ವಾರ್ಷಿಕ 5.45 ಲಕ್ಷ ಟನ್ ಸಮುದ್ರ ಮೀನು ಉತ್ಪಾದಿಸುವ ಕರ್ನಾಟಕ ರಾಜ್ಯ ಕರಾವಳಿಯ ಮೀನುಗಾರರು ಹವಮಾನ ವೈಪರಿತ್ಯದ ಪರಿಣಾಮ ಆರ್ಥಿಕ ಸಂಕಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ದೇಶದ ಪಶ್ಚಿಮ ಕರಾವಳಿಯಿಂದ ಓಮನ್ ದೇಶದತ್ತ ಸಾಗಿದ ಕ್ಯಾರ್ ಚಂಡಮಾರುತವು ಆಳ ಸಮುದ್ರ ಮೀನುಗಾರರನ್ನು ದಡ ಸೇರಿಸಿತ್ತು. ಇದೀಗ ಶ್ರೀಲಂಕಾದಿಂದ ಪೂರ್ವ-ದಕ್ಷಿಣ ಕರಾವಳಿಯ ತೀರದತ್ತ ಮತ್ತೊಂದು ಚಂಡಮಾರುತದ ಎಚ್ಚರಿಕೆ ನೀಡಲಾಗಿದೆ.
ಎರಡು ತಿಂಗಳ ಕಡ್ಡಾಯ ರಜೆಯ ಅನಂತರ ಆಗಸ್ಟ್ ತಿಂಗಳಲ್ಲಿ ಸಮುದ್ರ ಮೀನುಗಾರಿಕೆ ಆರಂಭ ಆಗುತ್ತದೆ. ಮೀನು ಮರಿ ಹಾಕುವ ಸಮಯವಾದ ಕಾರಣ ಆಳಸಮುದ್ರ ಮೀನುಗಾರಿಕೆಗೆ ಈ ಅವಧಿಯಲ್ಲಿ ನಿಷೇಧ ಹೇರಲಾಗಿದೆ. ಈ ಸಂಪ್ರದಾಯ ಎರಡು ದಶಕಗಳಿಂದ ನಡೆಯುತ್ತಿದೆ. ಅರಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯದಿಂದ ಆಗಸ್ಟ್ ತಿಂಗಳಲ್ಲೇ ರಾಜ್ಯ ಮೀನುಗಾರರಿಗೆ ಅಂದಾಜು 400 ಕೋಟಿ ರೂಪಾಯಿ ಕೋತಾ ಆಗಿದೆ.
ಆಗಸ್ಟ್ ಮತ್ತು ಅಕ್ಟೋಬರ್ ಮೀನುಗಾರರಿಗೆ ಹೆಚ್ಚು ಲಾಭ ತರುವ ಅವಧಿ. ಜನವರಿಯಿಂದ ಮೇ ಅಂತ್ಯದ ಅವಧಿಯಲ್ಲಿ ಮೀನುಗಾರಿಕೆ ಜೋರಾಗಿ ನಡೆಯುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಚಳಿಗಾಲದ ಹವಾಮಾನದಿಂದಾಗಿ ಮೀನು ಲಭ್ಯತೆ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಮೀನುಗಾರರು ಸಮುದ್ರಕ್ಕಿಳಿಯುವುದಿಲ್ಲ. ಆದರೆ, ಈ ಬಾರಿ ಸಮುದ್ರಕ್ಕೆ ಇಳಿಯಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ.
ಈ ಬಾರಿ ಮಳೆಗಾಲ ಆರಂಭ ವಿಳಂಬ ಆಗಿತ್ತು. ಅನಂತರ ಆಗಸ್ಟ್ ತಿಂಗಳಲ್ಲಿ ಮೀನುಗಾರಿಕೆ ಆರಂಭಕ್ಕೂ ಮುನ್ನವೇ ಮಳೆಯ ಆರ್ಭಟ ಹೆಚ್ಚಾಯಿತು. ಅರಬಿ ಸಮುದ್ರದಲ್ಲಿ ತೂಫಾನ್ ಎಚ್ಚರಿಕೆ ನೀಡಲಾಯಿತು. ಆಗಸ್ಟ್ ತಿಂಗಳ ಕೊನೆಯ ತನಕವೂ ಸಮುದ್ರ ಶಾಂತವಾಗಲಿಲ್ಲ. ಆಗಾಗ್ಗೆ ವಾಯುಭಾರ ಕುಸಿತ ಹಾಗೂ ಮಳೆಯ ಪರಿಣಾಮ ಬೋಟುಗಳು ಕೆಲವು ದಿನಗಳು ಮಾತ್ರ ಮೀನುಗಾರಿಕೆ ನಡೆಸಿದ್ದವು.
ಮೀನುಗಾರಿಕಾ ಬೋಟುಗಳು ಸಮುದ್ರಕ್ಕೆ ತೆರಳಿದರೂ ಒಳ್ಳೆಯ ಮೀನು ಕೊಯ್ಲು ಆಗಲೇ ಇಲ್ಲ. ಹಲವು ದೋಣಿ ಮಾಲೀಕರು ಒಳ್ಳೆಯ ಸಮಯ ಬರಲಿ ಎಂದು ಬಂದರಿನಲ್ಲೇ ದೋಣಿಗಳಿಗೆ ಲಂಗರು ಹಾಕಿದ್ದರು. ಸಮುದ್ರಕ್ಕೆ ಹೋದ ದೋಣಿಗಳಿಗೆ ಕಾರ್ಗಿಲ್ ಎಂಬ ಅತಿ ವಾಸನೆಯ ಫಿಶ್ ಮೀಲ್ ಫ್ಯಾಕ್ಟರಿಗಳಿಗೆ ಮಾತ್ರ ಉಪಯೋಗ ಆಗುವ ಕಪ್ಪು ಮೀನು ಹೇರಳವಾಗಿ ದೊರೆಯುತಿತ್ತು.
ಇದೀಗ ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಕಾಣಿಸಿಕೊಂಡ ಕ್ಯಾರ್ ಚಂಡಮಾರುತ ಅತೀ ಭೀಕರ ಚಂಡಮಾರುತ ಎಂದೇ ಪರಿಗಣಿತವಾಗಿದೆ. ಭಾರತೀಯ ನೌಕಾದಳ, ಇಂಡಿಯನ್ ಕೋಸ್ಟ್ ಗಾರ್ಡ್ ತಂಡಗಳು ವಿಶೇಷ ಮುತುವರ್ಜಿ ವಹಿಸಿ ಮೀನುಗಾರರ ದೋಣಿಗಳನ್ನು ದಡಕ್ಕೆ ತಲುಪಿಸಿದ್ದರು. ಹಲವಾರು ಮಂದಿ ಮೀನುಗಾರರ ಜೀವ ರಕ್ಷಣೆ ಮಾಡಿದರು.
ಕ್ಯಾರ್ ಚಂಡಮಾರುತದಿಂದಾಗಿ ಮತ್ತೆ ರಾಜ್ಯದ ಮೀನುಗಾರರಿಗೆ 30 ರಿಂದ 40 ಕೋಟಿ ರೂಪಾಯಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಬಹುದೊಡ್ಡ ಇಕೊ ಸಿಸ್ಟಮ್ ಇದೆ. ಮೀನುಗಾರಿಕೆಯನ್ನು ಹೊಂದಿಕೊಂಡ ಮಂಜುಗಡ್ಡೆ ಕಾರ್ಖಾನೆ ಮಾಲೀಕರಿಗೆ ಮತ್ತು ಚಿಲ್ಲರೆ ಮೀನು ವ್ಯಾಪಾರಿಗಳಿದಗೆ ಹೆಚ್ಚಿನ ನಷ್ಟ ಆಗದಿದ್ದರೂ, ವ್ಯಾಪಾರ ಮಾತ್ರ ಇರುವುದಿಲ್ಲ.
ಮೀನು ಸಂಸ್ಕರಣೆ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿ ಮಂಗಳೂರು ಸುತ್ತಮುತ್ತಲಿದ್ದು, ಕಾರ್ಮಿಕರನ್ನು ಅಲವಂಬಿತವಾದ ಉದ್ದಿಮೆಯಾಗಿದೆ. ಫಿಶ್ ಮೀಲ್ ಮತ್ತು ಮೀನಿನ ಎಣ್ಣೆ ತಯಾರಿಸುವ ಈ ಉದ್ದಿಮೆಗಳು ಮೀನುಗಾರಿಕಾ ದೋಣಿಗಳು ಹಿಡಿಯುವ ಮೀನಿನ ಪ್ರಮಾಣ ಮತ್ತು ಜಾತಿಯನ್ನು ಅಲವಂಬಿತವಾಗಿದೆ.
