ಕಳೆದ ಸೆಪ್ಟೆಂಬರ್ 29 ರಂದು ಇಡೀ ದೇಶಾದ್ಯಂತ ಜನರ ಆಕ್ರೋಶ ಭುಗಿಲೆದ್ದಿತ್ತು. ಉತ್ತರ ಪ್ರದೇಶದ ಹಾತ್ರಾಸ್ ಗ್ರಾಮದಲ್ಲಿ ದಲಿತ ಯುವತಿಯೊಬ್ಬಳನ್ನು ಮೇಲ್ವರ್ಗದ ಯುವಕರು ಅತ್ಯಾಚಾರ ನಡೆಸಿ ನಾಲಗೆ ಕತ್ತರಿಸಿದ್ದರೆಂಬ ಸುದ್ದಿ ಪ್ರಚಾರವಾಗಿ ಇಡೀ ದೇಶ ಸಿಡಿದೆದ್ದಿತ್ತು. ಕೆಲವು ವರ್ಷಗಳ ಹಿಂದೆ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೇಶದಲ್ಲಿ ಸೃಷ್ಟಿಯಾದ ಸಂಚಲನವೇ ಈ ಅತ್ಯಾಚಾರ ಪ್ರಕರಣದಲ್ಲೂ ಸೃಷ್ಟಿಯಾಗಲಾರಂಬಿಸಿತ್ತು. ಮೊದಲೇ ಉತ್ತರ ಪ್ರದೇಶವು ಅತೀ ಹೆಚ್ಚು ಅಪರಾಧಗಳು ನಡೆಯುವ ರಾಜ್ಯವಾಗಿದ್ದು ಇಲ್ಲಿ ದಲಿತರ ಮೇಲಿನ ದೌರ್ಜನ್ಯ ಅತ್ಯಂತ ಹೆಚ್ಚಾಗಿದೆ.
ಹತ್ತಾರು ಸಂಘಟನೆಗಳು , ವಿರೋಧ ಪಕ್ಷಗಳು ಹಾತ್ರಾಸ್ ಚಲೋ ಎಂಬ ಘೋಷಣೆಯಡಿ ದೊಡ್ಡ ಮಟ್ಟದ ಪ್ರತಿಭಟನೆಗೆ ಸಜ್ಜಾಗಿದ್ದರು. ಆದರೆ ಯೋಗಿ ಆದಿತ್ಯನಾಥ ಅವರ ರಾಜ್ಯ ಸರ್ಕಾರ ಹಾತ್ರಾಸ್ ಸಂತ್ರಸ್ಥೆಯ ದೇಹವನ್ನು ರಾತ್ರೋರಾತ್ರಿ ಕುಟುಂಬದವರ ಉಪಸ್ಥಿತಿಯೂ ಇಲ್ಲದೆ ಸುಟ್ಟು ಹಾಕಿತ್ತು. ಆ ಮೂಲಕ ನಡೆಯಲಿದ್ದ ಕಾನೂನು ಸುವ್ಯವಸ್ಥೆಯ ತೊಡಕನ್ನು ನಿವಾರಿಸಿಕೊಂಡಿದ್ದೇ ಅಲ್ಲದೆ ಪ್ರತಿಭಟನಾಕಾರರ ಮೇಲೆ ಮೊಕದ್ದಮೆಗಳನ್ನು ದಾಖಲಿಸುವ ಮೂಲಕ ಪ್ರತಿಭಟನೆಯನ್ನೇ ಹತ್ತಿಕ್ಕುವಲ್ಲಿ ಯಶಸ್ವಿ ಆಯಿತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ ಮಾನವ ಹಕ್ಕುಗಳ ಸಂಘಟನೆಯಾದ ಪಿಯುಸಿಲ್ (ಪೀಪಲ್ ಯುನಿಯನ್ ಫಾರ್ ಸಿವಿಕ್ ಲಿಬರ್ಟೀಸ್ ) ಹಾತ್ರಾಸ್ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತೆಯ ಕುಟುಂಬದ ಸದಸ್ಯರು ಗೃಹಬಂಧನಲ್ಲಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಪ್ರತಿಭಟನೆಯ ಕಾವು ತೀವ್ರವಾಗಿದ್ದಾಗ ಕುಟುಂಬಕ್ಕೆ ಕೇಂದ್ರೀಯ ಮೀಸಲು ಪಡೆಯ ಬಿಗಿ ಭದ್ರತೆಯನ್ನು 24 ಘಂಟೆಯೂ ಒದಗಿಸಿದೆ. ಆದರೆ ಅವರಿಗೆ ಒದಗಿಸಿದ್ದ ಭದ್ರತೆಯನ್ನು ಹಿಂತೆಗೆದುಕೊಂಡರೆ ಅವರ ಕುಟುಂಬದ ಸದಸ್ಯರಿಗೆ ಜೀವ ಭಯ ಉಂಟಾಗಲಿದೆ ಎಂದೂ ಪಿಯುಸಿಲ್ ಹೇಳಿದೆ.
