ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರ ಹಿಂದಿರುವ ಶಕ್ತಿ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸಪ್ರಸಾದ್ ಎಂಬುದು ಈಗ ಎಲ್ಲರಿಗೂ ತಿಳಿದಿರುವ ಬಹಿರಂಗ ರಹಸ್ಯ. ವಿಶ್ವನಾಥ್ ಏನೇ ಹೇಳಿದರು ಜನ ನಂಬುತ್ತಿಲ್ಲ. ಏಪ್ರಿಲ್-ಮೇ ಲೋಕಸಭಾ ಚುನಾವಣಾ ಮತದಾನ ಮುಗಿದ ಕೂಡಲೆ ಪ್ರಸಾದ್ ಅವರನ್ನು ಅವರ ಮನೆಯಲ್ಲೇ ಭೇಟಿ ಮಾಡಿ ಸುಮಾರು 45 ನಿಮಿಷ ಮಾತುಕತೆ ನಡೆಸಿದಾಗಲೆ, ವಿಶ್ವನಾಥ್ ಆಪ್ತರಿಗೆ ಅವರ ಮುಂದಿನ ನಡೆ ಸ್ಪಷ್ಟವಾಗಿತ್ತು. ಸಿದ್ದರಾಮಯ್ಯ ಮೇಲಿನ ವೈಯಕ್ತಿಕ ದ್ವೇಷ, ಪ್ರಸಾದ್ ನಡೆಯ ಹಿಂದಿನ ಕಾರಣ ಎನ್ನುವುದು ಕೂಡಾ ಅವರಿಗೆ ಮನದಟ್ಟಾಗಿತ್ತು. ರಿಮೋಟ್ ಕಂಟ್ರೋಲ್ ಮೂಲಕ ಕೂಡಾ ಸಿದ್ದರಾಮಯ್ಯ ಆಡಳಿತ ಮೇಲೆ ಹಿಡಿತ ಹೊಂದಿರಬಾರದು ಎನ್ನುವ ಪ್ರಸಾದ್ ದ್ವೇಷದ ಜ್ವಾಲೆ ಅಂತಿಮವಾಗಿ ವಿಶ್ವನಾಥ್ ಸಮ್ಮಿಶ್ರ ಸರಕಾರದ ಪತನಕ್ಕೆ ಕೈ ಜೋಡಿಸುವುದರೊಂದಿಗೆ ಪರ್ಯಾವಸಾನಗೊಂಡಿತ್ತು. ಹುಣಸೂರು ಉಪ ಚುನಾವಣೆ ಸಂದರ್ಭದಲ್ಲಿ ಪ್ರಸಾದ್, ವಿಶ್ವನಾಥ್ ಗೆಲುವಿಗೆ ಅವಿರತ ಶ್ರಮವಹಿಸಿದರೂ, ಅಂತಿಮವಾಗಿ ಒಕ್ಕಲಿಗರ ಮತವನ್ನು ಕಾಂಗ್ರೆಸ್‍ನತ್ತ ಜೆಡಿಎಸ್ ತಿರುವುದರೊಂದಿಗೆ, ಇಡೀ ಕಾರ್ಯಾಚರಣೆ ವಿಶ್ವನಾಥ್ ಪಾಲಿಗೆ ತಿರುಗುಬಾಣವಾದದ್ದು ಇತಿಹಾಸ.
ಪ್ರಸಾದ್ ಪ್ರಕಾರ ವಿಶ್ವನಾಥ್ ಮತ್ತೆ ಸಚಿವರಾಗಲು ಅಡ್ಡಿಯಾಗುತ್ತಿರುವುದು ಅನರ್ಹ ಶಾಸಕರ ಅರ್ಹತೆಗೆ ಸಂಬಂಧಿಸಿ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು.”ಗೆದ್ದರಷ್ಟೇ ಸಚಿವ ಸ್ಥಾನ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಮತ್ತೆ ವಿಶ್ವನಾಥ್ ಸಚಿವರಾಗಲು ಇನ್ನೊಂದು ಚುನಾವಣೆ ಗೆಲ್ಲಬೇಕಿದೆ,” ಎನ್ನುವ ಪ್ರಸಾದ್ ಹೇಳಿಕೆ, ಬಿಜೆಪಿ ಅಂತರಂಗವನ್ನು ಬಹಿರಂಗಪಡಿಸಿದೆ.
