ಮುಂಬರುವ ಹಬ್ಬ ಹರಿದಿನಗಳಿಗೆ ಬಿಬಿಎಂಪಿ ಕಮಿಷನರ್ ಎನ್ ಮಂಜುನಾಥ್ ಪ್ರಸಾದ್ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಮಾರ್ಗಸೂಚಿಗಳನ್ನು ಅನುಸರಿಸುವಂತೆ ಹಾಗೂ ಮುಖಕ್ಕೆ ಮಾಸ್ಕ್, ಕೈಗವಸು ಹಾಕುವಂತೆ ನಾಗರಿಕರನ್ನು ಕೇಳಿಕೊಂಡಿದ್ದಾರೆ.
ಮಂದಿರ, ಮಸೀದಿ ಸೇರಿದಂತೆ ಯಾವುದೇ ಧಾರ್ಮಿಕ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಬಾರದು, ಧಾರ್ಮಿಕ ಕ್ಷೇತ್ರಗಳನ್ನು ಅಧಿಕೃತವಾಗಿ ತೆರೆದಿದ್ದರೂ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕೆಂದು ಮಾರ್ಗ ಸೂಚಿಯಲ್ಲಿ ಹೇಳಲಾಗಿದೆ. ಅಲ್ಲದೆ, ಹಬ್ಬದ ಹಿನ್ನಲೆಯಲ್ಲಿ ಗೆಳೆಯರನ್ನು ಕುಟುಂಬಸ್ಥರನ್ನು ಅಥವಾ ನೆರೆಹೊರೆಯವರನ್ನು ಭೇಟಿಯಾಗಕೂಡದೆಂದು ಹೇಳಲಾಗಿದೆ. ಮನೆಯಲ್ಲಿಯೇ ತಯಾರಿಸಬಹುದಾದ ಸಿಹಿಯನ್ನು ತಯಾರಿಸಿ, ಮನೆಯಲ್ಲೇ ಹಬ್ಬ ಆಚರಿಸುವಂತೆ ಸಲಹೆ ನೀಡಲಾಗಿದೆ.
ಕರೋನಾ ಸೋಂಕು ಸುಲಭವಾಗಿ ಹರಡುವುದರಿಂದ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಯಾವುದೇ ಮೂರ್ತಿ ಇಡುವುದು ಅಥವಾ, ಸಾಮೂಹಿಕವಾಗಿ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಸಬಾರದೆಂದು ಹೇಳಲಾಗಿದೆ.
ಸಹೋದರ, ಸಹೋದರಿಯರು ಒಂದೇ ಮನೆಯಲ್ಲಿ ವಾಸಿಸದ ಹೊರತು, ರಕ್ಷಾಬಂಧನ ಹಬ್ಬಕ್ಕೆ ರಾಖಿ ಕಟ್ಟಲು ಭೇಟಿಯಾಗದಂತೆ ಸಲಹೆ ನೀಡಲಾಗಿದೆ.
ವರಮಹಾಲಕ್ಷ್ಮಿ ವೃತ, ಜನ್ಮಾಷ್ಟಮಿ ಹಾಗೂ ಓನಂ ಗಳಿಗೆ ಮನೆಯಲ್ಲೇ ಪ್ರಸಾದ ತಯಾರಿಸಿ ಮನೆಯಲ್ಲೇ ಪೂಜೆ ನಡೆಸಲು ಕೇಳಿಕೊಳ್ಳಲಾಗಿದೆ. ಯಾವುದೇ ದೇವಸ್ಥಾನ ಅಥವಾ ಸಂಬಂಧಿಕರ ಅಥವಾ ಇತರರ ಮನೆಗಳಿಗೆ ತೆರಳದೆ ಆದಷ್ಟು ಸುರಕ್ಷತೆ ಪಾಲಿಸುವಂತೆ ಹೇಳಲಾಗಿದೆ.
ಮುಸ್ಲಿಮರ ಹಬ್ಬವೂ ಬರಲಿದ್ದು, ಅದರ ಅಧಿಕೃತ ಮಾಹಿತಿಯನ್ನು ವಕ್ಫ್ ಬೋರ್ಡ್ ನಿರ್ಧರಿಸಲಿದೆ. ಅದಾಗ್ಯೂ ಯಾವುದೇ ಸಾಮೂಹಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಲು ಆದಷ್ಟು ಪ್ರಯತ್ನಿಸಬೇಕೆಂದು ಹೇಳಲಾಗಿದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