ಈ ಕುರಿತು ಮೊನ್ನೆ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಪಿಯುಸಿಎಲ್ ಸದಸ್ಯ ಕಮಲ್ ಸಿಂಘಿ, ನಾವು ಸಂತ್ರಸ್ಥೆಯ ಕುಟುಂಬವನ್ನು ಭೇಟಿಯಾಗಲು ಹೋದಾಗ, ಓರ್ವ ಭಯೋತ್ಪಾದಕನನ್ನು ಅವನ ಮನೆಯಲ್ಲಿ ಭೇಟಿಯಾಗಲು ಹೋಗುತ್ತಿದ್ದೇವೆ ಎಂದು ಭಾಸವಾಯಿತು ಮತ್ತು ಬಯಾನಕ ಅತ್ಯಾಚಾರಕ್ಕೊಳಗಾದ ಕುಟುಂಬದಂತೆ ತೋರುತ್ತಿರಲಿಲ್ಲ ಎಂದು ಹೇಳಿದರು. ಹತ್ರಾಸ್ ಪ್ರಕರಣದ ಬಗ್ಗೆ ಕೇಂದ್ರೀಯ ತನಿಖಾ ಸಂಸ್ತೆ (ಸಿಬಿಐ) ತನಿಖೆಯ ವಿವರವನ್ನು ಈ ನಾಗರಿಕ ಹಕ್ಕುಗಳ ಸಂಸ್ಥೆ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 29 ರ ಬೆಳಿಗ್ಗೆ ನಾಲ್ವರು ಮೇಲ್ವರ್ಗದ ಠಾಕೂರ್ ಗಂಡಸರು ನಡೆಸಿದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ದಲಿತ ಸಂತ್ರಸ್ತೆ ಯ ಶವವನ್ನು ಸೆಪ್ಟೆಂಬರ್ 30 ರ ಬೆಳಿಗ್ಗೆ ಜಿಲ್ಲಾ ಆಡಳಿತವು ಕುಟುಂಬದ ಸದಸ್ಯರ ಭಾಗವಹಿಸುವಿಕೆ ಅಥವಾ ಒಪ್ಪಿಗೆಯಿಲ್ಲದೆ ಸುಟ್ಟು ಹಾಕಿತು. ಈ ಪ್ರಕರಣವು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು.
ಆದರೆ,ಇದಾದ ಸುಮಾರು ಎರಡು ತಿಂಗಳ ನಂತರ, ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಪಿಯುಸಿಎಲ್ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ಸಿಬಿಐ ತನಿಖೆಯ ಹೊರತಾಗಿಯೂ ಸಂತ್ರಸ್ಥೆಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಗುವ ಭರವಸೆ ಇಲ್ಲ. ಇಡೀ ಕುಟುಂಬವು ಒಂದು ರೀತಿಯ ಗೃಹಬಂಧನದಲ್ಲಿದೆ. ಅವರ ಸಾಮಾನ್ಯ ಸಾಮಾಜಿಕ ಜೀವನವು ಮೊಟಕಾಗಿದೆ. ಕುಟುಂಬ ಸದಸ್ಯರು ಜೀವ ಭಯ ಹೊಂದಿದ್ದಾರೆ ಎಂದು ಹೇಳಿದೆ. ಪಿಯುಸಿಲ್ ತಂಡದ ಕಮಲ್ ಸಿಂಗ್, ಫರ್ಮನ್ ನಖ್ವಿ, ಅಲೋಕ್, ಶಶಿಕಾಂತ್ ಮತ್ತು ಕೆ.ಬಿ. ಮೌರ್ಯ ಅವರು ಘಟನೆ ಸಂಭವಿಸಿದ ಹಥ್ರಾಸ್ನ ಬೂಲ್ಗಾರಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದರು , ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಮಾಡಿದ ಸಿಬಿಐ ತನಿಖೆಗೆ ಸಂಬಂಧಿಸಿದ ಅಂಶಗಳನ್ನು ಎತ್ತಿ ತೋರಿಸುವ ವರದಿಯನ್ನು ಬಿಡುಗಡೆ ಮಾಡಿದರು.
ಅತ್ಯಾಚಾರಕ್ಕೊಳಗಾದ ಕುಟುಂಬದ ಪುನರ್ವಸತಿಗೆ ವ್ಯವಸ್ಥೆ ಮಾಡಬೇಕು ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗದ ಭರವಸೆಯನ್ನು ತಕ್ಷಣವೇ ಈಡೇರಿಸಬೇಕು ಎಂದು ‘ಎ ಬ್ಲ್ಯಾಕ್ ಸ್ಟೋರಿ’ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. ಸಿಆರ್ಪಿಎಫ್ ಭದ್ರತೆ ಹಿಂತೆಗೆದುಕೊಂಡ ನಂತರ ಏನಾಗಬಹುದು ಎಂಬ ಬಗ್ಗೆ ಕುಟುಂಬವು ಚಿಂತಿಸುತ್ತಿದೆ ಎಂದು ಕಮಲ್ ಸಿಂಗ್ ಹೇಳಿದರು. ಸಂತ್ರಸ್ತೆಯ ತಂದೆಯು ಸುರಕ್ಷತೆಯ ಕಾರಣಗಳಿಗಾಗಿ ಹಳ್ಳಿಯಲ್ಲಿ ಕೆಲಸ ಮಾಡುವ ಬದಲು ತನ್ನ ಮಕ್ಕಳನ್ನು ಹೊರಗೆ ಕೆಲಸಕ್ಕೆ ಕಳುಹಿಸುವುದಾಗಿ ಹೇಳಿದ್ದಾನೆ. ನಾವು ಕುಟುಂಬದ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸುತ್ತೇವೆ ಏಕೆಂದರೆ ಸ್ಥಳೀಯ ಆಡಳಿತ, ಪೊಲೀಸರು ಮತ್ತು ಗ್ರಾಮದ ಮೇಲ್ಜಾತಿಯ ಸದಸ್ಯರ ನಡುವಿನ ಸಂಬಂಧವು ಮೊದಲಿನಂತೆಯೇ ಇರುತ್ತದೆ ಎಂದರು.
