ದೇಶದಾದ್ಯಂತ ಲಾಕ್‌ಡೌನ್ ತೆರವುಗೊಳಿಸಿ ತಿಂಗಳುಗಳೇ ಕಳೆದರೂ, ಮಹಾರಾಷ್ಟ್ರದಲ್ಲಿ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ಸಾಕಷ್ಟು ಟೀಕೆಗಳ ನಂತರ ಈಗ ಮಹಾರಾಷ್ಟ್ರ ಸರ್ಕಾರವು ಎಲ್ಲಾ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ.
ಸೋಮವಾರದ ನಂತರ ಮಹಾರಾಷ್ಟ್ರದ ಎಲ್ಲಾ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ. ಆದರೆ, ಮಂದಿರಗಳ ಪ್ರವೇಶಕ್ಕೆ ಕೋವಿಡ್ ನಿಯಮಾವಳಿಗಳನ್ನೂ ಬಿಡುಗಡೆ ಮಾಡಿದೆ.
“ಪೂಜಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಯಾವುದೇ ಪ್ರಾರ್ಥನ ಸ್ಥಳಗಳಲ್ಲಿ ಜನ ಜಂಗುಳಿ ಸೇರಬಾರದು. ಜನರು ಶಿಸ್ತಿನಿಂದ ದೇವಸ್ಥಾನ, ಚರ್ಚು, ಮಸೀದಿ ಅಥವಾ ಇತರ ಪ್ರಾರ್ಥನಾ ಮಂದಿರಗಳಿಗೆ ಹೋಗಬೇಕು,” ಎಂದು ತಿಳಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈವರೆಗೆ ಜನರು ಶಿಸ್ತಿನಿಂದ ವರ್ತಿಸಿದ ಕಾರಣಕ್ಕೆ ರಾಜ್ಯದಲ್ಲಿ ಕೋವಿಡ್-19 ಸೋಂಕು ಮಿತಿ ಮೀರಿಲ್ಲ. ಗಣೇಶೋತ್ಸವ, ಹೋಳಿ, ನವರಾತ್ರಿ, ಈದ್, ಮೌಂಟ್ ಮೇರಿ ಹಬ್ಬ ಹೀಗೆ ಎಲ್ಲಾ ಹಬ್ಬಗಳನ್ನು ಈವರೆಗೆ ಶಿಸ್ತಿನಿಂದ ನಡೆಸಿಕೊಂಡು ಬರಲಾಗಿದೆ. ಈಗ ದೀಪಾವಳಿ ಹಬ್ಬಕ್ಕೆ ಹಾಗೂ ಹಿಂದೂ ಪಂಚಾಂಗದ ಹೊಸ ವರ್ಷಕ್ಕೆ ಅನುಗುಣವಾಗಿ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲು ನಿರ್ಧರಿಸಲಾಗಿದೆ, ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ಹಿಂದೆ ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡದ ಕಾರಣಕ್ಕಾಗಿ ಬಿಜೆಪಿಯು ಶಿವಸೇನೆಯ ಹಿಂದುತ್ವವನ್ನು ಪ್ರಶ್ನಿಸಿತ್ತು. ಈ ಕುರಿತಾಗಿ, ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್ ಸಿಂಗ್ ಕೋಶಿಯಾರಿ ಅವರು ಸಿಎಂ ಉದ್ದವ್ ಠಾಕ್ರೆ ಅವರಿಗೆ ಪತ್ರವನ್ನೂ ಬರೆದಿದ್ದರು.












