ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಪಕ್ಷದಲ್ಲಿ ಜನರ ನಾಯಕರು ಎಂದು ಗುರುತಿಸಿಕೊಂಡ ಪ್ರಮುಖರ ಪೈಕಿ ಸಚಿವ ಬಿ.ಶ್ರೀರಾಮುಲು ಅವರ ನಿರೀಕ್ಷೆಗಳಿಗೆ ಸತತ ಸೋಲಾಗುತ್ತಿದೆ. ಅತ್ತ ಉಪಮುಖ್ಯಮಂತ್ರಿ ಸ್ಥಾನವೂ ಇಲ್ಲ, ಇತ್ತ ಬಳ್ಳಾರಿ ಜಿಲ್ಲಾ ಉಸ್ತುವಾರಿಯೂ ಸಿಗುವುದು ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪರಿಶಿಷ್ಟ ಪಂಗಡದ (ವಾಲ್ಮೀಕಿ ನಾಯಕ ಸಮುದಾಯ) ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ಎಂಬ ನಿರೀಕ್ಷೆಯೊಂದೇ ಬಾಕಿ ಉಳಿದಿರುವುದು. ಈ ನಿರೀಕ್ಷೆಯೂ ಹುಸಿಯಾದರೆ ಪ್ರಸ್ತುತ ಬಿಜೆಪಿ ಕೈಹಿಡಿದಿರುವ ಈ ಸಮುದಾಯ ಪಕ್ಷದಿಂದ ದೂರವಾಗಲಿದ್ದು, ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.
2018ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಅಧಿಕಾರಕ್ಕೆ ಬರುವ ನಿರೀಕ್ಷೆಯಿತ್ತು. ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆ ವಾಲ್ಮೀಕಿ ಸಮುದಾಯದಿಂದ ಕೇಳಿಬಂದಾಗ ಸಹಜವಾಗಿಯೇ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ, ಬಹುಮತ ಬಾರದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ನಂತರ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆ ಮತ್ತೆ ಮುನ್ನಲೆಗೆ ಬಂತು. ಸರ್ಕಾರದಲ್ಲಿ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಯಾಗಿದ್ದರೂ ಶ್ರೀರಾಮುಲು ಅವರಿಗೆ ಅದು ದಕ್ಕಲಿಲ್ಲ. ಆಗಲೇ ವಾಲ್ಮೀಕಿ ಸಮುದಾಯದವರು ಬಿಜೆಪಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮುಲು ಅವರು ಮತ್ತೊಂದು ಬೇಡಿಕೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿಟ್ಟಿದ್ದರು. ಅದೆಂದರೆ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಹುದ್ದೆಯನ್ನು ತಮಗೆ ನೀಡಿ ಎಂದು. ಆದರೆ, ಶ್ರೀರಾಮುಲು ಚಿತ್ರದುರ್ಗ ಜಿಲ್ಲೆಯಿಂದ ಗೆದ್ದು ಬಂದಿದ್ದರಿಂದ ಮುಖ್ಯಮಂತ್ರಿಗಳ ಮೊದಲ ಆದ್ಯತೆ ಅವರಿಗೆ ಆ ಜಿಲ್ಲೆಯ ಉಸ್ತುವಾರಿಯನ್ನು ನೀಡುವುದು. ಹೆಚ್ಚುವರಿಯಾಗಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನಾದರೂ ನೀಡಿ ಎಂದು ಕೇಳಿದರೂ ಒಪ್ಪದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನೀಡಿ ಶ್ರೀರಾಮುಲು ಅವರಿಗೆ ರಾಯಚೂರು ಜಿಲ್ಲೆಯ ಜವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಿದ್ದರು. ಇದು ಶ್ರೀರಾಮುಲು ಅವರಿಗೆ ಭಾರೀ ನಿರಾಶೆ ತಂದರೂ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಮುಖ್ಯಮಂತ್ರಿಗಳು ವಹಿಸಿದ ಜವಾಬ್ದಾರಿ ಒಪ್ಪಿಕೊಂಡಿದ್ದರು.
ಮುಖ್ಯಮಂತ್ರಿಗಳ ಮೇಲೆ ಏನೇ ಒತ್ತಡಗಳನ್ನು ತಂದರೂ ಇದೀಗ ಸಂಪುಟ ವಿಸ್ತರಣೆ ವೇಳೆಯೂ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಆದರೂ ಪಟ್ಟು ಬಿಡದೆ ಇಂದಲ್ಲಾ ನಾಳೆ ನನಗೆ ಆ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಹೇಳಿಕೊಂಡು ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ನೀಡಿ ಎಂಬ ಮನವಿಯನ್ನು ಮತ್ತೆ ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದು, ಇದಕ್ಕಾಗಿ ಸಾಕಷ್ಟು ಒತ್ತಡವನ್ನೂ ಹೇರುತ್ತಿದ್ದಾರೆ.
ಬಳ್ಳಾರಿ ಉಸ್ತುವಾರಿಗೆ ಆನಂದ್ ಸಿಂಗ್ ಪಟ್ಟು
ಹೇಳಿ ಕೇಳಿ ಬಳ್ಳಾರಿ ಶ್ರೀರಾಮುಲು ಅವರ ತವರು ಜಿಲ್ಲೆ. ಕಾರಣಾಂತರಗಳಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಬೇಕಾಗಿ ಬಂದಿತ್ತು. ಆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಾಲ್ಮೀಕಿ ನಾಯಕ ಸಮುದಾಯದ ಮತಗಳನ್ನು ಬಿಜೆಪಿಗೆ ಸೆಳೆದುಕೊಳ್ಳುವ ಉದ್ದೇಶದಿಂದ ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆಯಿಂದ ಸ್ಪರ್ಧಿಸಿ ತಾವು ಗೆದ್ದಿದ್ದಲ್ಲದೆ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುವಂತೆ ಮಾಡಿದ್ದರು. ಆದರೂ, ಇಂದಲ್ಲಾ ನಾಳೆ ತಮಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಶ್ರೀರಾಮುಲು ಅವರು ಆಗಾಗ್ಯೆ ಬಳ್ಳಾರಿಗೆ ತೆರಳಿ ಅಲ್ಲಿ ಜನ ಸಂಪರ್ಕ ಸಭೆಗಳನ್ನು ನಡೆಸುತ್ತಿದ್ದರು. ಆದರೆ, ನೂತನವಾಗಿ ಸಚಿವರಾಗಿರುವ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿಗಾಗಿ ಪಟ್ಟು ಹಿಡಿದಿರುವುದು ಶ್ರೀರಾಮುಲು ಅವರಿಗೆ ಮತ್ತೊಂದು ಹಿನ್ನಡೆ ತಂದೊಡ್ಡುವ ಸಾಧ್ಯತೆ ಇದೆ. ಆನಂದ್ ಸಿಂಗ್ ಬಳ್ಳಾರಿ ಜಿಲ್ಲೆಯಿಂದ ಗೆದ್ದು ಬಂದಿದ್ದರಿಂದ ಸಹಜವಾಗಿಯೇ ಆ ಜಿಲ್ಲೆಯ ಉಸ್ತುವಾರಿಗಳನ್ನು ನೇಮಿಸುವಾಗ ಅವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಹಾಗೇನಾದರೂ ಆದಲ್ಲಿ ಶ್ರೀರಾಮುಲು ಅವರು ಮತ್ತೆ ನಿರಾಶೆ ಎದುರಿಸಬೇಕಾಗುತ್ತದೆ.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚಿಸಬೇಕು ಎಂದು ಪಟ್ಟು ಹಿಡಿದಿರುವ ಆನಂದ್ ಸಿಂಗ್, ವಿಜಯನಗರ ಜಿಲ್ಲೆ ತನ್ನ ಪ3ಮುಖ ಬೇಡಿಕೆಯಾಗಿದೆಯೇ ಹೊರತು ಮಂತ್ರಿಯಾಗುವುದು ನನ್ನ ಉದ್ದೇಶವಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಅಂದರೆ, ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ನೀಡಿದರೆ ಹೇಗಾದರೂ ಮಾಡಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರ ಪ್ರತ್ಯೇಕ ಜಿಲ್ಲೆ ರಚಿಸುವುದು ಬಹುತೇಕ ಖಚಿತ. ಇದಕ್ಕೆ ಪೂರಕ ವರದಿಗಳು ಸರ್ಕಾರದ ಕೈಸೇರುವಂತೆ ಅವರು ಮಾಡಿಯೇ ಮಾಡುತ್ತಾರೆ. ಆದರೆ, ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ರಚಿಸುವುದು ಶ್ರೀರಾಮುಲು ಅವರಿಗೆ ಸುತಾರಾಂ ಇಷ್ಟವಿಲ್ಲ. ಶ್ರೀರಾಮುಲು ಮಾತ್ರವಲ್ಲ, ಆ ಜಿಲ್ಲೆಯಲ್ಲಿರುವ ಬಿಜೆಪಿಯ ಬಹುತೇಕ ಶಾಸಕರು ಇದಕ್ಕೆ ವಿರೋಧವಿದ್ದಾರೆ. ಒಂದೊಮ್ಮೆ ಈ ವಿಚಾರದಲ್ಲಿ ಆನಂದ್ ಸಿಂಗ್ ಮೇಲುಗೈ ಸಾಧಿಸಿದರೆ ಶ್ರೀರಾಮುಲು ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಮುನಿಸಿಕೊಳ್ಳುವುದು ಖಚಿತ.
