ಕರೋನಾ ಸಂಕಷ್ಟದ ಕಾಲದಲ್ಲಿ ಸರ್ಕಾರಗಳು ಕೋಟಿ ಕೋಟಿ ಹಣವನ್ನು ವೆಚ್ಚ ಮಾಡಿವೆ. ಕೋಟಿಗಳಿಗೆ ಲೆಕ್ಕವಿಲ್ಲದಷ್ಟು ಖರ್ಚು ಮಾಡಿದ್ದಾರೆ. ಇದರಲ್ಲೂ ಭ್ರಷ್ಟಾಚಾರ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಸ್ಟೋರಿ ಕರೋನಾ ವೈರಸ್ ನಿಯಂತ್ರಣಕ್ಕೆ ಮಾಡಿರುವ ಖರ್ಚು ವೆಚ್ಚದ ಭ್ರಷ್ಟಾಚಾರವಲ್ಲ. ಆ ಮಾಹಿತಿ ಹೊರಬರುವುದಕ್ಕೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಆದರೆ ಈಗ ಬಂದಿರುವುದು ಕರೋನಾ ಸಂಕಷ್ಟದ ಸಮಯದಲ್ಲಿ ಖಾಕಿ ಮಾಡಿದ ಘನಂಧಾರಿ ಕರ್ಮಕಾಂಡದ ಮಾಹಿತಿ. ಸಿಗರೇಟ್ ಮಾರಾಟ ಮಾಡುತ್ತಿದ್ದ ಏಜೆಂಟ್‌ಗಳ ಮೇಲೆ ದಾಳಿ ಮಾಡಿ ಲಕ್ಷ ಲಕ್ಷ ಲಂಚ ಪಡೆದಿದ್ದಾರೆ ಎನ್ನುವುದು ಇತ್ತೀಚಿಗೆ ಬಂದ ಸಣ್ಣಪುಟ್ಟ ವರದಿ. ಅದರಲ್ಲೂ ಎಸಿಪಿ, ಇಬ್ಬರು ಇನ್ಸ್‌ಪೆಕ್ಟರ್‌ಗಳು ಡೀಲ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ದೂರು ದಾಖಲಾಗಿತ್ತು. ಹಣವನ್ನು ಪಡೆದು ಸಿಗರೇಟ್ ಮಾರಾಟಕ್ಕೆ ಕುಮ್ಮಕ್ಕು ಕೊಟ್ಟಿರುವುದು ಸಾಬೀತಾದ ಬಳಿಕ ಸಿಸಿಬಿ ಎಸಿಪಿ ಪ್ರಭುಶಂಕರ್ ಅವರನ್ನು ಅಮಾನತು ಮಾಡಿ ಆದೇಶ ಮಾಡಲಾಗಿತ್ತು.
ಡೀಲ್ ನಡೆದಿದ್ದು ಹೇಗೆ ಗೊತ್ತಾ..?ಲಾಕ್‌ಡೌನ್ ವೇಳೆ ಅಕ್ರಮವಾಗಿ ಸಿಗರೇಟ್ ದಾಸ್ತಾನು ಮಾಡಿದ್ದಾರೆ ಎನ್ನುವ ಕಾರಣಕ್ಕೆ ಏಪ್ರಿಲ್ 30 ರಂದು ಎಸಿಪಿ ಪ್ರಭು ಶಂಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಲಕ್ಷಾಂತರ ರೂ ಮೌಲ್ಯದ ಸಿಗರೇಟ್ ದಾಸ್ತಾನು ಪತ್ತೆಯಾಗಿತ್ತು. ದಾಳಿಯಲ್ಲಿ ಭಾಗಿಯಾಗಿದ್ದ ಇನ್ಸ್‌ಪೆಕ್ಟರ್ ನಿರಂಜನ್ ಕುಮಾರ್ ಕೆ.ಆರ್ ಪುರಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಒಟ್ಟು 11 ಕಡೆಗಳಲ್ಲಿ ದಾಳಿ ಮಾಡಿದ್ದ ಸಿಸಿಬಿ ತಂಡ ಟಿಸಿಎಸ್ ಅಂಡ್ ಸನ್ಸ್, ವಿಜಯ್ ಏಜೆನ್ಸಿ ಹೊರಮಾವಿನಲ್ಲಿ ದಾಳಿ ಮಾಡಿದ್ದರು. 11 ಕಡೆ ದಾಳಿ ಮಾಡಿದ್ದರು. ಆದರೆ, 3 ಗೋದಾಮುಗಳ ಮೇಲೆ ಮಾತ್ರ FIR ದಾಖಲು ಮಾಡಿದ್ದರು. ಉಳಿದ 8 ಕಡೆ ನಡೆದ ದಾಳಿಯನ್ನು ಅಧಿಕೃತವಾಗಿ ತೋರಿಸದೆ ಮುಚ್ಚಿಡಲಾಗಿತ್ತು. ದಾಳಿ ವೇಳೆ 12 ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್ ಜಪ್ತಿ ಮಾಡಿದ್ದೇವೆ ಎಂದು ಉಲ್ಲೇಖಿಸಿದ್ದರು.
