ತಮ್ಮ ನಿಲುವು ಹಾಗೂ ಅಭಿಪ್ರಾಯಗಳ ಬಗ್ಗೆ ಖಚಿತತೆ ಹೊಂದಿರುವ, ಬಲಪಂಥೀಯ ವಿಚಾರಧಾರೆಗಳ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟಿ ಕಂಗಾನಾ ರಾನೋಟ್ ನರೇಂದ್ರ ಮೋದಿ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ವಿಭಿನ್ನ ನಿಲುವು ತಳೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರಲ್ಲದೇ ಬಣ್ಣದ ಲೋಕದ ತಾರೆಗಳ ಮೌನಕ್ಕೆ ಚಾಟಿ ಬೀಸುವ ಮೂಲಕ ವಿರೋಧಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. “ಬಾಲಿವುಡ್ ತುಂಬಾ ರಣಹೇಡಿಗಳು ಹಾಗೂ ಬೆನ್ನು ಮೂಳೆ ಭದ್ರ ಇಲ್ಲದವರೇ ತುಂಬಿದ್ದಾರೆ” ಎಂದು ಕಟುವಾಗಿ ನುಡಿಯುವ ಮೂಲಕ ಚಿತ್ರ ಸಮುದಾಯದ ನಕಲಿ ನಟಿ-ನಟಿಯರಿಗೆ ಕಂಗಾನಾ ಛಡಿಯೇಟು ನೀಡಿದ್ದಾರೆ.
ದೆಹಲಿಯಾ ಜಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ನಂತರ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದಕ್ಕೆ ವಿಭಿನ್ನ ನೆಲೆಯಲ್ಲಿ ತೊಡಗಿಸಿಕೊಂಡಿರುವವರು ಭಾರಿ ವಿರೋಧ ಪಕ್ಷಪಡಿಸಿದ್ದಾರಲ್ಲದೇ, ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮುದಾಯಗಳು ನರೇಂದ್ರ ಮೋದಿ ಸರ್ಕಾರದ ಕಾಯ್ದೆಯು ಮಾನವ ಸಂತತಿಗೆ ಆತಂಕ ತಂದೊಡ್ಡಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿವೆ. ಇಷ್ಟಾದರೂ ಯಾವುದೇ ಕಾರಣಕ್ಕೂ ಕಾಯ್ದೆಯನ್ನು ಹಿಂಪಡೆಯುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿರುವುದು ಪರ-ವಿರೋಧ ಚರ್ಚೆಯನ್ನು ಮತ್ತಷ್ಟು ತೀವ್ರವಾಗಿಸಿದೆ. ಈ ವಿವಾದದ ಹಿನ್ನೆಲೆಯಲ್ಲಿ ಗಂಭಿರ ವಿಚಾರಗಳಾದ ಅಧ್ವಾನಗೊಂಡಿರುವ ದೇಶದ ಆರ್ಥಿಕತೆ, ನಿರುದ್ಯೋಗ ಸಮಸ್ಯೆಗಳು ಬದಿಗೆ ಸರಿದಿವೆ.
ಇದೆಲ್ಲಕ್ಕಿಂತಲೂ ಪ್ರಮುಖ ವಿದ್ಯಮಾನವೊಂದು ಗಮನ ಸೆಳೆಯುತ್ತಿದೆ. 2013ರಲ್ಲಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ನರೇಂದ್ರ ಮೋದಿಯನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗಲೇ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ವಿರೋಧದ ರೀತಿಯಲ್ಲಿಯೇ ಮೋದಿ ಪರವಾದ ಬೆಂಬಲಿಗರ ಪಡೆಯೂ ವ್ಯಾಪಕವಾಗಿ ಬೆಳೆದಿತ್ತು. ಇದರಲ್ಲಿ ಕಂಗಾನಾ ಸೇರಿದಂತೆ ನಟಿ-ನಟಿಯರು, ಪತ್ರಕರ್ತರು, ಬರಹಗಾರರನ್ನೊಳಗೊಂಡು ಎಲ್ಲಾ ವರ್ಗದವರು ಮೋದಿಯಲ್ಲಿ ಭಾರತದ ಭವಿಷ್ಯ ಕಂಡಿದ್ದರು. ಇದನ್ನು ಸರಿಯಾಗಿಯೇ ಬಳಸಿಕೊಂಡಿದ್ದ ಮೋದಿ “ಅಚ್ಛೇ ದಿನ”ದ ಭರವಸೆ ನೀಡಿ ಸಾಲುಸಾಲು ಚುನಾವಣೆಗಳಲ್ಲಿ ಗೆದ್ದು, ತಮ್ಮ ಪ್ರಭಾವಳಿಗೆ ಅಧಿಕೃತತೆ ತಂದುಕೊಂಡಿದ್ದರು. ಬಹುಮತ, ಅಧಿಕಾರ ದುರ್ಬಳಕೆಯ ಮೂಲಕ ಹಲವು ರಾಜ್ಯಗಳಲ್ಲಿ ಅಕ್ರಮವಾಗಿ ಸರ್ಕಾರ ರಚಿಸಿದ ಮೋದಿ ನೇತೃತ್ವದ ಬಿಜೆಪಿಯು ವಿವೇಚನಾರಹಿತ ನೀತಿ ನಿರೂಪಣೆಗಳ ಮೂಲಕ ಕೋಟ್ಯಂತರ ಭಾರತೀಯರ ಬದುಕನ್ನು ಬಯಲಿಗೆ ತಂದಿದ್ದೂ ಆಗಿದೆ.
ಇಷ್ಟೆಲ್ಲವಾದರೂ ಮೋದಿಯವರ ಅಭಿಮಾನಿ ಬಳಗವು ಭಾರತದ ಆರ್ಥಿಕತೆಯ ಬೆನ್ನೆಲುಬು ಮುರಿದ ನೋಟು ರದ್ದತಿ ನಿರ್ಧಾರ, ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನವನ್ನು ಅಸಂವಿಧಾನಿಕವಾಗಿ ರದ್ದುಗೊಳಿಸಿದ್ದಾಗ ಎಲ್ಲಾ ರೀತಿಯ ಎಲ್ಲೆಗಳನ್ನು ಮೀರಿ ಮೋದಿಯ ಗುಣಗಾನ ಮಾಡಿತ್ತು. ಆದರೆ, ಈಗ ಏಕಾಏಕಿ ತನ್ನ ನಿಲುವು ಬದಲಿಸಲಾರಂಭಿಸಿದೆ.
ಕಂಗನಾ ಬೆನ್ನಿಗೆ ಮೆಟ್ರೊಸಿಟಿಗಳಲ್ಲಿ ಯುವ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಚೇತನ್ ಭಗತ್ ಅವರು ಜಾಮಿಯಾ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಮೋದಿ ಸರ್ಕಾರದ ನಿರ್ಧಾರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರಲ್ಲದೇ, ಭ್ರಷ್ಟಾಚಾರ ವಿರೋಧಿಸಿ ಅಣ್ಣ ಹಜಾರೆ ನೇತೃತ್ವದಲ್ಲಿ ಯುಪಿಎ ಸರ್ಕಾರದಲ್ಲಿ ಆರಂಭವಾದ ಹೋರಾಟ ಹೇಗೆ ಕಾಂಗ್ರೆಸ್ ನಾಶಪಡಿಸಿತು ಎಂಬುದನ್ನು ಹಿಂದಿರುಗಿ ನೋಡುವಂತೆ ಮೋದಿಯವರಿಗೆ ಚೇತನ್ ಸಲಹೆ ನೀಡಿದ್ದಾರೆ.
ಇನ್ನೊಂದು ಪ್ರಮುಖ ವಿದ್ಯಮಾನವೆಂದರೆ ಇಸ್ಲಾಂ, ಪಾಕಿಸ್ತಾನ ಹಾಗೂ ಕಾಂಗ್ರೆಸ್ ಅನ್ನು ಎಕ್ಕಾಸಿಕ್ಕಾ ಬೆಂಡೆತ್ತುತ್ತಿದ್ದ ಹಿರಿಯ ಪತ್ರಕರ್ತೆ ತವ್ಲೀನ್ ಸಿಂಗ್ ಅವರು ನರೇಂದ್ರ ಮೋದಿ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ ಎಂಬುದನ್ನು ಅವರ ಟ್ವೀಟ್ ಗಳು ಹೇಳುತ್ತಿವೆ. ಜಗತ್ತಿನ ಪ್ರತಿಷ್ಠಿತ ಟೈಮ್ಸ್ ಪತ್ರಿಕೆಗೆ 2019ರ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಕೇಂದ್ರಿತವಾಗಿ “The Divider in Chief” ಎಂಬ ಬಹುಚರ್ಚಿತ ಲೇಖನ ಬರೆದದ್ದರಿಂದ ಭಾರತದ ಪೌರತ್ವ ಕಳೆದುಕೊಂಡಿರುವ ಆಶೀಷ್ ತಸೀರ್ ಅವರ ತಾಯಿಯೇ ತವ್ಲೀನ್ ಸಿಂಗ್.
