ಕರೋನಾ ಸೋಂಕಿನ ಭೀತಿಯಲ್ಲಿ ಇಡೀ ರಾಜ್ಯವೇ ತತ್ತರಿಸಿದೆ. ಅದರಲ್ಲೂ ದಿಢೀರ್ ಲಾಕ್ ಔಟ್ ಘೋಷಿಸಿದ ಕಾರಣದಿಂದ ಇಡೀ ದೇಶಾದ್ಯಂತ ಲಕ್ಷಾಂತರ ಜನರು ತೊಂದರೆಗೀಡಾಗಿದ್ದಾರೆ. ಇವರಲ್ಲಿ ಬಹುತೇಕರು ವಲಸೆ ಕಾರ್ಮಿಕರು. ಈ ವಲಸೆ ಕಾರ್ಮಿಕರು ಬಹುತೇಕರು ಬಂದಿರುವುದು ಜಾರ್ಖಂಡ್, ಬಿಹಾರ, ಒಡಿಶಾ, ಉತ್ತರಾಖಂಡ ರಾಜ್ಯಗಳಿಂದ. ಏಕೆಂದರೆ ಈ ರಾಜ್ಯಗಳಲ್ಲಿ ದಿನಕೂಲಿ ಕಡಿಮೆ ಇದ್ದು ಉತ್ತಮ ಬದುಕು ಕಟ್ಟಿಕೊಳ್ಳಲು ಕಾರ್ಮಿಕರು ಸಾವಿರಾರು ಕಿಲೋಮೀಟರ್ ವಲಸೆ ಬಂದಿರುತ್ತಾರೆ. ಆದರೆ ಲಾಕ್ ಡೌನ್ ಘೋಷಿಸಿದ ಕೂಡಲೇ ಈ ಎಲ್ಲ ಕಾರ್ಮಿಕರು ಮನೆಗಳಲ್ಲೇ ಉಳಿಯುವಂತಾಯಿತು.

ಈ ವಲಸೆ ಕಾರ್ಮಿಕರು ತಮ್ಮ ಮಾಲೀಕರು ನೀಡುವ ವಾರದ ಕೂಲಿಯನ್ನೇ ನಂಬಿಕೊಂಡಿರುವುದರಿಂದ ಇವರ ಬಳಿ ರೇಷನ್ ಕಾರ್ಡು ಕೂಡ ಇರುವುದಿಲ್ಲ. ಬರೇ ಆಧಾರ್ ಕಾರ್ಡ್ ನೊಂದಿಗೆ ಇವರು ಕುಟುಂಬ ಸಮೇತರಾಗಿ ಬಂದಿರುತ್ತಾರೆ. ಕಳೆದ ಒಂದೂವರೆ ತಿಂಗಳಿನಿಂದಲೂ ಲಾಕ್ ಡೌನ್ ನಲ್ಲಿ ಹೈರಾಣಾಗಿರುವ ಈ ಕಾರ್ಮಿಕರಿಗೆ ಅತ್ತ ಕೆಲಸವೂ ಇಲ್ಲ , ಇತ್ತ ರೇಷನ್ ಕೂಡ ಸಿಗುತ್ತಿಲ್ಲ. ಬಸವಳಿದ ಕಾರ್ಮಿಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಉತ್ತರದ ರಾಜ್ಯಗಳಿಗೆ ಬಸ್ ಮೂಲಕ ಮತ್ತೂ ರೈಲುಗಳ ಮೂಲಕ ವಲಸೆ ಕಾರ್ಮಿಕರನ್ನು ಕಳಿಸಿಕೊಡಲು ಯೋಜನೆ ಹಾಕಿಕೊಂಡಿತು. ಸಾಮಾಜಿಕ ಅಂತರ ಕಾಪಾಡಿಕೊಂಡು ಹೋಗಬೇಕಾದ್ದರಿಂದ ಸಹಜವಾಗೇ ಬಸ್ ದರವನ್ನು ಮೂರು ಪಟ್ಟು ಹೆಚ್ಚಿಸಲಾಯಿತು. ಏಕೆಂದರೆ ಕಾರ್ಮಿಕರನ್ನು ಬಿಟ್ಟು ಬರುವಾಗ ಬಸ್ ಗಳು ಖಾಲಿ ಬರಬೇಕಾಗಿದೆ ಎಂದು ದರ ಹೆಚ್ಚಳವನ್ನು ಸರ್ಕಾರ ಸಮರ್ಥಿಸಿಕೊಂಡಿತು.
