ಹಿಂದೆಂದೂ ಕಂಡುಕೇಳಿರದ ಕರೊನಾ ವೈರಸ್ ಭಾರತಕ್ಕೆ ಕಾಲಿಟ್ಟ ಮೇಲೆ ಈವರೆಗೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ 4 ಸಭೆ ನಡೆಸಿದ್ದಾರೆ. ಇಂದು ಮುಖ್ಯಮಂತ್ರಿಗಳ ಜೊತೆ 5 ನೇ ಸಭೆ ನಡೆಯುತ್ತಿದೆ. ಸಭೆಯಲ್ಲಿ ಕರೊನಾ ಮತ್ತು ಲಾಕ್‌ಡೌನ್ ವಿಷಯಗಳ ಬಗ್ಗೆ ವಿಷದವಾಗಿ ಚರ್ಚೆಯಾಗಲಿದೆ. ಅದೇ ಕಾರಣಕ್ಕೆ 2 ಹಂತದಲ್ಲಿ ಸಭೆ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಮಧ್ಯಾಹ್ನ 3ರಿಂದ ಸಂಜೆ 5.30ರವರೆಗೆ ಮತ್ತು ಅರ್ಧಗಂಟೆಯ ಬಿಡುವಿನ ಬಳಿಕ ಸಂಜೆ 6 ಗಂಟೆಯಿಂದ 2ನೇ ಹಂತದ ಸಭೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಮಾಲೋಚನೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರ ಉಪಸ್ಥಿತಿಯೂ ಇದೆ. ಅದೇ ರೀತಿ ಎಲ್ಲಾ ರಾಜ್ಯಗಳ ಆರೋಗ್ಯ, ಹಣಕಾಸು ಮತ್ತು ಗೃಹ ಸಚಿವರೂ. ಹಿಂದೆ ನಡೆದ 4 ಸಭೆಗಳಲ್ಲಿ ಆಯ್ದ ಮುಖ್ಯಮಂತ್ರಿಗಳಿಗೆ ಮಾತ್ರ ಮಾತನಾಡುವ ಅವಕಾಶ ನೀಡಲಾಗುತ್ತಿತ್ತು. ಈ ಬಾರಿ ಬಹುತೇಕ ಎಲ್ಲಾ ಮುಖ್ಯಮಂತ್ರಿಗಳಿಗೂ ಮಾತನಾಡುವ ಅವಕಾಶ ಕಲ್ಪಿಸಕೊಡಲಾಗಿದೆ. ಅದಕ್ಕಾಗಿಯೇ 2 ಹಂತಗಳಲ್ಲಿ ಸುದೀರ್ಘವಾದ ಸಭೆ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಒಂದಲ್ಲ, ಎರಡಲ್ಲ, ಮೂರು ಬಾರಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಮಾರ್ಚ್ 24ರ ನಡುರಾತ್ರಿಯಿಂದ ಜಾರಿಗೊಳಿಸಿದ ಲಾಕ್‌ಡೌನ್ 50 ದಿನ ಪೂರೈಸುತ್ತಿದೆ. ಆದರೂ ಕೊರೋನಾ ನಿಯಂತ್ರಣ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಈಗ ಮೇ 17ಕ್ಕೆ 3ನೇ ಹಂತದ ಲಾಕ್‌ಡೌನ್ ಮುಕ್ತಾಯವಾಗುತ್ತಿದೆ. ‘ಮೇ 17ರ ನಂತರ ಮುಂದೇನು?’ ಎಂಬ ಪ್ರಶ್ನೆ ಸಹಜವಾಗಿ ಕಾಡತೊಡಗಿದೆ. ಹಾಗಾಗಿ ಕೇಂದ್ರ ಸರ್ಕಾರ ಮತ್ತೊಮ್ಮೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆಗೆ ಮುಂದಾಗಿದೆ.
ಕರೋನಾ ಮತ್ತು ಲಾಕ್‌ಡೌನ್ ಸಮಸ್ಯೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಲಾಕ್‌ಡೌನ್ ಇದ್ದಾಗಲೇ ನಿಯಂತ್ರಣಕ್ಕೆ ಬಾರದ ಕರೊನಾ ಸೋಂಕು ಹರಡುವಿಕೆ, ಲಾಕ್‌ಡೌನ್ ತೆರವುಗೊಳಿಸಿದ ಮೇಲೆ ತಹಬದಿಗೆ ಬರುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಹಾಗಂತ ಲಾಕ್‌ಡೌನ್ ಅನ್ನು ಇನ್ನು ಹೆಚ್ಚು ದಿನ ಮುಂದುವರೆಸಲು ಸಾಧ್ಯವಿಲ್ಲ. ಮುಂದುವರೆಸಿದರೆ ಈಗಾಗಲೇ ಹಳ್ಳದ ಹಾದಿ ಹಿಡಿದಿರುವ ದೇಶದ ಉತ್ಪಾದನೆ ಮತ್ತು ಆರ್ಥಿಕತೆಗಳು ಪಾತಾಳಮುಖಿಯಾಗಲಿವೆ. ಇಂಥ ಸಂದಿಗ್ಧ, ಸಂಕೀರ್ಣ ಸಮಸ್ಯೆ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಹೆಚ್ಚುಕಡಿಮೆ ಇಂಥದೇ ಪರಿಸ್ಥಿತಿ ಕಳೆದ ಸಭೆಯ ವೇಳೆಯಲ್ಲೂ ಇತ್ತು. ಆದರೆ ಕಳೆದ ಸಭೆಯಲ್ಲಿ ಸೂಕ್ತವಾದ, ಸಮಯೋಚಿತವಾದ, ನಿಖರವಾದ, ನಿರ್ದಿಷ್ಟವಾದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿಗಳ ಸಭೆ ನಡೆಸಿಯೂ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ಮೋದಿ ವಿಫಲರಾದರು ಎಂಬುದಕ್ಕೆ ಕಳೆದ ಸಭೆಯ ಬಳಿಕ ಆದ ಅನಾಹುತಗಳೇ ಉದಾಹರಣೆ. ಯಾವ ಆಧಾರದ ಮೇಲೆ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಯಿತು ಎಂಬ ಬಗ್ಗೆ ಈವರೆಗೆ ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೊಟ್ಟಿಲ್ಲ.
ಹಸಿರು, ಕಿತ್ತಳೆ, ಕೆಂಪು ವಲಯಗಳನ್ನಾಗಿ ಗುರುತಿಸಲಾಗಿತ್ತು. ವಲಯವಾರು ನಿಯಮಾವಳಿಗಳನ್ನು ಸಡಿಲಿಸಲಾಗಿತ್ತು. ಕ್ರಮೇಣ ಕೆಂಪು ವಲಯದಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಯಿತು. ಎಲ್ಲಾ ವಲಯಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಮೂಲಕ ‘ವಲಯವಾರು’ ಎಂಬುದು ಕೇವಲ ‘ನಾಮಕಾವಸ್ತೆ’ ಎಂಬುದನ್ನು ಕೇಂದ್ರ ಸರ್ಕಾರ ಸಾಬೀತುಪಡಿಸಿತು.
ಕಳೆದ ಸಭೆಗಳಲ್ಲಿ ಕೆಲವು ಕೆಲವು ರಾಜ್ಯಗಳು ಅಂತರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಕೇಳಿದ್ದವು. ಕೆಲವು ರಾಜ್ಯಗಳು ಬಿಲ್ ಕುಲ್ ಬೇಡ ಎಂದಿದ್ದವು. ಆದರೆ ಎಲ್ಲಾ ಅಭಿಪ್ರಾಯಗಳನ್ನು ಆಧರಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದ್ದ ಕೇಂದ್ರ ಸರ್ಕಾರ ಮೌನವಹಿಸಿತು. ಉತ್ಪಾದನೆ ಹೆಚ್ಚಿಸಬೇಕು, ಮಾರುಕಟ್ಟೆಯನ್ನು ಹುರಿದುಂಬಿಸಬೇಕು ಎಂದು ಹೇಳುವ, ಅದೇ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದೇವೆ ಎಂದು ಹೇಳುವ ಕೇಂದ್ರ ಸರ್ಕಾರಕ್ಕೆ ಅಂತರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡದೆ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸಲು ಸಾಧ್ಯ ಎಂದು ಅನ್ನಿಸಿದ್ದೇ ವಿಚಿತ್ರವಾಗಿದೆ.

