ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ ಬಳಿಕ ಇದೀಗ ಮಹಾರಾಷ್ಟ್ರ, ಗೋವಾ ಹಾಗೂ ತಮಿಳುನಾಡಿನ ಉಸ್ತುವಾರಿಯನ್ನು ನೀಡಿ ಜವಾಬ್ದಾರಿಯನ್ನು ಹೆಚ್ಚಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವೇಳೆ ಸಿಟಿ ರವಿಯ ಸಚಿವ ಸ್ಥಾನಕ್ಕೆ ಕೊಕ್ ಬೀಳುವುದು ಈಗಾಗಲೇ ಖಚಿತವಾಗಿದೆ. ಇದೀಗ ಹೊಸದಾಗಿ ವಹಿಸಿರುವ ನೂತನ ಜವಾಬ್ದಾರಿಯಿಂದ ಸಿಟಿ ರವಿ ಬೇರೆಯದೇ ರೀತಿಯ ಇಕ್ಕಟ್ಟಿಗೆ ಸಿಲುಕುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
Also Read: ಸಚಿವ ಸ್ಥಾನದಿಂದ ಕೆಳಗಿಳಿಯಲಿರುವ ಸಿಟಿ ರವಿ: ಯಡಿಯೂರಪ್ಪ ನಿರಾಳ
ಮಹಾರಾಷ್ಟ್ರದೊಂದಿಗೆ ಕರ್ನಾಟಕಕ್ಕೆ ಈಗಾಗಲೇ ಗಡಿ ವಿವಾದ, ಭಾಷಾ ವಿವಾದವಿದ್ದು, ಈ ವಿಚಾರದಲ್ಲಿ ಸಿಟಿ ರವಿ ಮಹಾರಾಷ್ಟ್ರದ ಪರ ಮೃದು ಧೋರಣೆ ತಾಳಿದರೆ ಮೊದಲೇ ಕನ್ನಡ ವಿರೋಧಿ ಎಂಬ ಆರೋಪವಿರುವ ಬಿಜೆಪಿಗೆ ನಕರಾತ್ಮಕ ಪರಿಣಾಮ ಬೀರುವುದಕ್ಕಿಂತಲೂ ಸಿಟಿ ರವಿಗೆ ನೇರ ಪರಿಣಾಮ ತಾಕುವ ಸಾಧ್ಯತೆ ಇದೆ. ಬದಲಾಗಿ ಕರ್ನಾಟಕದ ಪರ ನಿಂತರೆ ʼಮಹಾರಾಷ್ಟ್ರ ಬಿಜೆಪಿʼಗೆ ನಕರಾತ್ಮಕ ಏಟು ಬೀಳಲಿದೆ.
ತಮಿಳುನನಾಡಿನೊಂದಿಗೆ ಕಾವೇರಿ ನೀರು ವಿವಾದವಿದ್ದು ಇದೂ ಕೂಡಾ ಸಿಟಿ ರವಿಯವರ ಸುಗಮ ಹಾದಿಗೆ ಮುಳ್ಳಾಗುವ ಸಾಧ್ಯವಿದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಭದ್ರವಾಗಿ ನೆಲೆಯೂರಿಸಬೇಕೆಂದು ಶತಾಯಗತಾಯ ಪಕ್ಷ ಪರದಾಡುತ್ತಿದೆ. ಈಗಾಗಲೇ ಅಣ್ಣಾಮಲೈ ಮುಂತಾದವರನ್ನು ಸೇರ್ಪಡಿಸಿ ಪಕ್ಷ ಬಲವರ್ಧನೆಯಲ್ಲಿ ತೊಡಗಿಕೊಂಡಿದೆ. ತಮಿಳು ನಾಡು ರಾಜ್ಯ ಬಿಜೆಪಿ, ರಾಮಮಂದಿರ ರಥಯಾತ್ರೆಯಂತೆಯೇ ಕೃಷ್ಣನ ಹೆಸರಿನಲ್ಲಿ ರಾಜಕಾರಣ ಮಾಡಿ ತನ್ನ ಹಳೆ ಧರ್ಮ ರಾಜಕಾರಣದ ಚಾಳಿ ಮುಂದುವರೆಸಿದೆ. ʼವೆಟ್ರಿವೇಲ್ʼ ಹೆಸರಿನಲ್ಲಿ ಯಾತ್ರೆ ನಡೆದಿದ್ದು, ಸಿಟಿ ರವಿ ಅದಕ್ಕೆ ಬೆಂಬಲವಾಗಿ ನಿಂತಿದ್ದರು ಹಾಗೂ ಬಂಧನಕ್ಕೂ ಒಳಗಾಗಿದ್ದರು.