ಒಂದು ತಿಂಗಳಿನಿಂದ ಕೆಲಸವಿಲ್ಲದೆ ಸರಿಯಾದ ಊಟವೂ ಇಲ್ಲದೆ ಕಾರ್ಮಿಕರು ನಿಜಕ್ಕೂ ಕಂಗಾಲಾಗಿದ್ದರು. ಈ ಸಮಯದಲ್ಲಿ ನಿಜಕ್ಕೂ ಕಾಂಗ್ರೆಸ್ ಒಂದು ಉತ್ತಮ ಕೆಲಸ ಮಾಡಿತು. ವಲಸೆ ಕಾರ್ಮಿಕರ ಬಸ್, ರೈಲುಗಳ ದರವನ್ನು ತಾನು ಭರಿಸುವುದಾಗಿ ಒಂದು ಕೋಟಿ ರೂಪಾಯಿಗಳ ಚೆಕ್ ನ್ನೂ ಕೂಡ ಕಾಂಗ್ರೆಸ್ ಮುಖಂಡರು ನೀಡಲು ಸಿದ್ದರಾದರು. ಆ ಮರು ಕ್ಷಣವೇ ಎಚ್ಚತ್ತುಕೊಂಡ ರಾಜ್ಯ ಸರ್ಕಾರ ಬಸ್ ದರವನ್ನು ಹಿಂತೆಗೆದುಕೊಂಡು ಉಚಿತ ಪ್ರಯಾಣವನ್ನು ಘೋಷಿಸಿತು. ಬೆಂಗಳೂರಿನಲ್ಲಿ ಅಂದಾಜು 1.25 ಲಕ್ಷ ಜನ ವಲಸೆ ಕಾರ್ಮಿಕರು ಬಸ್ ,ರೈಲುಗಳ ಮೂಲಕ ಊರಿನ ಪ್ರಯಾಣಕ್ಕೆ ಸಿದ್ದರಾಗಿದ್ದರು. ಅದರಲ್ಲಿ ಸುಮಾರು ೭೦ ಸಾವಿರದಷ್ಟು ಜನ ಕಾರ್ಮಿಕರು ತಮ್ಮ ಊರನ್ನು ತಲುಪಿಕೊಂಡರು.
ಅದರೆ ರಾಜ್ಯ ಸರ್ಕಾರ ದಿಢೀರನೆ ಬುಧವಾರದಿಂದ ರೈಲುಗಳ ಪ್ರಯಾಣವನ್ನು ರದ್ದುಪಡಿಸಿದೆ. ಇದರಿಂದ ಸಾವಿರಾರು ಕಾರ್ಮಿಕರು ಅತಂತ್ರರಾಗಿದ್ದಾರೆ. ಸರ್ಕಾರದ ಈ ತೀರ್ಮಾನದ ಹಿಂದೆ ಇರುವುದು ಅದೇ ರಿಯಲ್ ಎಸ್ಟೇಟ್‌ನ ಲಾಬಿ. ಬೆಂಗಳೂರಿನಲ್ಲಿ ಸಹಸ್ರಾರು ಕಡೆಗಳಲ್ಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಸಾವಿರಾರು ಕಾರ್ಮಿಕರನ್ನು ಅವರ ತವರೂರಿಗೆ ಕಳಿಸಿದರೆ ಇಲ್ಲಿ ದುಡಿಯುವವರಾರು ? ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಕಟ್ಟಡಗಳ, ಅಪಾರ್ಟ್ ಮೆಂಟ್ ಗಳ ಮೇಲೆ ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿರುವ ಉದ್ಯಮಿಗಳು ಕಟ್ಟಡ , ಮನೆಗಳನ್ನು ಜನರಿಗೆ ಹಸ್ತಾಂತರ ಮಾಡಲೇಬೇಕಿದೆ. ಇಲ್ಲದಿದ್ದರೆ ಬಡ್ಡಿ ನಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ರದ್ದುಪಡಿಸುವಿಕೆಗೂ ಮೊದಲು ಪೋಲೀಸ್ ಇಲಾಖೆ ತಾನು ನೀಡುತ್ತಿರುವ ಜನರ ಪಾಸ್ ನಲ್ಲಿ ಮಾರ್ಪಾಡು ಮಾಡಿತ್ತು. ಅದೇನೆಂದರೆ ಈತನಕ ಹೋಗುವುದಕ್ಕೆ ಮಾತ್ರ ಪಾಸ್ ನೀಡಲಾಗುತಿತ್ತು. ವಲಸೆ ಕಾರ್ಮಿಕರು ಪುನಃ ವಾಪಸ್ ಬಾರದಿದ್ದರೆ ಎಂಬ ಆತಂಕದಿಂದ ಹಿಂತಿರುಗಿ ಬರುವುದಕ್ಕೂ ಪಾಸ್ ನೀಡಲಾಗುತ್ತಿದೆ. ಇದೂ ಕೂಡ ರಿಯಲ್ ಎಸ್ಟೇಟ್ ಲಾಬಿಗೆ ಮಣಿದೇ ಮಾಡಿರುವ ಮಾರ್ಪಾಡು ಅಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ಮಂಗಳವಾರ ರಾಜ್ಯದ ಪ್ರಮುಖ ಬಿಲ್ಡರ್ ಗಳನ್ನು ಭೇಟಿಯಾದ ನಂತರ ಮತ್ತು ಅನೇಕ ರಿಯಲ್ ಎಸ್ಟೇಟ್ ಸಂಸ್ಥೆಗಳು ಕಾರ್ಮಿಕರ ವಲಸೆಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ನಂತರ ಸರ್ಕಾರ ರೈಲುಗಳನ್ನು ರದ್ದು ಮಾಡಿದೆ. ಸರ್ಕಾರ ರಿಯಲ್ ಎಸ್ಟೇಟ್ ಉದ್ಯಮಪತಿಗಳೊಂದಿಗೆ ನಡೆಸಿದ ಸಭೆಯ ನಂತರ, ಕರ್ನಾಟಕದಿಂದ ಅಂತರರಾಜ್ಯ ಪ್ರಯಾಣದ ನೋಡಲ್ ಅಧಿಕಾರಿ ಎನ್ ಮಂಜುನಾಥ್ ಪ್ರಸಾದ್ ಅವರು ನೈರುತ್ಯ ರೈಲ್ವೆ ಗೆ ಪತ್ರ ಬರೆದಿದ್ದು, ಬುಧವಾರದಿಂದ ಹೆಚ್ಚಿನ ರೈಲು ಸೇವೆಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕಳೆದ ಮೂರು ದಿನಗಳಿಂದ ನಿತ್ಯ ಎರಡು ರೈಲುಗಳಲ್ಲಿ ಉತ್ತರದ ರಾಜ್ಯಗಳಿಗೆ ಕಾರ್ಮಿಕರನ್ನು ಕಳಿಸಿಕೊಡಲಾಗುತಿತ್ತು. ಬುಧವಾರ, ಗುರುವಾರವೂ ರೈಲುಗಳನ್ನು ಕಳಿಸುವಂತೆ ರೈಲ್ವೇ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿತ್ತು.
