ಕಳೆದ ಹತ್ತು ವರ್ಷಗಳಿಂದಿಚೇಗೆ ಕಾಂಗ್ರೆಸ್ ಬಲ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಇದರ ಪರಿಣಾಮ ಚುನಾವಣೆ ಗೆಲ್ಲಲು ಬಿಜೆಪಿಗೆ ಸಹಕಾರಿಯಾಗುತ್ತಿದೆ. ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಡ ಮೈತ್ರಿ ಗೆಲುವಿಗೆ ಮತ್ತು ಬಿಜೆಪಿ ಪ್ರಗತಿಗೆ ಕಾಂಗ್ರೆಸ್ ಬಲ ಕುಸಿಯುತ್ತಿರುವುದೇ ಕಾರಣ ಇರಬಹುದು. ಇಂತಹ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಈ ಹಿಂದೆಯೇ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರು, ಸಂಸದರು, ಮಾಜಿ ಕೇಂದ್ರ ಸಚಿವರು ಸೇರಿದಂತೆ 23ಕ್ಕೂ ಹೆಚ್ಚು ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಪಕ್ಷದ ಬಲವರ್ಧನೆ ಮತ್ತು ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದರು.
“ಇಂದಿನ ಯುವ ಪಿಳೀಗೆ ಬಿಜೆಪಿಯತ್ತ ಒಲವು ಹೊಂದಿದೆ. ಹಾಗಾಗಿಯೇ ನರೇಂದ್ರ ಮೋದಿ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಾರೆ. ಈ ಬಗ್ಗೆ ನಾವು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ. ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕರು ಬೇಕು. ಹೀಗಾಗಿ, ಉನ್ನತ ಮಟ್ಟದ ಹುದ್ದೆಗೆ ಗಾಂಧಿ ಕುಟುಂಬ ಹೊರತಾದ ಜನರಿಗೆ ಹೆಚ್ಚು ಪರಿಚಯ ಇರುವ ಯಾರಾದರೂ ಸಕ್ರಿಯ ನಾಯಕರನ್ನು ಆಯ್ಕೆ ಮಾಡಬೇಕು” ಎಂದು ಸೋನಿಯಾ ಗಾಂಧಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಸಂಸದ ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ವಿವೇಕ್ ತನ್ಖಾ, ಮುಕುಲ್ ವಾನ್ಸಿಕ್, ಜಿತಿನ್ ಪ್ರಸಾದ್, ಮಾಜಿ ಕೇಂದ್ರ ಸಚಿವ ಭೂಪೇಂದ್ರ ಸಿಂಗ್ ಹೂಡಾ, ರಾಜೆಂದ್ರ ಕೌರ್, ಎಂ ವೀರಪ್ಪ ಮೊಯ್ಲಿ, ಪೃಥ್ವಿರಾಜ್ ಚೌಹಾಣ್ ಪತ್ರ ಬರೆದವರಲ್ಲಿ ಪ್ರಮುಖರು.
ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಸಜ್ಜಾಗಬೇಕಿದೆ. ಅದಕ್ಕೆ ಹೊಸ ನಾಯಕರ ಅಗತ್ಯ ಇದೆ. ಹೀಗಾಗಿ, ಪಕ್ಷದ ನಾಯಕತ್ವದಲ್ಲಿ ಸುಧಾರಣೆ ಆಗಬೇಕಿದೆ. ಇದು ಕೇವಲ ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಸಾಧ್ಯ. ತಳಮಟ್ಟದಿಂದ ಉನ್ನತ ಹುದ್ದೆಯವರೆಗೂ ಪ್ರತೀ ಹಂತದಲ್ಲೂ ಬದಲಾವಣೆಯಾಗಬೇಕು. ಎಲ್ಲಾ ಚುನಾವಣೆ ಮೂಲಕವೇ ಆಯ್ಕೆ ಮಾಡಬೇಕು ಎನ್ನುವುದು ಹಿರಿಯ ಕಾಂಗ್ರೆಸ್ಸಿಗರ ಕೋರಿಕೆ. ಈ ಪತ್ರ ಬರೆದ ಯಾವುದೇ ನಾಯಕರು ಇತ್ತೀಚೆಗೆ ಸಕ್ರಿಯವಾಗಿಲ್ಲ. ಇದಕ್ಕೆ ಕಾರಣ ಎಷ್ಟೇ ಹೇಳಿದರೂ ಕಾಂಗ್ರೆಸ್ ಪಕ್ಷವನ್ನು ಸಬಲಗೊಳಿಸಲು ಯಾವುದೇ ರೀತಿಯ ಕ್ರಮಗಳನ್ನು ಹೈಕಮಾಂಡ್ ಕೈಗೊಳ್ಳದಿರುವುದು.
ಸದ್ಯ ಇದೇ ವಿಚಾರಕ್ಕಾಗಿ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಸೆಂಬರ್ 19ನೇ ತಾರೀಕು ಅಂದರೇ ನಾಳೆ ಪಕ್ಷದ ಹಲವಾರು ಉನ್ನತ ನಾಯಕರ ಸಭೆ ಕರೆದಿದ್ದಾರೆ. ಈ ಮಹತ್ವದ ಸಭೆಯಲ್ಲಿ ಪಕ್ಷದ ಮೇಲೆ ಕೋಪಗೊಂಡಿರುವ ಹಿರಿಯ ನಾಯಕರನ್ನು ಸೋನಿಯಾ ಗಾಂಧಿ ಸಮಾಧಾನ ಮಾಡಲಿದ್ದಾರೆ. ಜತೆಗೆ ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಎಂಬ ಬಗ್ಗೆಯೂ ಚರ್ಚೆಯಾಗಲಿದೆ.
ಸದ್ಯ ರೈತ ಪ್ರತಿಭಟನೆಯು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರ ನಡುವೆ ನಾವು ಸಕ್ರಿಯವಾಗಿ ಕೆಲಸ ಮಾಡಬೇಕಿದೆ. ನಾವು ಈಗಾಗಲೇ ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ ಸೋತಿದ್ದೇವೆ. ಮುಂದಿನ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದ ವಿಧಾನಸಭೆ ಗೆಲ್ಲಬೇಕು. ಇದಕ್ಕೆ ಬಂಡಾಯದ ಕಡೆಗೆ ಮುಖ ಮಾಡಿರುವವರನ್ನು ಒಟ್ಟುಗೂಡಿಸುವುದು ಮುಖ್ಯ ಎಂಬುದು ಹೈಕಮಾಂಡ್ ಉದ್ದೇಶ.
ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವ ಬದಲಾವಣೆ ಕೋರಿ ಪತ್ರ ಬರೆದಿದ್ದ 23 ಬಂಡಾಯ ನಾಯಕರನ್ನು ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ. ಇದೇ ಡಿಸೆಂಬರ್ 19, 20 ಅಂದರೆ ಎರಡು ದಿನಗಳ ಸಭೆ ನಡೆಸಲಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.