ದೆಹಲಿ ಗಲಭೆ ಸಂಬಂಧ ಮೇ 29 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಲಾದ ಸತ್ಯಶೋಧನಾ ವರದಿಯಲ್ಲಿ ಹಲವು ಉಲ್ಲೇಖಗಳು ಸುಳ್ಳು ಸುಳ್ಳೇ ಆಗಿವೆ ಅಂತಾ Altnews ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಇದನ್ನ ಆಧರಿಸಿ ʼದಿ ವೈರ್ʼ ಕೂಡಾ ಸಮಗ್ರ ವರದಿ ತಯಾರಿಸಿದೆ. ಸರಕಾರೇತರ ಸಂಸ್ಥೆ ʼCall For Justice’ ನಡೆಸಿದ ಅಧ್ಯಯನ ವರದಿ ಇದಾಗಿದ್ದು, ಅದನ್ನ ಅಮಿತ್ ಶಾ ಕೈಗಿಡಲಾಗಿದೆ. ಬಾಂಬೆ ಹೈ ಕೋರ್ಟ್ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಅಂಬಾದಾಸ್ ಜೋಶಿ ನೇತೃತ್ವದ ತಂಡದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂಎಲ್ ಮೀನಾ, ನಿವೃತ್ತ ಐಪಿಎಸ್ ಅಧಿಕಾರಿ ವಿವೇಕ್ ದುಬೆ, ಏಮ್ಸ್ ನಿವೃತ್ತ ನಿರ್ದೇಶಕ ಡಾ.ಟಿಡಿ ದೋಗ್ರಾ, ಸಾಮಾಜಿಕ ಉದ್ಯಮಿ ನೀರಾ ಮಿಶ್ರಾ, ಅಡ್ವಕೇಟ್ ನೀರಜ್ ಅರೋರಾ ಮೊದಲಾದವರು ಇದ್ದರು.
ಆದರೆ ಈ ರೀತಿ ಘಟಾನುಘಟಿ ಅಧಿಕಾರಿಗಳು ನೀಡಿರುವ ಸತ್ಯಶೋಧನಾ ವರದಿ ಮಾತ್ರ ಆಡಳಿತ ಪಕ್ಷದ ಮೆಚ್ಚಿಸಲು ಹೊರಟಂತಿದೆ. ಈ ವರದಿಯನ್ನ ಪರಾಮರ್ಶೆಗೆ ಒಳಪಡಿಸಿದಾಗ ಅಲ್ಲೊಂದಿಷ್ಟು ಉಲ್ಲೇಖಗಳು ʼಸುಳ್ಳುʼ ಅನ್ನೋದು ಗೊತ್ತಾಗಿ ಬಿಡುತ್ತವೆ. ಪ್ರಮುಖವಾಗಿ ಈ ವರದಿಯು ನಾಲ್ಕು ಬಹುಮುಖ್ಯ ಅಂಶಗಳನ್ನಾಗಿ ಇದನ್ನ ವಿಭಜಿಸಬಹುದು. ಆದರೆ ಇದನ್ನ ಪರಿಶೀಲನೆಗೊಳಪಡಿಸಿದಾಗ ಸತ್ಯಶೋಧನಾ ಸಮಿತಿಯು ನಿರ್ಲಕ್ಷಿಸಿದ ಅದೆಷ್ಟೋ ವರದಿಗಳು ಹಾಗೇ ಮಗುಮ್ಮಾಗಿ ಬಿದ್ದಿರೋದು ಗಮನಿಸಲಾರದೇ ಇರಲಾಗದು.
1. ಈಗಾಗಲೇ ಫ್ಯಾಕ್ಟ್ ಚೆಕ್ ಮಾಡಲಾಗಿರುವ ಸುಳ್ಳು ಮಾಹಿತಿಗಳನ್ನ ಆಧರಿಸಿ ವರದಿ
ಮೊದಲನೆಯದಾಗಿ ಸತ್ಯಶೋಧನಾ ತಂಡವು ಸಿಎಎ ವಿರೋಧಿ ಪ್ರತಿಭಟನೆಯ ತೀವ್ರ ಲಾಬಿಯ ನಡುವೆಯೂ, ಅಂತರಾಷ್ಟ್ರೀಯ ಸಮುದಾಯ ಇದಕ್ಕೇ ಪೂರಕವಾಗಿ ಸಾಮಾಜಿಕ, ನೈತಿಕ ಅಥವಾ ರಾಜಕೀಯ ಬೆಂಬಲ ನೀಡಿಲ್ಲ ಎಂದಿದ್ದಾರೆ. ಆದರೆ Altnews ಫ್ಯಾಕ್ಟ್ ಚೆಕ್ ಪ್ರಕಾರ, ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೇ, ಭಾರತದ ಹೊರತಾದ ಹಲವು ದೇಶಗಳಲ್ಲೂ ನರೇಂದ್ರ ಮೋದಿ ಸರಕಾರದ ನಿಲುವು ಖಂಡಿಸಿ ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸಿದ್ದನ್ನ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ಇನ್ನು ಎರಡನೆಯದಾಗಿ ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಹಣ ಹಂಚಿಕೆ ಆಗುತ್ತಿತ್ತು ಅನ್ನೋದನ್ನ ಸತ್ಯಶೋಧನಾ ಸಮಿತಿ ಆಗೆಯೇ ಉಲ್ಲೇಖಿಸಿದೆ. ಆದರೆ ಸತ್ಯಶೋಧನಾ ಸಮಿತಿ ನೀಡಿರುವ ವೀಡಿಯೋ ಈಗಾಗಲೇ ಫ್ಯಾಕ್ಟ್ ಚೆಕ್ ಗೆ ಒಳಪಟ್ಟ ವೀಡಿಯೋ ಅನ್ನೋದು ಸಾಬೀತಾಗಿದ್ದು, ಅದರಲ್ಲಿ ಗಾಯಗೊಂಡ ಸಂತ್ರಸ್ತನಿಗೆ ವ್ಯಕ್ತಿಯೊಬ್ಬ ಹಣ ನೀಡಿರುವುದು ತಿಳಿದು ಬಂದಿದೆ. ಇದಲ್ಲದೇ ಇದನ್ನ ಹರಿಯಬಿಟ್ಟ ಪಾಕ್-ಕೆನಡಿಯನ್ ಬರಹಗಾರ ತಾರಿಖ್ ಫತಹ್ ಇಂತಹದ್ದೇ ಹಲವು ಸುಳ್ಳುಗಳನ್ನ ಹರಿಯಬಿಟ್ಟಿದ್ದಾರೆ ಅನ್ನೋದನ್ನ Altnews ತಿಳಿಸಿದೆ.
ಸತ್ಯಶೋಧನಾ 5 ನೇ ಅಧ್ಯಾಯದಲ್ಲಿ 15.12.2019 ರಂದು ಜಾಮಿಯಾ ನಗರದಲ್ಲಿ ನಡೆದ ಗಲಭೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ದೆಹಲಿ ಸುನ್ನೀ ವಕ್ಫ್ ಬೋರ್ಡ್ ಮಂಡಳಿ ಅಧ್ಯಕ್ಷ ಅಮಾನತುಲ್ಲಾ ಖಾನ್ ನೇತೃತ್ವ ವಹಿಸಿದ್ದರು ಎಂದು ತಿಳಿಸಿದೆ. ಅಲ್ಲದೇ ಡಿಸೆಂಬರ್ 19 ರಂದು ಶಾಹಿನ್ ಬಾಗ್ ನಲ್ಲಿ ಬಸ್ ತಡೆಹಿಡಿದ ಸಿಎಎ ವಿರೋಧಿ ಪ್ರತಿಭಟನಾಕಾರರು ‘ಹಿಂದೂಗಳಿಂದ ಆಝಾದಿʼ ಅನ್ನೋದಾಗಿ ಕೂಗಿದ್ದಾಗಿ ವರದಿ ಅರೋಪಿಸಿದೆ. ಆದರೆ ವಾಸ್ತವದಲ್ಲಿ Altnews ಫ್ಯಾಕ್ಟ್ ಚೆಕ್ ಪ್ರಕಾರ, ಡಿಸೆಂಬರ್ 15 ರಂದು ನಡೆದ ಗಲಭೆ ಸಮಯ ಅಮಾನತುಲ್ಲಾ ಖಾನ್ ಜಾಮಿಯಾ ನಗರದಲ್ಲಿ ಇರದೇ, ಶಾಹಿನ್ ಬಾಗ್ ನಲ್ಲಿಯೇ ಮಧ್ಯಾಹ್ನ 2 ರಿಂದ 6 ಗಂಟೆ ತನಕ ಇದ್ದಿದ್ದಾಗಿ ಫ್ಯಾಕ್ಟ್ ಚೆಕ್ ತಿಳಿಸಿದೆ. ಮಾತ್ರವಲ್ಲದೇ ಡಿಸೆಂಬರ್ 19 ರಂದು ಬಸ್ ತಡೆದು ಪ್ರತಿಭಟನೆ ನಡೆದಿರುವ ಬಗ್ಗೆ ಯಾವೊಂದು ಮಾಧ್ಯಮಗಳಲ್ಲೂ ವರದಿಯಾಗಿಲ್ಲ.
ಅಧ್ಯಾಯ 6 ರಲ್ಲಿ ಉಲ್ಲೇಖಿಸಿದಂತೆ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್, “ನಾನು ಸುಪ್ರೀಂ ಕೋರ್ಟ್ ಮೇಲೆ ಯಾವುದೇ ನಂಬಿಕೆ ಹೊಂದಿಲ್ಲ. ಇದು ಎನ್‌ಆರ್‌ಸಿ, ಅಯೋಧ್ಯೆ ಪ್ರಕರಣ ಹಾಗೂ ಕಾಶ್ಮೀರ ವಿಚಾರದಲ್ಲಿ ಮಾನವೀಯತೆ, ಜಾತ್ಯತೀತತೆ ಹಾಗೂ ಸಮಾನತೆಯನ್ನ ರಕ್ಷಿಸಿಲ್ಲ.. ಆದ್ದರಿಂದ ಅಂತಿಮವಾಗಿ ನ್ಯಾಯ ಬೀದಿಗಳಲ್ಲಿಯೇ ಸಿಗಬೇಕು” ಅನ್ನೋದಾಗಿ ಭಾಷಣ ಮಾಡಿದ್ದಾಗಿ ‘Call For Justice’ ಸತ್ಯಶೋಧನಾ ಸಮಿತಿ ತಿಳಿಸಿದೆ.
ಆದರೆ ಮಾರ್ಚ್ 4 ರಂದು ಜಾಮಿಯಾ ನಗರದಲ್ಲಿ ನಡೆದಿದ್ದ ಪ್ರತಿಭಟನೆ ಸಮಯದಲ್ಲಿ ಹರ್ಷ ಮಂದರ್, ಸಂವಿಧಾನದ ರಕ್ಷಣೆಗಾಗಿ ಬೀದಿಗೆ ಬರುವಂತೆ ಕರೆ ನೀಡಿದ್ದಾಗಿ ʼದಿ ಕ್ವಿಂಟ್ʼ ನಡೆಸಿದ ಫ್ಯಾಕ್ಟ್ ಚೆಕ್ ತಿಳಿಸಿದೆ.
ಇನ್ನು ಬಹುಮುಖ್ಯವಾಗಿ ಡೊನಾಲ್ಡ್ ಟ್ರಂಪ್ ಅವರ ʼನಮಸ್ತೇ ಟ್ರಂಪ್ʼ ಭಾರತ ಭೇಟಿ ಸಂದರ್ಭದ ಗಲಭೆ ಎಬ್ಬಿಸುವಂತೆ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಕರೆ ನೀಡಿದ್ದಾಗಿ ಸತ್ಯಶೋಧನಾ ಸಮಿತಿ ಆರೋಪಿಸಿದೆ. ಆದರೆ ವಾಸ್ತವದಲ್ಲಿ ಗಲಭೆ ಸಂದರ್ಭ ಹರಿಯಿಬಿಟ್ಟ ಭಾಷಣದ ತುಣುಕು ಫೆಬ್ರವರಿ 17 ರಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆಸಿದ ಭಾಷಣ ತುಣುಕಾಗಿದೆ ಅನ್ನೋದನ್ನ ʼದಿ ವೈರ್ʼ ತಿಳಿಸಿದೆ. ಅದಾಗ್ಯೂ ಆ ಭಾಷಣದಲ್ಲಿ ಉಮರ್ ಖಾಲಿದ್, “ನಮಗೆ ಗಾಂಧೀಜಿಯವರು ಹೋರಾಡಲು ಅಹಿಂಸೆ ಮತ್ತು ಸತ್ಯಾಗ್ರಹ ಅನ್ನೋ ಎರಡು ಅಸ್ತ್ರಗಳನ್ನ ನೀಡಿ ಹೋಗಿದ್ದಾರೆ” ಅಂತಾ ತಿಳಿಸಿದ್ದಾರೆ. ಮಾತ್ರವಲ್ಲದೇ ಮುಂದುವರಿದು, “ನಾವು ಹಿಂಸೆಗೆ ಹಿಂಸೆಯ ಉತ್ತರ ನೀಡಬಾರದು. ನಾವು ದ್ವೇಷಕ್ಕೆ ದ್ವೇಷವೂ ತೋರಬಾರದು. ಒಂದು ವೇಳೆ ಅವರು ದ್ವೇಷವನ್ನ ಹರಡಿದರೆ, ನಾವು ಪ್ರೀತಿಯನ್ನ ನೀಡಬೇಕು. ಅವರೇನಾದರೂ ನಮಗೆ ಲಾಠಿಯಿಂದ ಹೊಡೆದರೆ, ನಾವು ತ್ರಿವರ್ಣ ಧ್ವಜವನ್ನ ಎತ್ತಿ ಹಿಡಿಯಬೇಕು. ಒಂದು ವೇಳೆ ಅವರು ಗುಂಡು ಹಾರಿಸಿದರೆ, ನಾವು ಸಂವಿಧಾನ ಎತ್ತಿ ಹಿಡಿಯಬೇಕು. ನಮ್ಮನ್ನೇನಾದರೂ ಅವರು ಜೈಲಿಗೆ ಕಳುಹಿಸಿದರೆ, ನಾವು ʼಸಾರೇ ಜಹಾಂಸೆ ಅಚ್ಛಾ, ಹಿಂದೂಸ್ತಾನ ಹಮಾರʼ ಎಂದು ಹಾಡುತ್ತಾ ಹೋಗಬೇಕು ಅನ್ನೋದಾಗಿ ಉಮರ್ ಖಾಲಿದ್ ಹೇಳಿದ್ದಾಗಿ ʼದಿ ಕ್ವಿಂಟ್ʼ ವರದಿ ಮಾಡಿದೆ.

2. ತಪ್ಪು ದಾರಿಗೆಳೆದ ಘಟನೆಗಳು
ಗಲಭೆಗೂ ಮುನ್ನ ಫೆಬ್ರವರಿ 23 ರಂದು ದೆಹಲಿಯ ಈದ್ಗಾ ಪ್ರದೇಶದಲ್ಲಿ ಸುಮಾರು 7 ಸಾವಿರ ಜನ ಸೇರಿದ್ದಾಗಿ ಸತ್ಯಶೋಧನಾ ವರದಿ ತಿಳಿಸಿದೆ. ಆದರೆ ಸೇರಿದ ಗುಂಪು ಯಾವ ಸಮುದಾಯಕ್ಕೆ ಸೇರಿದ್ದು ಅನ್ನೋದನ್ನ ಉಲ್ಲೇಖಿಸಿಲ್ಲ. ಅದಾಗ್ಯೂ ಅದು ಮುಸ್ಲಿಂ ಸಮುದಾಯ ಕುರಿತ ಆರೋಪ ಅನ್ನೋದು ಸುಲಭವಾಗಿ ಗೊತ್ತಾಗುತ್ತದೆ. ಸ್ಥಳೀಯ ಹಣ್ಣು ವ್ಯಾಪಾರಿ ಹೇಳಿದ ಹೇಳಿಕೆಯನ್ನಷ್ಟೇ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಹಣ್ಣು ವ್ಯಾಪಾರಿ ʼಇದು ಅಂತಿಮ ಯುದ್ಧʼ ಎಂದಿದ್ದಾಗಿಯೂ ತಿಳಿಸಿದೆ.