ಹಾಗೆ ನೋಡಿದರೆ ಏಕಾಏಕಿ ಲಾಕ್‌ಡೌನ್ ಜಾರಿಗೊಳಿಸಿದ್ದು ದೇಶಕಂಡ ದುರಂತ, ಮಹಾ ಅನ್ಯಾಯ ಎಂದು ಸರ್ಕಾರಕ್ಕೆ ಮನವರಿಕೆಯಾಗಿದ್ದೇ ವಲಸೆ ಕಾರ್ಮಿಕರಿಂದ. ವಲಸೆ ಕಾರ್ಮಿಕರು ನಿಮ್ಮ ರೈಲು, ಬಸ್ಸು, ಊಟ, ನೀರುಗಳ್ಯಾವೂ ಬೇಡ ಎಂದು ತವರೂರ ಕಡೆ ಹೊರಟು ನಿಂತಾಗ. ಈ ವಲಸೆ ಕಾರ್ಮಿಕರ ಸಮಸ್ಯೆಗಳು ಕೂಡ ಕಳೆದ ಸಭೆಗಳಲ್ಲಿ ಚರ್ಚೆಯಾಗಿತ್ತು. ಒಂದೊಮ್ಮೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಹಕಾರ, ಸಮನ್ವಯಗಳೆಲ್ಲವೂ ಸರಿಯಾಗಿ ಇದ್ದಿದ್ದರೆ ಇಷ್ಟೊತ್ತಿಗೆ ಸಮಸ್ಯೆ ಬಗೆಹರಿಯಬೇಕಿತ್ತು.
ಹೀಗೆ ಕಳೆದ ಸಭೆಗಳು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಅಷ್ಟೇಯಲ್ಲ, ಸದ್ಯ ದೇಶವನ್ನು ಕಾಡುತ್ತಿರುವುದು ಕರೊನಾ ಮತ್ತು ಲಾಕ್‌ಡೌನ್ ಎಂಬ ಎರಡೇ ಎರಡು ಸಮಸ್ಯೆಗಳಲ್ಲ. ದೇಶ ಆರ್ಥಿಕವಾಗಿ ದಯನೀಯ ಸ್ಥಿತಿಗೆ ಹೋಗಿದೆ. ಪ್ರತಿದಿನವೂ ರೂಪಾಯಿಯ ಅಪಮೌಲ್ಯವಾಗುತ್ತಿದೆ. ಆದರೂ ಘನ ಭಾರತ ಸರ್ಕಾರ ಇಂಧನ ಬೆಲೆಯನ್ನು ಹೆಚ್ಚಿಸುತ್ತಲೇ ಇದೆ. ದೇಶಕ್ಕೆ ದೇಶವೇ ದಿಗ್ಬಂಧನವಾಗಿರುವ ಸಂದರ್ಭದಲ್ಲಿ ಜನರ ಬಳಿ ಹಣ ಹರಿದಾಡುವಂತೆ ಮಾಡಬೇಕು. ಆದರಿವರು ಇಂಧನ ಬೆಲೆ ಹೆಚ್ಚಳ ಮಾಡಿ ಇತರೆ ಬೆಲೆಗಳು ಏರಿಕೆಯಾಗುವಂತೆ, ಜನರ ಕೊಳ್ಳುವ ಶಕ್ತಿಯೇ ಹುದುಗಿಹೋಗುವಂತೆ ಮಾಡಿದ್ದಾರೆ. ಇವೆಲ್ಲವೂ ಕರೊನಾ ಕರಿನೆರಳಲ್ಲಿ ಕಂಡುಬರುತ್ತಿಲ್ಲ ಅಷ್ಟೇ. ಆರ್ಥಿಕ ಹಿಂಜರಿತ, ರೂಪಾಯಿ ಅಪಮೌಲ್ಯ, ಇಂಧನ ಬೆಲೆ ಏರಿಕೆ ವಿಷಯಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ವಿಷಯಗಳೇಯಾದರೂ ರಾಜ್ಯಗಳ ಮೇಲು ಪರಿಣಾಮ ಬೀರುವಂಥವು. ಹಾಗಾಗಿ ಇವುಗಳ ಬಗ್ಗೆ ಕೂಡ ಚರ್ಚೆ ಆಗಬೇಕಿದೆ.
ಇನ್ನೊಂದು ಪ್ರಮುಖ ವಿಷಯವೆಂದರೆ ಕೊರೊನಾ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಣ ಬಿಡುಗಡೆ ಕುರಿತಾದುದು. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ರಾಜ್ಯಗಳು ಹಣಕಾಸಿನ ಅಭಾವ ಎದುರಿಸುತ್ತಿವೆ. ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ 30 ಸಾವಿರ ಕೋಟಿ ಹಣ ಕೊಡಿ ಎಂದು ಪತ್ರಬರೆದಿದ್ದಾರೆ. ಕಳೆದ ಬಾರಿ ‘ಕೊವಿಡ್ ವಿಶೇಷ ನಿಧಿ’ ಕೊಡಿ ಎಂದು ಪಂಜಾಬ್ ದನಿ ಎತ್ತಿತ್ತು. ಮೊದಲ ಸಭೆಯಲ್ಲೇ ಜಿಎಸ್ ಟಿ ಕಾಂಪನ್ಷೇಷನ್ ಹಣ ಬಿಡುಗಡೆ ಮಾಡಿ ಎಂದು ಮಹಾರಾಷ್ಟ್ರ ಸರ್ಕಾರ ಕೋರಿತ್ತು. ಆದರೆ ಸೂಕ್ತ ನಿರ್ಧಾರ ಈವರೆಗೆ ಆಗಿಲ್ಲ. ಹಣದ ಹರಿವು ಹೆಚ್ಚಿಸುವ ದೃಷ್ಟಿಯಿಂದಲೂ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುವುದು ಒಳಿತಾದ ಕ್ರಮವಾಗಿದೆ.
ಕರೋನಾ ಕಣ್ಣಿಗೆ ಕಾಣದ ಅದೃಶ್ಯ ಆಪತ್ತು. ಅದಕ್ಕಾಗಿ ಅದನ್ನು ತಡೆಯಲು, ಅದರ ಹುಟ್ಟಡಗಿಸಲು ಸಾದ್ಯವಾಗುತ್ತಿಲ್ಲ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಅದರೊಂದಿಗೆ ಬೆಸೆದುಕೊಂಡಿರುವ ಇತರೆ ವಿಷಯಗಳನ್ನಾದರೂ ಸರಿಯಾಗಿ ನಿಭಾಯಿಸಬೇಕು. ಲಾಕ್‌ಡೌನ್ 4ನೇ ಹಂತಕ್ಕೆ ವಿಸ್ತರಣೆ ಆದರೂ ಆಗದೇ ಇದ್ದರೂ ಅದು ಹೆಸರಿಗಷ್ಟೇ. ಕರೋನಾ ಸೋಂಕು ಸಂಪೂರ್ಣವಾಗಿ ಸತ್ತಲ್ಲದ ಕಾರಣಕ್ಕೆ ಕೆಲವು ನಿಯಮಗಳಿರುತ್ತವೆ. ಜೊತೆಗೆ ಆರ್ಥಿಕ ಪುನಶ್ಚೇತನದ ಹೆಸರಿನಲ್ಲಿ ಕೆಲವು ವಿನಾಯಿತಿಗಳೂ ಇರುತ್ತವೆ. ಅದನ್ನು ಸಮರ್ಥವಾಗಿ ಸಮನ್ವಯಗೊಳಿಸಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯ. ಈ ಬಾರಿಯ ಸಭೆಯಲ್ಲಾದರೂ ಅಂಥ ಸೂಕ್ತ, ಸಮರ್ಥ ತೀರ್ಮಾನಗಳು ಹೊರಬೀಳಲಿ.