ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಮಂತ್ರಿ ಅನುರಾಗ್ ಠಾಕುರ್ ಅವರ ನೆಹರೂ ಮತ್ತು ಗಾಂಧಿ ಕುಟುಂಬ ವಿರುದ್ದ ಹೇಳಿಕೆಯಿಂದ ಉಂಟಾದ ಗದ್ದಲದ ಕಾರಣಕ್ಕಾಗಿ, ಲೋಕಸಭೆಯನ್ನು ಶುಕ್ರವಾರದಂದು ನಾಲ್ಕು ಬಾರಿ ಮುಂದೂಡಲಾಯಿತು. ನಂತರ ಸಭಾಧ್ಯಕ್ಷರ ಸೂಚನೆಯ ಮೇರೆಗೆ ಸದನದ ಕ್ಷಮೆಯನ್ನೂ ಕೇಳಿದ್ದಾರೆ.
ತೆರಿಗೆ ಮತ್ತು ಇತರ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಮಂಡಿಸುವ ಸಮಯದಲ್ಲಿ PM-CARES ಕುರಿತು ಅನುರಾಗ್ ಠಾಕುರ್ ಮಾತನಾಡಿದಾಗ, ವಿಪಕ್ಷಗಳು ಪಿಎಂ-ಕೇರ್ಸ್ ನಿಧಿಯ ಪಾರದರ್ಶಕತೆಯ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ್ದ ಠಾಕುರ್, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ, ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿಯ ದುರ್ಬಳಕೆ ಮಾಡಲಾಗಿತ್ತು ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ, ನೆಹರೂ ಮತ್ತು ಗಾಂಧಿ ಕುಟುಂಬದ ಹೆಸರನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕು. ಅವರು ಈ ದೇಶವನ್ನು ಹಾಳುಗೆಡವಿದ್ದಾರೆ, ಎಂದು ಠಾಕುರ್ ಹೂಂಕರಿಸಿದ್ದರು.
“ಹೈಕೋರ್ಟ್‌ನಿಂದ ಸುಪ್ರಿಂ ಕೋರ್ಟ್‌ವರೆಗೆ ಎಲ್ಲಾ ಕೋರ್ಟ್‌ಗಳು ಪಿಎಂ-ಕೇರ್ಸ್ ನಿಧಿಯನ್ನು ಅಂಗೀಕರಿಸಿವೆ. ಸಣ್ಣ ಮಕ್ಕಳು ಕೂಡಾ ತಮ್ಮ ಉಳಿತಾಯದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ನೆಹರೂ ರೂಪಿಸಿದ ಪರಿಹಾರ ನಿಧಿ, ಈವರೆಗೂ ಅಧಿಕೃತವಾಗಿ ನೋಂದೀಕೃತವಾಗಿಲ್ಲ. ಕಾಂಗ್ರೆಸ್‌ನವರು ತಮ್ಮ ಕುಟುಂಬದ ಉದ್ದಾರಕ್ಕಾಗಿ ಟ್ರಸ್ಟ್ ಸ್ಥಾಪಿಸಿ ಅದಕ್ಕೆ ಸೋನಿಯಾ ಗಾಂಧಿ ಅವರನ್ನು ಚೇರ್ಮನ್ ಆಗಿ ಮಾಡಿದ್ದಾರೆ. ಈ ಕುರಿತು ತನಿಖೆಯಾಗಬೇಕು,” ಎಂದು ಅನುರಾಘ್ ಠಾಕುರ್ ಹೇಳಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದಕ್ಕೆ ಉತ್ತರ ನೀಡಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ, “ಯಾರಿದು ಹಿಮಾಚಲ ಪ್ರದೇಶದ ಹುಡುಗ? ನೆಹರೂ ಪ್ರಸ್ತಾಪ ಈ ಚರ್ಚೆಯಲ್ಲಿ ಯಾಕೆ ಬಂತು? ನಾವು ನರೇಂದ್ರ ಮೋದಿಯವರ ಹೆಸರು ಪ್ರಸ್ತಾಪಿಸಿದ್ದೇವಾ?. ಪಿಎಂ-ಕೇರ್ಸ್‌ಗೆ ಚೀನಾ ಮೂಲದ ಕಂಪೆನಿಗಳಿಂದಲೂ ದೇಣಿಗೆ ಬಂದಿದೆ. ಅದನ್ನು ಕೂಡಾ ತನಿಖೆಗೆ ಒಳಪಡಿಸಬೇಕು,” ಎಂದು ಅನುರಾಗ್ ಠಾಕುರ್ ವಿರುದ್ದ ಕಿಡಿಕಾರಿದ್ದಾರೆ.
ನಂತರ ಅನುರಾಗ್ ಠಾಕುರ್ ಅವರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರ ನಡೆದಿದ್ದಾರೆ. ಈ ನಡುವೆ, ಸಭಾಧ್ಯಕ್ಷರಾದ ಓಮ್ ಬಿರ್ಲಾ ಅವರು ಬಿಜೆಪಿ ಸದಸ್ಯರ ಪರ ವಹಿಸುತ್ತಾ ಇದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವೇಳೆ ಸದಸ್ಯರಿಗೆ ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸಲು ಆದೇಶ ನೀಡಿದ ಸಭಾಧ್ಯಕ್ಷರು, ಮಾಸ್ಕ್ ಹಾಕಿಕೊಳ್ಳದ ಸದಸ್ಯರ ಹೆಸರುಗಳನ್ನು ಹೇಳಿ ಅವರನ್ನು ಸದನದಿಂದ ಹೊರ ಹಾಕಲಾಗುವುದು ಎಂದು ಹೇಳಿದ್ದಾರೆ. “ಯಾರಾದರು ಮಾತನಾಡಲು ನಿಂತುಕೊಂಡರೆ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ.ಅವರನ್ನು ಸದನದಿಂದ ಹೊರಗಿಡಲಾಗುತ್ತದೆ. ಇದು ಮಂತ್ರಿಗಳೂ ಸೇರಿದಂತೆ ಎಲ್ಲಾ ಸದಸ್ಯರಿಗೆ ಅನ್ವಯವಾಗುತ್ತದೆ,” ಎಂದು ಹೇಳಿದ್ದಾರೆ.
ನಂತರ ಸದನವನ್ನು 30 ನಿಮಿಷಗಳಿಗೆ ಅಂದರೆ 4.20PM ಮುಂದೂಡಲಾಗಿದೆ.
ಮತ್ತೆ ಸದನ ಆರಂಭವಾದಾಗ, ನಿರ್ಮಲಾ ಸೀತಾರಾಮನ್ ಅವರು ಮಸೂದೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಗೌರವ್ ಗೊಗೋಯ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಅನುರಾಗ್ ಠಾಕುರ್ ಅವರು ಕ್ಷಮೆಯಾಚಿಸಬೇಕೆಂದು ಪಟ್ಟುಹಿಡಿದರು. ಈ ಸಂದರ್ಭದಲ್ಲಿ ಸದನದ ಅಧ್ಯಕ್ಷರಾಗಿ ಕುಳಿತಿದ್ದ ರಮಾ ದೇವಿ ಅವರು, ಚೌಧರಿ ಅವರಿಗೆ ಮಸೂದೆಯ ಕುರಿತು ಮಾತನಾಡಲು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೌಧರಿ, ಮೊದಲು ಸದನವು ಶಾಂತವಾಗಬೇಕು ಎಂದರು. ನಂತರ ಅನುರಾಗ್ ಠಾಕುರ್ ವಿರುದ್ದ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದರು.
ಅಷ್ಟರಲ್ಲಿ ʼಅನುರಾಗ್ ಠಾಕುರ್ ಮಾಫಿ ಮಾಂಗೊʼ (ಅನುರಾಗ್ ಠಾಕುರ್ ಕ್ಷಮೆ ಕೇಳಿ) ಎಂದು ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಲಾರಂಭಿಸಿದರು. ಸದನವನ್ನು ಮತ್ತೆ 30 ನಿಮಿಷಗಳ ಕಾಲ ಅಂದರೆ ಸಂಜೆಯ 5ಗಂಟೆಯವರೆಗೆ ಮುಂದೂಡಲಾಯಿತು.
ಅದಾದ ಬಳಿಕವೂ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಬಿಡದ ಕಾರಣಕ್ಕೆ ಸದನವನ್ನು ಮತ್ತೆ 30 ನಿಮಿಷಗಳ ಕಾಲ ಎರಡು ಬಾರಿ ಸಂಜೆ 6 ಗಂಟೆಯವರೆಗೆ ಮುಂದೂಡಲಾಯಿತು.
ಕೊನೆಗೂ ಕ್ಷಮೆ ಕೇಳಿದ ಅನುರಾಗ್ ಠಾಕುರ್
ನಾಲ್ಕು ಬಾರಿ ಸದನ ಮುಂದೂಡಿದ ಬಳಿಕ ಮತ್ತೆ ಸದನ ಪುನರಾರಂಭಗೊಂಡಾಗ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರ ಸೂಚನೆಯ ಮೇರೆಗೆ ಠಾಕುರ್ ಸದನದಲ್ಲಿ ಕ್ಷಮೆಯಾಚಿಸಿದರು. “ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ, ನನಗೂ ನೋವಾಗಿದೆ,” ಎಂದು ಅವರು ಹೇಳಿದ್ದಾರೆ.