ಆದರೆ ಇದೀಗ ಪ್ರಸಾದ್ ಪಾಳಯದಿಂದ ಹೊಸ ಸುದ್ದಿ ಬಂದಿದೆ. ಇದು ವಿಶ್ವನಾಥ್ ಪಾಲಿಗೆ ಮರ್ಮಾಘಾತದಂತಿದೆ. ಸ್ವತಃ ಪ್ರಸಾದ್ ಅವರೇ ವಿಶ್ವನಾಥ್ ಸಚಿವರಾಗಲು ಸಾಧ್ಯವಿಲ್ಲ ಎಂದು ಘೋಷಿಸುವ ಮೂಲಕ ವಿಶ್ವನಾಥ್ ರಾಜಕೀಯ ಜೀವನದ ಅಂತಿಮ ಷರಾ ಬರೆದಿದ್ದಾರೆ.
ಪ್ರಸಾದ್ ಪ್ರಕಾರ ಜನವರಿ 15ರ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ವಿಶ್ವನಾಥ್‍ಗೆ ಅವಕಾಶ ಸಿಗುತ್ತಿಲ್ಲ. ವಿಶ್ವನಾಥ್ ಮತ್ತೆ ಸಚಿವರಾಗಬೇಕಾದರೆ ಅವರು ಎಂಎಲ್‍ಸಿ ಅಥವಾ ಎಂಎಲ್‍ಎ ಆಗಬೇಕು. ಅದು ಸದ್ಯಕ್ಕೆ ಅಸಾಧ್ಯದ ಮಾತು.
ಮೂಲಗಳ ಪ್ರಕಾರ ಪ್ರಸಾದ್ ಮೂಲಕ ಈ ಹೇಳಿಕೆ ನೀಡಿರುವುದು ಬಿಜೆಪಿ ರಾಜ್ಯ ನಾಯಕತ್ವ. ರಾಜ್ಯದಲ್ಲಿ ಈಗಾಗಲೆ ಅಧಿಕಾರದ ಚುಕ್ಕಾಣಿ ಪಡೆದಿರುವ ಪಕ್ಷದ ಪಾಲಿಗೆ ವಿಶ್ವನಾಥ್ ಈಗೇನಿದ್ದರೂ ಗೊಡ್ಡು ಹಸು. ಏಕೆಂದರೆ, ಹಳೆ ಮೈಸೂರು ಭಾಗದಲ್ಲಿ ಅವರಿಗಿಂತ ಹೆಚ್ಚು ವರ್ಚಸ್ಸು ಹೊಂದಿರುವ ಮಾಜಿ ಸಚಿವ ಸಿ ಎಚ್ ವಿಜಯಶಂಕರ್ ಇದ್ದಾರೆ. ಹುಣಸೂರಿನಿಂದ ಸ್ಪರ್ಧೆಗಿಳಿಯಲು ಹಲವಾರು ಒಕ್ಕಲಿಗ ಮುಖಂಡರು ಸಜ್ಜಾಗಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಇನ್ನೇನಿದ್ದರೂ ವಿಶ್ವನಾಥ್ ಅತಂತ್ರ.
ಮೈಸೂರಿನ ರಾಜಕೀಯ ಬಲ್ಲವರೆಲ್ಲರ ಪ್ರಕಾರ ಪ್ರಸಾದ್ ಮಧ್ಯಸ್ಥಿಕೆ ಇಲ್ಲದಿರುತ್ತಿದ್ದರೆ, ವಿಶ್ವನಾಥ್ ಕನಸು ಮನಸ್ಸಿನಲ್ಲೂ ಕೇಸರಿ ಪಾಳಯ ಸೇರುವ ಧೈರ್ಯ ಮಾಡುತ್ತಿರಲಿಲ್ಲ. ಏಕೆಂದರೆ ವಿಶ್ವನಾಥ್ ಕಂಡರೆ, ಮೈಸೂರಿನ ಬಿಜೆಪಿ ನಾಯಕರಿಗೆ ಅಷ್ಟಕಷ್ಟೇ. ಜತೆಗೆ ವಿಶ್ವನಾಥ್ ತಾವು ನಂಬಿದ ಮೌಲ್ಯಗಳ ಬಗ್ಗೆ ಸಾರ್ವಜನಿಕವಾಗಿ ಬಹಳ ಜಾಗರೂಕರಾಗಿದ್ದರು. ಅರಸು ಸಿದ್ಧಾಂತಗಳ ಬಗ್ಗೆ ಬಹಳವಾಗಿ ವಾದ ಮಾಡುತ್ತಿದ್ದ ವಿಶ್ವನಾಥ್, ತಮ್ಮ ಬಹುಕಾಲದ ಗೆಳೆಯ ಪ್ರಸಾದ್ ಭರವಸೆ ನೀಡದಿರುತ್ತಿದ್ದರೆ ಕೇಸರಿ ಪಾಳಯಕ್ಕೆ ಜಿಗಿಯುತ್ತಿರಲಿಲ್ಲ. ಪ್ರಸಾದ್ ಅವರೆಷ್ಟೇ ಬೆಂಬಲ ನೀಡಿದರೂ, ಬಿಜೆಪಿ ಬಹುತೇಕ ನಾಯಕರು ಸ್ಥಳೀಯವಾಗಿ ವಿಶ್ವನಾಥ್ ಅವರ ನೆರವಿಗೆ ಚುನಾವಣೆಯಲ್ಲಿ ನಿಲ್ಲಲಿಲ್ಲ. ತಮ್ಮ ಸೋಲಿನ ಬಳಿಕ ಇದೇ ಕಾರಣಕ್ಕೆ ವಿಶ್ವನಾಥ್ ಹೇಳಿದ್ದು: ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ನಾಯಕರು ತನ್ನನ್ನು ಸೋಲಿಸಿದರು!
ಬಿಜೆಪಿ ಮೂಲಗಳ ಪ್ರಕಾರ ಪ್ರಸಾದ್ ಗುರಿ ಈಗೇನಿದ್ದರೂ ತನ್ನ ಅಳಿಯ ನಂಜನಗೂಡು ಶಾಸಕ ಹರ್ಷವರ್ಧನ್ ರಾಜಕೀಯ ಭವಿಷ್ಯ ಗಟ್ಟಿಗೊಳಿಸುವುದು. ಸಾಧ್ಯವಾದರೆ ಯಡ್ಡಿ ಸಂಪುಟದಲ್ಲಿ ಸಚಿವಗಿರಿ ಕೊಡಿಸುವ ಮೂಲಕ ಹಳೆ ಮೈಸೂರು ಪ್ರಾಂತ್ಯದಲ್ಲಿ ತಮ್ಮ ಹಿಡಿತ ಬಲಪಡಿಸುವ ಧಾವಂತದಲ್ಲಿ ಅವರಿದ್ದಾರೆ. ಅವರ ಪಾಲಿಗೂ ಈಗ ವಿಶ್ವನಾಥ್ ಹೊರೆ!
ದೇವರಾಜ್ ಅರಸು ಪ್ರಣೀತ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ನಾಯಕನೊಬ್ಬನ ರಾಜಕೀಯ ಅವನತಿ ಹೀಗೆ ಕೇಸರಿ ಪಾಳಯದಲ್ಲಾಗುತ್ತಿರುವುದು ಇಡೀ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿಯಂತಿದೆ.