ಮೈಸೂರಿನಲ್ಲಿ (Mysuru) ಗೃಹ ಸಚಿವ ಪರಮೇಶ್ವರ್ (Parameshwar) ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ವಿರೋಧ ಪಕ್ಷಗಳು ನಿರಂತರವಾಗಿ ಸಿಎಂ ರಾಜೀನಾಮೆ, ಸರ್ಕಾರದ ಪತನ ವಿಚಾರಗಳ ಬಗ್ಗೆ ಮಾತನಾಡುವ ಮಧ್ಯೆ ಪರಮೇಶ್ವರ್ ರ ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಮುಡಾ ಅಕ್ರಮ ನಿವೇಶನ (Muda scam), ವಾಲ್ಮೀಕಿ ನಿಗಮದ ಹಗರಣ (Valmiki scam), ವಕ್ಫ್ ಹಗರಣಗಳ (Waqf board) ನಡುವೆ ಗೃಹ ಸಚಿವ ಪರಮೇಶ್ವರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah) ತವರು ಜಿಲ್ಲೆ ಮೈಸೂರಲ್ಲಿ ಮಾತಾಡಿದ ಪರಮೇಶ್ವರ್, ಆದಷ್ಟು ಬೇಗ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟುಬಿಡಿ. ಮುಂದೆ ಏನ್ ಏನ್ ಆಗತ್ತೋ ಗೊತ್ತಿಲ್ಲ ಎಂದಿದ್ದಾರೆ.
ಹೌದು, ರಾಜ್ಯದಲ್ಲಿ ಇವತ್ತಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ರೆ, ಯಾವಾಗ ಏನಾಗುತ್ತೋ ಏನೂ ಹೇಳಲಿಕ್ಕೆ ಆಗಲ್ಲ. ಹೀಗಾಗಿ ಬೇಗ ನಮ್ಮ ಸರ್ಕಾರ ಇರುವಾಗಲೇ ಕಾಂಗ್ರೆಸ್ ಕಚೇರಿಯ ಶಂಕುಸ್ಥಾಪನೆ ನೆರವೇರಿಸಿ ಎಂದಿದ್ದಾರೆ. ಈ ಹೇಳಿಕೆ ಸರ್ಕಾರ ಪತನದ ಅಥವಾ ಮುಖ್ಯಮಂತ್ರಿ ಬದಲಾವಣೆಯ ಸುಳಿವು ಕೊಟ್ಟಂತಿದೆ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ.