ಹೊಟ್ಟೆಗೆ ಹಿಟ್ಟಿಲ್ಲ ಎಂದರೂ ತುರುಬಿಗೆ ಬೇಕೆ ಮಲ್ಲಿಗೆ ಹೂವು ಎನ್ನುವ ಗಾದೆ ಮಾತು ಭಾರತದ ಪಾಲಿಗೆ ಸತ್ಯ ಎನಿಸುತ್ತದೆ. ತಿನ್ನುವ ಹಿಟ್ಟಿಗೆ ಬಡತನ ಇದ್ದಾಗಲು ಜುಟ್ಟಿಗೆ ಮಲ್ಲಿಗೆ ಹೂ ಮುಡಿಯುವುದು ಯಾವ ಧರ್ಮ ಎಂದು ಪ್ರಶ್ನೆ ಮಾಡುವ ಈ ಗಾದೆ ಮಾತಿನಂತೆ ಕೇಂದ್ರ ಸರ್ಕಾರವನ್ನು ನಾವೀಗ ಕೇಳಬೇಕಿದೆ. ಯಾಕಂದ್ರೆ ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಸಾಗಿದೆ. ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದರೂ ಸೋಂಕಿತರ ಸಂಖ್ಯೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ ನಮ್ಮ ಕೇಂದ್ರ ಸರ್ಕಾರ ಬೇರೆ ದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವುದರಲ್ಲಿಯೇ ತಲ್ಲೀನವಾಗಿದೆ.
ಮಾರ್ಚ್ 18ರ ತನಕವೂ ವೆಂಟಿಲೆಟರ್ ಹಾಗೂ ಮಾಸ್ಕ್ ಗಳನ್ನು ರಫ್ತು ಮಾಡಲಾಗಿತ್ತು. ಆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ರು. ಯಾರ ಹಿತ ಕಾಪಾಡಲು ನರೇಂದ್ರ ಮೋದಿ ಈ ನಿರ್ಧಾರ ಕೈಗೊಳ್ಳಲಾಗ್ತಿದೆ? ದೇಶದಲ್ಲಿ ಸಂಕಷ್ಟ ಇದ್ದಾಗ ಈ ರೀತಿಯ ನಿರ್ಧಾರ ದೇಶದ್ರೋಹ ಅಲ್ಲವೇ ಎಂದು ಕುಟುಕಿದ್ರು. ಆ ಬಳಿಕವೂ ಮಾಲ್ಡೀವ್ಸ್ ಗೆ ಆಹಾರ ಪದಾರ್ಥ ಹಾಗೂ ಔಷಧಿಗಳನ್ನು ರವಾನೆ ಮಾಡಲಾಗಿತ್ತು. ಸ್ವತಃ ಮಾಲ್ಡೀವ್ಸ್ ಅಧ್ಯಕ್ಷ ಮಹಮದ್
ನಷೀದ್ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದರು. ಇದೀಗ ಮತ್ತೊಂದು ಪ್ರಮಾದ ನಡೆದಿದೆ ಎನ್ನಲಾಗಿದೆ.
ಕರೋನಾ ವೈರಸ್ ಸೋಂಕು ಬಂದವರಿಗೆ ಟ್ರೀಟ್ ಮೆಂಟ್ ಕೊಡುವ ವೈದ್ಯರಿಗೆ ನೀಡುವ ಸಾಂಕ್ರಾಮಿಕ ರೋಗ ರಕ್ಷಣಾ ಕವಚ ಸೇರಿದಂತೆ 90 ಟನ್ ವೈದ್ಯಕೀಯ ಸರಕುಗಳನ್ನು ಸರ್ಬಿಯಾ ದೇಶಕ್ಕೆ ರವಾನೆ ಮಾಡಲಾಗಿದೆ. ಈ ಬಗ್ಗೆ ಸರ್ಬಿಯಾ ದೇಶದ ಭಾಗವೇ ಆಗಿರುವ (United Nations Development Programme) ಟ್ವಿಟರ್ ಅಕೌಂಟ್ ನಲ್ಲಿ ಮಾಹಿತಿ ನೀಡಿದ್ದು, 2ನೇ ಬೋಯಿಂಗ್ ಕಾರ್ಗೊ ವಿಮಾನ 90 ಟನ್ ವೈದ್ಯಕೀಯ ಸರಕುಗಳನ್ನು ಹೊತ್ತು ಬಂದಿದೆ. ಭಾರತದಿಂದ ಸರ್ಬಿಯಾ ಸರ್ಕಾರ ಖರೀದಿ ಮಾಡಿದೆ ಎಂದು. ಇದರಲ್ಲಿ 50 ಟನ್ ಮಾಸ್ಕ್, ಸರ್ಜಿಕಲ್ ಗ್ಲೌಸ್ ಸೇರಿದಂತೆ ವೈದ್ಯಕೀಯ ಸೇವೆಗೆ ಬಳಸುವ ವಸ್ತುಗಳು ಇದೆ ಎಂದಿದ್ದಾರೆ. ಇದಕ್ಕೂ ಮೊದಲು ಮಾರ್ಚ್ 29ರಂದು ಕೊಚ್ಚಿ ಏರ್
ಪೋರ್ಟ್ ನಿಂದ ಮೊದಲನೇ ಕಾರ್ಗೊ ಫ್ಲೈಟ್ ತೆರಳಿದ್ದು, 30 ಟನ್ ತೂಕದ 35 ಲಕ್ಷ ಸರ್ಜಿಕಲ್ ಗ್ಲೌಸ್ ರವಾನೆ ಮಾಡಲಾಗಿತ್ತು ಎಂದು ಕೊಚ್ಚಿ ಏರ್ ಪೋರ್ಟ್ ವಕ್ತಾರ ತಿಳಿಸಿದ್ದಾರೆ.
ಈ ಬಗ್ಗೆ ಆರೋಗ್ಯ ಇಲಾಖೆ ನಮಗೆ ಇದರ ಬಗ್ಗೆ ಗೊತ್ತಿಲ್ಲ ಎನ್ನುವ ಸಿದ್ಧ ಉತ್ತರವನ್ನು ಕೊಟ್ಟಿದೆ. ಕೇಂದ್ರ ಸರ್ಕಾರ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಒಪ್ಪಂದಗಳನ್ನು ಮಾಡಿಕೊಂಡಿರುತ್ತದೆ. ಕೆಲವೊಂದು ಅಗತ್ಯ ವಸ್ತುಗಳನ್ನು ಪೂರೈಸಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ ಈ ಒಪ್ಪಂದ ತನ್ನ ದೇಶಕ್ಕೆ ಅಗತ್ಯವಿದೆ ಎಂದಾಗ ಅನ್ವಯ ಆಗುವುದಿಲ್ಲ. ಯುದ್ಧ ನಡೆಯುವಾಗ ಬೇರೊಂದು ದೇಶಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವಿದೆಯೇ? ಇಲ್ಲ ಎಂದ ಮೇಲೆ ಕೇಂದ್ರ ಸರ್ಕಾರ ಈಗ ಮಾಡುತ್ತಿರುವ ಕೆಲಸಗಳನ್ನು ಒಪ್ಪಿಕೊಳ್ಳುವುದು ಹೇಗೆ? ಈಗಾಗಲೇ ಪ್ರದಾನಿ ನರೇಂದ್ರ ಮೋದಿ ಕೋವಿಡ್ – 19 ವಿರುದ್ಧ ಯುದ್ಧ ಸಾರಿದ್ದಾರೆ. ಮಹಾಭಾರತ 18 ದಿನಗಳಲ್ಲಿ ಮುಕ್ತಾಯವಾಯ್ತು. ಇದೀಗ 21 ದಿನಗಳಲ್ಲಿ ಈ ಯುದ್ಧ ಗೆಲ್ಲಬೇಕಿದೆ ಎಂದು ಕರೆ ಕಟ್ಟಿದ್ದಾರೆ. ಆದರೆ ಯುದ್ಧದಲ್ಲಿ ಶಸ್ತ್ರʼತ್ಯಾಗʼ ಮಾಡಿದ ಮೇಲೆ ಗೆಲ್ಲುವುದು ಸಾಧ್ಯವೇ ಎಂಬುದನ್ನು ಯೋಚಿಸಬೇಕಿದೆ. ಇಡೀ ದೇಶದಲ್ಲಿ ಕರೋನಾ ಸೋಂಕು ದಾಂಗುಡಿ ಇಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವ್ಯಾಪಾರ ಮಾಡುವುದರಲ್ಲಿ ನಿರತವಾಗಿದೆ.
ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಮಾತ್ರ ಕರೋನಾ ಟೆಸ್ಟ್ ಕಿಟ್ ಕೊರತೆ ಇಲ್ಲ. N95 ಮಾಸ್ಕ್ ಗಳಿಗೂ ಕೊರತೆ ಇಲ್ಲ. ವೆಂಟಿಲೇಟರ್, ಐಸಿಯು ಬೆಡ್ ಗಳಿಗೂ ಕೊರತೆ ಇಲ್ಲ. ಈಗ ಪರೀಕ್ಷೆ ಮತ್ತು ಚಿಕಿತ್ಸೆಗೆ ತೊಂದರೆ ಇಲ್ಲ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಾಗಿ ಪೂರೈಸಲು ಸಿದ್ದರಿದ್ದೇವೆ ಎಂದಿದ್ದಾರೆ. ಈಗಾಗಲೇ ದೆಹಲಿಯ ಸಫ್ದರ್ ಜಂಗ್
ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಗೆ ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿದ್ದ ಇಬ್ಬರು ವೈದ್ಯರಿಗೆ ಕರೋನಾ ಸೋಂಕು ಹರಡಿದೆ. ಪಿಪಿಎಫ್ ಕಿಟ್ ಇದ್ದಿದ್ದರೆ ಸೋಂಕು ಹರಡುವುದಕ್ಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ದೇಶದ ಸಾಮಾನ್ಯ ಜನರು ಕೇಳುವಂತಾಗಿದೆ. ಇದೀಗ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳು, ನಮಗೇ ರಕ್ಷಣೆ ಇಲ್ಲ ಎಂದ ಮೇಲೆ ನಾವು ಯಾಕೆ ಜೀವನವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದು, ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಆದರೆ ಎನ್
ಡಿಎಂಸಿ ರಾಜೀನಾಮೆ ಅಂಗೀಕರಿಸಲು ಒಪ್ಪಿಲ್ಲ. ಕೇಂದ್ರ ಸರ್ಕಾರ ಯಾವುದಕ್ಕೂ ಕೊರತೆಯಿಲ್ಲ ಎನ್ನುತ್ತಿದೆ. ವೈದ್ಯರಿಗೆ ರಕ್ಷಣೆ ಇಲ್ಲದೆ ರಾಜೀನಾಮೆ ಕೊಡುವ ಪರಿಸ್ಥಿತಿ ಇದೆ. ಇದನ್ನು ನೋಡಿದ್ರೆ ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಬೇಕೆ ಮಲ್ಲಿಗೆ ಎನ್ನುವ ಗಾದೆ ಮಾತು ಅನ್ವರ್ಥದಂತಿದೆ.