ಋಣಾತ್ಮಕ (negative) ಅಂಶಗಳನ್ನು ರಾಜಕೀಯದ ಮೂಲಕ ಧನಾತ್ಮಕವಾಗಿ (positive) ಪರಿವರ್ತಿಸಿಕೊಂಡು ಹೇಗೆ ಜನಪ್ರಿಯತೆ ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಯದಿಂದ (ಇಡಿ) ಬಂಧನಕ್ಕೊಳಗಾಗಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ಪ್ರಕರಣ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆಂದು ದೆಹಲಿಗೆ ಕರೆಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇಡಿ) ಬಳಿಕ ಅವರನ್ನು ಬಂಧಿಸಿ ತಿಹಾರ್ ಜೈಲು ಸೇರುವಂತೆ ಮಾಡಿತು. ಬಳಿಕ ಜಾಮೀನಿನ ಮೇಲೆ ಹೊರಬಂದ ಶಿವಕುಮಾರ್ ಬೆಂಗಳೂರಿಗೆ ಹಿಂತಿರುಗುವಾಗ ಸಿಕ್ಕಿದ ವೀರೋಚಿತ ಸ್ವಾಗತ ಅವರನ್ನು ಹೀರೋ ಮಾಡಿತು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದರೂ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬದಲಾಗಿಲ್ಲ. ಅವರ ಖದರ್ ಇನ್ನಷ್ಟು ಹೆಚ್ಚಾಗಿದೆ. ಈ ಖದರೇ ಆರೋಪ ಎದುರಿಸುತ್ತಿರುವ ಅವರನ್ನು ಹೀರೋ ಮಾಡಿದೆ. ನಾನು ಸುಮ್ಮನೆ ಕುಳಿತುಕೊಳ್ಳುವವನಲ್ಲ ಎಂಬ ಅವರ ಮಾತೇ ಮುಂದಿನ ದಿನಗಳಲ್ಲಿ ಇನ್ನಷ್ಟು ಆಕ್ರಮಣಕಾರಿಯಾಗಿ ಮುಂದುವರಿಯುವ ಸೂಚನೆ ನೀಡಿದೆ. ಶಿವಕುಮಾರ್ ಜೈಲಿಗೆ ಹೋಗಲು ಯಾವ ವೇಗ ಕಾರಣವಾಯಿತೋ ಜೈಲಿನಿಂದ ಹೊರಬಂದ ಮೇಲೂ ಅದೇ ವೇಗವನ್ನು ಅವರು ಕಾಯ್ದುಕೊಂಡಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ಮತ್ತು ಶನಿವಾರ ಬೆಂಗಳೂರಿನಲ್ಲಿ ಅವರಾಡಿದ ಮಾತುಗಳು ತಮ್ಮನ್ನು ಲಘುವಾಗಿ ಪರಿಗಣಿಸುವಂತಿಲ್ಲ ಎಂಬ ಎಚ್ಚರಿಕೆಯನ್ನು ರಾಜಕೀಯ ವಿರೋಧಿಗಳಿಗೆ ಮಾತ್ರವಲ್ಲ, ಪಕ್ಷದಲ್ಲೇ ಅವರ ಬಗ್ಗೆ ಅತೃಪ್ತಿ ಹೊಂದಿರುವವರಿಗೆ ನೀಡಿದೆ. ಕಾಂಗ್ರೆಸಿಗರಿಗೆ ಹೊಸ ಹುಮ್ಮಸ್ಸು ನೀಡಿದೆ.