ಶ್ರೀರಾಮುಲು ಮುನಿದರೆ ವಾಲ್ಮೀಕಿ ಸಮುದಾಯ ಮುನಿಸಿಕೊಂಡಂತೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಗೆ ಕುರುಬ ಸಮುದಾಯದ ನಾಯಕರಾಗಿದ್ದಾರೋ ಅದೇ ರೀತಿ ಶ್ರೀರಾಮುಲು ಅವರು ವಾಲ್ಮೀಕಿ ನಾಯಕ ಸಮುದಾಯದ ನಾಯಕರು. ಅವರ ಬೆನ್ನ ಹಿಂದೆ ಸಮುದಾಯದ ಬಹುಸಂಖ್ಯೆಯ ಜನ ಮಾತ್ರವಲ್ಲ, ಬಹುತೇಕ ಶಾಸಕರು ಇದ್ದಾರೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ (ವಾಲ್ಮೀಕಿ ಸಮುದಾಯ) ಜನಸಂಖ್ಯೆ 42 ಲಕ್ಷಕ್ಕೂ ಹೆಚ್ಚಿದೆ. ಆದರೆ, ಸಮುದಾಯದ ಮುಖಂಡರು ಹೇಳುವ ಪ್ರಕಾರ ಆ ಜನಸಂಖ್ಯೆ 60 ಲಕ್ಷಕ್ಕಿಂತಲೂ ಹೆಚ್ಚು.
ಶ್ರೀರಾಮುಲು ಅವರ ಬೆನ್ನಿಗೆ ನಿಂತಿರುವ ಈ ಸಮುದಾಯ, 2018ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಜತೆ ನಿಂತಿದ್ದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರು ಉಪಮುಖ್ಯಮಂತ್ರಿಯಾಗುತ್ತಾರೆ ಎಂದು. ಆದರೆ, ಅದು ಇದುವರೆಗೆ ಸಿಕ್ಕಿಲ್ಲ, ಮುಂದೆ ಸಿಗುವ ಲಕ್ಷಣಗಳೂ ಕಡಿಮೆ. ಅವರ ಇನ್ನೊಂದು ಬೇಡಿಕೆ ಎಂದರೆ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 3ರಿಂದ ಶೇ. 7.5ಕ್ಕೆ ಹೆಚ್ಚಿಸಬೇಕು ಎಂಬುದು. ಇದನ್ನೇ ಪ್ರತಿಪಾದಿಸುತ್ತಿರುವ ಶ್ರೀರಾಮುಲು ಅವರು ಕೂಡ, ತನಗೆ ಮಂತ್ರಿ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದರೂ ಪರವಾಗಿಲ್ಲ. ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಿ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಮೀಸಲಾತಿ ಕಲ್ಪಿಸಲು ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿಯೂ ಎಚ್ಚರಿಸಿದ್ದಾರೆ. ಈ ಕುರಿತಂತೆ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಲಾಗಿದ್ದು, ಆಯೋಗದ ವರದಿ ಆಧರಿಸಿ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.
ಒಂದೊಮ್ಮೆ ಶ್ರೀರಾಮುಲು ಮತ್ತು ವಾಲ್ಮೀಕಿ ಸಮುದಾಯದ ಈ ಬೇಡಿಕೆಯೂ ಈಡೇರದಿದ್ದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೂ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ಸಿಟ್ಟು ಅವರಲ್ಲಿ ಬಂದೇ ಬರುತ್ತದೆ. ಸಹಜವಾಗಿಯೇ ಶ್ರೀರಾಮುಲು ಕೂಡ ಬಿಜೆಪಿ ಮತ್ತು ಮುಖ್ಯಮಂತ್ರಿ ಅವರಿಂದ ಅಂತರ ಕಾಯ್ದುಕೊಳ್ಳಲಿದ್ದು, ಈಗಲಾದರೂ ಎಚ್ಚೆತ್ತುಕೊಂಡು ಬೇಡಿಕೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಇದು ರಾಜಕೀಯವಾಗಿ ಬಿಜೆಪಿಗೆ ಮುಳುವಾಗುವ ಸಾಧ್ಯತೆ ನಿಚ್ಚಳವಾಗಿದೆ.