ಕಂಬಳ ಓಟಗಾರರನ್ನು ಮುಂಬರುವ ಒಲಿಂಪಿಕ್ಸ್ ಕೂಟಕ್ಕೆ ತಯಾರಿ ಮಾಡುವ ಸುದ್ದಿಯ ನಡುವೆ ಕರ್ನಾಟಕ ಸಿದ್ದಿ ಮತ್ತು Special Area Games Scheme ಕುರಿತ ಚರ್ಚೆ ಮುನ್ನಲೆಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಗಿರಿಜನ ಸಮುದಾಯ ಮತ್ತು ದೇಶದ ಹಲವೆಡೆ ಬುಡಕಟ್ಟು ಜನಾಂಗದ ಬಾಲಕ ಬಾಲಕಿಯರನ್ನು ಕ್ರೀಡೆಯ ಹೆಸರಿನಲ್ಲಿ ಕಾಡಿನಿಂದ ನಾಡಿಗೆ ತಂದು ಅರ್ಧದಲ್ಲಿ ಕೈಬಿಟ್ಟ ಇತಿಹಾಸ ಈ ದೇಶದಲ್ಲಿ ಇದೆ.
ಇವತ್ತು ಸರ್ಕಾರವನ್ನು ತಕ್ಷಣಕ್ಕೆ ಯಾವ ಪ್ರಜೆಯೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ. ಕಂಬಳ ಓಟಗಾರ ಶ್ರೀನಿವಾಸ ಗೌಡ ಅವರು ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅವರ ಆಹ್ವಾನವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಬೇಕಾಯಿತು. ರೈಲ್ವೇ ಟಿಕೇಟ್ ನೀಡಿ ಅಧಿಕಾರಿಗಳನ್ನು ಕಳುಹಿಸಿ ಪ್ರಚಾರದೊಂದಿಗ ಆಹ್ವಾನ ನೀಡುವ ಸರಕಾರಿ ವ್ಯವಸ್ಥೆ ಯಾವಾಗ ನಡು ದಾರಿಯಲ್ಲಿ ಕೈಬಿಡುತ್ತದೆ ಎಂದು ಹೇಳಲಾಗುವುದಿಲ್ಲ.
ದೇಶದ ನೈಜ ಕ್ರೀಡಾ ಪ್ರತಿಭೆಗಳನ್ನು ಗುರುತಿಸಬೇಕೆಂಬ ನೈಜ ಕಾಳಜಿ ಸನ್ಮಾನ್ಯ ಕ್ರೀಡಾ ಸಚಿವರಿಗಿದ್ದರೆ ಸ್ಪೆಷಲ್ ಏರಿಯ ಗೇಮ್ಸ್ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ನೀಡಿ, ಪ್ರತಿಭಾನ್ವೇಷಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಲಿ. ಆದರೆ, ಈ ವರ್ಷದ ಕೇಂದ್ರ ಬಜೆಟಿನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಅನುದಾನವನ್ನು ಪರಿಷ್ಕೃತ ಅಂದಾಜು 615 ಕೋಟಿ ರೂಪಾಯಿಂದ 500 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗಿದೆ.
ಸ್ಪೆಷಲ್ ಏರಿಯ ಗೇಮ್ಸ್ ಕಾರ್ಯಕ್ರಮವನ್ನು ಸಾಯ್ ಅನುಷ್ಠಾನ ಮಾಡುತ್ತಿದೆ. 2024ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭಾರತ ಕ್ರೀಡಾಳುಗಳು ಸಜ್ಜಾಗಗುತ್ತಿದ್ದರೆ, ಕೇಂದ್ರ ಸರ್ಕಾರ ಖೇಲೊ ಇಂಡಿಯಾಕ್ಕೆ ಹೆಚ್ಚಿನ ಅನುದಾನ ನೀಡಿ ಇನ್ನಿತರ ಕ್ರೀಡಾ ಸಂಸ್ಥೆಗಳಿಗೆ ಅನುದಾನ ಕಡಿತ ಮಾಡಿದೆ.
