ಕನ್ನಡ ಸಿನಿಮಾ ರಂಗ ಸ್ಯಾಂಡಲ್ ವುಡ್ ಸದ್ಯ ಮಾದಕತೆಗಿಂತ ಮಾದಕ ಅಮಲಿನ ಕಾರಣಕ್ಕೆ ದಿನದಿಂದ ದಿನಕ್ಕೆ ರೋಚಕ ಸುದ್ದಿಗಳಿಗೆ ಗ್ರಾಸವಾಗಿದೆ.
ಕಳೆದ ಒಂದು ತಿಂಗಳನಿಂದ ನಿರಂತರವಾಗಿ ಡ್ರಗ್ಸ್ ದಂಧೆಯ ಕಾರಣಕ್ಕೆ ಸಿಸಿಬಿ ಪೊಲೀಸರು ಮತ್ತು ನಾರ್ಕೊಟಿಕ್ಸ್ ವಿಭಾಗದ ತನಿಖೆಯ ಬಿಸಿಗೆ ಸ್ಟಾರ್ ನಟನಟಿಯ ಹೀರೋ ಇಮೇಜು ಜನಸಾಮಾನ್ಯರ ಕಣ್ಣಲ್ಲಿ ಕರಗತೊಡಗಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಿರ್ಮಾಪಕ ಪ್ರಶಾಂತ್ ಸಂಬರಗಿ ನೀಡಿದ ಮಾಹಿತಿ ಮತ್ತು ಅದರ ಬೆನ್ನಲ್ಲೇ ನಟಿ ರಾಗಿಣಿ ದ್ವಿವೇದಿಯ ವಿಚಾರಣೆಯೊಂದಿಗೆ ಆರಂಭವಾದ ಸ್ಯಾಂಡಲ್ ವುಡ್ ಮಾದಕ ಲೋಕದ ಅನಾವರಣ ಗಾಥೆ ದಿನಕ್ಕೊಬ್ಬರು ನಟನಟಿಯರ ವಿಚಾರಣೆ, ಬಂಧನ, ನೋಟೀಸ್ ಮೂಲಕ ಮೆಗಾ ಧಾರಾವಾಹಿಯಂತೆ ಮುಂದುವರಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ, ಡ್ರಗ್ಸ್ ದಂಧೆಯ ಪ್ರಮುಖರು ಎನ್ನಲಾದ ಬಂಧಿತರ ಆಪ್ತರೊಂದಿಗೆ ನಂಟು ಹೊಂದಿ, ತನಿಖೆಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಈಗಾಗಲೇ ತನಿಖಾ ತಂಡ ಸಿಸಿಬಿಯ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಮತ್ತೊಂದು ಮುಖ್ಯಪೇದೆಯನ್ನು ಅಮಾನತು ಮಾಡಲಾಗಿದೆ. ಸಿಸಿಪಿ ಎಸಿಪಿ ಎಂ ಆರ್ ಮುಧವಿ ಮತ್ತು ಮುಖ್ಯಪೇದೆ ಮಲ್ಲಿಕಾರ್ಜುನ್ ಎಂಬುವರನ್ನು ಆರೋಪಿಗಳಿಗೆ ತನಿಖೆಯ ಸುಳಿವು ನೀಡುತ್ತಿದ್ದ ಆರೋಪದ ಮೇಲೆ ಅಮಾನತು ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ. ಇದಲ್ಲದೆ ಇನ್ನೂ ಒಬ್ಬರು ಎಸಿಪಿ ದರ್ಜೆಯ ಅಧಿಕಾರಿ ಮತ್ತು ಕೆಲವು ಸಿಬ್ಬಂದಿ ಕೂಡ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದು, ಅವರನ್ನು ತನಿಖೆಯ ಜಾಲದಿಂದ ಪಾರು ಮಾಡುವ ಯತ್ನ ನಡೆಸಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ಮೇಲೆಯೂ ಸದ್ಯದಲ್ಲೇ ಕ್ರಮ ಜರುಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Also Read: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ವೀರೇನ್ ಖನ್ನಾ ಕುರಿತ ಸಂಪೂರ್ಣ ಮಾಹಿತಿ
ಬಂಧಿತ ವಿರೇನ್ ಖನ್ನಾ, ರಾಗಿಣಿ ದ್ವಿವೇದಿ, ಸಂಜನಾ ಗರ್ಲಾನಿ, ರವಿಶಂಕರ್, ನಿಯಾಜ್, ಲೂಮ್ ಪೆಪ್ಪರ್ ಸಾಂಬಾ, ರಾಹುಲ್ ಸೇರಿದಂತೆ ಮತ್ತಿತರರ ಸಂಪರ್ಕಿತರು ಮತ್ತು ಅವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ಹಿಂದೆ ಸಿಸಿಬಿ ಬಿದ್ದಿದೆ. ಅದರಲ್ಲೂ ಪ್ರಮುಖವಾಗಿ ತಲೆಮರೆಸಿಕೊಂಡಿರುವ ಶಿವಪ್ರಕಾಶ್, ಆದಿತ್ಯ ಆಳ್ವಾ, ಶೇಖ್ ಫಾಜಲ್ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ನಡುವೆ, ದಿಗಂತ್, ಐಂದ್ರಿತಾ ರೇ, ಲೂಸ್ ಮಾದ ಯೋಗೀಶ್, ಅಕುಲ್ ಬಾಲಾಜಿ ಸೇರಿದಂತೆ ಕೆಲವರನ್ನು ವಿಚಾರಣೆ ನಡೆಸಿರುವ ಪೊಲೀಸರು, ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಟಾರ್ ನಟನಟಿಯರು ಸಿಸಿಬಿ ಜಾಲಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆದರೆ, ಪ್ರಕರಣದ ವಿಚಾರಣೆಯ ವಿಷಯದಲ್ಲಿ ಸಿಸಿಬಿ ಆರಂಭದಲ್ಲಿ ತೋರಿಸಿದ್ದ ಉತ್ಸಾಹ ತೋರಿಸುತ್ತಿಲ್ಲ. ತನಿಖೆ ನಿಧಾನಗತಿಗೆ ಕುಸಿದಿದ್ದು, ಅದರ ಹಿಂದೆ ಸರ್ಕಾರ ಮತ್ತು ಆಡಳಿತದ ಪ್ರಭಾವಿಗಳ ರಕ್ಷಣಾತ್ಮಕ ಆಟದ ಸುಳಿವಿದೆ. ಸಿಸಿಬಿ ತಂಡ ಪ್ರಾಮಾಣಿಕವಾಗಿ ತನಿಖೆ ನಡೆಸಲು ಮುಂದಾದಾಗೆಲ್ಲಾ ಪ್ರಭಾವಿಗಳ ಅಡ್ಡಗಾಲು ಅವರ ವೇಗಕ್ಕೆ ಬ್ರೇಕ್ ಹಾಕುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಅದರಲ್ಲೂ ಮುಖ್ಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಕೆಲವು ಹಿರಿಯ ನಟರ ಮಕ್ಕಳು ಈ ಜಾಲದಲ್ಲಿ ಹಲವು ವರ್ಷಗಳಿಂದ ಭಾಗಿಯಾಗಿದ್ದಾರೆ ಮತ್ತು ಅವರು ಮಾದಕ ವಸ್ತು ಸೇವಿಸಿ ಹಲವು ಬಾರಿ ಅಪಘಾತ ಮತ್ತು ಕೆಲವು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ನಿದರ್ಶನಗಳೂ ಇವೆ. ಕಳೆದ ಕೆಲವು ತಿಂಗಳ ಹಿಂದಿನ ಅಶೋಕ ಪಿಲ್ಲರ್ ಬಳಿ ಅಪಘಾತ ಪ್ರಕರಣ ಅಂತಹ ಒಂದು ತಾಜಾ ನಿದರ್ಶನ. ಅಂತಹ ಸುಳಿವುಗಳನ್ನು ಬೆನ್ನತ್ತಿ ಪ್ರಮುಖರು, ಖ್ಯಾತ ನಾಮರ ಮಕ್ಕಳನ್ನು ಹೆಡೆಮುರಿಕಟ್ಟಲು ಸಿಸಿಬಿ ಸಜ್ಜಾಗಿದ್ದರೂ, ಅದಕ್ಕೆ ಸರ್ಕಾರದ ಆಯಕಟ್ಟಿನ ವ್ಯಕ್ತಿಗಳ ಕಡೆಯಿಂದಲೇ ತಡೆಯೊಡ್ಡಲಾಗುತ್ತಿದೆ. ಅದರಲ್ಲೂ ಮಾತೆತ್ತಿದ್ದರೆ ಕನ್ನಡ ಚಿತ್ರರಂಗದ ಪರಂಪರೆ, ಸಂಸ್ಕೃತಿ, ಸಭ್ಯತೆ ಬಗ್ಗೆ ‘ಕಾಗೆ ಹಾರಿಸುವ’ ಹಿರಿಯ ನಟ ಹಾಗೂ ರಾಜಕಾರಣಿಯ ಮಕ್ಕಳ ವಿಷಯದಲ್ಲಿ ಹಲವು ಮಾಹಿತಿ ಇದ್ದರೂ ಸಿಸಿಬಿ ಅಧಿಕಾರಿಗಳು ಕಾಲು ಕಟ್ಟಿಹಾಕಲಾಗಿದೆ. ಮತ್ತೊಬ್ಬ ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟ ಮತ್ತು ವೈಯಕ್ತಿಕವಾಗಿ ಬಹಳ ಸಭ್ಯರಾಗಿರುವ ಮಾಜಿ ವಿಲನ್ ಒಬ್ಬರ ಮಗನ ವಿಷಯದಲ್ಲಿ ಕೂಡ ಪೊಲೀಸರಿಗೆ ಇದೇ ಬಿಕ್ಕಟ್ಟು ಎದುರಾಗಿದೆ.
