ದೇಶದ ಹೆಸರು ಬದಲಿಸಬೇಕೆಂಬ ಅರ್ಜಿಗೆ ಪ್ರತಿಕ್ರಿಯಿಸಿದ ಸರ್ವೋಚ್ಛ ನ್ಯಾಯಾಲಯವು ಸಂವಿಧಾನದಲ್ಲಿ ದೇಶದ ಹೆಸರು ಭಾರತವೆಂದೇ ಇದೆ. ಹೆಸರು ಬದಲಿಸಬೇಕಾದ ಅವಶ್ಯಕತೆ ಇಲ್ಲವೆಂದಿದೆ. ಅದಾಗ್ಯೂ ಈ ವಿಷಯವನ್ನು ಇದಕ್ಕೆ ಸಂಬಂಧಪಟ್ಟ ಕೇಂದ್ರ ಸಚಿವಾಲಯದ ಎದುರು ಪ್ರಸ್ತಾಪಿಸಬಹುದೆಂದು ಸುಪ್ರೀಂ ಹೇಳಿದೆ.
ಸಿಜೆಐ ಎಸ್ ಎ ಬೋಬ್ಡೆ, ನ್ಯಾ. ಎ ಎಸ್ ಬೋಪಣ್ಣ ಹಾಗೂ ನ್ಯಾ. ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಭಾರತದ ಸಂವಿಧಾನದಲ್ಲಿಯೇ ದೇಶವನ್ನು ಭಾರತವೆಂದೇ ಕರೆಯಲಾಗಿದೆ. ಹಾಗಿದ್ದೂ ಹೆಸರು ಬದಲಾಯಿಸಬೇಕೆಂದು ಸುಪ್ರೀಮ್ ಕೋರ್ಟಿಗೆ ಯಾಕೆ ಅರ್ಜಿ ಹಾಕಿದ್ದೀರೆಂದು ಸುಪ್ರೀಂ ಅರ್ಜಿದಾರರನ್ನು ಪ್ರಶ್ನಿಸಿದ್ದಾರೆ.
ಅರ್ಜಿದಾರರ ಪರ ವಕೀಲ ಅಶ್ವಿನ್ ವೈಶ್, ಇಂಡಿಯಾ ಎಂಬ ಪದವು ಗ್ರೀಕ್ ಪದವಾದ ಇಂಡಿಕಾದಿಂದ ಬಂದಿದೆ. ಇದು ಭಾರತದ ಪದವಲ್ಲ. ಹಾಗಾಗಿ ಹೆಸರನ್ನು ಇಂಡಿಯಾದಿಂದ ಭಾರತವೆಂದು ಬದಲಾಯಿಸಬೇಕು ಎಂದು ವಾದ ಮಾಡಿದ್ದರು.
ಹೆಸರು ಬದಲಾಯಿಸಲು ನೀಡಿರುವ ಅರ್ಜಿಯನ್ನು ಪರಿಗಣಿಸಲು ಸಿದ್ಧವಿಲ್ಲದ ಸುಪ್ರೀಂ, ಅರ್ಜಿದಾರರ ಕೋರಿಕೆಯ ಮೇರೆಗೆ ಇದಕ್ಕೆ ಸಂಬಂಧಪಟ್ಟ ಕೇಂದ್ರ ಸಚಿವಾಲಯದ ಎದುರು ವಿಷಯ ಪ್ರಸ್ತಾಪಿಸುವುದಕ್ಕೆ ಅನುಮತಿ ನೀಡಿದೆ.
ದೇಶ ತನ್ನ ಮೂಲ ಹಾಗೂ ನಿಜವಾದ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ಸಮಯ ಬಂದಿದೆ. ಭಾರತದ ಹಲವಾರು ನಗರಗಳು ತನ್ನ ಮೂಲ ಹೆಸರುಗಳಿಗೆ ಮರಳಿದೆ. ವಸಾಹತು ಶಾಹಿ ಭೂತಕಾಲವನ್ನು ಭಾರತೀಯರು ಮೀರಿರುವುದಕ್ಕೆ ಸಾಂಕೇತಿಕವಾಗಿ ತನ್ನ ಮೂಲ ಹೆಸರಿಗೆ ಮರಳಬೇಕೆಂದು ಅರ್ಜಿದಾರರು ಬಯಸಿದ್ದರು.