ಪ್ರಕರಣ ಬೆಳಕಿಗೆ ಬಂದ ಮಾದರಿಯೇ ರೋಚಕ ..!!
ಸಿಸಿಬಿ ಎಸಿಪಿ ಪ್ರಭುಶಂಕರ್ ದಾಳಿ ಮಾಡಿದ್ದ 11 ಗೋದಾಮಿನಲ್ಲಿ ದೂರು ದಾಖಲು ಮಾಡಿದ್ದು ಕೇವಲ 3 ಗೋದಾಮಿನ ಮೇಲೆ ಮಾತ್ರ. ಆದರೆ ಉಳಿದ 8 ಗೋದಾಮಿನ ಮಾಲೀಕರಿಂದ ತಲಾ 14 ಲಕ್ಷ ರೂಪಾಯಿ ಫಿಕ್ಸ್ ಮಾಡಿದ್ದರು, ಹಣವನ್ನೂ ಕಲೆಕ್ಟ್ ಮಾಡಿಕೊಂಡಿದ್ದರು. ಆದರೆ ಈ ಡೀಲ್ ಮುಗಿದ ಬಳಿಕ ಮತ್ತೆ ಮಧ್ಯವರ್ತಿಗಳ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದೇ ವೇಳೆ ಸಿಸಿಬಿ ಡಿಸಿಪಿ ರವಿಕುಮಾರ್ ನೇತ್ರತ್ವದ Organised Crime Wing ಸಿಗರೇಟ್ ಗೋದಾಮಿನ ಮೇಲೆ ದಾಳಿ ಮಾಡಿತ್ತು. ಈ ವೇಳೆ ಅಸಲಿ ಮಾಹಿತಿ ತಿಳಿಯದ ಡೀಲರ್‌ಗಳು ಅದೆಷ್ಟು ಬಾರಿ ದಾಳಿ ಮಾಡ್ತೀರಿ..? ಈಗಾಗಲೇ ಸೆಟಲ್ಮೆಂಟ್ ಮಾಡಿದ ಮೇಲೂ ದಾಳಿ ಯಾವ ನ್ಯಾಯ ಎಂದು ಏರಿದ ಧ್ವನಿಯಲ್ಲಿ ಜಗಳ ಮಾಡಿದಾಗ ಮೊದಲು ದಾಳಿ ಮಾಡಿದ್ದು ಯಾರು ಎನ್ನುವ ಬಗ್ಗೆ ಪರಿಶೀಲನೆ ಮಾಡಲಾಯ್ತು. ಇದೇ ಸಮಯಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ಸಿಗರೇಟ್ ಡೀಲರ್ಸ್ ದೂರು ನೀಡಿದ್ದರು.ಕಮಿಷನರ್ ಎದುರು ತಪ್ಪೊಪ್ಪಿಕೊಂಡ ಪ್ರಭುಶಂಕರ್..!ಸಿಗರೇಟ್ ಡೀಲರ್‌ಗಳು ದೂರು ನೀಡ್ತಿದ್ದ ಹಾಗೆ ಎಸಿಪಿ ಪ್ರಭುಶಂಕರ್ ಕರೆಸಿದ ಕಮಿಷನರ್ ಭಾಸ್ಕರ್ ರಾವ್, ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಸತ್ಯವನ್ನು ಒಪ್ಪಿಕೊಂಡ ಸಿಸಿಬಿ ಎಸಿಪಿ ಪ್ರಭುಶಂಕರ್, ಹೌದು 25 ಲಕ್ಷ ರೂಪಾಯಿ ತೆಗೆದುಕೊಂಡಿದ್ದೇನೆ. ವಾಪಸ್ ಕೊಟ್ಟುಬಿಡ್ತೇನೆ ದೂರು ಮಾಡದಂತೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಆ ಬಳಿಕ 25 ಲಕ್ಷ ರೂಪಾಯಿ ಹಣ ಜಪ್ತಿ ಮಾಡಿದ್ದೇವೆ ಎಂದು ಸಿಸಿಬಿ ಟೀಂ ದೂರು ಕೂಡ ದಾಖಲು ಮಾಡಿಕೊಂಡಿತ್ತು. ಆ ಬಳಿಕ ವಿಚಾರಣೆ ಶುರು ಮಾಡಿದ ಡಿಸಿಪಿ ರವಿಕುಮಾರ್, 18 ಪುಟಗಳ ವರದಿ ನೀಡಿದ್ದರು. ವರದಿ ಆಧಾರದಲ್ಲಿ ಎಸಿಪಿ ಪ್ರಭುಶಂಕರ್ ಅವರನ್ನು ಅಮಾನತು ಮಾಡಿ ಗೃಹ ಇಲಾಖೆ ಆದೇಶ ಮಾಡಿತ್ತು.

ಸಿಗರೇಟ್ ಜೊತೆಗೆ ಬೆಳಕಿಗೆ ಬಂತು ಮಾಸ್ಕ್ ಡೀಲ್..!
ಈ ಪ್ರಕರಣದ ಬೆನ್ನಲೇ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಯ್ತು. ಎಸಿಪಿ ಪ್ರಭುಶಂಕರ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ನಿರಂಜನ್ ಹಾಗೂ ಅಜಯ್ ಎಂಬುವರು ನಕಲಿ ಮಾಸ್ಕ್ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಡೀಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಒಂದೊಂದೇ ಪ್ರಕರಣ ಹೊರ ಬೀಳುತ್ತಿರುವುದನ್ನು ಗಮನಿಸಿದ ಎಸಿಪಿ ಪ್ರಭುಶಂಕರ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಮೂವರು ಅಧಿಕಾರಿಗಳ ಮೇಲೂ ಪ್ರತ್ಯೇಕ FIR ದಾಖಲು ಮಾಡಲಾಯ್ತು.
ಪ್ರಕರಣ ಎಸಿಬಿಗೆ ವರ್ಗ, ಮತ್ತಷ್ಟು ಸಂಕಷ್ಟ..!
ಸಿಗರೇಟ್ ಹಾಗೂ ನಕಲಿ ಮಾಸ್ಕ್ ಘಟಕಗಳ ಮೇಲೆ ದಾಳಿ ನಡೆಸಿ 2 ಕೋಟಿಗೂ ಹೆಚ್ಚ ಲಂಚ ಪಡೆದಿದ್ದಾರೆ ಎನ್ನುವುದು ಗೊತ್ತಾಗ್ತಿದ್ದಂತೆ ಪ್ರಕರಣವನ್ನು ಎಸಿಬಿ ವರ್ಗಾವಣೆ ಮಾಡಿ ಡಿಜಿಪಿ ಆದೇಶ ಮಾಡಿದ್ದರು. ಎಸಿಬಿಯಲ್ಲಿ FIR ದಾಖಲು ಮಾಡಿ ತನಿಖೆ ಶುರು ಮಾಡಿತ್ತು.ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ ಸಿಗರೇಟ್ ಡೀಲರ್ಸ್ ಮತ್ತು ತಂಬಾಕು ಡೀಲರ್ಸ್ಗಳಿಂದ ಕೊಟ್ಯಂತರ ರೂಪಾಯಿ ಲಂಚ ಪಡೆದ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಿದ್ರು. ಸಹಕಾರ ನಗರದ ಎಸಿಪಿ ಪ್ರಭುಶಂಕರ್ ಮನೆ ಸೇರಿದಂತೆ ನಗರದ 7 ಕಡೆ ಎಸಿಬಿ ಅಧಿಕಾರಿಗಳ ದಾಳಿ ಮಾಡಿದ್ದರು. ಆ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಎಸಿಪಿ ಪ್ರಭುಶಂಕರ್ ಲಾಕ್‌ಡೌನ್ ಸಮಯದಲ್ಲಿ ಸ್ವಂತ ಲಾಭಕ್ಕಾಗಿ ಪೊಲೀಸ್ ಇಲಾಖೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕೆಲಸ ಇಡೀ ಪೊಲೀಸ್ ಇಲಾಖೆಗೆ ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದರು.
ಅಸಲಿ ಪುರಾಣ ಬಯಲಾಗಿದ್ದು ಹೇಗೆ..?
ಎಸಿಬಿ ದಾಳಿ ನಡೆಸಿದ ಬಳಿಕ ಅಮಾನತುಗೊಂಡಿದ್ದ ಎಸಿಪಿ ಪ್ರಭುಶಂಕರ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಅಜಯ್ ಮತ್ತು ನಿರಂಜನ್ ಅವರಿಗೆ ನೋಟಿಸ್ ನೀಡಿತ್ತು. ಮುಂದಿನ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚನೆ ಕೊಡಲಾಗಿತ್ತು. ವಿಚಾರಣೆ ವೇಳೆ ಡೀಲ್ ಬಗ್ಗೆ ಸಂಪೂರ್ಣ ಮಾಹಿತಿ ಹೊರಬಿದ್ದಿದೆ. ದಾಳಿ ಹಿಂದೆ ಪ್ರಭಾವಿ ರಾಜಕಾರಣಿ ಒಬ್ಬರ ಪರಮಾಪ್ತನ ಕೈವಾಡವಿದೆ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ. ನಮ್ಮದೇ ಸರ್ಕಾರವಿದೆ, ನಿಮಗ್ಯಾಕೆ ಭಯ ಎಂದು ಅಭಯ ಕೊಟ್ಟು ಸಿಗರೇಟ್ ಡೀಲರ್‌ಗಳಿಂದ ವಸೂಲಿ ಮಾಡಲು ಸ್ಕೆಚ್ ಹಾಕಿದ್ದು ಅವರೇ. ಅವರ ಮಾತಿನಂತೆ ನಾವು ದಾಳಿ ನಡೆಸಿ ಡೀಲ್ ಮಾಡಿದೆವು ಎಂದು ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದಾರೆ.
‘ಬಳ್ಳಾರಿ ಪ್ರಭಾವಿ’ ಆಪ್ತನಾರು ಗೊತ್ತಾ..?
ರಾಜಕಾರಣಿ ಆಪ್ತನ ನಂಬಿದ್ದ ಮೂವರು ಅಧಿಕಾರಿಗಳು ಸಿಗರೇಟ್ ಡೀಲರ್ಗಳಿಂದ 62 ಲಕ್ಷ ಹಾಗೂ ನಕಲಿ ಮಾಸ್ಕ್ ತಯಾರಿಕಾ ಘಟಕಗಳಿಂದ 15 ಲಕ್ಷ ಹಣ ವಸೂಲಿ ಮಾಡಿದ್ದಾರೆ ಎನ್ನುವುದು ಸದ್ಯಕ್ಕೆ ಗೊತ್ತಾಗಿರುವ ಮಾಹಿತಿ. ಇದೀಗ ಕಾಟನ್ ಪೇಟೆ ಠಾಣೆಯಲ್ಲಿ ಹೊಸದಾಗಿ FIR ಮಾಡಲಾಗಿದ್ದು, ಕ್ರೈಂ ಸಂಖ್ಯೆ 0064/2020 ದಾಖಲು ಮಾಡಲಾಗಿದೆ. FIR ಮಾಹಿತಿಯಂತೆ ಬಳ್ಳಾರಿಯ ಪ್ರಭಾವಿ ರಾಜಕಾರಣಿ ಆಪ್ತ ಬಾಬು ರಾಜೇಂದ್ರ ಪ್ರಸಾದ್ ಡೀಲ್‌ನ ರೂವಾರಿ ಎನ್ನುವುದನ್ನು ಬಹಿರಂಗ ಮಾಡಿದ್ದಾರೆ. ಸದ್ಯಕ್ಕೆ FIR ನಲ್ಲಿ ಸಿಸಿಬಿ ಎಸಿಪಿ ಪ್ರಭುಶಂಕರ್ ಎ1 ಆರೋಪಿ, ಇನ್ಸ್‌ಪೆಕ್ಟರ್ಗಳಾದ R.M ಅಜಯ್ ಎ2 ಆರೋಪಿ, ನಿರಂಜನ್ ಕುಮಾರ್ ಎ3 ಆರೋಪಿಯಾಗಿದ್ದಾರೆ. ಇನ್ನುಳಿದಂತೆ ಬಳ್ಳಾರಿಯ ಪ್ರಭಾವಿ ರಾಜಕಾರಣಿ ಆಪ್ತ ಬಾಬು ರಾಜೇಂದ್ರ ಪ್ರಸಾದ್ ಎ4 ಆರೋಪಿ ಎಂದು ನಮೂದಿಸಲಾಗಿದ್ದು, ಅಂತಿಮವಾಗಿ ಐದನೇ ಆರೋಪಿಯನ್ನು ಭೂಷಣ್ ಎಂದು ಗುರುತಿಸಲಾಗಿದೆ.

ಯಾರು ಗಣಿನಾಡಿನ ಪ್ರಭಾವಿ ಲೀಡರ್..?
ಸದ್ಯದ ತನಕ ಬಳ್ಳಾರಿಯ ಪ್ರಭಾವಿ ನಾಯಕರ ಪರಮಾಪ್ತ ಬಾಬು ರಾಜೇಂದ್ರ ಪ್ರಸಾದ್ ಎಂದು ಹೇಳಲಾಗ್ತಿದೆ. ಇದೀಗ ಸರ್ಕಾರದಲ್ಲಿ ಬಳ್ಳಾರಿಯ ಹಲವಾರು ನಾಯಕರು ಚಾಲ್ತಿಯಲ್ಲಿದ್ದಾರೆ. ಸಾಕಷ್ಟು ಶಾಸಕರೂ ಇದ್ದಾರೆ. ಇಬ್ಬರು ಸಚಿವರೂ ಇದ್ದಾರೆ. ಆದರೆ ಯಾರ ಆಪ್ತ ಎನ್ನುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಬೇಕಿದೆ. ಇದೇನು ದೊಡ್ಡ ಬ್ರಹ್ಮಾಂಡ ರಹಸ್ಯವಲ್ಲ. ಬಳ್ಳಾರಿಯಲ್ಲಿ ಯಾರನ್ನೂ ಕೇಳಿದರೂ ಬಾಬು ರಾಜೇಂದ್ರ ಪ್ರಸಾದ್ ಯಾರ ಬೆಂಬಲಿಗ ಎನ್ನುವುದು ತಿಳಿಯುತ್ತೆ.
ಇದನ್ನು ಪೊಲೀಸರು ಹಾಗೂ ಸರ್ಕಾರ ಮುಚ್ಚಿ ಹಾಕುತ್ತಾ ಎನ್ನುವ ಬಗ್ಗೆ ಸಾಕಷ್ಟು ಶಂಕೆಗಳು ಆರಂಭವಾಗಿದೆ. ಯಾಕಂದ್ರೆ ಯಾವುದೇ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗಿಯೇ ಇಲ್ಲ. ಸುದ್ದಿಯನ್ನೇ ತಡೆ ಹಿಡಿಯಲಾಗಿದೆ. ಸರ್ಕಾರ ಮಟ್ಟದಲ್ಲಿ ಪ್ರಭಾವಿ ಎಂದ ಮೇಲೆ ಬಹಿರಂಗ ಆಗುತ್ತಾ..? ಹಾಗೇ ಕೋಟ್ಯಂತರ ರೂಪಾಯಿ ಲಂಚಬಾಕತನದ ಪ್ರಕರಣ ಮುಚ್ಚಿ ಹೋಗುತ್ತಾ? ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.