ಮೀನು ಸಾಗಣೆಗೆ ಪ್ರತ್ಯೇಕವಾದ ಹವಾನಿಯಂತ್ರಿತ ಲಾರಿ ವ್ಯವಸ್ಥೆ ಇದ್ದು, ಈ ಸಾಗಾಟ ವಾಹನವನ್ನು ಬೇರೆ ಯಾವುದಕ್ಕೂ ಉಪಯೋಗಿಸಲಾಗುವುದಿಲ್ಲ.
ನಮ್ಮ ರಾಜ್ಯದ ಕರಾವಳಿಯಲ್ಲಿ ವಿವಿಧ ಮಾದರಿಯ 3,700 ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳಿವೆ. ಇವುಗಳಲ್ಲಿ ಯಾಂತ್ರೀಕೃತ ನಾಡದೋಣಿ, ಟ್ರಾಲ್ ಬೋಟ್, ಪರ್ಸೀನ್ ಇತ್ಯಾದಿ ಬೋಟುಗಳು ಸೇರಿವೆ. ಉಡುಪಿ ಜಿಲ್ಲೆಯಲ್ಲಿ 1700, ಮಂಗಳೂರಿನಲ್ಲಿ 1200 ಮತ್ತು ಕಾರವಾರದಲ್ಲಿ 800 ಮೀನುಗಾರಿಕಾ ಬೋಟುಗಳು ಮೀನುಗಾರಿಕಾ ಇಲಾಖೆಯಲ್ಲಿ ನೋಂದಾವಣೆ ಆಗಿವೆ. ಸನಿಹದ ಕೇರಳ ಮತ್ತು ತಮಿಳುನಾಡು ಬೋಟುಗಳು ಕೂಡ ಕೆಲವೊಮ್ಮ ರಾಜ್ಯದ ಕರಾವಳಿಗೆ ಆಗಮಿಸುತ್ತವೆ.
ಮತ್ಸ್ಯ ಕ್ಷಾಮ
ಈ ವರ್ಷ ಅರ್ಧಾಂಶ ಪರ್ಸೀನ್ ದೋಣಿಗಳು ಸಮುದ್ರಕ್ಕೆ ಇಳಿದಿಲ್ಲ. ಹವಾಮಾನ ವೈಪರಿತ್ಯ ಒಂದು ಕಾರಣವಾದರೆ ಮತ್ಸ್ಯ ಕ್ಷಾಮ ಇನ್ನೊಂದು ಕಾರಣವಾಗಿದೆ. 20ರಿಂದ 30 ಮಂದಿ ಕಾರ್ಮಿಕರನ್ನು ಬಳಸಿಕೊಂಡು ಹತ್ತು ದಿನಗಳ ಕಾಲ ಆಳ ಸಮುದ್ರ ಮೀನುಗಾರಿಕೆ ಮಾಡಲು ಕನಿಷ್ಟ 2.5 ಲಕ್ಷ ದಿಂದ 3 ಲಕ್ಷ ರೂಪಾಯಿ ಬೇಕಾಗುತ್ತದೆ. 5ರಿಂದ 6 ಲಕ್ಷ ರೂಪಾಯಿ ಮೌಲ್ಯದ ಮೀನು ಬಲೆಗೆ ಬಿದ್ದರೆ ಮಾತ್ರ ದೋಣಿ ಮಾಲಿಕನಿಗೆ ಲಾಭ.