ಕೇಂದ್ರ ಸರ್ಕಾರ ಸ್ಪೆಷಲ್ ಏರಿಯ ಗೇಮ್ಸ್ ಎಂಬ ಉತ್ತಮ ಮತ್ತು ಫಲಪ್ರದ ಕಾರ್ಯಕ್ರಮವನ್ನು ಆರು ವರ್ಷ ನಡೆಸಿ ಅನಂತರ ಅರ್ಧದಲ್ಲೇ ಕೈಬಿಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯವರಾದ ಮಾರ್ಗರೇಟ್ ಆಳ್ವ ಕೇಂದ್ರ ಸರ್ಕಾರದಲ್ಲಿ ಮುಕ್ಕಳ ಮತ್ತು ಮಹಿಳಾ ಕಲ್ಯಾಣ ಹಾಗೂ ಕ್ರೀಡಾ ಸಚಿವರಾಗಿದ್ದಾಗ ಸ್ಪೆಷಲ್ ಏರಿಯ ಗೇಮ್ಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಪೂರ್ವ ಆಫ್ರಿಕಾ ಮೂಲದ ಸಿದ್ದಿ ಜನಾಂಗದವರು ಕ್ರೀಡಾ ಕ್ಷೇತ್ರಕ್ಕೆ ಸೂಕ್ತರಾಗಿದ್ದಾರೆ ಎಂದು ಗಮನಿಸಿದ ಮಾರ್ಗರೇಟ್ ಆಳ್ವ ಇಂತಹ ಯೋಜನೆಯೊಂದಕ್ಕೆ ದೇಶದಾದ್ಯಂತ ಚಾಲನೆ ನೀಡಿದ್ದರು. 1993ರಲ್ಲಿ ಆರಂಭಗೊಂಡ ಯೋಜನೆಗೆ ರಾಷ್ಟ್ರಮಟ್ಟದಲ್ಲಿ ಬಿ.ವಿ.ಪಿ.ರಾವ್ ಎಂಬ ಐಎಎಸ್ ಅಧಿಕಾರಿಯನ್ನು ವಿಶೇಷ ಕರ್ತವ್ಯ ಅಧಿಕಾರಿ ಆಗಿ ನೇಮಿಸಲಾಗಿತ್ತು.
ಕೇರಳ, ಗುಜರಾತ್, ಬಿಹಾರ, ಇಂದಿನ ಜಾರ್ಖಂಡ್, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಇರುವ ಬುಡಕಟ್ಟು ಜನಾಂಗದವರನ್ನು ಆಯಾಯ ಕ್ರೀಡೆಗೆ ಸೂಕ್ತರಾದ 12ರಿಂದ 16 ವರ್ಷದ ಬಾಲಕ ಬಾಲಕಿಯರನ್ನು ಆಯ್ಕೆ ಮಾಡಿ ದೇಶದ 20 ಕಡೆಗಳಲ್ಲಿ ಇರುವ ಕ್ರೀಡಾ ತರಬೇತಿ ಕೇಂದ್ರಗಳಲ್ಲಿ ತರಬೇತು ನೀಡಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಅಂಕೋಲ, ಜೋಯ್ಡ, ಮುಂಡಗೋಡು, ಶಿರಸಿ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲವೆಡೆ ಸಿದ್ದಿ ಜನಾಂಗದವರು ವಾಸಿಸುತ್ತಾರೆ. ಪೂರ್ವ ಆಫ್ರಿಕಾದಿಂದ ಇವರು ಇಲ್ಲಿಗೆ ಬಂದಿರುವ ಸಾಧ್ಯತೆ ಇರುವುದರಿಂದ ಕಳೆದ ಐದು ಶತಮಾನಗಳ ಅನಂತರು ಅವರು ತಮ್ಮ ಸ್ವರೂಪವನ್ನು ಉಳಿಸಿಕೊಂಡು ಬಂದಿರುತ್ತಾರೆ. ಆಫ್ರಿಕಾದ ಕ್ರೀಡಾಳು ಓಟಕ್ಕಾಗಿ ಜನಪ್ರಿಯರಾದ ಕಾರಣ ಸಿದ್ದಿ ಜನಾಂಗದವರನ್ನು ಮಧ್ಯಮ ದೂರದ ಓಟಗಳಲ್ಲಿ ತರಬೇತಿ ನೀಡುವ ಉದ್ದೇಶ ಸರಕಾರ ಹೊಂದಿತ್ತು. ಅದೇ ರೀತಿ ಜಾರ್ಖಂಡ್ ಪ್ರದೇಶದ ಬಿಲ್ಲುಗಾರನ್ನು ಆರ್ಚರಿಯಲ್ಲಿ, ಇನ್ನಿತರ ಗಿರಿಜನರನ್ನು ಅವರವರ ದೌಹಿಕ ಸಾಮರ್ಥ್ಯ, ಕೌಶಲ್ಯಕ್ಕೆ ಅನುಗುಣವಾಗಿ 26 ಕ್ರೀಡೆಗಳಲ್ಲಿ ತರಬೇತಿ ಮಾಡುವುದು ಈ ಕಾರ್ಯಕ್ರಮದ ಪ್ರಧಾನ ಉದ್ದೇಶ.