ರಾಜ್ಯ ಸರ್ಕಾರದೊಂದಿಗೆ ಮಾಡಿದ ಮನವಿಗೆ ಸ್ಪಂದಿಸಿದ ರೈಲ್ವೇ ಇಲಾಖೆ ಭಾನುವಾರದಿಂದ ಎಂಟು ರೈಲುಗಳನ್ನು ಓಡಿಸಿದೆ ಮತ್ತು ಸುಮಾರು 9,583 ಕಾರ್ಮಿಕರನ್ನು ಕರೆದೊಯ್ಯಲಾಯಿತು ಎಂದು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದರು. ಈ ರೈಲುಗಳನ್ನು ದಾನಾಪುರ, ಭುವನೇಶ್ವರ, ಹತಿಯಾ, ಲಕ್ನೋ, ಬಾರ್ಕಕಾನ ಮತ್ತು ಜೈಪುರಕ್ಕೆ ಓಡಿಸಲಾಯಿತು. ಆದಾಗ್ಯೂ, ಉತ್ತರದ ರಾಜ್ಯಗಳ ಕೆಲವು ಲಕ್ಷ ವಲಸೆ ಕಾರ್ಮಿಕರು ಇನ್ನೂ ನಗರದಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ತಮ್ಮ ಸ್ಥಳೀಯ ಸ್ಥಳಗಳಿಗೆ ಮರಳಲು ಸಿದ್ಧರಿದ್ದಾರೆ. ರೈಲ್ವೇ ಇಲಾಖೆಯವರೇನೂ ವಲಸೆ ಕಾರ್ಮಿಕರನ್ನು ಉಚಿತವಾಗಿ ಕರೆದೊಯ್ಯುತ್ತಿಲ್ಲ. ಬದಲಿಗೆ ಪ್ರತೀ ಸೀಟಿಗೂ 600 ರಿಂದ 800 ರೂಪಾಯಿಗಳ ವರೆಗೆ ದರ ವಿಧಿಸಿದೆ.

ಆದರೆ ಕೊನೆಗೆ ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಅದೇನೆಂದರೆ ವಲಸೆ ಕಾರ್ಮಿಕರು ತವರಿಗೆ ಮರಳುವುದನ್ನು ತಡೆಯುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ತಾವೇ ಅವರಿಗೆ ಕನಿಷ್ಟ ತಿಂಗಳ ಪಡಿತರ ನೀಡಿ ನೆರವು ನೀಡಬಹುದಿತ್ತು. ಆ ರೀತಿ ಮಾಡಿದ್ದಿದ್ದರೆ ಸಾವಿರಾರು ಕಾರ್ಮಿಕರು ಇಲ್ಲೇ ಉಳಿಯುತಿದ್ದರು ಜತೆಗೆ ಅವರಿಗೆ ನೈತಿಕ ಬೆಂಬಲ ನೀಡಿದಂತೆಯೂ ಆಗುತಿತ್ತು. ಆದರೆ ಹಣ ವೆಚ್ಚವಾಗುತ್ತದೆ ಎಂದು ಇದಕ್ಕೆ ಮುಂದಾಗದ ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಕಾರ್ಮಿಕರನ್ನು ಇಲ್ಲೇ ಉಳಿಯುವಂತೆ ಮಾಡಿರುವುದು ಖಂಡನೀಯ. ಈಗಾಗಲೇ ತಮ್ಮ ಕುಟುಂಬದೊಂದಿಗೆ ತವರಿಗೆ ತೆರಳಿರುವ ಸಾವಿರಾರು ಕಾರ್ಮಿಕರು ಹೋಗಿ ಬರುವುದಕ್ಕೆ ತಲಾ ಕನಿಷ್ಟ ಎರಡು ಸಾವಿರ ರೂಪಾಯಿ ವೆಚ್ಚ ಮಾಡಬೇಕಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಮುಂದಾಗಿದ್ದರೆ ಈ ಹಣವನ್ನು ಉಳಿಸಬಹುದಿತ್ತು. ಉದ್ಯಮಿಗಳು ತಾವೇ ರೇಷನ್ ಕಿಟ್ ಗಳನ್ನು ನೀಡುವ ಮೂಲಕ ಕಾರ್ಮಿಕ ವರ್ಗಕ್ಕೆ ನೆರವಾಗುವ ಒಂದು ಉತ್ತಮ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ರಿಯಲ್ ಎಸ್ಟೇಟ್ ಉದ್ಯಮಿಗಳ ಪರ ಎಂದು ಸ್ಪಷ್ಟವಾಗಿದೆ.












