ಮಂತ್ರಿ ಮಂಡಲ ವಿಸ್ತರಣೆ ವಿಚಾರದಲ್ಲಿ ಉಂಟಾಗುತ್ತಿರುವ ಭಿನ್ನಮತ ಶಮನಕ್ಕೆ ಸಾಕಷ್ಟು ಪ್ರಯತ್ನ ಮಾಡಿದರೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಆಪರೇಷನ್ ಕಮಲದ ಮೂಲಕ ರಚಿಸಿದ ಸರ್ಕಾರ ಉಳಿಸಿಕೊಳ್ಳಲು ಆಪರೇಷನ್ ಕಮಲದಲ್ಲಿ ಭಾಗಿಯಾಗಿದ್ದವರಿಗೆ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕ್ರಮಕ್ಕೆ ಮೂಲ ಬಿಜೆಪಿ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬಂಡೇಳುವ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಪ್ರತ್ಯೇಕ ಸಭೆ ನಡೆಸುವುದರೊಂದಿಗೆ ಆಂತರಿಕ ಬೇಗುದಿ ಬೀದಿಗೆ ಬಂದಿದೆ. ಇಷ್ಟಕ್ಕೆಲ್ಲಾ ಕಾರಣ ಮೂಲ ಬಿಜೆಪಿ, ವಲಸೆ ಬಿಜೆಪಿ, ಸೋತವರು, ಗೆದ್ದವರು ಎಂಬುದಕ್ಕಿಂತ ಸರ್ಕಾರ ಉಳಿಸಿಕೊಳ್ಳುವ ಮತ್ತು ಅರ್ಹ ಶಾಸಕರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಉದ್ದೇಶದಿಂದ ಸಂಪುಟ ವಿಸ್ತರಣೆಗೆ ಕೈಹಾಕಿರುವುದು.
ಆದರೆ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ಪಡೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂತಹ ಯಾವುದೇ ಬೆದರಿಕೆ, ಒತ್ತಡಕ್ಕೆ ಮಣಿಯುವ ಲಕ್ಷಣ ಕಾಣಿಸುತ್ತಿಲ್ಲ. ಪ್ರತ್ಯೇಕ ಸಭೆ ನಡೆಸಿದ ಶಾಸಕರ ಕುರಿತು ಪ್ರತಿಕ್ರಿಯೆಯನ್ನೂ ನೀಡದೆ ಆಗಿದ್ದನ್ನೆಲ್ಲಾ ಎದುರಿಸುತ್ತೇನೆ ಎಂಬಂತೆ ಇದ್ದಾರೆ. ನಿರಾಳರಾಗಿ ಮಾರ್ಚ್ 5ರಂದು ಮಂಡಿಸಲಿರುವ ಬಜೆಟ್ ಬಗ್ಗೆ ಗಮನಹರಿಸಿದ್ದಾರೆ. ಇದರ ಪರಿಣಾಮ ಭವಿಷ್ಯದಲ್ಲಿ ಪಕ್ಷದ ಮೇಲೆ ಪ್ರತೀಕೂಲ ಪರಿಣಾಮ ಬೀರುವ ಆತಂಕ ಕಾಣಿಸಿಕೊಂಡಿದ್ದು, ಹೀಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರೇ ಮಧ್ಯೆಪ್ರವೇಶಿಸಿ ಭಿನ್ನಮತ ಶಮನದ ಪ್ರಯತ್ನಕ್ಕಿಳಿದಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಪ್ರತ್ಯೇಕ ಸಭೆ ನಡೆಸಿದ ಶಾಸಕರನ್ನು ಸಂಪರ್ಕಿಸಿ ಸಮಾಧಾನ ಪಡಿಸಲು ಮುಂದಾಗಿದ್ದೇ ಇದಕ್ಕೆ ಉದಾಹರಣೆ. ವಿಶೇಷವೆಂದರೆ, ಯಡಿಯೂರಪ್ಪ ಅವರ ಪರವಾಗಿ ಹೈಕಮಾಂಡ್, ಅದರಲ್ಲೂ ಮುಖ್ಯವಾಗಿ ಬಿ.ಎಲ್.ಸಂತೋಷ್ ಅವರು ಮಧ್ಯೆಪ್ರವೇಶಿಸಿ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲು.