Also Read: ಸ್ಯಾಂಡಲ್ವುಡ್ ಡ್ರಗ್ ಪ್ರಕರಣದ ತನಿಖೆ ಮಾಹಿತಿ ಸೋರಿಕೆ: ಎಸಿಪಿ ಅಮಾನತು
ಸ್ಟಾರ್ ನಟರ ಮೈಸೂರು ಫಾರ್ಮ್ ಹೌಸ್ ನಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಡ್ರಗ್ಸ್ ಪಾರ್ಟಿಗಳು ನಡೆಯುತ್ತಿವೆ. ಪ್ರತಿ ವಾರದ ಕೊನೆಯಲ್ಲಿ ನಡೆಯುವ ಇಂತಹ ಪಾರ್ಟಿಗಳಿಗೆ ಹಲವು ನಟನಟಿಯರು, ಸಿನಿಮಾ ರಂಗದ ಇತರ ಪ್ರಮುಖರು, ಯುವ ರಾಜಕಾರಣಿಗಳು, ಉದ್ಯಮಿಗಳು, ಪತ್ರಕರ್ತರು ಕೂಡ ಹೋಗಿಬರುತ್ತಿದ್ದ ಬಗ್ಗೆಯೂ ಮಾಹಿತಿ ಕಲೆಹಾಕಿರುವ ತನಿಖಾ ತಂಡ, ಆ ಬಗ್ಗೆ ಸಂಬಂಧಿಸಿದವರನ್ನು ಕರೆಸಿ ವಿಚಾರಣೆ ನಡೆಸಲು ಮುಕ್ತ ಸ್ವಾತಂತ್ರ್ಯವಿಲ್ಲದೆ ಚಡಪಡಿಸುತ್ತಿದೆ. ಇಂತಹ ಪಾರ್ಟಿಗಳಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೂ ಭಾಗಿಯಾಗುತ್ತಿದ್ದರು ಎಂಬುದು ಕೂಡ ಈ ವ್ಯಕ್ತಿಗಳ ವಿರುದ್ಧ ದಿಟ್ಟ ಹೆಜ್ಜೆ ಇಡಲು ಸಿಸಿಬಿಗೆ ಅಡ್ಡಗಾಲಾಗುತ್ತಿರುವುದಕ್ಕೆ ಇರುವ ಮತ್ತೊಂದು ಕಾರಣ. ಹಾಗಾಗಿ ಒಂದು ಕಡೆ ಪ್ರಭಾವಿಗಳ ರಕ್ಷಣೆ, ಮತ್ತೊಂದು ಕಡೆ ಇಲಾಖೆಯ ಪ್ರತಿಷ್ಠೆ ಕಳಚಿಬೀಳದಂತೆ ಸಿಸಿಬಿಯನ್ನು ಸಣ್ಣಪುಟ್ಟ ಮರಿಮೀನುಗಳಿಗೆ ಗಾಳ ಹಾಕಲು ಸೀಮಿತ ಮಾಲಾಗಿದೆ. ತಿಮಿಂಗಲಗಳ ರಕ್ಷಣೆಗೆ ಪರೋಕ್ಷವಾಗಿ ಸರ್ಕಾರವೇ ನಿಂತಿದ್ದು, ಇದೇ ಪ್ರಕರಣ ಬಳಸಿಕೊಂಡು ಸ್ಟಾರ್ ನಟರನ್ನು ಪಕ್ಷಕ್ಕೆ ಸೆಳೆಯುವ ದಾಳ ಕೂಡ ಉರುಳಿಸಲಾಗಿದೆ ಎನ್ನಲಾಗುತ್ತಿದೆ.
Also Read: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾದ ಸಂಪೂರ್ಣ ಡೀಟೈಲ್ಸ್
ಈ ನಡುವೆ, ರಾಗಿಣಿ ವಿರುದ್ಧದ ಎಫ್ ಐಆರ್ ನಲ್ಲಿ ಲಾಕ್ ಡೌನ್ ನಡುವೆಯೇ ಡ್ರಗ್ಸ್ ಪಾರ್ಟಿ ನಡೆದಿದ್ದು, ಅದರಲ್ಲಿ ಭಾಗಿಯಾದ ಬಗ್ಗೆ ಉಲ್ಲೇಖಿಸಲಾಗಿದೆ. ಯಲಹಂಕ ವ್ಯಾಪ್ತಿಯಲ್ಲೇ ಲಾಕ್ ಡೌನ್ ಉಲ್ಲಂಘಿಸಿ ನಡೆದ ಆ ಸರಣಿ ಪಾರ್ಟಿಗಳು ಆ ವ್ಯಾಪ್ತಿಯ ಪೊಲೀಸರು, ಗುಪ್ತಚರ ಸಿಬ್ಬಂದಿ, ಸ್ಥಳೀಯ ಆಡಳಿತಗಳ ವೈಫಲ್ಯಗಳಿಗೆ ಕನ್ನಡಿ ಹಿಡಿದಿವೆ. ಆದರೆ, ಡ್ರಗ್ಸ್ ದಂಧೆಯ ಬೆನ್ನುಬಿದ್ದಿರುವ ಸಿಸಿಬಿ, ಮಾದಕ ವಸ್ತು ಪ್ರಕರಣದ ಜೊತೆಗೆ ಲಾಕ್ ಡೌನ್ ಕಾನೂನು ಉಲ್ಲಂಘನೆ ವಿಷಯದಲ್ಲಿ ಯಾವ ಕ್ರಮ ಕೊಂಡಿದೆ ಎಂಬುದು ಸ್ಪಷ್ಟವಾಗಿಲ್ಲ. ಜೊತೆಗೆ, ಅಂತಹ ಲಾಕ್ ಡೌನ್ ಉಲ್ಲಂಘಿಸಿ ನಡೆದ ಇಂತಹ ಕೃತ್ಯಗಳ ಮೇಲೆ ಕಣ್ಣಿಡಲು ಮತ್ತು ಕ್ರಮಕೈಗೊಳ್ಳಲು ವಿಫಲರಾದ ಬೆಂಗಳೂರು ನಗರ ಅಂದಿನ ಪೊಲೀಸ್ ಕಮೀಷನರ್ ಸೇರಿದಂತೆ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಯಾವ ಕ್ರಮಕೈಗೊಳ್ಳಲಾಗುತ್ತದೆ ಎಂಬುದನ್ನೂ ಕಾದುನೋಡಬೇಕಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ, ಪ್ರಮುಖ ಮೂರೂ ಪಕ್ಷಗಳ ಪ್ರಭಾವಿ ನಾಯಕರ ಮಕ್ಕಳು ಮತ್ತು ಸ್ವತಃ ಕೆಲವು ನಾಯಕರೂ ಈ ಜಾಲದಲ್ಲಿ ಭಾಗಿಯಾಗಿರುವ ಸುಳಿವು ಹಿಡಿದಿರುವ ಸಿಸಿಬಿ, ಆ ದಿಸೆಯಲ್ಲಿ ತನಿಖೆ ಚುರುಕುಗೊಳಿಸಲು ಕೂಡ ಪ್ರಭಾವಿಗಳೇ ಅಡ್ಡಿಯಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತನಿಖೆಯ ವಿಷಯದಲ್ಲಿ ಸಿಸಿಬಿ ಈ ಹಿಂದಿನ ವೇಗ ಕಾಯ್ದುಕೊಳ್ಳಲಾಗುತ್ತಿಲ್ಲ. ನೈತಿಕವಾಗಿಯೂ ಇದು ಉತ್ಸಾಹಿ ಪೊಲೀಸರಿಗೆ ಹಿನ್ನಡೆಯಾಗಿದ್ದು, ಕನ್ನಡ ಸಿನಿಮಾ ರಂಗಕ್ಕೆ ಒಂದು ಆಮದು ವ್ಯಸನವಾಗಿ ಅಂಟಿರುವ ಈ ಪಿಡುಗನ್ನು ಬೇರುಸಹಿತ ಕಿತ್ತುಹಾಕುವ ಅವರ ಆಸಕ್ತಿಯೇ ಇಂಗಿಹೋಗುವಂತಾಗಿದೆ. ಮುಖ್ಯವಾಗಿ ಕೇವಲ ಸಿನಿಮಾ ರಂಗವಲ್ಲದೆ, ರಾಜಕಾರಣ, ಉದ್ಯಮ, ಮಾಧ್ಯಮಗಳ ಪ್ರಭಾವಿಗಳು, ಸೆಲೆಬ್ರಿಟಿಗಳೂ ಈ ಬೃಹತ್ ಜಾಲದ ಭಾಗವಾಗಿದ್ದು, ಅಂತಹ ಎಲ್ಲರನ್ನೂ ಹೆಡೆಮುರಿ ಕಟ್ಟಲು ಬೇಕಾದ ನೈತಿಕ ಮತ್ತು ಆಡಳಿತಾತ್ಮಕ ಬೆಂಬಲ ತನಿಖಾ ತಂಡಕ್ಕೆ ಇಲ್ಲದಾಗಿದೆ ಎಂಬ ಮಾತೂ ಕೇಳಿಬರುತ್ತಿದೆ.