ನಾನು ಸಿದ್ದರಾಮಯ್ಯ ಸಾಕಿರುವ ಗಿಣಿ ಅಲ್ಲ. ರಾಮನಗರ ಜಿಲ್ಲೆಯ ಜನ ನನ್ನನ್ನ ಬೆಳೆಸಿದ್ದಾರೆ. ದೇವೇಗೌಡರು ಸಿದ್ದರಾಮಯ್ಯನವರಂತಹ ಗಿಣಿಗಳನ್ನು ಸಾಕಷ್ಟು ಬೆಳೆಸಿದ್ದಾರೆ. ಆದರೆ, ಅವುಗಳೇ ಹೇಗೆ ಕುಕ್ಕಿದ್ದಾವೆಂದು ನನಗೆ ಗೊತ್ತಿದೆ. ನಾನು ಸಿದ್ದರಾಮಯ್ಯ ಅವರಿಂದ ಸಿಎಂ ಆಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಿಎಂ ಆಗಿದ್ದೆ. ಅದನ್ನು ಸಿದ್ದರಾಮಯ್ಯ ಸಹಿಸದೆ ಸರ್ಕಾರ ಕೆಡವಲು ಮುಂದಾದರು. ಇವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿ, ಅಲ್ಲಿನ ಶಕ್ತಿಯನ್ನ ಧಾರೆ ಎರೆಸಿಕೊಂಡು ಬೆಳೆದವರು. ಅವರಿಗೆ ಶಕ್ತಿ ಇದ್ದರೆ ಕಾಂಗ್ರೆಸ್ ನಿಂದ ಹೊರಬಂದು ಪಕ್ಷ ಕಟ್ಟಿ ಬೆಳೆಸಲಿ.
– ಎಚ್. ಡಿ. ಕುಮಾರಸ್ವಾಮಿ
ನಿಮ್ಮನ್ನು ಸಾಕಿದ್ದು ದೇವೇಗೌಡರು. ಬಳಸಿಕೊಂಡದ್ದು ಮಾತ್ರ ನಮ್ಮಂತಹವರನ್ನು. ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ. ಈ ಬಗ್ಗೆ ಯಡಿಯೂರಪ್ಪ ಅವರನ್ನು ಕೇಳಿದರೆ ಹೇಳುತ್ತಾರೆ. ಕುಮಾರಸ್ವಾಮಿಯವರೇ ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ. ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರೇ ನೀವು ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲು ಎಂದಾದರೂ ಸಾಧ್ಯವೇ?
– ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿಗಳ ಮಧ್ಯೆ ನಡೆಯುತ್ತಿರುವ ಜಗಳ್-ಬಂಧಿಯ ಒಂದು ಝಲಕ್ ಇದು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಭಾನುವಾರ ಹೊತ್ತಿಸಿದ ಕಿಡಿ ಇತ್ತೀಚಿನ ದಿನಗಳಲ್ಲಿ ಎಚ್. ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಮಧ್ಯೆ ನಡೆಯುತ್ತಿದ್ದ ಮಾತಿನ ಸಮರದ ಬೆಂಕಿಗೆ ತುಪ್ಪ ಸುರಿದಿದೆ. ಪರಿಣಾಮ ಇಬ್ಬರೂ ಪರಸ್ಪರ ಬೈದಾಡಿಕೊಳ್ಳುತ್ತಿದ್ದರೆ, ಉಳಿದೆಲ್ಲರೂ ತಮಾಷೆ ನೋಡುತ್ತಿದ್ದಾರೆ.
ವಿಶೇಷವೆಂದರೆ, ಜಗಳದಲ್ಲೂ ಅವರಿಬ್ಬರು ಜಾಣ್ಮೆ ಮೆರೆದಿದ್ದಾರೆ. ಅವರ ಮಾತಿನ ಸಮರ ವೈಯಕ್ತಿಕವಾಗಿಯೇ ಇದೆ ಹೊರತು ರಾಜಕೀಯವಾಗಿ ಅಲ್ಲ. ಹಿಂದಿನಂತೆಯೇ ಇನ್ನು ಮುಂದೆ ರಾಜಕೀಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಪಕ್ಷಗಳ ಮಧ್ಯೆ ಯಾವುದೇ ಗೊಂದಲ ಇರಬಾರದು ಎಂಬ ಕಾರಣಕ್ಕೆ ಈ ವಾಗ್ವಾದ ವೈಯಕ್ತಿಕ ಹಂತವನ್ನು ದಾಟಿ ಹೋಗುತ್ತಿಲ್ಲ. ಅಂದರೆ, ಅವರಿಬ್ಬರ ಉದ್ದೇಶವೂ ಸ್ಪಷ್ಟ. ಸಿದ್ದರಾಮಯ್ಯ ಅವರಿಗೆ ಮೈತ್ರಿ ಸರ್ಕಾರ ಬೇಡ. ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದರೆ ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ.
ಸಿದ್ದರಾಮಯ್ಯಗೆ ಮೈತ್ರಿ ಸರ್ಕಾರ ಏಕೆ ಬೇಡ
ಸಿದ್ದರಾಮಯ್ಯ ಈ ಹಿಂದೆಯೇ ಪ್ರತಿಪಕ್ಷ ನಾಯಕರಾಗಿದ್ದವರು ಮತ್ತು ಒಂದೇ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದವರು. ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಟ್ಟರೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಒಪ್ಪುವುದಿಲ್ಲ. ಹೆಚ್ಚೆಂದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಇರಬೇಕು. ಅದನ್ನು ಬಿಟ್ಟು ಬೇರಾವುದೇ ಸ್ಥಾನಮಾನ ಅವರಿಗೆ ಸಿಗುವುದಿಲ್ಲ.
ಅದರ ಬದಲು ಬಿಜೆಪಿ ಅಧಿಕಾರದಲ್ಲಿ ಮುಂದುವರಿದರೆ ಪ್ರತಿಪಕ್ಷ ಸ್ಥಾನ ಸಿಗಬಹುದು. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರಬಲ ಸ್ಪರ್ಧಿಯಾಗಿದ್ದ ಡಿ. ಕೆ. ಶಿವಕುಮಾರ್ ಈಗ ಇಡಿ ಕುಣಿಕೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಉಳಿದಂತೆ ಸಿದ್ದರಾಮಯ್ಯ ರೀತಿಯಲ್ಲಿ ಮಾಸ್ ಲೀಡರ್ ಅನಿಸಿಕೊಂಡವರಾರೂ ಪಕ್ಷದಲ್ಲಿ ಇಲ್ಲ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಪ್ರತಿಪಕ್ಷ ನಾಯಕನಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿ ಮುಂದೆ ಚುನಾವಣೆ ಬಂದಾಗ ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಸಿದ್ದು ಮೇಲೆ ಗರಂ, ಕಾಂಗ್ರೆಸ್ ಬಗ್ಗೆ ಮೃದು
ಎಚ್. ಡಿ. ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ರಾಜಕೀಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರುತ್ತಿದ್ದರೂ ಕಾಂಗ್ರೆಸ್ ಬಗ್ಗೆ ಒಂದು ಸಣ್ಣ ಆರೋಪವನ್ನೂ ಮಾಡುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಹೇಳಿದ್ದನ್ನೂ ಮರೆತಿರುವ ಕುಮಾರಸ್ವಾಮಿ, ಸೋನಿಯಾ, ರಾಹುಲ್ ಗಾಂಧಿ ತುಂಬಾ ಒಳ್ಳೆಯವರು. ಅವರಿಂದಲೇ ಮೈತ್ರಿ ಸರ್ಕಾರ ರಚನೆಯಾಗಿ ನಾನು ಮುಖ್ಯಮಂತ್ರಿಯಾಗುವಂತಾಯಿತು ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಒಟ್ಟಾರೆ ಮಾತಿನ ಸಾರಾಂಶ, ಸಿದ್ದರಾಮಯ್ಯ ಹೊರತುಪಡಿಸಿ ಕಾಂಗ್ರೆಸ್ ನವರೆಲ್ಲರೂ ಸರಿ ಇದ್ದಾರೆ ಎನ್ನುವಂತೆ ಇದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬರುವುದು ಕನಸಿನ ಮಾತು. ಸಾರ್ವತ್ರಿಕ ಚುನಾವಣೆ ನಡೆದರೂ ಪಕ್ಷ ಮೂರನೇ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ. ಹೀಗಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾದರೆ ಅದಕ್ಕೆ ಕಾಂಗ್ರೆಸ್ ಬೆಂಬಲ ಬೇಕೇ ಬೇಕು.
