ಬಿಜೆಪಿ ಪಕ್ಷದ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನೀತಿ ಹಿನ್ನೆಲೆಯಲ್ಲಿ ಹೊಸದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಸಿಟಿ ರವಿ ಅಕ್ಟೋಬರ್ ಮೊದಲ ವಾರದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ.
ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವ ಸಿಟಿ ರವಿಯವರನ್ನು ಶನಿವಾರ (ಸೆಪ್ಟೆಂಬರ್ 26) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯು, ಲಭ್ಯವಿರುವ ಕ್ಯಾಬಿನೆಟ್ ಸ್ಥಾನಗಳನ್ನು ಮೀರಿರುವುದರಿಂದ ಚಿಂತಿತರಾಗಿದ್ದ ಯಡಿಯೂರಪ್ಪ ಅವರಿಗೆ ಸಿಟಿ ರವಿಯವರ ಅನಿರೀಕ್ಷಿತ ರಾಜಿನಾಮೆ ಪ್ರಕ್ರಿಯೆಯು ಸಮಾಧಾನ ತರಿಸಿದೆ ಎನ್ನಲಾಗಿದೆ.
ಪ್ರಸ್ತುತ, ಸಚಿವಾಲಯದಲ್ಲಿ ಆರು ಭರ್ತಿಯಾಗದ ಸಚಿವ ಸ್ಥಾನಗಳಿವೆ, ಆದರೆ ಆಕಾಂಕ್ಷಿಗಳ ಸಂಖ್ಯೆ ಹತ್ತಕ್ಕೂ ಹೆಚ್ಚಿದೆ.
ಸಿಟಿ ರವಿಯವರ ನಿರ್ಗಮನದಿಂದ ತೆರವುಗೊಳ್ಳುವ ಸ್ಥಾನಕ್ಕಾಗಿ ಮಲೆನಾಡು ಪ್ರದೇಶದ ಹಲವಾರು ಒಕ್ಕಲಿಗ ಬಿಜೆಪಿ ಶಾಸಕರು ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಸೋಮವಾರ ಮಾತನಾಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ ಮುಂದಿನ ವಾರದಲ್ಲಿ ತಮ್ಮ ಸಚಿವಾಲಯವನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದಿದ್ದಾರೆ. ಅಲ್ಲದೆ, ಪಕ್ಷದ ದೆಹಲಿ ಮುಖಂಡರನ್ನು ಭೇಟಿ ಮಾಡಿ ಕ್ಯಾಬಿನೆಟ್ ವಿಸ್ತರಣೆಗೆ ಇರುವ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಕುರಿತಂತೆ ಪ್ರತಿಕ್ರಿಯಿಸರುವ ಸಿಟಿ ರವಿ, ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸುತ್ತೇನೆ. ನನಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿದ್ದು ನನ್ನ ಸೌಭಾಗ್ಯದ ಕ್ಷಣ. ಸಚಿವ ಸ್ಥಾನ ಬಿಡುವುದಕ್ಕೆ ನಾನು ಸಿದ್ಧನಿದ್ದೇನೆ. ಪಾರ್ಟಿ ಯಾವಾಗ ಸೂಚನೆ ನೀಡುತ್ತದೆಯೋ ಅಂದು ಸಚಿವ ಸ್ಥಾನದಿಂದ ಕೆಳಗೆ ಇಳಿಯುತ್ತೇನೆ. ನನಗೆ ಅಧಿಕಾರವಲ್ಲ, ಪಕ್ಷ ಸಂಘಟನೆ ಮುಖ್ಯ ಎಂದಿದ್ದಾರೆ.
ಒಟ್ಟಿನಲ್ಲಿ, ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಯಡಿಯೂರಪ್ಪ ದೆಹಲಿ ನಾಯಕರನ್ನು ಭೇಟಿಯಾದ ಬಳಿಕ ಸಿಟಿ ರವಿಯವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಒಲಿದು ಬಂದಿದೆ. ಇದರ ಬೆನ್ನಿಗೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ಹೀಗಾಗಿ ರವಿಯವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಒಲಿದು ಬಂದಿರುವುದಕ್ಕೂ ಬಿಎಸ್‌ವೈ ದೆಹಲಿ ಭೇಟಿಗೂ ಅಂತರ್ಗತ ಸಂಬಂಧವಿದೆಯೇ ಎಂಬ ಅನುಮಾನ ಮೂಡಿದೆ.