ಗೊಂದಲ ಶಮನಕ್ಕೆ ಹೈಕಮಾಂಡ್ ಮುಂದಾಗಲು ಕಾರಣಗಳೂ ಇಲ್ಲದಿಲ್ಲ. ಸರ್ಕಾರ ಅಥವಾ ಯಡಿಯೂರಪ್ಪ ಅವರ ವಿಚಾರದಲ್ಲಿ ಸಮಸ್ಯೆ ಉಂಟಾದರೆ ಅದರ ದುಷ್ಪರಿಣಾಮ ನೇರವಾಗಿ ಬೀಳುವುದು ಬಿಜೆಪಿ ಪಕ್ಷದ ಮೇಲೆ. ಈಗಾಗಲೇ ಯಡಿಯೂರಪ್ಪ ಅವರು ಪಕ್ಷದ ನಾಯಕರಿಗೆ ಒಂದು ವಿಚಾರ ಸ್ಪಷ್ಟಪಡಿಸಿದ್ದಾರೆ. ಅದೆಂದರೆ, ಚುನಾವಣಾ ರಾಜಕೀಯದಲ್ಲಿ ಇದು ನನ್ನ ಕೊನೆಯ ಅವಧಿ. ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಪಕ್ಷದ ಕೆಲಸ ಮಾಡಿಕೊಂಡು ಮುಂದುವರಿಯುತ್ತೇನೆ. ಹೀಗಾಗಿ ಈ ಬಾರಿ ಉತ್ತಮ ಆಡಳಿತ ಕೊಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸುವ ಕೆಲಸ ಮಾಡಲು ಸಹಕರಿಸಿ. ನಾನು ಅಧಿಕಾರದಲ್ಲಿ ಇಲ್ಲದೇ ಇದ್ದರೂ ಇರುವಷ್ಟು ದಿನ ಪಕ್ಷದ ಕೆಲಸ ಮಾಡುತ್ತೇನೆ. ಆದ್ದರಿಂದ ಈ ಬಾರಿ ನನಗೆ ನೀವು ಸಹಕಾರ ನೀಡಿ ಎಂದು ಅವರು ಈಗಾಗಲೇ ವರಿಷ್ಠರನ್ನು ಕೇಳಿಕೊಂಡಿದ್ದಾರೆ. ಅದಕ್ಕಾಗಿಯೇ ಬಿ.ಎಲ್.ಸಂತೋಷ್ ಅವರು ಭಿನ್ನಮತ ಶಮನದ ಕೆಲಸಕ್ಕೆ ಕೈಹಾಕಿದ್ದಾರೆ.
ಹೈಕಮಾಂಡ್ ಸಂದೇಶದಿಂದ ಯಡಿಯೂರಪ್ಪ ಅವರಿಗೆ ಬಲ
ಅರ್ಹ 11 ಶಾಸಕರ ಪೈಕಿ ಯಾರಿಗೆ ಸಚಿವ ಸ್ಥಾನ ನೀಡುವುದಕ್ಕೂ ಬಿಜೆಪಿಯ ಶಾಸಕರಿಂದ ಆಕ್ಷೇಪ ಇಲ್ಲ. ಅವರ ವಿರೋಧ ಇರುವುದು ವಿಧಾನಸಭೆ ಚುನಾವಣೆಯಲ್ಲಿ ಸೋತ ಸಿ.ಪಿ.ಯೋಗೇಶ್ವರ್ ಅವರಿಗೆ ಮಂತ್ರಿ ಸ್ಥಾನ ನೀಡುವ ಕುರಿತಂತೆ ಮಾತ್ರ. ಈಗಾಗಲೇ ಸೋತ ಲಕ್ಷ್ಮಣ ಸವದಿ ಅವರಿಗೆ ಮಂತ್ರಿಗಿರಿ ನೀಡಿ ಉಪಮುಖ್ಯಮಂತ್ರಿ ಮಾಡಲಾಗಿದೆ. ಈಗ ಮತ್ತೊಬ್ಬ ಸೋತ ಅಭ್ಯರ್ಥಿಗೆ ಮಂತ್ರಿ ಸ್ಥಾನ ನೀಡುವುದಾದರೆ ನಾವೆಲ್ಲಾ ಗೆದ್ದು ಬಂದಿರುವುದಾದರೂ ಏಕೆ ಎಂಬ ಆಕ್ಷೇಪ ಈ ಶಾಸಕರದ್ದು. ಆದರೆ, ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳುವುದರ ಜತೆಗೆ ಪಕ್ಷವನ್ನು ಬಲಪಡಿಸುವುದು ಅತ್ಯಂತ ಪ್ರಮುಖವಾಗಿದೆ. ಇದಕ್ಕೆ ಯಡಿಯೂರಪ್ಪ ಅವರೂ ಒಪ್ಪಿಕೊಂಡಿದ್ದು, ಪಕ್ಷ ಹಿನ್ನಡೆ ಅನುಭವಿಸುತ್ತಿರುವ ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಬಿಜೆಪಿಯನ್ನು ಬೆಳೆಸಲು ಏನೆಲ್ಲಾ ಮಾಡಬೇಕು ಎಂಬ ಮಾಹಿತಿಯನ್ನು ವರಿಷ್ಠರಿಗೆ ನೀಡಿದ್ದಾರೆ. ಯೋಗೇಶ್ವರ್ ಅವರು ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದವರಾಗಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಿದರೆ ಆ ಭಾಗದಲ್ಲಿ ಪಕ್ಷ ಬೆಳೆಸಲು ಅನುಕೂಲವಾಗುತ್ತದೆ. ಜತೆಗೆ ಅವರು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಬೇಕಾದ ಅಗತ್ಯತೆಯನ್ನೂ ಮನವರಿಕೆ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ವರಿಷ್ಠರು ಯಡಿಯೂರಪ್ಪ ಅವರ ಪರ ಪಕ್ಷದ ರಾಜ್ಯ ನಾಯಕರು ಮತ್ತು ಶಾಸಕರಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ.
ಸರ್ಕಾರ ಉಳಿಸಿಕೊಳ್ಳುವುದರ ಜತೆಗೆ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ತೀರ್ಮಾನಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅದರಂತೆ ಅವರು ತೀರ್ಮಾನ ಕೈಗೊಳ್ಳಲಿದ್ದು, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಯಾರೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಬಾರದು. ಈ ಬಗ್ಗೆ ಪಕ್ಷದ ನಾಯಕರು ಗಮನಹರಿಸಬೇಕು. ಭಿನ್ನಮತಕ್ಕೆ ಅವಕಾಶವಾಗದಂತೆ ಎಚ್ಚರ ವಹಿಸಬೇಕು ಎಂದೂ ಸೂಚನೆ ನೀಡಿದ್ದಾರೆ. ಇದರಿಂದಾಗಿಯೇ ಪ್ರತ್ಯೇಕ ಸಭೆ ನಡೆಸಿದ ಸಚಿವಾಕಾಂಕ್ಷಿಗಳನ್ನು ಸಮಾಧಾನಪಡಿಸಲು ಬಿ.ಎಲ್.ಸಂತೋಷ್ ರಂಗಪ್ರವೇಶ ಮಾಡಿದ್ದು.