ಇದೆಲ್ಲಕ್ಕಿಂತಲೂ ಮಹತ್ತರ ಬೆಳವಣಿಗೆ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯದು. ಪೌರತ್ವ ತಿದ್ದುಪಡಿ ಕಾಯ್ದೆ ರಾಜ್ಯಸಭೆಯಲ್ಲಿ ಅಂಗೀಕೃತಗೊಳ್ಳುತ್ತಲೇ ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಂಸಾಚಾರ ಬುಗಿಲೆದ್ದಿತ್ತು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಚಕಮಕಿಯಲ್ಲಿ ನಾಲ್ವರು ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡರು.ಇದರಿಂದ ಕುದ್ದುಹೋದ ಅಸ್ಸಾಂ ಮೂಲದ ಗೋಸ್ವಾಮಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದರು. ಇಷ್ಟುಮಾತ್ರಕ್ಕೆ ಗೋಸ್ವಾಮಿ ಬದಲಾಗಿದ್ದಾರೆ ಎಂದು ನಂಬುವ ಅಗತ್ಯವಿಲ್ಲ. ಆದರೆ, ಜನವಿರೋಧಿ ನಿರ್ಧಾರವನ್ನು ಕಟುವಾಗಿ ಟೀಕಿಸುವ ಗುಣ-ಧರ್ಮ ಹೊಂದುವ ಮೂಲಕ ಸರ್ವಾಧಿಕಾರಿ ಮನೋಭಾವದ ಸರ್ಕಾರವನ್ನು ಇಮ್ಮೆಟ್ಟಿಸುವುದು ಇಂದಿನ ತುರ್ತು. ಈ ದೃಷ್ಟಿಯಿಂದ ಕಂಗಾನಾ, ಚೇತನ್ ಭಗತ್, ತವ್ಲೀನ್ ಸಿಂಗ್, ಅರ್ನಬ್ ಗೋಸ್ವಾಮಿಯಂಥ ಸಾರ್ವಜನಿಕ ಬದುಕಿನಲ್ಲಿರುವವರ ನಿಲುವು ಜನ ಸಮುದಾಯವನ್ನು ಪ್ರಭಾವಿಸುತ್ತವೆ.
ಸರ್ಕಾರದ ನೀತಿ, ನಿರ್ಧಾರಗಳ ಬಗ್ಗೆ ಎಂದೂ ಬಹಿರಂಗವಾಗಿ ಮಾತನಾಡದ ಹಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ನಟಿ ಪ್ರಣೀತಿ ಚೋಪ್ರಾ, ಅಯುಷ್ಮಾನ್ ಖುರಾನಾ ಸಹ ತಮ್ಮದೇ ದಾಟಿಯಲ್ಲಿ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿದ್ದಾರೆ. ಸರ್ವಧರ್ಮ, ನಡೆ-ನುಡಿಯನ್ನೊಳಗೊಂಡ ವೈವಿಧ್ಯಮಯವಾದ ಭಾರತದ ಆತ್ಮಸಾಕ್ಷಿಯನ್ನು ಸರ್ವನಾಶ ಮಾಡಲು ಮುಂದಾಗಿರುವ ಮೋದಿ ಸರ್ಕಾರದ ನಿರ್ಧಾರವನ್ನು ಇನ್ಯಾವೆಲ್ಲಾ ಅವರ ಅಭಿಮಾನಿಗಳು ಪ್ರತಿಭಟಿಸುತ್ತಾರೆ ಎಂಬುದನ್ನು ಕಾಲ ನಿರ್ಧರಿಸಲಿದೆ.