾಲದ ಮೊತ್ತವೇ 1.54 ಲಕ್ಷ ಕೋಟಿ ರುಪಾಯಿಗಳಷ್ಟಿದೆ.
ಇತ್ತೀಚೆಗೆ ವೊಡಾಫೋನ್ ಜತೆ ವಿಲೀನಗೊಂಡಿರುವ ಐಡಿಯಾ ಸೆಲ್ಯುಲಾರ್ ಕಂಪನಿ ಮೇಲಿರುವ ಸಾಲದ ಹೊರೆ ಒಂದು ಲಕ್ಷ ಕೋಟಿ ರುಪಾಯಿ ದಾಟಿದೆ. ಹೀಗಾಗಿ ಬರುವ ತೆರಿಗೆಗಳನ್ನು ಸಾಲದ ಹೊರೆ ತಗ್ಗಿಸಲು ಬಳಸುವುದೇ ಹೆಚ್ಚು. ಇದುವರೆಗೆ ಯಾವ ಕಾರ್ಪೊರೆಟ್ ಸಂಸ್ಥೆಗಳು ಗ್ರಾಹಕರಿಗೆ ವರ್ಗಾಹಿಸುವ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಕಾರ್ಪೊರೆಟ್ ತೆರಿಗೆ ತಗ್ಗಿಸಿದ್ದರ ಲಾಭ ಗ್ರಾಹಕರಿಗೆ ತಲುಪದ ಹೊರತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂದುಕೊಂಡಿರುವಂತೆ ಹಿಂಜರಿತದತ್ತ ಸಾಗಿರುವ ಆರ್ಥಿಕತೆಗೆ ಚೇತರಿಕೆ ದಕ್ಕುವುದಿಲ್ಲ.
ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಕಂಪನಿಗಳು ತಗ್ಗಿಸುವ ದರಗಳು ದಾಸ್ತಾನು ವಿಲೇವಾರಿ ಮಾಡಲೇ ಹೊರತು ಗ್ರಾಹಕರಿಗೆ ನೆರವಾಗಲಿ ಎಂಬ ಕಾರಣಕ್ಕಾಗಿ ಅಲ್ಲ. ಹೀಗಾಗಿ ಈಗ ಘೋಷಣೆಯಾಗುತ್ತಿರುವ ಡಿಸ್ಕೌಂಟುಗಳು ಕಾರ್ಪೊರೆಟ್ ತೆರಿಗೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಪ್ರಕ್ರಿಯೆ ಅಲ್ಲ. ಅದು ಕೊನೆ ತ್ರೈಮಾಸಿಕದಲ್ಲಿ ದಾಸ್ತಾನು ವಿಲೇವಾರಿಗಾಗಿ ಮಾಡುವ ಪ್ರತಿ ವರ್ಷದ ಸರ್ಕಸ್ಸು.
ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಆರ್ಥಿಕ ನೀತಿ ಕುರಿತಂತೆ ದ್ವಂದ್ವ ನಿಲವು ಮುಂದುವರಿದೇ ಇದೆ. ಕಾರ್ಪೊರೆಟ್ ದಿಗ್ಗಜಗಳಾರೂ ತೆರಿಗೆ ಕಡಿತ ಮಾಡುವಂತೆ ಕೋರಿರಲಿಲ್ಲ. ಆರ್ಥಿಕ ಅಭಿವೃದ್ಧಿಯ ಪ್ರತಿಬಿಂಬದಂತೆ ಇರುವ ಗ್ರಾಹಕರು ಖರೀದಿಸುವ ವಿವಿಧ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿ ಎಸ್ ಟಿ) ತಗ್ಗಿಸುವಂತೆ ಮನವಿ ಮಾಡಿದ್ದರು.