ಆದರೆ Altnews ಇದನ್ನೇ ಮುಂದಿರಿಸಿ ಸತ್ಯಶೋಧನೆಗೆ ಇಳಿದಾಗ ಸರ್ದಾರ್ ಬಝಾರ್ ನ ಬಳಿ 7 ಸಾವಿರ ಮಂದಿ ಸೇರಿದ್ದಾಗಲೀ, ಅಥವಾ ವರದಿ ತಿಳಿಸಿದಂತೆ ಅವರೆಲ್ಲರೂ 15 ರಿಂದ 35 ರ ಹರೆಯದ ಅಶಾಂತಿ ಹುಟ್ಟು ಹಾಕಲು ತರಬೇತಿ ಪಡೆದವರು ಅನ್ನೋದಾಗಲೀ ಯಾವೊಂದು ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿಲ್ಲ. ಆದ್ದರಿಂದ ಈ ವರದಿ ತನ್ನ ವಿಶ್ವಾಸಾರ್ಹತೆಯನ್ನ ಕಳೆದುಕೊಂಡಿದೆ. ಮಾತ್ರವಲ್ಲದೇ ಮುಸ್ಲಿಂ ಸಮುದಾಯವೇ ಗಲಭೆ ಹುಟ್ಟು ಹಾಕಲು ಸಂಚು ನಡೆಸಿದ್ದಾಗಿ ತಿಳಿಸಲು ಹರಸಾಹಸ ಪಡುವುದು ಸ್ಪಷ್ಟವಾಗುತ್ತದೆ.
ಈ ಕುರಿತು ಗೂಗಲ್, ಟ್ವಿಟ್ಟರ್ ನಲ್ಲಿ Altnews ತಡಕಾಡಿದ್ದು, ಅಂತಹ ಯಾವುದೇ ʼKeywords’ ಕಾಣಲು ಸಾಧ್ಯವಾಗುವುದಿಲ್ಲ. ಮಾತ್ರವಲ್ಲದೇ ʼದಿ ವೈರ್ʼ ಕೂಡಾ ವಾಸ್ತವ ಮಾಹಿತಿ ಕಲೆ ಹಾಕಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವಿಚಾರಿಸಿದಾಗ, ಅಂತಹ ಯಾವುದೇ ಘಟನೆ ನಡೆದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.
3. ಏಕಪಕ್ಷೀಯ ಸತ್ಯಶೋಧನೆ
ದೆಹಲಿ ಗಲಭೆಯು ಓರ್ವ ಗುಪ್ತಚರ ದಳ ಅಧಿಕಾರಿ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳ ಸಹಿತ ಒಟ್ಟು 53 ಮಂದಿಯ ಸಾವಿನೊಂದಿಗೆ ಅಂತ್ಯ ಕಂಡಿತ್ತು. ಅಲ್ಲದೇ 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಆದರೆ ಸತ್ಯಶೋಧನಾ ವರದಿಯಲ್ಲಿ ಹೆಚ್ಚಿನ ಸಾವು ಹಾಗೂ ನಷ್ಟ ಅನುಭವಿಸಿದ್ದು ಮಾತ್ರ ಮುಸ್ಲಿಂ ಸಮುದಾಯ ಅಂತ ಎಲ್ಲೂ ಉಲ್ಲೇಖಿಸಲೇ ಇಲ್ಲ. The Polis Project ಪ್ರಕಾರ 52 ಮಂದಿ ಕೊಲೆಗೀಡಾದವರಲ್ಲಿ 39 ಮಂದಿ ಮುಸ್ಲಿಂ ಹಾಗೂ 13 ಮಂದಿ ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಆ ವರದಿಯು ತಿಳಿಸಿತ್ತು.