ಸರ್ಕಾರದ ಉದ್ದೇಶ ಫಲ ನೀಡಿತ್ತು. ಹಲವು ಮಂದಿ ಇಂತಹ ಗಿರಿಜನ ಸಮುದಾಯ ಕ್ರೀಡಾ ಪ್ರತಿಭೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಪದಕ ಗೆದ್ದುಕೊಂಡರು. ಅಂತಹ ಪ್ರತಿಭೆಗಳಲ್ಲಿ ವೈಟ್ ಲಿಫ್ಟರ್ ಕುಂಜುರಾಣಿ ದೇವಿ ಕೂಡ ಒಬ್ಬರು.
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಫಿಲಿಫ್ ಆಂಟೋನಿ ಸಿದ್ದಿ ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಮೊದಲ ಸಿದ್ದಿ. ಅನಂತರ ಲೂಯಿಸಿ ಸಿದ್ದಿ, ಕಮಲ ಬಾಬು ಸಿದ್ದಿ, ಜುಜೊ ಜಾಕಿ ಹರ್ನೋಡ್ಕರ್ ಸಿದ್ದಿ ಮುಂತಾದ ಹಲವರು ಹೆಸರು ಮಾಡಿದ್ದರು. ಮಾತ್ರವಲ್ಲದೆ, ಕ್ರೀಡೆಯಿಂದ ಜೀವನ ಕಂಡುಕೊಂಡರು.
ಮಹಾನಗರಗಳಲ್ಲಿ ಇರುವ ಕ್ರೀಡಾ ಕೇಂದ್ರಗಳಲ್ಲಿ ತರಬೇತು ಪಡೆಯುವ ಸಂದರ್ಭದಲ್ಲಿ ಆಫ್ರಿಕಾದವರಂತೆ ಕಾಣುವ ಈ ಸಿದ್ದಿ ಕ್ರೀಡಾಳುಗಳು ಸಾಕಷ್ಟು ಜನಾಂಗೀಯ ದೂಷಣೆಯನ್ನು ಎದುರಿಸಬೇಕಾಗಿತ್ತು. ಮುಂದುವರಿದ ನಗರಗಳಲ್ಲಿ ಕೂಡ ವರ್ಣಬೇಧ, ಪರಕೀಯತೆ ಎದುರಿಸಬೇಕಾಗಿತ್ತು.
ಕ್ರೀಡಾ ಯೋಜನೆ ಉತ್ತಮ ರೀತಿಯಲ್ಲಿ ಫಲಕೊಂಡುತ್ತಿರುವ ಸಂದರ್ಭದಲ್ಲೇ ಅದನ್ನು ಅರ್ಧದಲ್ಲಿ ನಿಲ್ಲಿಸಲಾಯಿತು. ಕ್ರೀಡಾ ವಸತಿ ಗೃಹಗಳಲ್ಲಿ ಶಿಕ್ಷಣ ಮತ್ತು ಕ್ರೀಡಾ ತರಬೇತಿ ಪಡೆಯುತ್ತಿದ್ದ ಈ ಬಡಪಾಯಿ ಗಿರಿಜನರು ಊರಿಗೆ ವಾಪಸಾಗಬೇಕಾಯಿತು.
