ಹಥ್ರಾಸ್ ಅತ್ಯಾಚಾರ ಪ್ರಕರಣದ ಕುರಿತಂತೆ ಆಕ್ರೋಶ ವ್ಯಕ್ತ ಪಡಿಸಿರುವ ಕರ್ನಾಟಕ ವಿಪಕ್ಷ ನಾಯಕ ಸಿದ್ದರಾಮಯ್ಯ, ದೇಶದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ದಲಿತರಿಗೆ ರಕ್ಷಣೆ ಇಲ್ಲ. ನಿತ್ಯ ಸಾವಿರಾರು ಕೊಲೆ, ಅತ್ಯಾಚಾರ, ಶೋಷಣೆಯ ಪ್ರಕರಣಗಳು ದಾಖಲಾಗುತ್ತಿವೆ. ಇವರಲ್ಲಿ ಎಷ್ಟು ಜನರಿಗೆ ನ್ಯಾಯ ಸಿಕ್ಕಿದೆ? ನಾನು ಚೌಕಿದಾರ್ ಅಂತ ಹೇಳಿ ಕುಣಿದಾಡುತ್ತಿದ್ದವರೆಲ್ಲ ಈಗ ಎಲ್ಲಿದ್ದಾರೆ? ಇದೇನಾ ನರೇಂದ್ರ ಮೋದಿಯವರ ಚೌಕಿದಾರಿಕೆ? ಎಂದು ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶದಲ್ಲಿ ಹೆಣ್ಣೊಬ್ಬಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಆಕೆಯ ಕುಟುಂಬದವರಿಗೂ ಶವವನ್ನು ನೋಡಲು ಅವಕಾಶ ನೀಡದೆ ಮಧ್ಯರಾತ್ರಿ ಪೊಲೀಸರೇ ಶವಸಂಸ್ಕಾರ ಮಾಡಿದ್ದಾರೆ. ಸರ್ಕಾರ ಅತ್ಯಾಚಾರಿಗೆ ಶಿಕ್ಷೆ ಕೊಡಿಸುವುದು ಬಿಟ್ಟು, ನೆರವಿಗೆ ನಿಂತಿದೆ ಅಂದ್ರೆ ಯೋಗಿ ಆದಿತ್ಯನಾಥ್‌ರಂಥವರು ಕಾವಿ ಬಟ್ಟೆಗೆ ಕಳಂಕವಲ್ಲದೆ ಇನ್ನೇನು? ಎಂದು ಯೋಗಿ ಆದಿತ್ಯನಾಥ್ ಮೇಲೆ ಹರಿಹಾಯ್ದಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ 27 ಪ್ರಕರಣಗಳು ಇದ್ದವು. ಮುಖ್ಯಮಂತ್ರಿಯಾದ ಮೇಲೆ ಆ ಎಲ್ಲಾ ಪ್ರಕರಣಗಳನ್ನು ವಾಪಾಸು ಪಡೆಯುವಂತೆ ಮಾಡಿ, ಸಾತ್ವಿಕನಂತೆ ನಾಟಕ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು, ಡಿಕೆ ಶಿವಕುಮಾರ್ ಮೇಲೆ ಸಿಬಿಐ ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,, ಐಟಿ, ಇಡಿ, ಸಿಬಿಐ ಇಲಾಖೆಗಳು ತಮ್ಮ ಕರ್ತವ್ಯ ತಾವು ಮಾಡುವ ಬಗ್ಗೆ ನಮ್ಮ ತಕರಾರಿಲ್ಲ, ಆದರೆ ಚುನಾವಣೆಗಳು ಹತ್ತಿರ ಬಂದಾಗ ವಿರೋಧಿಗಳನ್ನು ಹತ್ತಿಕ್ಕಲು ಐಟಿ, ಇಡಿ, ಸಿಬಿಐ ಗಳನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡಿಸುವುದಕ್ಕಷ್ಟೇ ನಮ್ಮ ವಿರೋಧ. ಇಂತಹ ದಾಳಿ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದುಕೊಂಡಿದ್ದರೆ ಅದು ಬಿಜೆಪಿಯವರ ಭ್ರಮೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.