ಒಂದು ವರ್ಗದಿಂದ ಅಧಿಕ ಸಾಕ್ಷ್ಯ ಸಂಗ್ರಹ
ʼCall for Justice’ ಸತ್ಯಶೋಧನಾ ವರದಿಯಲ್ಲಿ ದಾಖಲಿಸಲಾದ 27 ಮಂದಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಲ್ಲಿ 21 ಹೇಳಿಕೆಗಳು ಹಿಂದೂಗಳಿಗೇ ಸೇರಿದ್ದವು ಆಗಿವೆ. ಇನ್ನು ಗಲಭೆಗೆ ಕಾರಣ ಹುಡುಕಿ ಹೆಸರಿಸಲಾದ ಭಾಷಣಗಳಲ್ಲೂ ಕೇವಲ ಸಿಎಎ ವಿರೋಧಿ ಭಾಷಣಗಳನ್ನ ಮಾತ್ರ ಉಲ್ಲೇಖಿಸಲಾಗಿದೆ. ಆದರೆ ಸಿಎಎ ಪರ ಸಭೆಗಳಲ್ಲಿ ನಡೆದ ದ್ವೇಷಕಾರಿ ಭಾಷಣದ ಬಗ್ಗೆ ಸತ್ಯಶೋಧನಾ ವರದಿಯು ಜಾಣ ಮೌನವನ್ನ ವಹಿಸಿದೆ. ಮಸೀದಿ ಹಾಗೂ ಪೆಟ್ರೋಲ್ ಬಂಕ್ ಗಳನ್ನ ಬೆಂಕಿ ಕೊಟ್ಟು ದಹಿಸಿದ ಯಾವೊಂದು ಘಟನೆಯೂ ಸತ್ಯಶೋಧನಾ ವರದಿಯಲ್ಲಿ ಉಲ್ಲೇಖವಾಗಿದ್ದಿಲ್ಲ.
4. ವೆಬ್ ಸೈಟ್ ಮೂಲಗಳಿಂದ ಪಡೆದ ಮಾಹಿತಿ
ಸತ್ಯಶೋಧನಾ ತಂಡವು ಹೆಚ್ಚು ನೆಚ್ಚಿಕೊಂಡಿದ್ದೇ ಸುಳ್ಳು ಸುದ್ದಿಗಳನ್ನೇ ಹಬ್ಬುವ ವೆಬ್‌ಸೈಟ್ ಮಾಧ್ಯಮಗಳನ್ನು ಅನ್ನೋದು ಇನ್ನೊಂದು ವಿಚಿತ್ರವಾಗಿದೆ. OpIndia ಬಿತ್ತರಿಸಿದ ಸುಮಾರು 10 ರಷ್ಟು ವರದಿಗಳನ್ನ ಉಲ್ಲೇಖಿಸಲಾಗಿದ್ದು, ಆದರೆ ಆ ಸುದ್ದಿಗಳೆಲ್ಲವೂ ಸುಳ್ಳು ಸುದ್ದಿಗಳಾಗಿದ್ದು, Altnews ಫ್ಯಾಕ್ಟ್ ಚೆಕ್ ಮಾಡಿರುವ ಸುದ್ದಿಗಳೂ ಆಗಿದ್ದಾವೆ.
ಒಟ್ಟಿನಲ್ಲಿ ಆಡಳಿತ ಪಕ್ಷದ ಮೆಚ್ಚಿಸಲು ಮತ್ತು ಕೇವಲ ಒಂದು ವರ್ಗವನ್ನ ಮಾತ್ರ ಅಪರಾಧಿ ಸ್ಥಾನ ನಿಲ್ಲಿಸಲು ʼCall for Justice’ ಸರಕಾರೇತರ ಸಂಸ್ಥೆಯು ಮಾಡಿರುವ ಹರಸಾಹಸ ಅಂತಿಂತದ್ದಲ್ಲ. ಕಣ್ಣಿಗೆ ಕಾಣುವ ಸತ್ಯವನ್ನೂ ಉಲ್ಲೇಖಿಸಲು ಹಿಂಜರಿದಿದ್ದು, ಗೃಹ ಸಚಿವರ ಹೆದರಿಕೆಯಿಂದಲೋ ಅಥವಾ ಅದ್ಯಾವುದಾದರೂ ಸ್ಥಾನ ಗಿಟ್ಟಿಸುವ ಆಸೆಯಿಂದಲೋ ಅನ್ನೋದಕ್ಕೆ ಭವಿಷ್ಯವೇ ಉತ್ತರಿಸಲಿದೆ.










