ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಕೆ ಆರ್ ಪೇಟೆಯನ್ನು ಭೇದಿಸಿ ಕಮಲ ಪತಾಖೆಯನ್ನು ಹಾರಿಸಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಈ ಬಾರಿಯ ಶಿರಾ ಉಪಚುನಾವಣೆಯಲ್ಲೂ ತಮ್ಮ ಕರಾಮತ್ತು ತೋರಿಸಲು ಸಿದ್ದರಾಗಿದ್ದಾರೆ. ಕೆ ಆರ್ ಪೇಟೆಯಂತೆಯೇ, ಶಿರಾದಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುವ ತಂತ್ರಗಾರಿಕೆಯನ್ನು ಹೂಡಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬಿಜೆಪಿ ನಾಯಕರಿಗೆ ತಮ್ಮ ಅಗತ್ಯತೆಯನ್ನು ನಿರೂಪಿಸುವ ಮಹತ್ವಾಕಾಂಕ್ಷೆಯನ್ನು ವಿಜಯೇಂದ್ರ ಅವರು ಹೊಂದಿದ್ದಾರೆ.
ಜೆಡಿಎಸ್‌ನ ಮಾಜಿ ಶಾಸಕರಾದ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದಾಗಿ ತೆರವಾದ ಶಾಸಕ ಸ್ಥಾನಕ್ಕೆ ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ಸ್ಪರ್ಧಿಯಾಗಿದ್ದರು. ಕಾಂಗ್ರೆಸ್‌ನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾದ ಟಿ ಬಿ ಜಯಚಂದ್ರ ಅವರನ್ನು ಕಣಕ್ಕಿಳಿಸಿದರೆ, ಜೆಡಿಎಸ್‌ನಿಂದ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಲಾಗಿದೆ. ವಿಜಯೇಂದ್ರ ಶಿರಾಗೆ ಕಾಲಿಡುವ ವರೆಗೂ ಕಾಂಗ್ರೆಸ್ vs ಜೆಡಿಎಸ್ ಎಂಬಂತಿದ್ದ ಶಿರಾ ಉಪಚುನಾವಣಾ ಸಮರ ಈಗ ತ್ರಿಕೋನ ಸ್ಪರ್ಧೆಯಾಗಿ ಏರ್ಪಟ್ಟಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಊಹಿಸಿರದಷ್ಟು ವೇಗವಾಗಿ ಶಿರಾದಲ್ಲಿ ಗೆಲುವಿನ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಮುಖ್ಯವಾಗಿ ಯುವಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ವಿಜಯೇಂದ್ರ ಅವರು, ಭರ್ಜರಿ ರೋಡ್ ಶೋ ಹಾಗೂ ಯುವಕರಿಗೆ ಮುಖಂಡತ್ವ ನೀಡುವ ಮೂಲಕ ಈ ಬಾರಿಯ ಶಿರಾ ಉಪಚುನಾವಣೆಯನ್ನು ಗೆಲ್ಲುವ ತಯಾರಿ ಮಾಡಿಕೊಂಡಿದ್ದಾರೆ.

ರಾಜೇಶ್ ಗೌಡ ಅವರು ಈ ಬಾರಿಯ ಚುನಾವಣೆಯನ್ನು ಗೆದ್ದಲ್ಲಿ, ಬರೋಬ್ಬರಿ ಏಳು ದಶಕಗಳ ಬಳಿಕ ಕೋಟೆ ನಾಡು ಶಿರಾದಲ್ಲಿ ಕಮಲ ಅರಳಲಿದೆ.
ವರ್ಚಸ್ಸು ಉಳಿಸಲು ಮುಖ್ಯವಾದ ಚುನಾವಣೆ
ಶಿರಾ ಮತ್ತು ರಾಜರಾಜೇಶ್ವರಿ ಉಪ ಚುನಾವಣೆಗಳು, ರಾಜ್ಯದ ಶಾಸಕರ ಲೆಕ್ಕವನ್ನು ಗಮನದಲ್ಲಿಟ್ಟು ನೋಡಿದರೆ ಅಷ್ಟೊಂದು ಮುಖ್ಯವೆಂದೆನಿಸುವುದಿಲ್ಲ. ಆದರೆ, ರಾಜಕೀಯ ನಾಯಕರಿಗೆ ತಮ್ಮ ವರ್ಚಸ್ಸು ಉಳಿಸಿಕೊಳ್ಳಲು ಹಾಗೂ ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಇದು ಪ್ರಮುಖ ಚುನಾವಣೆ. ಈಗಾಗಲೇ, ವಿಜಯೇಂದ್ರ ಅವರ ವಿರುದ್ದ ತಮ್ಮ ತಂದೆ ಬಿ ಎಸ್ ಯಡಿಯೂರಪ್ಪ ಅವರಿಗಿರುವ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪ ಕೇಳಿ ಬಂದಿದೆ. ಬಿಜೆಪಿ ಪಕ್ಷದ ಶಾಸಕರೇ ಅವರ ವಿರುದ್ದ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಇದು ಬಿ ಎಸ್ ಯಡಿಯೂರಪ್ಪ ಅವರಿಗೂ ಇರುಸುಮುರುಸು ಉಂಟು ಮಾಡಿದೆ.
ಬಿಎಸ್‌ವೈ ಅವರು ತಮ್ಮ ಖುರ್ಚಿಯನ್ನು ಕಳೆದುಕೊಳ್ಳುವ ಹಂತಕ್ಕೂ, ಪಕ್ಷದ ನಾಯಕರ ಅಸಮಾಧಾನ ಕಾರಣವಾಗಿತ್ತು. ಪಕ್ಷದ ಹೈಕಮಾಂಡ್ ಕೂಡಾ ಈ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕಾರಣಗಳಿಂದ ಶಿರಾ ಉಪ ಚುನಾವಣೆಯಲ್ಲಿ ತಮ್ಮ ವರ್ಚಸ್ಸು ಏನು ಎಂಬುದನ್ನು ತೋರಿಸಿಕೊಡಲು ವಿಜಯೇಂದ್ರ ಅವರಿಗೆ ಒಳ್ಳೆಯ ಅವಕಾಶ ದೊರೆತಿದೆ.

ಒಂದು ವೇಳೆ ಶಿರಾ ಕ್ಷೇತ್ರವನ್ನು ಬಿಜೆಪಿ ಗೆದ್ದುಕೊಂಡಲ್ಲಿ, ಅದರ ಪೂರ್ಣ ಯಶಸ್ಸು ವಿಜಯೇಂದ್ರ ಅವರಿಗೆ ಲಭಿಸಲಿದೆ. ಕಳೆದ ಬಾರಿ ಕೆ ಆರ್ ಪೇಟೆಯಲ್ಲಿ ತಮ್ಮ ʼಕಮಾಲ್ʼ ತೋರಿಸಿದ ನಂತರ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿ ಅಭಿನಂದನೆಗಳನ್ನು ಸಲ್ಲಿಸಿತ್ತು. ಈಗ ಅವರ ವಿರುದ್ದವೇ ಅಸಮಾಧಾನ ಹೊಂದಿರುವ ಹೈಕಮಾಂಡ್ ನಾಯಕರನ್ನು ಓಲೈಸಲು ವಿಜಯೇಂದ್ರ ಅವರಿಗೆ ಶಿರಾ ಕ್ಷೇತ್ರವು ವೇದಿಕೆಯಾಗಲಿದೆ.
ಮಠ ಪರ್ಯಟನೆ ಆರಂಭ
ಚುನಾವಣೆಯ ಸಂದರ್ಭದಲ್ಲಿ ಮಠಗಳ ಭೇಟಿಯನ್ನು ಕೂಡಾ ಹೆಚ್ಚಿಸಿರುವ ವಿಜಯೇಂದ್ರ ಅವರು ಮಾದಾರ ಚೆನ್ನಯ್ಯ ಸ್ವಾಮೀಜಿ, ಕುಂಚಿಟಿಗ ಮಠದ ಶ್ರೀ ನಂಜಾವಧೂತ ಸ್ವಾಮಿಜಿ, ಚಿತ್ರದುರ್ಗದ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾ ಸ್ವಾಮೀಜಿ, ಯಾದವ ಮಠದ ಪೂಜ್ಯ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಶ್ವೇತಕಮಠಾಪುರಿ ಜಂಗಮ ಸುಕ್ಷೇತ್ರದ ಮಠಾಧ್ಯಕ್ಷ ಶ್ರೀ ಕಾರದ ವೀರಬಸವ ಸ್ವಾಮಿಜಿ, ಚಿತ್ರದುರ್ಗದ ಶ್ರೀ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೀಗೆ ಹಲವು ಸ್ವಾಮೀಜಿಗಳ ಆಶಿರ್ವಾದ ಪಡೆದು ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.



ಪ್ರಚಾರ ತಂತ್ರಗಾರಿಕೆಯಲ್ಲಿ ಬದಲಾವಣೆ:
ವಿಜಯೇಂದ್ರ ಅವರ ಯಶಸ್ಸಿಗೆ ಅವರು ಪ್ರಚಾರ ತಂತ್ರಗಾರಿಕೆಯಲ್ಲಿ ತಂದಂತಹ ಬದಲಾವಣೆಯೇ ಕಾರಣ. ಈವರೆಗೆ ಕಾಂಗ್ರೆಸ್, ಜೆಡಿಎಸ್‌ನಂತೆ ಹಿಂದಿನಿಂದಲೂ ನಡೆದುಕೊಂಡು ಬಂದಂತಹ ಹೋಬಳಿ ಮಟ್ಟದ ಪ್ರಚಾರ ತಂತ್ರಗಾರಿಕೆಯನ್ನು ಕೈಬಿಟ್ಟು, ಬೂತ್ ಮಟ್ಟಕ್ಕೆ ವಿಜಯೇಂದ್ರ ಅವರು ತಲುಪಿದ್ದಾರೆ. ಇದಕ್ಕಾಗಿ ಪಾದರಸದಂತೆ ಕೆಲಸ ಮಾಡಲು ಸಿದ್ದರಿರುವ ಯುವ ಪಡೆಯನ್ನು ವಿಜಜಯೇಂದ್ರ ಅವರು ಸಿದ್ದಪಡಿಸಿದ್ದಾರೆ.

ಪ್ರತೀ ಹೋಬಳಿಯ ಜವಾಬ್ದಾರಿಯನ್ನು ಅದೇ ಗ್ರಾಮದ 3-4 ಯುವಕರಿಗೆ ನೀಡಲಾಗಿದೆ. ಯುವಕರು ಪ್ರತೀ ಮನೆಗಳಿಗೆ ಹೋಗಿ ಕೇಸರಿ ಶಾಲು ಹಾಕಿ ಮತವನ್ನು ಕೇಳುವ ಹೊಸ ತಂತ್ರಗಾರಿಕೆಯನ್ನು ಈ ಬಾರಿ ಬಳಸಿಕೊಳ್ಳಲಾಗಿದೆ. ಹೀಗೆ ಮತ ಕೇಳುವಾಗ ಕ್ಷೇತ್ರದ ಅಭಿವೃದ್ದಿ, ಹಿಂದುತ್ವ ಹಾಗೂ ರಾಷ್ಟ್ರೀಯತೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಪರ ಮತ ಚಲಾಯಿಸುವಂತೆ ಮತದಾರರನ್ನು ಕೇಳಿಕೊಳ್ಳುತ್ತಿದ್ದಾರೆ.
ಹೀಗೆ, ತಮ್ಮ ವರ್ಚಸ್ಸನ್ನು ವೃದ್ದಿಸಲು ವಿಜಯೇಂದ್ರ ತಮಗೆ ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳಲು ಇಚ್ಚಿಸಲಾರರು. ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನಕ್ಕೇರಲು ಹಾಗೂ ಪಕ್ಷದ ನಾಯಕತ್ವವನ್ನು ಪಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ವಿಜಯೇಂದ್ರ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಮಾಡಿದರೂ, ಕೆ ಆರ್ ಪೇಟೆಯಂತೆ ಶಿರಾ ಚುನಾವಣೆಯನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಏಕೆಂದರೆ, ಜೆಡಿಎಸ್‌ಗೆ ಲಭಿಸಲಿರುವ ಸಹಾನುಭೂತಿಯ ಮತಗಳು ಹಾಗೂ ಕಾಂಗ್ರೆಸ್‌ನ ಪಾರಂಪರಿಕ ಮತಗಳನ್ನು ಒಡೆದು, ಬಿಜೆಪಿಯನ್ನು ಗೆಲ್ಲಿಸಲು ಹರಸಾಹಸವೇ ಪಡೆಬೇಕಾಗುತ್ತದೆ. ವಿಜಯೇಂದ್ರ ಅವರ ತಂತ್ರಗಾರಿಕೆ ಈ ಬಾರಿಯೂ ಓಲಿಸುತ್ತದೆಯೇ ಇಲ್ಲವೋ ಎಂಬುದು ಫಲಿತಾಂಶ ಘೋಷಣೆಯಂದೇ ತಿಳಿಯುತ್ತದೆ.