ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ʼಸಮಾಜವಾದʼ ಪದವನ್ನು ಕೈಬಿಡುವಂತೆ ನಿರ್ಣಯ ಮಂಡಿಸಲು ಬಿಜೆಪಿ ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ ಮೇಲ್ಮನೆಯನ್ನು ಆಗ್ರಹಿಸಿದ್ದಾರೆ. ಸಮಾಜವಾದ ಪದವನ್ನು ಸಂವಿಧಾನದಲ್ಲಿ ಬಳಸುವ ಅಗತ್ಯವಿಲ್ಲ ಅಂತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ʼಇದೊಂದು ನಿರ್ದಿಷ್ಟತೆಯಿಲ್ಲದ ಆರ್ಥಿಕ ಚಿಂತನೆಯಾಗಿದೆʼ ಎಂದು ಅವರು ತಿಳಿಸಿದ್ದಾರೆ.
ಸಂವಿಧಾನ ರಚನೆ ಸಂದರ್ಭ ವೇಳೆಯೂ ಇಂತಹ ಪ್ರಸ್ತಾಪಗಳು ಬಂದಾಗ ಡಾ.ಬಿ.ಆರ್ ಅಂಬೇಡ್ಕರ್ ನಿರಾಕರಿಸಿದ್ದರು. ಸಮಿತಿಯಲ್ಲಿದ್ದ ಅರ್ಥಶಾಸ್ತ್ರಜ್ಞ ಕೆಟಿ ಶಾ, “ಫೆಡರಲ್ ಸೆಕ್ಯುಲರ್ ಸೋಷಿಯಲಿಸ್ಟ್ ಯೂನಿಯನ್ ಆಫ್ ಸ್ಟೇಟ್ಸ್” ಎಂಬ ಪದಗಳನ್ನು ಪ್ರಸ್ತಾಪಿಸಿದ್ದರು, ಆದರೆ ಅಂಬೇಡ್ಕರ್ ಈ ಪ್ರಸ್ತಾಪವನ್ನು ವಿರೋಧಿಸಿದ್ದರು ಎಂದಿದ್ದಾರೆ. ಆದರೆ 1976 ರಲ್ಲಿ ತುರ್ತು ಪರಿಸ್ಥಿತಿಯ ನಂತರ ರಾಜಕೀಯ ಉದ್ದೇಶದಿಂದ ಇಂದಿರಾ ಗಾಂಧಿ ಅವರು ಸಮಾಜವಾದ ಮತ್ತು ಜಾತ್ಯತೀತ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಿದ್ದಾಗಿ ಅವರು ಆರೋಪಿಸಿದ್ದಾರೆ.
ಇನ್ನು ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ದೇಶದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದೆ. ಕಳೆದ ಏಳು ದಶಕಗಳಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಸಮಾಜವಾದದಿಂದ ಕಾಂಗ್ರೆಸ್ ಪಕ್ಷ ನವ ಉದಾರವಾದಕ್ಕೆ ಬದಲಾಗಿತ್ತು ಎಂದು ತಿಳಿಸಿದ್ದಾರೆ.
ಸದ್ಯ ದೇಶಾದ್ಯಂತ ರಾಕೇಶ್ ಸಿನ್ಹಾ ಎತ್ತಿರುವ ಪ್ರಶ್ನೆ ಸಾಕಷ್ಟು ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಯಾಕೆಂದರೆ ಈ ಹಿಂದೆ 2015 ರಲ್ಲಿ ಗಣರಾಜ್ಯೋತ್ಸವ ದಿನ ಪತ್ರಿಕೆಗಳಲ್ಲಿ ಅಚ್ಚು ಹಾಕಲಾದ ಜಾಹೀರಾತಿನಲ್ಲಿ ಎನ್‌ಡಿಎ ಸರಕಾರವು ಸಮಾಜವಾದ ಮತ್ತು ಜಾತ್ಯತೀತ ಪದವನ್ನು ಕೈ ಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು.