ಕೆಲವು ಸ್ಥಾಪಿತ ಹಿತಾಸಕ್ತಿಗಳ ಟೀಕೆಗೆ ಮಣಿದ ಸರ್ಕಾರ ಏಕಾಎಕಿ ಮಹತ್ವದ ಯೋಜನೆಯೊಂದನ್ನು ಅರ್ಧದಲ್ಲೇ ಕೈಬಿಟ್ಟು. ಪ್ರಯೋಗ ಪೂರ್ಣ ಪ್ರಮಾಣದ ಫಲಿತಾಂಶ ನೀಡುವ ಮೊದಲೇ ನಿಲ್ಲಿಸಲಾಯಿತು. ಕ್ರೀಡಾಗಳನ್ನು ಆಗಾಗ ಅವರ ಕ್ರೀಡೆಯನ್ನು ಬದಲಾಯಿಸುವುದರಿಂದ ಹಿಡಿದು ಹತ್ತು ಹಲವು ಆರಂಭಿಕ ನ್ಯೂನ್ಯತೆಗಳ ಹೊರತಾಗಿಯೂ ಇಂತಹ ಸಮುದಾಯಗಳಿಗೆ ಮಾತ್ರವಲ್ಲದೆ ದೇಶಕ್ಕೂ ಒಂದು ಭರವಸೆಯ ಬೆಳಕನ್ನು ಮೂಡಿಸಿದ ಯೋಜನೆ ಹಠಾತ್ ನಿಂತು ಹೋಯಿತು.
2014ರಲ್ಲಿ ಮತ್ತೆ ಸ್ಪೆಷಲ್ ಏರಿಯ ಗೇಮ್ಸ್ ಕಾರ್ಯಕ್ರಮಕ್ಕೆ ಮರು ಚಾಲನೆ ದೊರತಿದೆ. ಸಾಯ್ ನಡೆಸುವ 20ಕ್ಕೂ ಹೆಚ್ಚು ಕೇಂದ್ರಗಳಲ್ಲಿ 1900 ಕ್ಕೂ ಹೆಚ್ಚು ಕ್ರೀಡಾಳುಗಳು ತರಬೇತಿ ಪಡೆಯುತ್ತಿದ್ದಾರೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೂ ಪೂರ್ಣ ಪ್ರಮಾಣದ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ ಆಗಿಲ್ಲ ಎಂಬುದ ವಿಷಾದನೀಯವಾಗಿದೆ.

ಆದರೆ, ಮುಂಬಯಿಯಲ್ಲಿ ಉದ್ಯೋಗಿ ಆಗಿರುವ ಜುಜೊ ಜಾಕಿ ಹರ್ನೋಡ್ಕರ್ ಸಿದ್ದಿ ಮುಂತಾದವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರಿನ ಸ್ವಯಂ ಸೇವಾ ಸಂಸ್ಥೆಗಳು ಕೂಡ ಸಿದ್ದಿ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವ ಹದಿನೇಳರ ಹರೆಯದ ರವಿಕಿರಣ ಸಿದ್ದಿ ಎಂಬ ಬಾಲಕ 200 ಮೀಟರ್ ಓಟದಲ್ಲಿ 20.61 ಸಮಯದ ಉಸೇನ್ ಬೊಲ್ಟ್ ದಾಖಲೆಯನ್ನು ಮುರಿಯುವ ಹುಮ್ಮಸ್ಸಿನಲ್ಲಿದ್ದಾನೆ. ಮಾತ್ರವಲ್ಲದೆ, 10.4 ಸಮಯದಲ್ಲಿ ನೂರು ಮೀಟರ್ ಓಡುವ ಭರವಸೆ ಹೊಂದಿದ್ದಾನೆ.
ಮಾನ್ಯ ಕ್ರೀಡಾ ಸಚಿವರು ಟ್ವೀಟ್ಟರ್ ಹಿಂದೆ ಓಡುವ ಬದಲು ಇಂತಹ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದರೆ ಸಚಿವರ ಆಶಯದ ಗುರಿ ಮುಟ್ಟಬಹುದು.