ಆಮೆಯೊಂದು ಕೆರೆಯ ದಡದಿ ಮನೆಯ ಮಾಡಿತ್ತು. ಹಕ್ಕಿಯಂತೆ ಹಾರಬೇಕು ಎಂದು ಬಯಸಿತು ಹಕ್ಕಿ ಜೊತೆ ಸಂಗಮಾಡಿ ಆಸೆ ತಿಳಿಸಿತು. ಹಕ್ಕಿ ಹೇಳಿದಂತೆ ಆಮೆ ಕೇಳಲೊಪ್ಪಿತು. ಅತ್ತ ಇತ್ತ ಹಕ್ಕಿ ಎರಡು ಬಡಿಗೆ ಹಿಡಿದವು, ಆಮೆ ಅದಕ್ಕೆ ಜೋತು ಬೀಳೆ ಹಾರಿ ಹೋದವು. ದಾರಿಯಲ್ಲಿ ಇದನ್ನು ಕಂಡು ಜನರು ನಕ್ಕರು, ಮಾನ ಹೋಯಿತೆಂದು ಆಮೆ ಮನದಿ ಕುದಿಯಿತು. ನಕ್ಕ ಜನರ ಬೈಯ್ಯಲೆಂದು ಬಾಯಿ ತೆರೆಯಿತು. ಮೇಲಿನಿಂದ ಕೆಳಕ್ಕೆ ಬಿದ್ದು ಸತ್ತು ಹೋಯಿತು. ಈ ಪದ್ಯವನ್ನು ನಾವುಗಳು ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಓದಿದ್ದೇವೆ. ಆದರೆ, ಹಕ್ಕಿಯೇ ಆಸೆಪಟ್ಟು ರೆಕ್ಕೆಬಿಚ್ಚಿ ಹಾರಿ ಹೋದಾಗ ರೆಕ್ಕೆಯನ್ನು ಕತ್ತರಿಸಿ ಹಾಕಿದರೆ..!? ಪರಿಸ್ಥಿತಿ ಏನಾಗಬಹುದು..? ಈಗ ನಾವು ಹೇಳಲು ಹೊರಟಿರುವ ದುರಂತ ನಾಯಕನ ಕಥೆಯ ಸಾರಾಂಶ ಇಷ್ಟೆ. ಅತಿಯಾಸೆ ದುಃಖಕ್ಕೆ ಮೂಲ ಎನ್ನುವುದು ರಾಜಕೀಯದಲ್ಲಿ ಮತ್ತೆ ಸಾಬೀತಾಗಿದೆ.
ಸೋತು ಸುಣ್ಣವಾಗಿದ್ದಾಗ ಆಸೆ ಚಿಗುರಿತ್ತು..! ಆಸೆ ಬೆಳೆದಾಗ..?
