ಕರೋನಾ ಅಪ್ಪಳಿಸುವ ಮುನ್ನವೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಕರೋನಾ ಬಂದ ಮೇಲೆ, ಲಾಕ್‌ಡೌನ್ ಜಾರಿ ಮಾಡಿದ ಮೇಲೆ ಭೀಕರ ಪರಿಸ್ಥಿತಿ ತಲುಪಿದೆ. ಹಳಿ ತಪ್ಪಿದ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ರಿಸರ್ವ್ ಬ್ಯಾಂಕ್ ಮೊರೆ ಹೋಗಿತ್ತು. ಈಗಂತೂ ಕೇಂದ್ರ ಸರ್ಕಾರದ ಮುಂದೆ ರಿಸರ್ವ್ ಬ್ಯಾಂಕಿನ ಮೊರೆ ಹೋಗದೆ ಬೇರೆ ದಾರಿಯೇ ಇಲ್ಲದಂತಾಗಿದೆ.
ಈ ಬಾರಿ ಪ್ರಮುಖ ಆದಾಯಗಳಲ್ಲಿ ಒಂದಾದ ಜಿಎಸ್‌ಟಿ ಸರಿಯಾಗಿ ಸಂಗ್ರಹವಾಗಿಲ್ಲ. ಮುಂದಿನ ತ್ರೈಮಾಸಿಕದಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗುವ ಸಾಧ್ಯತೆಗಳು ಕ್ಷೀಣವಾಗಿವೆ. ಆದುದರಿಂದ ಅಗತ್ಯ ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ರಿಸರ್ವ್ ಬ್ಯಾಂಕ್ ಗೌವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಕರೆಮಾಡಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
ಕರೋನಾ ಮತ್ತು ಲಾಕ್‌ಡೌನ್ ಕಾರಣಗಳಿಂದ ಕೆಲವು ಅಂದಾಜಿನ ಪ್ರಕಾರ ಕೇಂದ್ರ ಸರ್ಕಾರವು ಒಟ್ಟು ದೇಶೀಯ ಉತ್ಪನ್ನದ ಶೇಕಡಾ 7ರಷ್ಟು ಬಜೆಟ್ ಕೊರತೆಯನ್ನು ಎದುರಿಸುತ್ತಿದೆ. ಇದು ಹಿಂದಿನ ಎರಡು ದಶಕಗಳಲ್ಲೇ ಅತ್ಯಂತ ಹೆಚ್ಚು ಕೊರತೆಯಾಗಿದೆ. ಶೇಕಡಾ 7ರಷ್ಟು ಬಜೆಟ್ ಕೊರತೆಯನ್ನು ಹೇಗೆ ನೀಗಿಕೊಳ್ಳಬೇಕೆಂಬುದು ಕೇಂದ್ರ ಹಣಕಾಸು ಇಲಾಖೆಗೆ ಇರುವ ಅತ್ಯಂತ ದೊಡ್ಡ ಸವಾಲು. ಈ ವಿಷಯಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಜುಲೈ 8ರಂದು ಹಿರಿಯ ಸಚಿವರ ಜೊತೆಗೂ ಚರ್ಚೆ ಮಾಡಿದ್ದಾರೆ. ಆದರೆ ಸೂಕ್ತ ಪರಿಹಾರ ಮಾರ್ಗವೊಂದು ಲಭಿಸಿಲ್ಲ. ಇದೇ ಕಾರಣಕ್ಕೆ ಬೇರೆ ದಾರಿ ಕಾಣದೆ ರಿಸರ್ವ್ ಬ್ಯಾಂಕ್ ಬಾಗಿಲು ಬಡಿಯುವತ್ತ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
‘ಈಗಿನಿಂದಲೇ ಕೆಲವು ರೀತಿಯ ಕೊರತೆ ಹಣವನ್ನು ತುಂಬಿಕೊಳ್ಳುವುದು ಸೂಕ್ತ. ಸರ್ಕಾರ ಖರ್ಚು ಮಾಡಿದರೆ ಮಾತ್ರ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗುತ್ತದೆ. ಸಾಂಕ್ರಾಮಿಕ ರೋಗದ ನಡುವೆಯು ಅಮೇರಿಕಾ ಮತ್ತು ಜಪಾನ್ ಕೇಂದ್ರ ಬ್ಯಾಂಕುಗಳು ತಮ್ಮ ಸರ್ಕಾರಗಳಿಂದ ದಾಖಲೆಯ ಪ್ರಮಾಣದಲ್ಲಿ ಮಾರುಕಟ್ಟೆಗೆ ಹಣ ಪೂರೈಸುತ್ತಿವೆ. ಹಣಕಾಸು ವಹಿವಾಟು ಪ್ರಚೋದನೆ ನೀಡುತ್ತಿವೆ. ಇಂಡೋನೇಷ್ಯಾದಂತಹ ಉದಯೋನ್ಮುಖ ಮಾರುಕಟ್ಟೆಯಲ್ಲಿಯೂ ಇಂಥದೇ ವಾತಾವರಣ ಕಾಣಬಹುದು. ಅಲ್ಲಿ ಕೇಂದ್ರ ಬ್ಯಾಂಕ್ ಈ ವಾರ ಸರ್ಕಾರದಿಂದ ನೇರವಾಗಿ ಶತಕೋಟಿ ಡಾಲರ್ ಬಾಂಡ್‌ಗಳನ್ನು ಖರೀದಿಸಲು ಒಪ್ಪಿಕೊಂಡಿದೆ. ಈ ವಿಧಾನವು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ, ವಿಶೇಷವಾಗಿ ಹಣದುಬ್ಬರ, ಕರೆನ್ಸಿ ಮತ್ತು ಕೇಂದ್ರ ಬ್ಯಾಂಕಿನ ಸ್ವಾತಂತ್ರ್ಯಕ್ಕೆ ಅಪಾಯ ಉಂಟುಮಾಡುತ್ತದೆ’ ಎಂದು ನವದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ ಆರ್‌ಬಿಐ ಪ್ರಾಧ್ಯಾಪಕ ಸಬಿಯಾಸಾಚಿ ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಭಾರತದ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯಲ್ಲಿ ಆರ್‌ಬಿಐ ಪ್ರಾಥಮಿಕ ಮಾರುಕಟ್ಟೆಯಲ್ಲಿ ನೇರವಾಗಿ ಸರ್ಕಾರದಿಂದ ಬಾಂಡ್‌ಗಳನ್ನು ಖರೀದಿಸಲು ಅವಕಾಶ ಇರುವುದಿಲ್ಲ. ಆದರೆ ದೇಶವು ರಾಷ್ಟ್ರೀಯ ವಿಪತ್ತು ಅಥವಾ ತೀವ್ರ ಮಂದಗತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕಾನೂನಿನ ಹೊರತಾಗಿಯೂ ಕ್ರಮ ಕೈಗೊಳ್ಳುವ ಉಪಾಯ ಇದೆ. ಈ ಸಂದರ್ಭದಲ್ಲಿ ಸೂಕ್ತ ನಿರ್ಣಯ ಮತ್ತು ಸೂಕ್ತ ಅನುಷ್ಠಾನ ಮುಖ್ಯವಾಗುತ್ತದೆ.

ರಿಸರ್ವ್ ಬ್ಯಾಂಕ್ ಇದುವರೆಗೆ ದ್ವಿತೀಯ ಮಾರುಕಟ್ಟೆಯಲ್ಲಿ ಕೆಲವು ವಿವೇಚನಾಯುಕ್ತ ಬಾಂಡ್ ಖರೀದಿಗಳನ್ನು ಮಾಡಿದೆ. ಆದರೆ ಸರ್ಕಾರದ ಸಾಲ, ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್‌ವರೆಗೆ ಆಡಳಿತದ ದಾಖಲೆಯ 12 ಟ್ರಿಲಿಯನ್ ಹಣವನ್ನು ಹೇಗೆ ನಿರ್ವಹಣೆ ಮಾಡುತ್ತದೆ ಎಂಬ ಬಗ್ಗೆ ಇನ್ನೂ ಯೋಜನೆ ರೂಪಿಸಿಲ್ಲ. ಸದ್ಯಕ್ಕೆ ಬ್ಯಾಂಕುಗಳು ಸಾರ್ವಭೌಮ ಬಾಂಡ್‌ಗಳನ್ನು ಆಶಾವಾದದ ಮೇಲೆ ಸಂಗ್ರಹ ಮಾಡುತ್ತಿವೆಯಷ್ಟೇ. ಕೇಂದ್ರ ಬ್ಯಾಂಕ್ ಸಾಲ ಪೂರೈಕೆಯನ್ನು ನೀಡುತ್ತಿದೆಯಾದರೂ ಸಾಲ ಮಾಡುವವರ ಕಡೆಯಿಂದ ಗುಣಮಟ್ಟದ ಬೇಡಿಕೆ ಇಲ್ಲದರುವುದರಿಂದ, ತಮ್ಮ ಸಾರ್ವಭೌಮ ನೋಟುಗಳ ಹಿಡುವಳಿಯನ್ನು ಜೂನ್ 19ರ ವೇಳೆಗೆ 41.4 ಟ್ರಿಲಿಯನ್ ರೂಪಾಯಿಗಳಿಗೆ ಏರಿಸಿದೆ. ಇದು ಮಾರ್ಚ್ ಅಂತ್ಯದಿಂದ ಶೇಕಡಾ 13ರಷ್ಟು ಹೆಚ್ಚಾಗಿದೆ.
ಕ್ರೆಡಿಟ್ ರೇಟಿಂಗ್ ಕೆಳಮುಖವಾಗಿರುವುದು ಭಾರತಕ್ಕೆ ಮತ್ತೊಂದು ಅಪಾಯ. ಈ ವರ್ಷ ನಾಲ್ಕು ದಶಕಗಳಿಗಿಂತಲೂ ಹೆಚ್ಚು ಆರ್ಥಿಕ ಸಂಕುಚಿತನಗೊಂಡಿದೆ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಕ್ರೆಡಿಟ್ ಸ್ಕೋರ್ ಫಿಚ್ ರೇಟಿಂಗ್ಸ್ ಮತ್ತು ಮೂಡಿಸ್ ಇನ್ವೆಸ್ಟರ್ಸ್ ಸೇವೆಯಲ್ಲಿನ ಜಂಕ್‌ನಿಂದ ಕೇವಲ ಒಂದು ಹೆಜ್ಜೆ ಅಂತರದಲ್ಲಿದೆ. ಇದೇ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರಜ್ಞರು ಈ ವರ್ಷ ರಾಷ್ಟ್ರದ ಹಣಕಾಸಿನ ಕೊರತೆಯು ಜಿಡಿಪಿಯ ಶೇಕಡಾ 7ರಷ್ಟನ್ನು ಮುಟ್ಟಲಿದೆ ಎಂದು ಹೇಳುತ್ತಿದ್ದಾರೆ.
ರೇಟಿಂಗ್ ಕೆಳಮುಖವಾಗಿ ಸಾಗುತ್ತಿರುವುದರ ಅಪಾಯ ಕೇಂದ್ರ ಬ್ಯಾಂಕ್ ನೇರವಾಗಿ ಸರ್ಕಾರದಿಂದ ಬಾಂಡ್‌ಗಳನ್ನು ಖರೀದಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸಬಹುದು. ಆದರೆ ಆಗಸ್ಟ್‌ನಲ್ಲಿ ಲಾಭಾಂಶ ಪಾವತಿಯ ಮೂಲಕ ಸರ್ಕಾರವನ್ನು ರಕ್ಷಿಸಲು ಆರ್‌ಬಿಐಗೆ ಅವಕಾಶವಿದೆ. ಆರ್‌ಬಿಐ ತನ್ನ ಮರುಮೌಲ್ಯಮಾಪನ ನಿಕ್ಷೇಪಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಸರ್ಕಾರವನ್ನು ಅಪಾಯದಿಂದ ತುಸು ಪಾರು ಮಾಡಬಹುದಾಗಿದೆ. ಇದಲ್ಲದೆ ಕೇಂದ್ರ ಸರ್ಕಾರವು ‘ವಿಶೇಷ ಕೋವಿಡ್ ಬಾಂಡ್’ ನೀಡುವ ಸಾಧ್ಯತೆಯೂ ಇರುವುದರಿಂದ ರಿಸರ್ವ್ ಬ್ಯಾಂಕ್ ಸಹಾಯವಿಲ್ಲದೆ ಮುಂದಡಿ ಇಡಲು ಸಾಧ್ಯವಿಲ್ಲ.
ನಾಲ್ಕು ವರ್ಷಗಳ ಹಿಂದೆ ಕೇಂದ್ರೀಯ ಬ್ಯಾಂಕ್ ಗವರ್ನರ್ ನೇತೃತ್ವದ ಹಣಕಾಸು ನೀತಿ ಸಮಿತಿಯನ್ನು ರಚಿಸಿದಾಗಿನಿಂದ ಹಣದುಬ್ಬರವು ಹೆಚ್ಚು ಕಡಿಮೆ ನಿಯಂತ್ರಣದಲ್ಲಿದೆ. ಆದರೆ ಆ ಲಾಭಗಳು ಮಾತ್ರ ಕಣ್ಣಿಗೆ ಕಾಣುತ್ತಿಲ್ಲ. 1980ರ ದಶಕದಲ್ಲಿ ಭಾರತವು ಕೊರತೆ ಹಣಕಾಸನ್ನು ಆಶ್ರಯಿಸಿದಾಗ ಮತ್ತು ದ್ವಿ-ಅಂಕಿಯ ಹಣದುಬ್ಬರಕ್ಕೆ ಕಾರಣವಾದ ಅನುಭವಗಳಿಂದ ಲಾಭಾಂಶವನ್ನು ಸರ್ಕಾರಕ್ಕೆ ಕೊಡಲು ಕೇಂದ್ರೀಯ ಬ್ಯಾಂಕ್ ಹಿಂದೆ ಸರಿಯುತ್ತಿರಬಹುದು. ಅಂತಿಮವಾಗಿ ರಿಸರ್ವ್ ಬ್ಯಾಂಕ್ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದುನೋಡಬೇಕು.