ಈ ಘಟನೆ ನೋಡಿದ್ರೆ, ಸಿಎಂ ಬಿ.ಎಸ್. ಯಡಿಯೂರಪ್ಪ ಜನರ ವಿಶ್ವಾಸ ಕಳೆದುಕೊಂಡು ಬಿಟ್ಟಿದ್ದಾರಾ ಎನಿಸುತ್ತದೆ. ಯಾಕಂದರೆ ಓರ್ವ ಕರ್ನಾಟಕದ ಜನಪ್ರತಿನಿಧಿ, ವಿಧಾನಸಭಾ ಸದಸ್ಯ ತನ್ನ ನೋವನ್ನು ತನ್ನ ಪಕ್ಷದ ನಾಯಕರಲ್ಲಿ ಹೇಳಿಕೊಳ್ಳಬೇಕು. ಅಲ್ಲಿ ಸಮಸ್ಯೆಗೆ ಪರಿಹಾರ ಸಿಗುವ ನಂಬಿಕೆ ಇಲ್ಲ ಎನ್ನುವುದಾದರೆ ವಿಧಾನ ಸಭಾಧ್ಯಕ್ಷರ ಬಳಿ ತನ್ನ ದೂರನ್ನು ದಾಖಲು ಮಾಡಿ ನನಗೆ ರಕ್ಷಣೆ ಕೊಡಿ ಎನ್ನುವ ಮನವಿ ಮಾಡಬಹುದು. ಅಂತಿಮವಾಗಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಬಳಿಕ ಅಹವಾಲು ಸಲ್ಲಿಕೆ ಮಾಡಬಹುದು. ಆದರೆ ಕರ್ನಾಟಕದ ಜನಪ್ರತಿನಿಧಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಬಳಿಗೆ ತನ್ನ ದೂರನ್ನು ರವಾನೆ ಮಾಡಿದ್ದಾರೆ. ಈ ಘಟನೆ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ಕಳೆದುಕೊಂಡರಾ ಎನ್ನುವ ಅನುಮಾನವನ್ನು ಮೂಡಿಸುತ್ತಿದೆ.
ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗುಡುಗಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವ ತನಕ ನಾನು ಮಂತ್ರಿ ಸ್ಥಾನ ಕೇಳಲ್ಲ, ಮಂತ್ರಿ ಆಗುವುದೂ ಇಲ್ಲ ಎಂದು ಶಪಥ ಮಾಡಿರುವ ಫೈರ್ ಬ್ರಾಂಡ್ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ಸಲ್ಲಿಸಿದ್ದಾರೆ. ನಮ್ಮ ನಾಯಕರು ಏನಿದ್ದರು ನರೇಂದ್ರ ಮೋದಿ, ಅಮಿತ್ ಷಾ ಎಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಹೇಳಿಕೆ ಪ್ರಕಾರವೇ ನಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಚೇರಿರಿಗೆ ಸೂರು ಸಲ್ಲಿಕೆ ಮಾಡಿದ್ದು, ನಿಮ್ಮ ದೂರನ್ನು ಸ್ವೀಕರಿಸಿದ್ದೇವೆ ಎಂದು Prime Minister’s Office ನಿಂದ ಸಂದೇಶ ಬಂದಿದೆ. ಅಂದರೆ ರಾಜ್ಯದ, ಒಂದು ಜಿಲ್ಲೆಯ, ಒಂದು ಕ್ಷೇತ್ರದ ಸಮಸ್ಯೆ ನಿವಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಕಚೇರಿ ಕೆಲಸ ಮಾಡುವಂತಾಯ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೆಕ್ಕಕ್ಕೇ ಇಲ್ಲವೇ..? ಎನ್ನುವಂತಾಗಿದೆ.
ಅಸಲಿಗೆ ನಡೆದ ಘಟನೆ ಏನು?
ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೊಲೆ ಮಾಡುವುದಾಗಿ ಯುವಕನೊಬ್ಬ ಬೆದರಿಕೆ ಹಾಕಿದ್ದಾನೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ, ಬಸನಗೌಡ ಪಾಟೀಲ್ ಯತ್ನಾಳ್ ಮನಗೆ ಹೊಕ್ಕು ಕಡಿದು ಹಾಕುತ್ತೇನೆ ಎಂದು ಗೋಳಗುಮ್ಮಟ ಪೊಲೀಸ್ ಠಾಣೆ ಎದುರೇ ಹೇಳಿಕೆ ಕೊಟ್ಟಿದ್ದಾರೆ. ಶುಕ್ರವಾರ ಪೊಲೀಸ್ ಠಾಣೆ ಎದುರೆ ಕೊಲೆ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು, ಸುಮೊಟೋ ದೂರು ದಾಖಲಿಸಿಕೊಂಡು ಯುವಕ ರಘು ಕಣಮೇಶ್ವರ ಎಂಬಾತನ್ನು ಬಂಧಿಸಬೇಕು ಎಂದು ಆಗ್ರಹಿಸಿ ನ್ಯಾಯಕ್ಕಾಗಿ ಪ್ರಧಾನ ಮಂತ್ರಿ ಕಚೇರಿಗೆ ದೂರು ಸಲ್ಲಿಕೆಯಾಗಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗ ರಾಘವ ಅಣ್ಣಿಗೇರಿ ಎಂಬುವವರು ಇ-ಮೇಲ್ ಮೂಲಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ ರಘು ಕಣಮೇಶ್ವರ ವಿರುದ್ಧ ವಿಜಯಪುರ ಎಸ್ ಪಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸೂಚಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಕೆಯಾಗಿದೆ. ದೂರು ರಿಜಿಸ್ಟರ್ ಮಾಡಿಕೊಳ್ಳಲಾಗಿದೆ ಎಂದು PMO ಕಚೇರಿಯಿಂದ ರಾಘವ್ ಅಣ್ಣಿಗೇರಿಗೆ ಸಂದೇಶವೂ ಬಂದಿದೆ. ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆಯೂ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ರಾಘ ಅಣ್ಣಿಗೇರಿ ಮನವಿ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಂಗಳಕ್ಕೆ ದೂರು ನೀಡುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಮತ್ತೊಂದು ಬಿ.ಎಸ್. ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುವ ಕೆಲಸ ಮುಂದುವರಿಸಿದ್ದಾರೆ. ಇಷ್ಟು ದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ಅಂಗಳಕ್ಕೆ ರಾಜ್ಯದ ಹಲವಾರು ನಾಯಕರು ದೂರು ಸಲ್ಲಿಕೆ ಮಾಡಿದ್ದಾರೆ. ಆದರೆ ಇದೀಗ ಸ್ವತಃ ಬಿಜೆಪಿ ಶಾಸಕರೊಬ್ಬರು ಪ್ರಧಾನಿ ಕಚೇರಿಗೇ ದೂರು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ದೂರು ನೀಡಿದ್ದರೂ ಅಥವಾ ಬೆಂಬಲಿಗರ ಮೂಲಕವೇ ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿದ್ದರು. ಅದೂ ಆಗಲಿಲ್ಲ ಎಂದರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಬಹುದಿತ್ತು. ಅದೂ ಬೇಡ, ಸರ್ಕಾರದ ಸಹಾಯವೇ ಬೇಡ ಎನ್ನುವುದಾಗಿದ್ದರೆ, ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ದೂರು ಸಲ್ಲಿಕೆ ಮಾಡಿ ಒತ್ತಡ ಹಾಕಬಹುದಿತ್ತು. ಆದರೆ ಪ್ರಧಾನಿ ಕಚೇರಿಗೆ ದೂರು ಸಲ್ಲಿಕೆ ಮಾಡಿ, ರಾಜ್ಯದಲ್ಲಿ ನಾಯಕತ್ವ ವಹಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅಸಮರ್ಥ ನಾಯಕ ಎನ್ನುವ ಸಂದೇಶ ರವಾನಿಸುವ ಮೂಲಕ, ನಾಯಕತ್ವ ಬದಲಾವಣೆಯ ಕೂಗಿಗೆ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಮುಂದೇನಾಗುತ್ತೆ ಕಾದು ನೋಡಬೇಕು.