ಈ ಮಧ್ಯೆ ಸ್ವತಃ ಮುಖ್ಯಮಂತ್ರಿಗಳೇ ಪ್ರತ್ಯೇಕ ಸಭೆ ನಡೆಸಿದ ಕೆಲವು ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಇರುವ ಅನಿವಾರ್ಯತೆ ಮತ್ತು ತೊಡಕುಗಳನ್ನು ವಿವರಿಸಿ ಸಹಕಾರ ನೀಡುವಂತೆ ಕೋರಿದ್ದಾರೆ. ಪಕ್ಷದಿಂದಲೂ ಸಹಕರಿಸುವಂತೆ ಈ ಶಾಸಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಒಂದೊಮ್ಮೆ ಇದನ್ನು ಮೀರಿ ಶಾಸಕರು ವರ್ತಿಸಿ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತಂದೊಡ್ಡಿದರೆ ಶಿಸ್ತು ಕ್ರಮ ಕೈಗೊಳ್ಳುವ ಮಟ್ಟಕ್ಕೂ ಬಿಜೆಪಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಕಡೇ ಕ್ಷಣದ ಬದಲಾವಣೆಯ ನಿರೀಕ್ಷೆ
ಸಂಪುಟ ವಿಸ್ತರಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಅರ್ಹ ಹತ್ತು ಶಾಸಕರನ್ನು ಹೊರತುಪಡಿಸಿ ಮೂಲ ಬಿಜೆಪಿಯಿಂದ ಯಾರಿಗೆಲ್ಲಾ ಸಚಿವ ಸ್ಥಾನ ನೀಡಲಾಗುತ್ತದೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಇದುವರೆಗೂ ಸ್ಪಷ್ಟವಾಗಿ ಹೇಳಿಲ್ಲ. ಮೂರು ಸ್ಥಾನಗಳ ಪೈಕಿ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರಿಗೆ ಸಚಿವಗಿರಿ ಸಿಗುವುದು ಬಹುತೇಕ ಅಂತಿಮ ಎನ್ನಲಾಗುತ್ತಿದ್ದು, ಮೂರನೇ ಸ್ಥಾನ ಯಾರಿಗೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಯೋಗೇಶ್ವರ್ ಹೆಸರು ಕೇಳಿಬರುತ್ತಿದ್ದರೂ ಅದು ಅಂತಿಮ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಕೊನೇ ಕ್ಷಣದಲ್ಲಿ ಏನಾದರೂ ಬದಲಾವಣೆಗಳಾಗಿ ಸೋತವರಿಗೆ ಸಚಿವ ಸ್ಥಾನ ನೀಡದೆ ನಮ್ಮಲ್ಲೇ ಯಾರಿಗಾದರೂ ಕೊಡಬಹುದು ಎಂಬ ನಿರೀಕ್ಷೆ ಕೆಲವು ಆಕಾಂಕ್ಷಿಗಳಲ್ಲಿ ಇನ್ನೂ ಉಳಿದಿದೆ.
ಆದರೆ, ಸಚಿವ ಸ್ಥಾನ ಸಿಗದೇ ಇದ್ದರೆ ಸಿಡಿದೆದ್ದು ಸರ್ಕಾರ ಉರುಳಿಸುತ್ತೇವೆ ಎಂಬ ಧೈರ್ಯ ಯಾರಿಗೂ ಇಲ್ಲ. ಕೊನೇ ಕ್ಷಣದವರೆಗೂ ಪ್ರಯತ್ನಿಸಿ ಸಿಗದೇ ಇದ್ದರೆ ಮುಂದೆ ನೋಡೋಣ ಎನ್ನುತ್ತಿದ್ದಾರೆ. ಒಂದೊಮ್ಮೆ ಈ ಆಕಾಂಕ್ಷಿಗಳು ಬಂಡೆದ್ದರೂ ಅವರಿಗೆ ಸರ್ಕಾರ ಉರುಳಿಸುವಷ್ಟು ಸಂಖ್ಯೆಯ ಬೆಂಬಲ ಸಿಗುವುದಿಲ್ಲ. ಬೆಂಬಲ ಸಿಕ್ಕಿದರೂ ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಸಿ ಸರ್ಕಾರ ಉಳಿಸಿಕೊಳ್ಳಲು ಯಡಿಯೂರಪ್ಪ ಸಿದ್ಧರಾಗಿರುತ್ತಾರೆ. ಹೀಗಾಗಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಪ್ರಯತ್ನ ‘ಕಲ್ಲು ಹೊಡೆಯೋಣ, ಮಾವಿನ ಕಾಯಿ ಬಿದ್ದರೆ ಲಾಭ. ಬೀಳದೇ ಇದ್ದರೆ ನಷ್ಟವಿಲ್ಲ’ ಎಂಬಂತೆ ಆಗಲಿದೆ.