ಈವರೆಗೆ ಹಸಿರು ವಲಯದಲ್ಲಿಯೇ ಇದ್ದ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿ ಗುಜರಾತಿನ ಅಹಮದಾಬಾದಿನಿಂದ ವಲಸೆ ಬಂದ ಕರೋನಾ ಸೋಂಕಿತರು, ಏಕಕಾಲಕ್ಕೆ ಎಂಟು ಪಾಸಿಟಿವ್ ಪ್ರಕರಣಗಳನ್ನು ಜಿಲ್ಲೆಗೆ ತಂದಿದ್ದಾರೆ.
ಅಹಮದಾಬಾದಿನಲ್ಲಿ ಲಾಕ್ ಡೌನ್ ವೇಳೆ ಸಿಲುಕಿಕೊಂಡಿದ್ದ ಶಿಕಾರಿಪುರ ಮೂಲದ ಏಳು ಮಂದಿ ಮತ್ತು ತೀರ್ಥಹಳ್ಳಿ ತಾಲೂಕಿನ ಒಬ್ಬರು ಸೇರಿ ಒಟ್ಟು ಎಂಟು ಮಂದಿ, ಅಲ್ಲಿ ತಿಂಗಳ ಹಿಂದೆ ಕೋವಿಡ್-19 ತಪಾಸಣೆಗೆ ಒಳಗಾಗಿದ್ದರು. ಆಗ ಎಲ್ಲರ ಫಲಿತಾಂಶವೂ ನೆಗೆಟೀವ್ ಬಂದಿತ್ತು. ಆದರೆ, ಆ ಬಳಿಕ ಅವರು ಸುಮಾರು ಒಂದು ತಿಂಗಳ ಕಾಲ ಅಲ್ಲಿಯೇ ಲಾಕ್ ಡೌನ್ ಆಗಿದ್ದು ಮೂರು ದಿನಗಳ ಹಿಂದೆ ಶಿವಮೊಗ್ಗಕ್ಕೆ ತಲುಪಿದ್ದರು.
ಹುಬ್ಬಳ್ಳಿ, ಹರಿಹರ-ಹೊನ್ನಾಳಿ ಮಾರ್ಗವಾಗಿ ಖಾಸಗಿ ವಾಹನದ ಮೂಲಕ ಪ್ರವೇಶಿಸಿದ ಅವರನ್ನು ಜಿಲ್ಲೆಯ ಗಡಿ ಮಡಿಕೆ ಚೀಲೂರು ಬಳಿಯೇ ತಡೆದು ಚೆಕ್ ಪೋಸ್ಟ್ ನಲ್ಲಿಯೇ ವಶಕ್ಕೆ ಪಡೆದು ಜನಸಂಪರ್ಕದಿಂದ ಹೊರತಾದ ಸ್ಥಳದಲ್ಲಿ ಇಡಲಾಗಿತ್ತು. ಕೂಡಲೇ ಅವರ ಗಂಟಲು ದ್ರವ ತೆಗೆದು ಪರೀಕ್ಷೆಗೆ ಕಳಿಸಲಾಗಿತ್ತು. ಎಂಟು ಮಂದಿಯ ವರದಿ ಪಾಸಿಟೀವ್ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್-19 ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕತ್ಸೆ ನೀಡಲಾಗುತ್ತಿದೆ. ಅವರನ್ನು ಕರೆತಂದ ಪೊಲೀಸ್ ಸಿಬ್ಬಂದಿ, ಅವರೊಂದಿಗೆ ಸಂಪರ್ಕಕ್ಕೆ ಬಂದ ಆಂಬ್ಯುಲೆನ್ಸ್ ಸಿಬ್ಬಂದಿ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಭಾನುವಾರ ಬೆಳಗ್ಗೆ ಹೇಳಿದೆ.
ಜೊತೆಗೆ, ಅವರುಗಳು ಅಹಮದಾಬಾದ್ ನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ಲಾಕ್ ಡೌನ್ ನಿಂದಾಗಿ ಅಲ್ಲಿಯೇ ಸಿಲುಕಿಕೊಂಡಿದ್ದಾಗಿ ಹೇಳಿದ್ದಾರೆ. ತಬ್ಲೀಘ್ ಸಮಾವೇಶದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಅಲ್ಲದೆ ತಬ್ಲೀಘ್ ಸಮಾವೇಶ ನಡೆದು ಆಗಲೇ ಎರಡು ತಿಂಗಳಾಗಿದೆ. ಹಾಗಾಗಿ ಅದರಿಂದಾಗಿ ಇವರು ಸೋಂಕು ತಗುಲಿಸಿಕೊಂಡಿರುವ ಸಾಧ್ಯತೆ ಕಡಿಮೆ ಎಂದೂ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಹೇಳಿದ್ದಾರೆ.
ಆದರೆ, ಶಿವಮೊಗ್ಗ ನಗರ ಶಾಸಕರೂ ಆಗಿರುವ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಅವರು, ಸೋಂಕಿತರು ತಬ್ಲೀಘಿಗಳು ಎಂದಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಹೇಳಿಕೆ ನೀಡಿದ್ದು, ಜಿಲ್ಲೆಯ ಜನರೊಂದಿಗೆ ಅವರಾರಿಗೂ ಪ್ರಾಥಮಿಕ ಸಂಪರ್ಕ ಇಲ್ಲದೆ ಇರುವುದರಿಂದ ಮತ್ತು ಎಲ್ಲರನ್ನೂ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿಟ್ಟು ಪರೀಕ್ಷೆ ನಡೆಸಿ, ಬಳಿಕ ಐಸೋಲೇಷನ್ ನಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವುದರಿಂದ ಜಿಲ್ಲೆಯ ಹಸಿರು ವಲಯದ ಸ್ಥಾನಮಾನಕ್ಕೆ ಯಾವುದೇ ಧಕ್ಕೆ ಇಲ್ಲ. ಎಂದಿನಂತೆಯೇ ಕೋವಿಡ್-19 ವಿಷಯದಲ್ಲಿ ಜಿಲ್ಲೆ ಹಸಿರುವಲಯದಲ್ಲಿಯೇ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದರು.
ಈ ನಡುವೆ ಒಟ್ಟು 40 ಜನರು ಅಹಮದಾಬಾದಿನಿಂದ ಒಂದೇ ಖಾಸಗಿ ಬಸ್ಸಿನಲ್ಲಿಹೊರಟು ಬೇರೆಬೇರೆ ಭಾಗದವರು ಅವರವರ ಊರುಗಳಿಗೆ ಹೋಗಿದ್ದಾರೆ. ಅಂತಿಮವಾಗಿ ಆ ಬಸ್ಸಿನಲ್ಲಿ ಜಿಲ್ಲೆಯ ಒಂಭತ್ತು ಜನ ಪ್ರಯಾಣ ಮುಂದುವರಿಸಿ ಜಿಲ್ಲೆಗೆ ಗಡಿಗೆ ಬಂದಾಗ ಪೊಲೀಸರು ಅವರನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಆ ಪೈಕಿ ಒಬ್ಬರ ವರದಿ ನೆಗೇಟಿವ್ ಬಂದಿದೆ. ಆದರೆ, ಈ ಎಂಟೂ ಮಂದಿ ಗುಜರಾತಿನಿಂದ ಶಿವಮೊಗ್ಗದ ವರೆಗೆ ಊಟ, ತಿಂಡಿಗಾಗಿ ಹಲವು ಸ್ಥಳಗಳಲ್ಲಿ ಇಳಿದಿದ್ದಾರೆ. ಬಸ್ಸಿನಲ್ಲಿದ್ದ ಇತರರೊಂದಿಗೆ ಬೆರೆತಿದ್ದಾರೆ. ಹೊನ್ನಾಳಿಯಲ್ಲಿಯೂ ಬಸ್ ನಿಲ್ಲಿಸಿ ವಿಶ್ರಾಂತಿ ಪಡೆದಿದ್ದಾರೆ. ಹಾಗಾಗಿ ಇವರ ಸಂಪರ್ಕಕ್ಕೆ ಯಾರೆಲ್ಲಾ ಬಂದಿದ್ದಾರೆ? ಯಾರಿಗೆಲ್ಲಾ ಸೋಂಕು ಹರಡಿದೆ ಎಂಬುದನ್ನು ಪತ್ತೆ ಮಾಡುವ ಸವಾಲು ಎದುರಾಗಿದೆ.
ಈ ನಡುವೆ ಈ ಎಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು ಎಂಬ ಹಿನ್ನೆಲೆಯಲ್ಲಿ ಈಗಾಗಲೇ ರಾಜಕೀಯ ಮೇಲಾಟ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದು ಧರ್ಮದ ವೇಷಭೂಷಣದ ವ್ಯಕ್ತಿಯೊಬ್ಬರು ಜಿಲ್ಲೆ ನಕ್ಷೆಗೆ ಕೆಂಪು ಬಣ್ಣ ಬಳಿಯುವ ಚಿತ್ರ, ಸೋಂಕಿತರ ಹೆಸರು, ವಿಳಾಸದ ಪಟ್ಟಿ ಸೇರಿದಂತೆ ಹಲವು ಸೂಕ್ಷ್ಮ ಮತ್ತು ದುರುದ್ದೇಶದ ಮಾಹಿತಿಗಳು ಹರಿದಾಡುತ್ತಿವೆ. ಜಿಲ್ಲಾಡಳಿತದ ಎಚ್ಚರಿಕೆಯ ಹೊರತಾಗಿಯೂ ಒಂದು ಕೋಮಿನ ವಿರುದ್ಧ ದ್ವೇಷ ಕಾರುವ ಸಂದೇಶಗಳು ವೈರಲ್ ಆಗಿವೆ.
ಸ್ವತಃ ಬಿಜೆಪಿ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು, “ತಬ್ಲೀಘಿಗಳು ಗುಜರಾತಿನಿಂದ ಜಿಲ್ಲೆಗೆ ಕರೋನಾ ತಂದಿದ್ದಾರೆ. ಈವರೆಗೆ ಹಸಿರು ವಲಯದಲ್ಲಿದ್ದ ಜಿಲ್ಲೆ ಅವರಿಂದಾಗಿ ಆತಂಕಕ್ಕೆ ಈಡಾಗಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಆರೋಪಿಸಿದ್ದಾರೆ. ಆ ಮೂಲಕ ಕರೋನಾ ಸೋಂಕಿನ ಕೋಮುವಾದೀಕರಣಕ್ಕೆ ಸ್ವತಃ ಜನಪ್ರತಿನಿಧಿಯಾಗಿ ಆಯನೂರು ಚಾಲನೆ ನೀಡಿದ್ದಾರೆ ಎಂಬ ಟೀಕೆಗಳೂ ಕೇಳಿಬಂದಿವೆ.
ಈ ನಡುವೆ, ಸೋಂಕಿತರನ್ನು ಮೊದಲ ದಿನ ನಗರ ಹೃದಯಭಾಗದ ಬಾಪೂಜಿನಗರ ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಸ್ಥಳೀಯರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲು ರಾತ್ರಿ ವೇಳೆ ಮುಂದಾದಾಗ, ಇಬ್ಬರು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದರು. ಆಗ ಪೊಲೀಸರು ಹರಸಾಹಸ ಮಾಡಿ ಅವರನ್ನು ಹಿಡಿದಿದ್ದಾರೆ. ಆ ಮೂಲಕ ಜಿಲ್ಲೆಯನ್ನು ಹೆಚ್ಚಿನ ಸೋಂಕಿನಿಂದ ಪಾರುಮಾಡಿದ್ದಾರೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಆ ಹಿನ್ನೆಲೆಯಲ್ಲಿ ಒಬ್ಬರು ಪೊಲೀಸ್ ಇನ್ಸ್ ಪೆಕ್ಟರ್, ಒಬ್ಬರು ಪಿಎಸ್ ಐ, ಇಬ್ಬರು ಪೇದೆ ಸೇರಿದಂತೆ ವಿವಿಧ ಇಲಾಖೆಯ ಸುಮಾರು 25 ಮಂದಿಯನ್ನು(ಇಡೀ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನೇರಭಾಗಿಯಾಗಿ ಸೋಂಕಿತರ ಸಂಪರ್ಕಕ್ಕೆ ಬಂದವರು) 14 ದಿನಗಳ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಇದೀಗ ಜಿಲ್ಲೆಯಲ್ಲಿ ಪೊಲೀಸರ ಈ ಕಾರ್ಯಾಚರಣೆ ವಿಷಯ ಕೂಡ ವೈರಲ್ ಆಗಿದ್ದು, ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕರೋನಾ ಸೋಂಕನ್ನು ಕೂಡ ಕೋಮುವಾದಿ ರಾಜಕೀಯದ ದಾಳವಾಗಿಸಿಕೊಳ್ಳಲಾಗುತ್ತಿದೆ. ಮತ್ತೊಂದು ಕಡೆ, ಇದಕ್ಕೆ ಪರ್ಯಾಯವಾಗಿ ಮತ್ತೊಂದು ಗುಂಪಿನಿಂದಲೂ ಕೆಲವು ಆಡಿಯೋ ಕ್ಲಿಪಿಂಗ್ ಗಳನ್ನು ವೈರಲ್ ಮಾಡಲಾಗುತ್ತಿದೆ.
ಹಾಗಾಗಿ ಇಷ್ಟು ದಿನಗಳ ಕಾಲ ಶ್ರಮವಹಿಸಿ ಜಿಲ್ಲೆಯನ್ನು ಸೋಂಕುಮುಕ್ತವಾಗಿಟ್ಟಿದ್ದ ಜಿಲ್ಲಾಡಳಿತ ಮತ್ತು ಪೊಲೀಸರ ಪಾಲಿಗೆ ಇದೀಗ ಸುಳ್ಳು ಸುದ್ದಿಗಳು ಮತ್ತು ಕೋಮುವಾದಿ ವಿಶ್ಲೇಷಣೆಗಳಿಗೆ ತಡೆಯೊಡ್ಡುವುದು ತಲೆನೋವಾಗಿ ಪರಿಣಮಿಸಿವೆ.