ಮುಖ್ಯವಾಗಿ ಆಟೋಮೊಬೈಲ್ ಉದ್ಯಮದಿಂದ ಬಲವಾದ ಒತ್ತಾಯಪೂರ್ವಕ ಮನವಿ ಬಂದಿತ್ತು. ಶೇ. 28ರಷ್ಟಿರುವ ಜಿ ಎಸ್ ಟಿ ಯನ್ನು ಶೇ. 18ಕ್ಕೆ ತಗ್ಗಿಸಿ ಎಂಬುದು ಬೇಡಿಕೆಯಾಗಿತ್ತು. ಕೊಳ್ಳುವವರಿಲ್ಲದೇ ಇಡೀ ವಾಹನ ಉದ್ಯಮವೇ ಸತತವಾಗಿ ಕುಸಿಯುತ್ತಿರುವ ಹೊತ್ತಿನಲ್ಲಿ ವಾಹನಗಳ ಮೇಲಿನ ದರ ಕಡಿತ ಮಾಡಲು ಜಿ ಎಸ್ ಟಿ ತೆರಿಗೆ ತಗ್ಗಿಸಬೇಕೆಂಬ ಒಕ್ಕೊರಳ ಮನವಿ ಬಂದಿತ್ತು.
ಕೇಂದ್ರ ಸರ್ಕಾರದ ಆರ್ಥಿಕ ಸಚಿವಾಲಯ ಮತ್ತು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಡುವೆ ಸಮನ್ವಯತೆಯೇ ಇಲ್ಲ ಎಂಬುದಕ್ಕೆ ಜಿ ಎಸ್ ಟಿ ಕಡಿತ ಮಾಡುವ ಬೇಡಿಕೆ ಇಟ್ಟಾಗ, ಅದನ್ನು ಮಾಡದೇ ಮತ್ತಷ್ಟು ಹೊರೆ ಬೀಳುವ ಕಾರ್ಪೊರೆಟ್ ತೆರಿಗೆ ಕಡಿತ ಮಾಡಿದ್ದು ಒಂದು ಸ್ಪಷ್ಟ ನಿದರ್ಶನ. ಅಷ್ಟಕ್ಕೂ ಜಿ ಎಸ್ ಟಿ ಮಂಡಳಿಗೆ ವಿತ್ತ ಸಚಿವರೇ ಅಧ್ಯಕ್ಷರಾಗಿದ್ದಾರೆ.
ದೇಶದ ಮುಂದಿರುವ ವಾಸ್ತವಿಕ ಸಮಸ್ಯೆ ಎಂದರೆ ನಿರುದ್ಯೋಗ ಹೆಚ್ಚಾಗಿ, ಅರೆ ಉದ್ಯೋಗಗಳು ನಶಿಸುತ್ತಿರುವುದು. ಅಸಂಘಟಿತ ವಲಯದಲ್ಲಿ ಉದ್ಯೋಗ ನಷ್ಟದ ಪ್ರಮಾಣ ತೀವ್ರವಾಗಿದೆ. ಸಂಘಟಿತ ವಲಯದಲ್ಲಿ ಹೆಚ್ಚಿನ ಬದಲಾವಣೆ ಏನೂ ಆದಂತಿಲ್ಲ. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಅಸಂಘಟಿತ ವಲಯದ ಕೊಡುಗೆ ಬಹಳ ದೊಡ್ಡದು. ಅಪನಗದೀಕರಣದ ನಂತರ ಉದ್ಭವಿಸಿದ ಸಂಕಷ್ಟದಿಂದ ಅಸಂಘಟಿತ ವಲಯ ಪಾರಾಗಿಯೇ ಇಲ್ಲ. ಅದನ್ನು ಪಾರುಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಂತರದ ಮೂರು ಬಜೆಟ್ ಗಳಲ್ಲಿ ಏನೂ ಕಾರ್ಯಸಾಧ್ಯ ಕ್ರಮಗಳನ್ನು ಪ್ರಕಟಿಸಲೇ ಇಲ್ಲ.
ಇಡೀ ದೇಶದ ಜನರ ಖರೀದಿ ಶಕ್ತಿ ಕುಂದುತ್ತಿದೆ. ಜನರ ಖರೀದಿ ಶಕ್ತಿ ಉದ್ದೀಪಿಸುವ ಯಾವ ಕ್ರಮವನ್ನೂ ಪ್ರಕಟಿಸಿದೇ ಕಾರ್ಪೊರೆಟ್ ತೆರಿಗೆಯಂತಹ ನೇರವಾಗಿ ಜನರಿಗೆ ಲಾಭ ತಲುಪದ ಎಷ್ಟೇ ಕ್ರಮಗಳನ್ನು ಪ್ರಕಟಿಸಿದರೂ ಆರ್ಥಿಕತೆಗೆ ಚೇತರಿಕೆ ಬರುವುದಿಲ್ಲ. ಕಾರ್ಪೊರೆಟ್ ತೆರಿಗೆ ತಗ್ಗಿಸುವ ಬದಲಿಗೆ ವಾಹನಗಳ ಮೇಲಿರುವ, ಗೃಹೋಪಯೋಗಿ ಸರಕುಗಳ ಮೇಲಿರುವ ಶೇ. 28ರ ತೆರಿಗೆಯನ್ನು ಶೇ. 18-12ರ ಹಂತಕ್ಕೆ ತಗ್ಗಿಸಿದ್ದರೆ, ಅದರಿಂದ ನೇರವಾಗಿ ಗ್ರಾಹಕರಿಗೆ ಲಾಭವಾಗುತ್ತಿತ್ತು. ಮತ್ತು ಜನರು ಖರೀದಿಗೆ ಮುಂದಾಗುತ್ತಿದ್ದರು. ಅದು ಹಲವು ತ್ರೈಮಾಸಿಕಗಳಿಂದ ಹಾಗೆಯೇ ಉಳಿದಿರುವ ದಾಸ್ತಾನುಗಳ ವಿಲೇವಾರಿಗೂ ನೆರವಾಗುತ್ತಿತ್ತು, ಬರುವ ತ್ರೈಮಾಸಿಕಗಳಲ್ಲಿ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತಿತ್ತು. ಇದು ಅತ್ಯಂತ ಸರಳ ಮತ್ತು ಸಲೀಸಾದ ಅರ್ಥಶಾಸ್ತ್ರ. ಇದನ್ನು ನರೇಂದ್ರಮೋದಿ ಸರ್ಕಾರಕ್ಕಾಗಲೀ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗಾಗಲಿ ಬಿಡಿಸಿ ಹೇಳಿಕೊಡಲು ಮನಮೋಹನ್ ಸಿಂಗ್ ಅಥವಾ ರಘುರಾಮ್ ರಾಜನ್ ಅವರ ಅಗತ್ಯವೂ ಇಲ್ಲ. ದುರಾದೃಷ್ಟವಶಾತ್ ಈ ಸರಳ ಅರ್ಥಶಾಸ್ತ್ರ ಮೋದಿ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ.
ಹೌಡಿ ಮಹಿಮೆಯೇ?
ಅಮೆರಿಕದಲ್ಲಿ ನಡೆದ ‘ಹೌಡಿ ಮೋದಿ’ಯಲ್ಲಿ ಪಾಲ್ಗೊಳ್ಳುವ ಮುನ್ನ ತಮ್ಮ ಸರ್ಕಾರದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ದೊಡ್ಡದಾಗಿ ಮತ್ತು ಸಕಾರಾತ್ಮಕವಾಗಿ ಸುದ್ದಿಯಾಗಬೇಕೆಂಬ ಉಮೇದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೋ? ಅಥವಾ ಮೋದಿ ಕಾರ್ಯಕ್ರಮಗಳ ನಿರ್ವಹಿಸುವ ಪಿಆರ್ ಏಜೆನ್ಸಿಗಳೇ ಈ ಐಡಿಯಾ ಕೊಟ್ಟವೇ? ಅದೇನೇ ಇರಲಿ, ಹೌಡಿಗೂ ಎರಡು ದಿನ ಮುಂಚಿತವಾಗಿಯೇ ನಿರ್ಮಲಾ ಸೀತಾರಾಮನ್ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಜಗತ್ತಿನ ಅದರಲ್ಲೂ ಮುಖ್ಯವಾಗಿ ಅಮೆರಿಕದ ಮಾಧ್ಯಮಗಳು ದೊಡ್ಡದಾಗಿ ಚರ್ಚಿಸುವಂತೆ ಕಾರ್ಪೊರೆಟ್ ತೆರಿಗೆ ಕಡಿತ ಮಾಡಿರುವುದನ್ನು ಪ್ರಕಟಿಸಿ, ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸರಿಸಮನಾಗಿ ನಮ್ಮ ತೆರಿಗೆ ಇದೆ ಎಂಬುದನ್ನು ಪ್ರತಿಬಿಂಬಿಸಲು ಯತ್ನಿಸಿದ್ದಾರೆ. ಹಾಗೆಯೇ ಹೌಡಿ ಮೋದಿ ಸಮಾವೇಶವೂ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಹೌಡಿ ಮೋದಿ ಸಮಾವೇಶಕ್ಕೂ ಕಾರ್ಪೊರೆಟ್ ತೆರಿಗೆ ಕಡಿತಕ್ಕೂ ಸಂಬಂಧ ಇಲ್ಲ ಎಂದು ಹೇಳಲಾಗದು.
ಆದರೆ, ದೇಶದಲ್ಲಿ ಇದುವರೆಗೂ ನಡೆಯುತ್ತಿದ್ದ ಆರ್ಥಿಕ ಹಿನ್ನಡೆ ಕುರಿತಾತ ಚರ್ಚೆಗಳನ್ನು ಯಶಸ್ವಿಯಾಗಿ ಬದಿಗೆ ಸರಿಸುವಲ್ಲಿ ನಿರ್ಮಲಾ ಸೀತಾರಾಮನ್ ಅವರ ಕಾರ್ಪೊರೆಟ್ ಉಡುಗೊರೆಗೆ ಸಾಧ್ಯವಾಗಿದೆ. ಈಗ ಇಡೀ ಕಾರ್ಪೊರೆಟ್ ವಲಯವೇ ಆರ್ಥಿಕತೆ ಚೇತರಿಕೆ ಬಂತೆಂದು ಚೀತ್ಕರಿಸುತ್ತಿದ್ದಾರೆ. ನರೇಂದ್ರ ಮೋದಿ ಹೌಡಿಯಲ್ಲಿ 56 ಇಂಚಿನ ಎದೆಯುಬ್ಬಿಸಿ ಬೀಗಿದ್ದಾರೆ.
ಆದರೆ, ದೇಶದೊಳಗೆ ಜನಸಾಮಾನ್ಯರ ನಿತ್ಯದ ಸಂಕಷ್ಟಗಳು ಮಾತ್ರ ಹಾಗೆ ಇವೆ. ಕಾರು, ಬೈಕು, ಎಸಿ, ವಾಷಿಂಗ್ ಮಿಷನ್, ಟೀವಿ, ಷೋರೂಮುಗಳು ಖಾಲಿ ಹೊಡೆಯುತ್ತಿವೆ. ಪೂರ್ಣಗೊಂಡ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ದೀಪಬೆಳಗದೇ ಪ್ರೇತ ಕಳೆ ಮನೆಮಾಡಿದೆ. ಇವೆಲ್ಲದರ ನಡುವೆಯೂ ಮೋದಿ ಅವರ ಜನಪ್ರಿಯತೆಗೆ ಸವಾಲು ಒಡ್ಡುವಂತೆ ಪೆಟ್ರೋಲ್ ಮತ್ತು ಡಿಸೇಲ್ ದರ ಗಗನಕ್ಕೆ ಚಿಮ್ಮುತ್ತಲೇ ಇದೆ!