ಸಿದ್ದರಾಮಯ್ಯ ಅವರೊಂದಿಗಿನ ದೇವೇಗೌಡರ ಕುಟುಂಬದ ಜಗಳ ಹೊಸದೇನೂ ಅಲ್ಲ. ಅವರು ಜೆಡಿಎಸ್ ತೊರೆಯುವ ಸಂದರ್ಭದಲ್ಲೇ ಅದು ಆರಂಭವಾಗಿತ್ತು. ವೈಷಮ್ಯದ ಮಧ್ಯೆಯೂ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಲು ಮುಂದಾಗಿತ್ತು. ಇದಕ್ಕೆ ಸಿದ್ದರಾಮಯ್ಯ ವಿರೋಧವಿದ್ದರೂ ವರಿಷ್ಠರು ಬಾಯಿ ಮುಚ್ಚಿಸಿದ್ದರು. ಹೀಗಿರುವಾಗ ಮತ್ತೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವ ಪರಿಸ್ಥಿತಿ ಉದ್ಭವವಾದರೆ ಇನ್ನೊಮ್ಮೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಬಹುದು. ಇದುವರೆಗೆ ಎರಡು ಬಾರಿ ಅದೃಷ್ಟದ ಮೂಲಕವೇ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದ ಕುಮಾರಸ್ವಾಮಿ ಮೂರನೇ ಬಾರಿಯೂ ಅದೇ ಅದೃಷ್ಟವನ್ನು ನೆಚ್ಚಿಕೊಂಡು ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಬಗ್ಗೆ ಪ್ರೀತಿಗಿಂತ ಮುಂದೆ ಅಧಿಕಾರ ಸಿಗಬಹುದು ಎಂಬ ದೂರದ ಆಸೆಯೇ ಕಾಣಿಸುತ್ತಿರುವುದು ಸ್ಪಷ್ಟ.
ಮತ್ತೆ ಅಧಿಕಾರ ಸಿಗುವುದೇನೋ ಎಂಬ ಕಾಂಗ್ರೆಸ್ ಆಸೆ
ಆದರೆ, ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಹಾಗಿಲ್ಲ. ಮತ್ತೊಮ್ಮೆ ಮೈತ್ರಿ ಸರ್ಕಾರ ಬರುವುದಾದರೆ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧವಾಗಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಾದರೂ ಅಧಿಕಾರದಲ್ಲಿದ್ದೇವೆ ಎಂಬ ಸಮಾಧಾನ ಪಕ್ಷಕ್ಕಿರುತ್ತದೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ಮಧ್ಯೆ ಬಿರುಸಿನ ವಾಗ್ವಾದ ನಡೆಯುತ್ತಿದ್ದರೂ ಕಾಂಗ್ರೆಸ್ ನ ಇತರೆ ನಾಯಕರಾರೂ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಪಕ್ಷ ಸಾಕಷ್ಟು ಸಮಸ್ಯೆ ಎದುರಿಸಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಏಕೆಂದರೆ, ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದು ಮತ್ತೆ ಮೈತ್ರಿ ಸರ್ಕಾರವನ್ನು ಅಧಿಕಾರಕ್ಕೆ ತರಬಹುದು ಎಂಬ ಸಣ್ಣ ಆಸೆ ಅವರಲ್ಲಿ ಉಳಿದುಕೊಂಡಿದೆ. ಈ ಕಾರಣಕ್ಕಾಗಿಯೇ ಮೈತ್ರಿ ಸರ್ಕಾರದ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ಮಧ್ಯೆ ನಡೆಯುತ್ತಿರುವ ಮಾತಿನ ಸಮರ ಅವರ ವೈಯಕ್ತಿಕ. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಂತೆ ಇಲ್ಲ ಎಂದು ಪಕ್ಷದ ನಾಯಕರು ವರ್ತಿಸುತ್ತಿದ್ದಾರೆ.