ಈ ಘಟನೆಯಲ್ಲಿ ಪೊಲೀಸರ ಪಾತ್ರವನ್ನು ಕೂಡ ಸಿಬಿಐ ತನಿಖೆ ಮಾಡಬೇಕು ಎಂದು ಅವರು ಹೇಳಿದರು. ಸಿಬಿಐ ತನಿಖೆಯ ವ್ಯಾಪ್ತಿಯನ್ನು ಹೆಚ್ಚಿಸಬೇಕು ಮತ್ತು ಈ ಪ್ರಕರಣವನ್ನು ನಿರ್ಲಕ್ಷಿಸಿದ ಪೊಲೀಸ್ ಅಧಿಕಾರಿಗಳನ್ನೂ ಸಹ ಪ್ರಶ್ನಿಸಬೇಕು ಏಕೆಂದರೆ ಇದು ಅತ್ಯಾಚಾರವಲ್ಲ ಮತ್ತು ಅಲ್ಪಾವಧಿಯಲ್ಲಿ ದೇಹವನ್ನು ಸುಟ್ಟುಹಾಕಿದೆ ಎಂಬ ಹೇಳಿಕೆಯನ್ನೂ ತನಿಖೆ ಮಾಡಬೇಕು ಎಂದು ಅವರು ಹೇಳಿದರು. ಕಳೆದ ತಿಂಗಳು ಹತ್ರಾಸ್ ಗೆ ತೆರಳುತ್ತಿದ್ದಾಗ ಮಥುರಾದಲ್ಲಿ ಬಂಧಿಸಲ್ಪಟ್ಟಿದ್ದ ಪತ್ರಕರ್ತ ಸಿದ್ದೀಕ್ ಕಪ್ಪನ್ ಸೇರಿದಂತೆ ನಾಲ್ಕು ಜನರ ಮೇಲೆ ಪೊಲೀಸರು ಮಾಡಿರುವ ಆರೋಪಗಳ ಉದ್ದೇಶ ಈ ವಿಷಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದಾಗಿವೆ ಎಂದು ಪಿಯುಸಿಎಲ್ ಹೇಳಿದೆ.
ಪಿಯುಸಿಎಲ್ ನ ಮತ್ತೊಬ್ಬ ಸದಸ್ಯ ಮತ್ತು ವಕೀಲರಾದ ಫರ್ಮನ್ ನಖ್ವಿ,ಅವರು ಈ ಪ್ರಕರಣದೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಎಳೆದು ತಂದಿದ್ದು ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸಲು ಯತ್ನಿಸಲಾಯಿತು. ಎಂದರು. ಪಿಎಫ್ಐ ಉಗ್ರ ಇಸ್ಲಾಮಿಸ್ಟ್ ಸಂಘಟನೆಯಾಗಿದ್ದರೆ, ಅವರು ಅದನ್ನು ಏಕೆ ನಿಷೇಧಿಸಬಾರದು? ಎಂದೂ ಅವರು ಪ್ರಶ್ನಿಸಿದರು. ಬಂಧಿಸಲಾಗಿರುವ ನಾಲ್ವರನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಿಯುಸಿಎಲ್ನ ಮತ್ತೊಬ್ಬ ಸದಸ್ಯ ಅಲೋಕ್ ಅನ್ವರ್ ಹೇಳಿದ್ದಾರೆ. ಪಿಯುಸಿಎಲ್ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ, ಕಳೆದ ತಿಂಗಳು ಬಂಧಿಸಲ್ಪಟ್ಟ ನಾಲ್ವರಂತೆಯೇ ನಾವೂ ಕೂಡ ಬಂಧನಕ್ಕೀಡಾಗಬಹುದೆಂದು ಭಯಪಟ್ಟಿದ್ದೆವು ಎಂದು ಸಿಂಗ್ ಹೇಳಿದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸರ್ಕಾರ ಹಾತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ರಕ್ಷಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ, ಮ್ಯಾಜಿಸ್ಟ್ರೇಟ್ ಅವರು ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದರು. ಮಾಧ್ಯಮಗಳು ಹೊರಟುಹೋದ ನಂತರ ಏನಾಗಲಿದೆ ಎಂದು ಅವರಿಗೆ ಬೆದರಿಕೆ ಒಡ್ಡಿ ನಿಮಗೆ, ಪರಿಹಾರದ ಮೊತ್ತ ಬೇಕೇ ಅಥವಾ ಬೇಡವೇ ಎಂದು ಕೇಳಿದ್ದಕ್ಕಾಗಿ ಅವರ ವಿರುದ್ಧ ಈವರೆಗೂ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ಸರ್ಕಾರವೇ ಅವರನ್ನು ರಕ್ಷಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪಿಯುಸಿಎಲ್ ಆರೋಪಿಸಿದೆ.
ಕೃಪೆ: ದಿ ವೈರ್