ಮಾಜಿ ಸಚಿವ ಹಳ್ಳಿಹಕ್ಕಿ ಹೆಚ್ ವಿಶ್ವನಾಥ್, ರಾಜಕೀಯದಲ್ಲಿ ಅಂತಿಮ ಘಟ್ಟ ತಲುಪಿಯಾಗಿತ್ತು. ಕಾಂಗ್ರೆಸ್‌ನಲ್ಲಿ ಯಾವುದೇ ಸ್ಥಾನಮಾನ ಸಿಗದೆ ಗೆಲ್ಲುವ ತಾಕತ್ತೂ ಇಲ್ಲದೆ ಮನೆ ಸೇರಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಆ ವೇಳೆಗೆ ಕಮರುವ ಮನಸ್ಸಿನಲ್ಲಿ ಆಸೆಯ ಮೊಳಕೆ ಹೊಡೆಯುವಂತೆ ಮಾಡಿದ್ದು, ಜಾತ್ಯಾತಿತ ಜನತಾದಳ. ಹೊಸ ಹುರಪಿನೊಂದಿಗೆ ಅಖಾಡಕ್ಕೆ ಇಳಿದ ಹೆಚ್ ವಿಶ್ವನಾಥ್, ಹುಣಸೂರು ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬಿಟ್ಟರು. ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ರಾಜಕೀಯದಲ್ಲಿ ಸೋತು ಸುಣ್ಣವಾಗಿದ್ದ ಹೆಚ್ ವಿಶ್ವನಾಥ್ ಅವರಿಗೆ ಆಸೆ ಆಸೆಯಾಗಿ ಉಳಿಯಲಿಲ್ಲ. ಅದು ದುರಾಸೆಯಾಗಿಯಾಗಿ ಬದಲಾಗಿತ್ತು. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಯಾಗಿ ಮೆರೆಯುವ ಹಂಬಲ ಹೆಚ್ಚಾಗಿತ್ತು. ಅದೇ ಕಾರಣದಿಂದ ಜೆಡಿಎಸ್‌ಗೆ ಟಾಟಾ ಹೇಳಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾದರು. ರಾಜಕೀಯ ಅಂತಿಮ ದಿನಗಳನ್ನು ಎಣಿಸುತ್ತಿದ್ದಾಗ ದಾರಿದೀಪವಾಗಿ ಬಂದ ಜೆಡಿಎಸ್ ಶಾಸಕರನ್ನಾಗಿ ಮಾಡಿತ್ತು. ಆದರೆ ಅತಿಯಾಸೆ ಗತಿಗೇಡು ಎನ್ನುವಂತೆ ಕೆಲವೇ ದಿನಗಳಗಳಲ್ಲಿ ಶಾಸಕ ಸ್ಥಾನವನ್ನೂ ಕಳೆದುಕೊಂಡು ಮತ್ತೆ ರಾಜಕೀಯ ವನವಾಸಕ್ಕೆ ಹೊರಟಿದ್ದಾರೆ.
ಅಂತ್ಯಕಾಲದತ್ತ ಹಳ್ಳಿಹಕ್ಕಿ ರಾಜಕೀಯ..!
ರಾಜಕೀಯ ಸಂಧ್ಯಾಕಾಲದಲ್ಲಿದ್ದ ಹೆಚ್ ವಿಶ್ವನಾಥ್ ಅವರಿಗೆ ಲಕ್ ಎನ್ನುವಂತೆ ಜೆಡಿಎಸ್ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಶಾಸಕರನ್ನಾಗಿ ಮಾಡಿದರೆ, ಅತಿಯಾಸೆಗೆ ಒಳಗಾಗಿ ಶಾಸಕ ಸ್ಥಾನವನ್ನೂ ಕಳೆದುಕೊಂಡರು. ಮತ್ತೆ ವಿಧಾನಸಭಾ ಉಪಚುನಾವಣೆಯಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಲು ವಿಫಲರಾದರು. ಹಿಂಬಾಗಿಲ ಮೂಲಕ ವಿಧಾನಪರಿಷತ್ ಪ್ರವೇಶ ಮಾಡಿ ಸಚಿವನಾಗುವ ಲಾಬಿಗೆ ಬಿಜೆಪಿಯಲ್ಲಿ ಮನ್ನಣೆ ದೊರೆತಿಲ್ಲ. ಇದೀಗ ಬಿಜೆಪಿ ವಿರುದ್ಧ ಗುಡುಗುವ ಸ್ಥಿತಿಯಲ್ಲಿ ಹೆಚ್ ವಿಶ್ವನಾಥ್ ಇಲ್ಲ. ಅದರೂ ಪರಿಷತ್ ಸ್ಥಾನ ಸಿಗದ ಬೇಸರವನ್ನು ಸಿಎಂ ಬಿ ಎಸ್ ಯಡಿಯೂರಪ್ಪ ಎದುರು ಹೊರಹಾಕಿದ್ದಾರೆ. ಕೇವಲ 10 ನಿಮಿಷ ಕಾಲ ಸಿಎಂ ಭೇಟಿ ಮಾಡಿದ ವಿಶ್ವನಾಥ್‌ಗೆ ಅವಕಾಶಕ್ಕಾಗಿ ಕಾಯಬೇಕು ಎಂದಷ್ಟೇ ಸಿಎಂ ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಕೋಪಗೊಂಡು ಹೊರ ಹೋಗಿದ್ದಾರೆ.