ಜಾಮೀನು ಪಡೆದು ಬುಧವಾರ ರಾತ್ರಿ ತಿಹಾರ್ ಜೈಲಿನಿಂದ ಜೈಲಿನಿಂದ ಹೊರಬಂದ ಶಿವಕುಮಾರ್ ಗುರುವಾರ ಮೊದಲು ಮಾಡಿದ ಕೆಲಸ ಎಐಸಿಸಿ ಕಚೇರಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಿದ್ದು. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತವೇ ದೊರೆಯಿತು. ಎಐಸಿಸಿ ಕರ್ನಾಟಕ ಉಸ್ತುವಾರಿಯೂ ಆಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ತಬ್ಬಿಕೊಂಡು ಸ್ವಾಗತ ಕೋರಿದರು. ಇದಾದ ಬಳಿಕ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿದರು. ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಭೇಟಿ ಮಾಡಿದರು. ಇದಾದ ಬಳಿಕವೇ ಅವರು ಬೆಂಗಳೂರಿಗೆ ಹಿಂತಿರುಗಿದ್ದು.
ಬೆಂಗಳೂರಿಗೆ ಹಿಂತಿರುಗಿದಾಗ ಅವರನ್ನು ಸ್ವಾಗತಿಸಲು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಮಾನ ನಿಲ್ದಾಣಕ್ಕೇ ಹೋಗಿದ್ದರು. ಕಾಂಗ್ರೆಸ್ ನ ನೂರಾರು ಮುಖಂಡರು, ಕಾರ್ಯಕರ್ತರು ಕೂಡ ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ ಅವರನ್ನು ಬರಮಾಡಿಕೊಂಡರು. ಶಿವಕುಮಾರ್ ಅವರಿಗೆ ಸಿಕ್ಕಿದ ಈ ವೀರೋಚಿತ ಸ್ವಾಗತ ಹೇಗೆ ಅವರನ್ನು ಹೀರೋ ಎಂಬಂತೆ ಬಿಂಬಿಸಿತ್ತೋ, ಅವರ ನಡವಳಿಕೆ ಮತ್ತು ಗತ್ತು ತಾವು ಹೀರೋ ಎಂಬಂತೆಯೇ ಇತ್ತು. ಶಿವಕುಮಾರ್ ಅವರ ಈ ನಡವಳಿಕೆ ಪ್ರತಿಪಕ್ಷದವರಿಗೆ ಮಾತ್ರವಲ್ಲ, ಕಾಂಗ್ರೆಸ್ಸಿನಲ್ಲಿರುವ ಅವರ ವಿರೋಧಿಗಳಿಗೂ ಒಳಗೇ ಚಳಿ ಹುಟ್ಟಿಸಿರಬಹುದು.
ಬೆಂಗಳೂರಿಗೆ ಬರುವ ಮುನ್ನವೇ ಪೂರ್ವಸಿದ್ಧತೆ
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಗರಡಿಯಲ್ಲಿ ಪಳಗಿದ ಶಿವಕುಮಾರ್ ಅದೆಷ್ಟು ವೇಗವಾಗಿ ರಾಜಕೀಯದಲ್ಲಿ ಬೆಳೆದರೆಂದರೆ ಅವರ ಸಮಕಾಲೀನರು ನೋಡುತ್ತಾ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರೆನಿಸಿಕೊಂಡಿದ್ದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಕುಟುಂಬದ ಜತೆ ಜಿದ್ದಿಗೆ ಬಿದ್ದು ಗೆದ್ದು ಬಂದರು. ರಾಜಕೀಯದಲ್ಲಿ ಅದೆಷ್ಟು ವೇಗವಾಗಿ ಮೇಲೆ ಬಂದರೋ ಆರ್ಥಿಕವಾಗಿಯೂ ಅಷ್ಟೇ ಶ್ರೀಮಂತರಾದರು. ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಶ್ರೀಮಂತರಾಗಿದ್ದರಿಂದಲೇ ಅವರು ವರಿಷ್ಠರ ಕಣ್ಣಿಗೆ ಬಿದ್ದರು. ಅದರ ಜತೆಗೆ ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯದಲ್ಲಿ ಸಮಸ್ಯೆಗೆ ಸಿಲುಕಿದಾಗ ನೆರವಿಗೆ ಧಾವಿಸಿ ಪಕ್ಷದ ಪಾಲಿನ ಟ್ರಬಲ್ ಶೂಟರ್ ಎನಿಸಿಕೊಂಡರು. ಹೀಗಾಗಿ ಶಿವಕುಮಾರ್ ಜೈಲಿಗೆ ಹೋದಾಗ ಕಾಂಗ್ರೆಸ್ ಅವರ ಬೆನ್ನಿಗೆ ನಿಂತಿತು.
