ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದಂತೆ ಶಿವಮೊಗ್ಗದಲ್ಲಿ ಕೆಲವು ಹಿರಿಯ ಅಧಿಕಾರಿಗಳು ಗಂಟುಮೂಟೆ ಕಟ್ಟಿಕೊಂಡರು. ಕೆಲವರು ಸರದಿಗಾಗಿ ಕಾದು ಕುಳಿತರು, ಕೆಲವರು ಹೇಗಾದರೂ ಸಿಎಂ ಆಪ್ತರನ್ನ ಹಿಡಿದು ಇಲ್ಲಿ ಇದ್ದು ಬಿಡೋಣ ಎಂದು ಓಡಾಡುತ್ತಿದ್ದರು. ಬಹಳ ವೇಗವಾಗಿ ಗೂಟದ ಕಾರಿನ ಸೀಟುಗಳಲ್ಲಿ ಹೊಸ ಮುಖಗಳು ಮುಗುಳು ನಗುತ್ತಾ ಜಿಲ್ಲೆಯಲ್ಲಿ ಹೊಸಬರ ಕಾರುಬಾರು ಎಂದು ಬೀಗುತ್ತಿದ್ದವು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದ ಸಮ್ಮಿಶ್ರ ಸರ್ಕಾರದವರೆಗೆ ಜಿಲ್ಲೆಯಲ್ಲಿ ಬಿಜೆಪಿ ನಾಯಕರನ್ನು ಕಟ್ಟಿಹಾಕಿದಂತಾಗಿತ್ತು. ಶಿವಮೊಗ್ಗಕ್ಕೆ ರೆಬೆಲ್ ತರಹದ ಅಧಿಕಾರಿಗಳನ್ನ ಹಾಕುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಆರು ಜನ ಬಿಜೆಪಿ ಶಾಸಕರು ಆಯ್ಕೆಯಾದರು. ಸಮ್ಮಿಶ್ರ ಸರ್ಕಾರವಿದ್ದರಿಂದ ಅಸಹಾಯಕರಾಗಿದ್ದರು. ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಅಧಿಕಾರಿಗಳೆಲ್ಲಾ ಎತ್ತಂಗಡಿಯಾದರು.
ಪರ ವಿರೋಧ ಚರ್ಚೆಗಳೇನೇ ಇರಲಿ ಶಿವಮೊಗ್ಗ ಕ್ಷಿಪ್ರವಾಗಿ ಹಾಗೂ ಆಘಾತಕಾರಿಯಾಗಿ ಬೆಳೆದಿದ್ದು ಬಿ. ಎಸ್. ಯಡಿಯೂರಪ್ಪನವರಿಂದ. ತಾವು ರಾಜಕಾರಣದಿಂದ ನಿವೃತ್ತರಾದರೂ ಕುಟುಂಬಕ್ಕೆ ಶಾಶ್ವತ ನೆಲೆ ಕಲ್ಪಿಸುವ ಹೊಣೆಯೂ ಅವರ ಮೇಲಿದೆ. ಶಿವಮೊಗ್ಗದ ಜತೆಯಲ್ಲೇ ಶಿಕಾರಿಪುರವನ್ನು ಮಾದರಿಯಾಗಿ ಬೆಳೆಸಲು ಪಣತೊಟ್ಟಿದ್ದಾರೆ. ಈಗಾಗಲೇ ರೈಲು, ವಿಮಾನ ನಿಲ್ದಾಣ, ರಿಂಗ್‌ರೋಡ್, ನೀರಾವರಿ ಅಂತ ಕೋಟಿಗಟ್ಟಲೇ ಸುರಿಯಲು ಸಿದ್ಧವಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ನಿಯೋಜಿಸಿದ ಅಧಿಕಾರಿಗಳೇ ಇದ್ದರೆ ಹೇಗೆ..? ಕಳೆದ ಒಂದು ದಶಕದಲ್ಲಿ ಅಧಿಕಾರಿಗಳ ಕಚೇರಿಗೆ ಅಲೆದು ಸುಸ್ತಾದ ಬಿಜೆಪಿ ಮುಖಂಡರಿಗೆ ರಾಜ್ಯ ಸರ್ಕಾರದಲ್ಲಿನ ಸ್ಥಿತ್ಯಂತರ ಹೊಸ ಮನ್ವಂತರ. ಜಿಲ್ಲಾಧಿಕಾರಿಗಳಿಂದ ಆರ್‌ಎಫ್‌ಓಗಳವರೆಗೆ ಎತ್ತಂಗಡಿಗಳು ಶುರುವಾಯ್ತು.
ಜಿಲ್ಲಾಧಿಕಾರಿ ಕೆ. ಎ. ದಯಾನಂದ ಹಾಗೂ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಮೊದಲು ಎತ್ತಂಗಡಿಯಾಗುತ್ತಾರೆಂಬ ನಿರೀಕ್ಷೆ ಇತ್ತು. ಜಿಲ್ಲಾಧಿಕಾರಿ ಬದಲಾವಣೆ ಬಿಜೆಪಿ ಮುಖಂಡರಿಗೆ ಅನಿವಾರ್ಯವಾಗಿದ್ದರೆ, ಪಾಲಿಕೆ ಆಯುಕ್ತೆ ಮಾತ್ರ ಬಿಜೆಪಿ ನಾಯಕರ ಜೊತೆ ವಿಪರೀತ ಭಿನ್ನಾಭಿಪ್ರಾಯ ಹೊಂದಿದ್ದರು. ಆಯುಕ್ತೆಯಾಗಿ ಅಧಿಕಾರ ಸ್ವೀಕರಿಸಿ ವರ್ಷವಾಗಿತ್ತಷ್ಟೇ, ಜನಪ್ರತಿನಿಧಿಗಳಿಗೂ ಮುಲಾಜು ನೀಡುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರದ ಸಚಿವ ಡಿ. ಸಿ. ತಮ್ಮಣ್ಣ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲನೆಗೆ ಬಂದಾಗ ಬಿಜೆಪಿ ಮುಖಂಡ ಹಾಗೂ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಗೌರವಯುತವಾಗಿ ಸಂಬೋಧಿಸಿಲ್ಲ ಅಂತ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದು ಗದರಿದ್ದರು. ಇಷ್ಟೆಲ್ಲಾ ಇರುವಾಗ ವರ್ಗಾವಣೆ ಶತಸಿದ್ಧ ಎಂಬುದು ಎಲ್ಲರಿಗೂ ತಿಳಿದಿತ್ತು.
ಬಿ ಎಸ್ ವೈ ಸರ್ಕಾರದ ಮೊದಲ ವರ್ಗಾವಣೆ ಆದೇಶ ಬಂದಿದ್ದು ಅಧಿಕಾರ ವಹಿಸಿಕೊಂಡು ಐದು ತಿಂಗಳು ಕಳೆದಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶ್ವಿನಿ ಅವರಿಗೆ. ಈ ಜಾಗಕ್ಕೆ ಬಂದವರು ಕೆ. ಎಂ. ಶಾಂತಕುಮಾರ್. ಬಹಳ ಕೂತೂಹಲವೇನಿಲ್ಲ. ಇವರು ಮೊದಲು ಶಿಕಾರಿಪುರದಲ್ಲಿ ಡಿಎಸ್‌ಪಿಯಾಗಿದ್ದರು. ಎಸ್ ಪಿ ವರ್ಗಾವಣೆ ಬೆನ್ನಲ್ಲೇ ಜಿಲ್ಲಾಧಿಕಾರಿ ದಯಾನಂದ ಹಾಗೂ ಕಮಿಷನರ್ ಚಾರುಲತಾ ಸೋಮಲ್ ವರ್ಗಾವಣೆಯತ್ತ ದೃಷ್ಟಿ ನೆಟ್ಟಿತ್ತು. ಒಂದು ವರ್ಷ ಸಾರ್ಥಕ ಸೇವೆ ಸಲ್ಲಿಸಿ ಜನಮನದ ಡಿಸಿ ಎಂದೇ ಖ್ಯಾತರಾಗಿದ್ದ ದಯಾನಂದ್‌ಗೆ ವರ್ಗಾವಣೆ ಆದೇಶ ಬಂತು. ದಯಾನಂದ್ ಕೆಎಎಸ್ ಅಧಿಕಾರಿಯಾಗಿ ಭಡ್ತಿ ಪಡೆದವರು. ಬಹಳ ಮುಖ್ಯವಾಗಿ ಸಿದ್ದರಾಮಯ್ಯನವರ ಸಂಬಂಧಿ. ಪೊನ್ನುರಾಜ್ ನಂತರ ಶಿವಮೊಗ್ಗ ಕಂಡ ಮುಂದಾಲೋಚನೆಯ ಜಿಲ್ಲಾಧಿಕಾರಿ. ಜಿಲ್ಲೆಯ ಆಡಳಿತದಲ್ಲಿ ಹಲವು ಮೊದಲುಗಳಿಗೆ ಪಾತ್ರರಾಗಿದ್ದರು. ಮಂಗನ ಕಾಯಿಲೆಯಂತಹ ಪಿಡುಗು, ಸಹ್ಯಾದ್ರಿ ಉತ್ಸವದಂತಹ ಸವಾಲು, ಸ್ವಚ್ಛತೆ, ಪರಿಸರ ಸಂರಕ್ಷಣೆ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಮುಂದು ನಿಂತು ಕೆಲಸ ಮಾಡುತ್ತಿದ್ದರು. ಲೋಕಸಭಾ ಚುನಾವಣೆ ವೇಳೆ ಮತಾದರರ ಬಾಗಿಲಿಗೆ ಹೋಗಿ ಕಡ್ಡಾಯ ಮತದಾನಕ್ಕೆ ಮನವಿ ಮಾಡಿ ದಾಖಲೆ ಮತದಾನಕ್ಕೆ ಸಾಕ್ಷಿಯಾಗಿದ್ದವರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ವಿದಾಯದ ಸಂವಾದದಲ್ಲಿ ಶರಾವತಿ ಮುಳುಗಡೆ ಜನರಿಗೆ ಭೂಮಿ ಹಕ್ಕು ನೀಡಲು ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದೆ ಎನ್ನುವಾಗ ಕಣ್ಣೀರು ಜಿನುಗಿತ್ತು. ಜಿಲ್ಲೆಯನ್ನು ಸಾಂಸ್ಕೃತಿಕ ನಗರಿಯನ್ನಾಗಿಸಲು ಹಾಕಿಕೊಂಡ ಯೋಜನೆಗಳೆಲ್ಲಾ ನಿಷ್ಪಯೋಜಕ ಎಂದು ಮರುಗಿದರು. ಇವರ ಜಾಗಕ್ಕೆ ಐಎಎಸ್ ಅಧಿಕಾರಿ ಶಿವಕುಮಾರ್ ಅವರನ್ನು ನಿಯೋಜಿಸಲಾಯ್ತು. ತಮಾಷೆ ಎಂದರೆ ವರ್ಗಾವಣೆ ಆದೇಶ ದಯಾನಂದ್‌ಗೆ ತಲುಪುವ ಮೊದಲೇ ಶಿವಕುಮಾರ್ ಜಿಲ್ಲೆ ತಲುಪಿದ್ದರು. ಇದಾದ ನಂತರ ಕಮಿಷನರ್ ಸರದಿ ಎನ್ನುವಾಗಲೇ ಜಿಲ್ಲಾ ಪಂಚಾಯತ್ ಸಿಇಓ ಶಿವರಾಮೇಗೌಡ ಎತ್ತಂಗಡಿಯಾಗಿ ವೈಶಾಲಿ ಎಂಬುವರನ್ನು ನಿಯೋಜಿಸಲಾಯ್ತು.
ಅಷ್ಟರಲ್ಲಾಗಲೇ ಶಿವಮೊಗ್ಗ ತುಂಗಾ ನದಿ ಆಚೀಚೆ ಹರಿದು ನಗರವನ್ನು ಜಲಾವೃತಮಾಡಿತ್ತು. ಈ ಸಮಯದಲ್ಲಿ ಯಡಿಯೂರಪ್ಪನವರಿಗೆ ಆಪ್ತರಾಗಿದ್ದ ಕ್ಯಾಪ್ಟನ್ ಮಣಿವೆಣ್ಣನ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಬಂದರು. ಇವರೊಂದಿಗೆ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಸಂತ್ರಸ್ತರ ಜೊತೆ ಹಗಲು ಇರುಳೆನ್ನದೇ ಕೆಲಸ ಮಾಡಿ ಅಪಾರ ಮೆಚ್ಚುಗೆ ಪಡೆದುಕೊಂಡರು. ಸ್ವತಃ ಕಮಿಷನರ್ ಗಂಜಿ ಕೇಂದ್ರದಲ್ಲಿ ಊಟ ಬಡಿಸುತ್ತಿದ್ದರು. ಆದರೂ ಸಮ್ಮಿಶ್ರ ಸರ್ಕಾರದಲ್ಲಿ ನೇಮಕವಾದ ಪಾಲಿಕೆ ಕಮಿಷನರ್ ಅವರನ್ನು ಹೇಗೆ ಇಟ್ಟುಕೊಳ್ಳಲು ಸಾಧ್ಯ. ನೆರೆ ಇಳಿದ ಮೇಲೆ ವರ್ಗಾವಣೆ ಆದೇಶವನ್ನು ತಲುಪಿಸಲಾಯ್ತು. ಈ ಅಧಿಕಾರಿ ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಮನಶಾಂತಿ ಅರಸಿ ಹಿಮಾಲಯದತ್ತ ಹೋಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ.
ವರ್ಗಾವಣೆ ಕೇವಲ ಮೇಲಾಧಿಕಾರಿಗಳಿಗಳಷ್ಟೇ ಸೀಮಿತವಾಗಿ ಉಳಿದಿಲ್ಲ. ಡಿಡಿಪಿಐ ಸುಮಂಗಲಾ, ಬಿಜೆಪಿ ಮುಖಂಡನೊಂದಿಗೆ ಗಲಾಟೆ ಮಾಡಿಕೊಂಡಿದ್ದ ಜಂಟಿ ಸಾರಿಗೆ ಆಯುಕ್ತ ಶಿವರಾಜ್, ಅಬಕಾರಿ ಉಪ ಆಯುಕ್ತ ಮೋಹನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂತೋಣಿ ಮರಿಯಪ್ಪ, ಸಾಗರದ ಉಪವಿಭಾಗಾಧಿಕಾರಿ ದರ್ಶನ್ ಹೀಗೆ ಎಲ್ಲರೂ ಎತ್ತಂಗಡಿಯಾಗಿದ್ದರೆ. ಅರಣ್ಯ ಇಲಾಖೆಯ ಫಾರೆಸ್ಟರ್, ರೇಂಜ್ ಆಫಿಸರ್‌ಗಳನ್ನೂ ಹಿಂದೆಂದೂ ಕಾಣದಷ್ಟು ಪ್ರಮಾಣದಲ್ಲಿ ಎತ್ತಂಗಡಿ ಮಾಡಲಾಗಿದೆ. ಪೊಲೀಸ್ ಸರ್ಕಲ್ ಇನ್ಸಪೆಕ್ಟರ್ ಹಾಗೂ ಪೊಲೀಸ್ ಸಬ್ ಇನ್ಸಪೆಕ್ಟರ್‌ಗಳ ವರ್ಗಾವಣೆಗೆ ಲೆಕ್ಕವೇ ಇಲ್ಲ.
ವರ್ಗಾವಣೆ ದಂಧೆ ಹಿಂದೆ ಸಿಎಂ ಪುತ್ರರ ಕೈವಾಡ ಇದೆ ಎಂಬ ಸುದ್ದಿಗಳು ಪ್ರತಿದಿನ ಕೇಳಿಬರುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಸಿಎಂ ಪುತ್ರರ ಮೇಲೆ ಆರೋಪ ಮಾಮೂಲು. ಆದರೆ ನಾವು ಈ ತರಹದ ವಿಷಯಕ್ಕೆ ಕೈ ಹಾಕಿಲ್ಲ, ಅಂತಾರೆ. ಮಾಧ್ಯಮ ಸಂವಾದದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಕೆ. ಎಸ್. ಈಶ್ವರಪ್ಪ ಮಾತ್ರ ಇದನ್ನು `ದಂಧೆ’ ಅಂತ ಏಕೆ ಕರೆಯಬೇಕು. ಕರ್ತ್ಯವ್ಯಕ್ಕೆ ಅನುವಾಗುವಂತೆ ಅಧಿಕಾರಿಗಳನ್ನು ಹಾಕಿಸಿಕೊಳ್ಳುವುದು ಮಾಮೂಲು ಅಂತಾರೆ.