ವಿಧಾನಪರಿಷತ್ ಟಿಕೆಟ್ ಕೈ ತಪ್ಪಲು ಇಬ್ಬರು ಮಾಜಿ ಸಿಎಂಗಳು ಕಾರಣ ಎನ್ನುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರತ್ತ ಬೊಟ್ಟು ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. ಟಿಕೆಟ್ ಕೈ ತಪ್ಪಿದರ ಹಿಂದೆ ಒಳ ರಾಜಕೀಯ ಇದೆ ಎಂದಿರುವ ವಿಶ್ವನಾಥ್, ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರೂ ಬಿ ಎಸ್ ಯಡಿಯೂರಪ್ಪ ಮೇಲೆ ವಿಶ್ವಾಸವಿದೆ ಎಂದಿದ್ದಾರೆ. ನಾನು ಕೊನೆ ಘಳಿಗೆಯವರೆಗೂ ಪ್ರಯತ್ನ ಮಾಡಿದೆ. ಆದರೆ, ನಾನೇನು ಮಾಡಲು ಆಗಲಿಲ್ಲ ಎಂದು ಸಿಎಂ ಹೇಳಿದ್ದಾರೆ. ಯಡಿಯೂರಪ್ಪ ಮೇಲೆ ನನಗೆ ಇನ್ನೂ ನಂಬಿಕೆ ಇದೆ ಎಂದಿದ್ದಾರೆ.
ವಿಧಾನಸಭಾ ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್‌ಗೆ ಪರಿಷತ್ ಟಿಕೆಟ್ ಸಿಕ್ಕಿದೆ. ನನಗ್ಯಾಕೆ ಸಿಗಲಿಲ್ಲ? ಎಂದು ವಿಶ್ವನಾಥ್ ಪ್ರಶ್ನೆಯನ್ನೂ ಮಾಡಿದ್ದಾರೆ. ಆದರೆ ಅಧಿಕಾರದಲ್ಲಿರುವ ಬಿಜೆಪಿಯನ್ನು ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ಹೆಚ್ ವಿಶ್ವನಾಥ್ ಇಲ್ಲ. ಜೊತೆಗೆ ಅಧಿಕಾರದಲ್ಲಿ ಇರುವವರನ್ನು ಏಕಾಏಕಿ ಎದುರು ಹಾಕಿಕೊಂಡರೆ ಅಧಿಕಾರವೂ ಇಲ್ಲ, ಅಧಿಕಾರದಲ್ಲಿ ಇದ್ದವರ ಸಪೋರ್ಟ್ ಕೂಡ ಇಲ್ಲ ಎನ್ನುವಂತಾಗುತ್ತದೆ ಎನ್ನುವ ಕಾರಣಕ್ಕೆ ಹಲ್ಲು ಕಡಿದು ಸುಮ್ಮನಾಗಿದ್ದಾರೆ ಎನ್ನಲಾಗ್ತಿದೆ.
ಮಾಡಿದ್ದು ಒಂದೇ ತಪ್ಪು..! ಎಲ್ಲೂ ಸಲ್ಲದ ಹಳ್ಳಿಹಕ್ಕಿ..!
ತನ್ನ ರಾಜಕೀಯ ಜೀವನವೇ ಮಗೀತು ಎನ್ನುವ ಕಾಲದಲ್ಲಿ ಜೆಡಿಎಸ್ ಸೇರ್ಪಡೆಯಾಗಿ ಶಾಸಕರಾಗಿದ್ದರೂ ದುರಾಸೆ ಎಂಬ ಮೋಹಕ್ಕೆ ಒಳಗಾಗಿ ಅಧಿಕಾರ ಕಳೆದುಕೊಂಡ ವಿಶ್ವನಾಥ್ ಜೆಡಿಎಸ್‌ಗೆ ಮತ್ತೆ ಹೋಗಿ ಶಾಸಕನಾಗಲು ಸಾಧ್ಯವಾಗದ ಮಾತು. ಇನ್ನೂ ಸಿದ್ದರಾಮಯ್ಯ ವಿರುದ್ಧ ಗುಡುಗುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿ ಜೆಡಿಎಸ್ ಸೇರ್ಪಡೆಯಾದ ಬಳಿಕ ಮತ್ತೆ ಕಾಂಗ್ರೆಸ್‌ಗೆ ಹೋಗುವ ಮುಖವಿಲ್ಲ. ಇನ್ನೂ ಬಿಜೆಪಿಯಲ್ಲಿ ಉಳಿಯುವುದೊಂದು ಉಳಿದಿರುವ ಮಾರ್ಗ. ಆದರೆ ವಿಶ್ವನಾಥ್, ಪಕ್ಷ ಸಂಘಟನೆಗೆ ಸಹಕಾರಿ ಆಗಬಲ್ಲ ನಾಯಕ ಎನ್ನುವುದಕ್ಕೆ ಸಾಧ್ಯವಿಲ್ಲ. ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಗೆದ್ದು ಬರುವ ಚಾರ್ಮ್ ಇರುವ ನಾಯಕನೂ ಅಲ್ಲ. ಟಿಕೆಟ್ ಕೊಟ್ಟರೂ ತಾವೇ ಖರ್ಚು ಮಡಿ ಗೆಲ್ಲಿಸಿಕೊಂಡು ಬರಬೇಕಿದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದಿರಲು ಇದೇ ಕಾರಣ ಎನ್ನಲಾಗ್ತಿದೆ.
ಎಂಟಿಬಿ ನಾಗರಾಜ್ ಪಕ್ಷಕ್ಕೆ ಹಣಕಾಸಿನ ಸಹಾಯ ಮಾಡಬಲ್ಲ ಕೋಟ್ಯಧೀಶ್ವರ. ಇನ್ನು ಆರ್ ಶಂಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರವನ್ನೇ ತ್ಯಾಗ ಮಾಡಿದ್ದರು, ಸುನಿಲ್ ವಲ್ಯಾಪುರೆ ಬಿ ಎಸ್ ಯಡಿಯೂರಪ್ಪ ಆಪ್ತ. ಇನ್ನೊಂದು ಸ್ಥಾನ ಅಚ್ಚರಿಯಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ವಿಶ್ವನಾಥ್‌ರಿಂದ ಪಕ್ಷಕ್ಕೂ ಯಾವುದೇ ಲಾಭವಿಲ್ಲ ಎನ್ನುವ ಕಾರಣಕ್ಕೆ ಸಂಘ ಪರಿವಾರದ ಪ್ರತಾಪ್ ಸಿಂಹ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಒಟ್ಟಾರೆ ಹಳ್ಳಿ ಕಡೆ ಹೇಳುವಂತೆ ಆಡೋ ಕೋಳಿಯನ್ನು ಕಾಲು ಮುರಿದರು ಎನ್ನುವಂತೆ ಸ್ವತಃ ವಿಶ್ವನಾಥ್ ತಮ್ಮ ದುರಾಸೆಯಿಂದ ರಾಜಕೀಯ ಜೀವನದ ಅಂತ್ಯವನ್ನು ದುರಂತದ ಮೂಲಕ ಮುಗಿಸಿದರು ಎಂದರೆ ತಪ್ಪಾಗಲಾರದು.