ಪ್ರಸ್ತುತ ರಾಜ್ಯ ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ಪಕ್ಷದಲ್ಲಿ ಸಿದ್ದರಾಮಯ್ಯ ಬಣ ಮತ್ತು ಮೂಲ ಕಾಂಗ್ರೆಸ್ ಬಣ ಎಂದು ಎರಡು ಗುಂಪುಗಳಾಗಿವೆ. ಶಿವಕುಮಾರ್ ಇಡಿ ಕುಣಿಕೆಯಲ್ಲಿ ಸಿಕ್ಕಿಬಿದ್ದ ಬಳಿಕ ಸಿದ್ದರಾಮಯ್ಯ ಅವರ ಪಟ್ಟು ಬಿಗಿಗೊಂಡಿದ್ದು, ಅವರ ವಿರೋಧಿ ಬಣ ಎದುರಿಸಲು ಸಾಧ್ಯವಾಗದೆ ಸುಮ್ಮನಾಗಿದೆ. ತಮ್ಮ ಆಗಮನಕ್ಕಾಗಿ ಕಾಯುತ್ತಿರುವ ಕಾಯುತ್ತಿರುವ ಮೂಲ ಕಾಂಗ್ರೆಸ್ ಮುಖಂಡರಿಗೆ ಬಂದ ಕೂಡಲೇ ಧೈರ್ಯ ತುಂಬುವ ಕೆಲಸವನ್ನು ಶಿವಕುಮಾರ್ ಮಾಡಬೇಕಾಗಿದೆ. ಅದನ್ನು ಮಾಡಲು ಸಿದ್ಧವಾಗಿಯೇ ಬೆಂಗಳೂರಿಗೆ ಮರಳಿದ್ದಾರೆ.
ಜೈಲಿನಿಂದ ಹೊರಬಂದು ಹೀರೋನಂತೆ ಮೆರೆಯುತ್ತಿರುವ ಶಿವಕುಮಾರ್ ಅವರ ಮುಂದಿರುವ ಮೊದಲ ಸವಾಲು ವಿಧಾನಸಭೆ ಉಪ ಚುನಾವಣೆ. ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಇನ್ನು ವಾರದಲ್ಲಿ ಹೊರಬರಲಿದ್ದು, ಬಳಿಕ ಚುನಾವಣೆ ನಡೆಯುತ್ತದೆಯೇ, ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ. ಚುನಾವಣೆ ನಡೆಯಲಿ, ಅಥವಾ ಬೇರೆ ಏನಾದರೂ ಬೆಳವಣಿಗೆಯಾಗಲಿ, ಅದರಲ್ಲಿ ಶಿವಕುಮಾರ್ ಅವರ ಪಾತ್ರವೇ ಪ್ರಮುಖವಾಗುತ್ತದೆ. ಉಪ ಚುನಾವಣೆ ನಡೆದರೆ ಆಗ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಸಿದ್ದರಾಮಯ್ಯ ಅವರಿಗಿಂತಲೂ ಪ್ರಮುಖ ಪಾತ್ರವನ್ನು ಶಿವಕುಮಾರ್ ನಿರ್ವಹಿಸಲಿದ್ದಾರೆ. ಏಕೆಂದರೆ, ಸಿದ್ದರಾಮಯ್ಯ ಅವರ ನಡವಳಿಕೆಗಳಿಂದ ಬೇಸತ್ತಿರುವ ಮೂಲ ಕಾಂಗ್ರೆಸ್ಸಿಗರು ಶಿವಕುಮಾರ್ ಜತೆ ನಿಲ್ಲುವುದು ಖಚಿತ. ಅದಕ್ಕೆ ಬೇಕಾದ ಪೂರಕ ವಾತಾವರಣವನ್ನು ಸೃಷ್ಟಿಸಿಕೊಂಡೇ ಶಿವಕುಮಾರ್ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರುವುದು.
ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಗಂಟೆ
ಬೆಂಗಳೂರಿಗೆ ಬರುವ ಮುನ್ನವೇ ಪಕ್ಷದಲ್ಲಿ ಮುಂದೆ ತಮ್ಮ ಸ್ಥಾನಮಾನವೇನು ಎಂಬುದನ್ನು ಈಗಾಗಲೇ ಅವರು ಸೋನಿಯಾ ಮತ್ತು ರಾಹುಲ್ ಅವರೊಂದಿಗೆ ಚರ್ಚಿಸಿದ್ದಾರೆ. ಹೈಕಮಾಂಡ್ ಕಡೆಯಿಂದ ಎಲ್ಲಾ ರೀತಿಯ ಸಹಕಾರ ಸಿಗುತ್ತದೆ ಎಂಬ ಸ್ಪಷ್ಟ ಭರವಸೆ ಸಿಕ್ಕಿದ ಕಾರಣದಿಂದಲೇ ಅವರು ಇಷ್ಟೊಂದು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು. ಶಿವಕುಮಾರ್ ಅವರ ಆಕ್ರಮಣಕಾರಿ ನಡವಳಿಕೆ ಮತ್ತು ಅದಕ್ಕೆ ಮೂಲ ಕಾಂಗ್ರೆಸ್ಸಿಗರು ಒಟ್ಟಾಗಿ ಬೆಂಬಲ ನೀಡುತ್ತಿರುವುದು ಹಾಗೂ ಅದಕ್ಕೆ ಹೈಕಮಾಂಡ್ ಕೃಪಾಕಟಾಕ್ಷ ದೊರೆತಿರುವುದು ಸಹಜವಾಗಿಯೇ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಗಂಟೆಯೂ ಆಗಿದೆ.
ಅನರ್ಹ ಶಾಸಕರನ್ನು ಮತ್ತೆ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಆದರೆ, ಈಗಲೂ ಕೆಲವು ಅನರ್ಹ ಶಾಸಕರು ಕಾಂಗ್ರೆಸ್ಸಿಗೆ ಮರಳಲು ಸಿದ್ಧರಾಗಿದ್ದಾರೆ. ಅಂಥವರನ್ನು ಶಿವಕುಮಾರ್ ಕೂಡಿಹಾಕಿ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಮುಂದಾದರೆ ಅದಕ್ಕೆ ಮೂಲ ಕಾಂಗ್ರೆಸ್ಸಿಗರ ಬೆಂಬಲ ಸಿಗುತ್ತದೆ. ಆಗ ಸಿದ್ದರಾಮಯ್ಯ ಅವರು ಅನಿವಾರ್ಯವಾಗಿ ತಣ್ಣಗಾಗಬೇಕಾಗುತ್ತದೆ. ಇದರ ಮುನ್ಸೂಚನೆ ದೊರೆತಿರುವ ಸಿದ್ದರಾಮಯ್ಯ ತನ್ನ ಅಹಂ ಅನ್ನು ಕೊಂಚ ಬದಿಗಿಟ್ಟು ಶನಿವಾರ ರಾತ್ರಿಯೇ ಬೆಂಗಳೂರಿಗೆ ವಾಪಸಾಗಿ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರ ಸಂಬಂಧ ಹಿಂದಿನಂತೆ ಹಳಸಿಕೊಂಡೇ ಇರುತ್ತದೆಯೇ ಅಥವಾ ರಾಜಿಸೂತ್ರವನ್ನೇನಾದರೂ ಕಂಡುಕೊಳ್ಳುತ್ತಾರೆಯೇ ಎಂಬುದರ ಮೇಲೆ ರಾಜ್ಯ ಕಾಂಗ್ರೆಸ್ಸಿನ ಯಶಸ್ಸು-ಅಪಯಶಸ್ಸುಗಳು ನಿಂತಿರುತ್ತವೆ.