2018-2019ರ ಅವಧಿಯಲ್ಲಿ ರಾಜ್ಯದಲ್ಲಿ ಬಲೆಗೆ ಬಿದ್ದಿರುವ ಮೀನಿನ ಪ್ರಮಾಣ ಶೇಕಡ 18ರಷ್ಟು ಕಡಿಮೆಯಾಗಿದೆ. ವಾರ್ಷಿಕ ಸರಾಸರಿ 4 ಲಕ್ಷ ಟನ್ ಸಮುದ್ರ ಮೀನು ಬಲೆಗೆ ಬೀಳುತ್ತವೆ. 2016-17ರಲ್ಲಿ 1050 ಕೋಟಿ ರೂಪಾಯಿ, ಅನಂತರದ ವರ್ಷ 1,589 ಕೋಟಿ ರೂಪಾಯಿ ಮೌಲ್ಯದ ಮೀನು ವಿದೇಶಕ್ಕೆ ರಫ್ತು ಮಾಡಲಾಗಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಬುಲ್ ಟ್ರಾಲ್ ಮತ್ತು ಲೈಟಿಂಗ್ ಫಿಶ್ಶಿಂಗ್ ನಡೆಸುತ್ತಿರುವುದರಿಂದ ಮತ್ಸ್ಯ ಕ್ಷಾಮ ಉಂಟಾಗಿದೆ ಎನ್ನಲಾಗುತ್ತಿದೆ. ಈಗ ಇವೆರಡು ವ್ಯವಸ್ಥೆಯನ್ನು ನಿಷೇಧಿಸಲಾಗಿದೆ. ಹಾಗಿದ್ದರೂ, ದೊಡ್ಡ ಪ್ರಮಾಣ ಲೈಟಿಂಗ್ ಬಳಸಿ ಮೀನುಗಳನ್ನು ಆಕರ್ಷಿಸಿ ಮೀನನ್ನು ಬಲೆಗೆ ಕೆಡವಲಾಗುತ್ತಿದೆ ಎಂದು ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಆರೋಪಿಸಿದ್ದಾರೆ.
ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿ ಮಲ್ಪೆಯ ಮೀನುಗಾರರು ಕಲ್ಮಾಡಿ ಬೊಬ್ಬರ್ಯ ದೈವದ ಮೊರೆ ಹೋಗಿದ್ದಾರೆ. ಕಾರವಾರ, ಮಲ್ಪೆ, ಮಂಗಳೂರು ಮತ್ತು ಕೇರಳ ಪ್ರದೇಶದಲ್ಲಿ ಕೂಡ ಕಳೆದ ಎರಡು ತಿಂಗಳಿನಿಂದ ಬಲೆಗೆ ಮೀನು ಬೀಳುತ್ತಿಲ್ಲ ಎಂದು ಬೊಬ್ಬರ್ಯ ದೈವಕ್ಕೆ ನೇಮ ಕೊಟ್ಟು ಅರಿಕೆ ಮಾಡಿಕೊಂಡಿದ್ದಾರೆ. ಮಳೆಗಾಲ, ತೂಫನ್ ಬಂದರು ಕೂಡ ಸಮುದ್ರದ ಮೇಲ್ಮೈ ನೀರು ಬಿಸಿಯಾಗಿಯೇ ಇದೆ. ನೀರು ಬಿಸಿ ಇರುವುದರಿಂದ ಮೀನುಗಳು ಮೇಲಕ್ಕೆ ಬರುತ್ತಿಲ್ಲ. ಮೀನುಗಳು ಸಮುದ್ರ ನೀರಿನ ಮೇಲ್ ಭಾಗಕ್ಕೆ ಬಾರದೆ ಇದ್ದರೆ ಬಲೆ ಬೀಸುವುದರಿಂದ ಯಾವ ಪ್ರಯೋಜನವು ಇರುವುದಿಲ್ಲ.
ಹವಾಮಾನ ವೈಪರಿತ್ಯ ಒಂದೆಡೆಯಾದರೆ, ಆಧುನಿಕ ತಂತ್ರಜ್ಞಾನದ ದುರುಪಯೋಗ ಮಾಡಿಕೊಂಡು ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸಿರುವುದರಿಂದ ಮತ್ಸ್ಯಕ್ಷಾಮದ ಪರಿಣಾಮ ತೀವೃವಾಗಿ ಮೀನುಗಾರರನ್ನು ತಟ್ಟುತ್ತಿದೆ.
ರಾಜ್ಯ ಕರಾವಳಿಯಲ್ಲಿ ಉತ್ತರ ಕರ್ನಾಟಕ ಮಹಿಳಾ ಕಾರ್ಮಿಕರಲ್ಲದೆ, ಓಡಿಶಾ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್ ಘಡ ಪುರುಷ ಕಾರ್ಮಿಕರು ಜೀವನಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ದೇಶದಲ್ಲಿ ಎರಡೂವರೆ ಕೋಟಿ ಜನರು ಮೀನುಗಾರಿಕಾ ಉದ್ಯಮದಲ್ಲಿ ನೇರವಾಗಿ ಅವಲಂಬಿತರಾಗಿದ್ದಾರೆ.