ಆ ನಂತರ 2017 ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಿದ್ದಂತೆ ಸಂಸದ ಅನಂತ್ ಕುಮಾರ್ ಹೆಗ್ಡೆ, ʼನಾವು ಬಂದಿರೋದೆ ಸಂವಿಧಾನ ಬದಲು ಮಾಡಲುʼ ಅನ್ನೋ ಹೇಳಿಕೆ ನೀಡಿ ಇನ್ನಷ್ಟು ವಿವಾದಕ್ಕೆ ಕಾರಣರಾಗಿದ್ದರು. ಅಲ್ಲದೇ ನಂತರ ಲೋಕಸಭೆಯಲ್ಲೂ ಗದ್ದಲವೇರ್ಪಟ್ಟಾಗ, ವಿಪಕ್ಷಗಳ ಪ್ರತಿಭಟನೆ ನಂತರ ಸಂಸದರು ಕ್ಷಮೆಯಾಚಿಸಿದ್ದರು. ಇದೀಗ ರಾಕೇಶ್ ಸಿನ್ಹಾ ಅವರು ʼಸಮಾಜವಾದʼ ಅನ್ನೋ ಪದ ಪೀಠಿಕೆಯಿಂದ ತೆಗೆಯುವಂತೆ ಮಾಡಿರುವ ಒತ್ತಾಯ ಇನ್ಯಾವ ರೂಪ ಪಡೆಯುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಜೊತೆಗೆ ʼಜಾತ್ಯತೀತʼ ಪದವನ್ನು ತೆಗೆಯಲು ಒತ್ತಾಯಿಸುವ ಸಾಧ್ಯತೆ ಬಗ್ಗೆಯೂ ಚರ್ಚೆಗಳು ಹುಟ್ಟಬಹುದು. ಕಾರಣ ಈ ಎರಡೂ ಪದಗಳು ಸಂವಿಧಾನದ 42 ನೇ ತಿದ್ದುಪಡಿ ಪ್ರಕಾರ 1976 ರಲ್ಲಿ ಅಳವಡಿಸಲಾಗಿತ್ತು.
ಸಂವಿಧಾನದ ಸಮಾಜವಾದ ಏನನ್ನುತ್ತೆ..?
ಸಾಮಾಜಿಕ ಸಮಾನತೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಹಾಗೂ ಸ್ಥಾನಮಾನ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ, ಹಾಗೂ ದೇಶದಲ್ಲಿ ಸಮಾನತೆ ತರಲು ಸರಕಾರ ತೆಗೆದುಕೊಂಡ ಕಾನೂನುಗಳ ಬಗ್ಗೆ ಉಲ್ಲೇಖಿಸುವ ಪ್ರಮುಖ ಉದ್ದೇಶ ಹೊಂದಿದೆ. ಈ ಪದವು ಆರಂಭದ ದಿನಗಳಲ್ಲಿ ಇರಲಿಲ್ಲ, ನಂತರ 42ನೇ ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಗಿತ್ತು. 1950 ರ ಜನವರಿ 26 ರಂದು ಸಂವಿಧಾನ ಅಂಗೀಕರಿಸುವ ಹೊತ್ತಿಗೆ ಭಾರತದ ಸಂವಿಧಾನದ ಮೂಲ ಪೀಠಿಕೆಯಲ್ಲಿ ʼಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯʼ ಅನ್ನೋದಾಗಿ ಇತ್ತು. ಆ ನಂತರ ತುರ್ತು ಪರಿಸ್ಥಿತಿ ಸಂದರ್ಭ ʼಸಮಾಜವಾದʼ ಮತ್ತು ʼಜಾತ್ಯತೀತʼ ಪದವನ್ನು ಸೇರ್ಪಡೆಗೂ ಅದಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಆ ನಂತರ ತಿದ್ದುಪಡಿ ಅಂಗೀಕರಿಸಲಾಗಿತ್ತು. ಈ ಮೂಲಕ ಭಾರತದ ಸಂವಿಧಾನದ ಪೀಠಿಕೆಯಲ್ಲಿ ʼಸಾರ್ವಭೌಮ ಸಮಾಜವಾದ ಜಾತ್ಯತೀತ ಗಣರಾಜ್ಯ ಪ್ರಜಾಪ್ರಭುತ್ವʼ ಭಾರತ ಅನ್ನೋದಾಗಿ ಕರೆಯಲ್ಪಡುತ್ತಿದೆ. ಇದೀಗ ಆ ಪದಗಳಿಗೆ ರಾಕೇಶ್ ಸಿನ್ಹಾ ಅಭಿಪ್ರಾಯ ಭೇದ ವ್ಯಕ್ತಪಡಿಸಿದ್ದು ಮೇಲ್ಮನೆಯಲ್ಲಿ ವೈಯಕ್ತಿಕವಾಗಿ ʼಸಮಾಜವಾದʼ ಪದ ಬಿಡುವಂತೆ ನಿರ್ಣಯ ಮಂಡಿಸಲಿದ್ದಾರೆ.
ʼಸಮಾಜವಾದʼ ಪದವನ್ನು ಕೈ ಬಿಡಲು ಸಾಧ್ಯವೇ..?
ಸಂವಿಧಾನದಲ್ಲಿ ಇದುವರೆಗೂ ನೂರಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಆದರೆ ಸಂವಿಧಾನ ಪೀಠಿಕೆಯಲ್ಲಿ ಇದುವರೆಗೂ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ. ಸಂವಿಧಾನದ ತಿದ್ದುಪಡಿಯಲ್ಲಿ ಕೆಲವನ್ನು ಸೇರಿಸಿದರೆ, ಇನ್ನು ಕೆಲವನ್ನ ಅದರ ಮಹತ್ವ ಇದೆಯೇ, ಇಲ್ಲವೇ ಅನ್ನೋದನ್ನ ಪರಿಶೀಲಿಸಿ ʼಇಲ್ಲʼ ಅನ್ನೋದಾಗಿದ್ದರೆ ತೆಗೆದು ಹಾಕಲಾಗಿತ್ತು. ಆದರೆ ಸಂವಿಧಾನದ ಪೀಠಿಕೆ ವಿಚಾರದಲ್ಲಿ ಮಾತ್ರ ಇದು ಅಸಾಧ್ಯ. ಯಾಕೆಂದರೆ ಕಾನೂನು ಹಾಗೂ ಸಂವಿಧಾನ ತಜ್ಞರ ಪ್ರಕಾರ, ಸಂವಿಧಾನದ ಪೀಠಿಕೆಯಲ್ಲಿ ತಿದ್ದುಪಡಿ ತಂದು ಸೇರ್ಪಡೆಗೊಳಿಸಲಷ್ಟೇ ಸಾಧ್ಯ. ಆದರೆ ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ ಸಂವಿಧಾನದ ಪೀಠಿಕೆಯನ್ನು ಮೂಲರಚನೆ ಎಂದೂ ಕರೆದಿದೆ. ಆದ್ದರಿಂದ ಸುಪ್ರೀಂ ಕೋರ್ಟ್ ಪೀಠಿಕೆಯಲ್ಲಿದ್ದ ಪದವನ್ನು ತೆಗೆದುಹಾಕಲು ಒಪ್ಪುವುದಿಲ್ಲ.
ಆದರೆ ಸದ್ಯ ಬಿಜೆಪಿ ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹಾ ಮುಂದಿಟ್ಟಿರುವ ಪ್ರಸ್ತಾಪ ದೇಶದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಚರ್ಚೆಗೂ ಕಾರಣವಾಗುವುದರಲ್ಲಿ ಸಂಶಯವಿಲ್ಲ.