Also Read: ತಮಿಳುನಾಡು: ಸಿಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರ ಬಂಧನ
ತಮಿಳುನಾಡು-ಕರ್ನಾಟಕ ವಿಷಯ ಬಂದಾಗಲೇ ಕಾವೇರಿ ವಿಚಾರ ಮುನ್ನೆಲೆಗೆ ಬರುತ್ತದೆ. ಈ ಸಂಧರ್ಭ ಯಾವುದೇ ಒಂದು ರಾಜ್ಯದ ಪರ ಮೃದು ಧೋರಣೆಯಿಟ್ಟರೂ ಕರ್ನಾಟಕದಲ್ಲಿ ಸಿಟಿ ರವಿಗೆ ಹಾಗೂ ತಮಿಳುನಾಡಿನಲ್ಲಿ ಬಿಜೆಪಿಗೆ ತೀವ್ರ ಹಿನ್ನೆಡೆಯಾಗಲಿದೆ.
ಸಿಟಿ ರವಿಗೆ ಉಸ್ತುವಾರಿ ಕೊಟ್ಟ ಇನ್ನೊಂದು ರಾಜ್ಯ ಗೋವಾ. ಈ ರಾಜ್ಯಕ್ಕೂ ಮಹದಾಯಿ ವಿಚಾರದಲ್ಲಿ ಕರ್ನಾಟಕದೊಂದಿಗೆ ತಕರಾರಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಿಟಿ ರವಿ ಇನ್ನಷ್ಟು ಜಾಗರೂಕರಾಗಿ ಮಾತನಾಡಬೇಕೆಂಬ ಒತ್ತಡದಲ್ಲಿರುತ್ತಾರೆ. ಅಕಸ್ಮಾತ್, ಈ ಯಾವುದೇ ವಿಚಾರಗಳು ಸಿಟಿ ರವಿ ಎದುರು ಬಂದರೂ ಸಿಟಿ ರವಿ ಹೇಳಿಕೆ ನೀಡದೆ ತಪ್ಪಿಸಿಕೊಳ್ಳುವಂತಿಲ್ಲ. ಹಾಗಾಗಿ ಅವರ ಮಾತು ತಮ್ಮ ವೈಯಕ್ತಿಕ ಬೆಳವಣಿಗೆಗೆ ಹಾಗೂ ಪಕ್ಷದ ಮೇಲೆ ಬೀರುವ ಪರಿಣಾಮವನ್ನು ಗಮನದಲ್ಲಿಟ್ಟು ನಿಭಾಯಿಸಬೇಕಾಗುತ್ತದೆ. ಕತ್ತಿ ಅಲಗಿನಂತಹ ಈ ಜವಾಬ್ದಾರಿಗಳನ್ನು ಸಿಟಿ ರವಿ ಹೇಗೆ ನಿರ್ವಹಿಸಲಿದ್ದಾರೆಂದು ಕಾದು ನೋಡಬೇಕು.
Also Read: ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸಚಿವ ಸಿ ಟಿ ರವಿ ಆಡಿದ ಮಾತಿನ ಗುರಿ ಏನು?



